ಶುಕ್ರವಾರ, ಮೇ 29, 2020
27 °C

ಭಾರಿ ಮಳೆ: 12 ಮನೆಗಳು ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ:  ತಾಲ್ಲೂಕಿನಾದ್ಯಂತ ಕಳೆದ 24 ಗಂಟೆಗಳಲ್ಲಿ ಸುರಿದ ಭಾರಿ ಮಳೆಗೆ ಪಟ್ಟಣದ ನೆಹರು ನಗರದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಯಿತು.ನೆಹರುನಗರದ ತಗ್ಗುಪ್ರದೇಶದಲ್ಲಿರುವ 12 ಮನೆಗಳು ಜಲಾವೃತಗೊಂಡವು. ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿ  ನಿವಾಸಿಗಳು ಮುಂಜಾನೆಯವರೆಗೆ ಜಾಗರಣೆ ಮಾಡುವಂತಾಯಿತು. ಮನೆಯಲ್ಲಿ ಸಂಗ್ರಹಿಸಿದ್ದ ನೀರನ್ನು ಹೊರ ಚೆಲ್ಲಲು ಭಾರಿ ಪ್ರಯಾಸ ಪಡಬೇಕಾಯಿತು.ಮನ್ಯಾಗೆಲ್ಲಾ ಮೊಳಕಾಲ ಮಟ ನೀರು ನಿಂತೈತ್ರಿ.  ಮನಿ ಕೊಡ್ರಿ, ನಾವು ಬಡವ್ರ ಅದೀವಿ ಅಂತಾ ಕೇಳಿದ್ರೆ ಗೋರ‌್ಮೆಂಟ್ನೋರು ತಗ್ಗನ್ಯಾಗ  ಮನಿ ಕೊಡ್ತಾರ‌್ರಿ. ಮಳೀ ಬಂದ್ರೆ ನಮ್ಮ ಗೋಳು ಕೇಳೋರ‌್ಯಾರು ಇಲ್ಲ ನೋಡ್ರಿ ಎಂದು ಹುಸೇನವ್ವ, ಫಾರೂಕ್ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದರು.ಮಜೀದ್‌ಸಾಬ್ ಎಂಬ ಮೀನಿನ ವ್ಯಾಪಾರಿಯೊಬ್ಬರ ಮನೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದಲ್ಲದೆ, ಸಂತೆಯಲ್ಲಿ ಮಾರಾಟ ಮಾಡಲೆಂದು ಮನೆಯಲ್ಲಿ ಸಂಗ್ರಹ ಮಾಡಿದ್ದ ರೂ. 40 ಸಾವಿರ ಮೌಲ್ಯದ ಒಣಮೀನುಗಳು ನೀರುಪಾಲಾಗಿವೆ. ಸಾಲ-ಸೋಲ ಮಾಡಿ ಒಣ ಮೀನಿನ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಅವರಿಗೆ ದಿಕ್ಕುತೋಚದಂತಾಗಿದೆ.ಮಳೆಯ ರಭಸಕ್ಕೆ ಪಟ್ಟಣದಿಂದ ನೆಹರುನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಕೊಂಡು ಹೋಗಿದೆ. ಪಟ್ಟಣದಲ್ಲಿ 85.5ಮಿಮೀ ಮಳೆಯಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.ಮಳೆಗಾಲದಲ್ಲಿ ನೀರು ನುಗ್ಗುವುದು ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಈ   ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೈಲುಪತ್ತಾರ ಸಂಘದ ಅಧ್ಯಕ್ಷ ಮೌನೇಶ್ ಆಗ್ರಹಿಸಿದ್ದಾರೆ.ಕುರುಗೋಡಿನಲ್ಲಿ 40 ಎಂ.ಎಂ. ಮಳೆ


ಕುರುಗೋಡು : ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಮಳೆ ತಂಪನ್ನು ಎರೆಚಿತು.ಭಾರಿ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದ್ದು, ಪಟ್ಟಣದ ಮಳೆಮಾಪನ ಕೇಂದ್ರದಲ್ಲಿ 40 ಎಂ.ಎಂ. ಮಳೆ ದಾಖಲಾಗಿದೆ.ತಂಪರೆದ ಮಳೆ

ಕೊಟ್ಟೂರು:  ಮಂಗಳವಾರ ಬೆಳಗಿನ ಜಾವ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಧಾರಾಕಾರ ಮಳೆ ಸುರಿಯಿತು. ಮಳೆಗಾಗಿ ಪರಿತಪಿಸುತ್ತಿದ್ದ ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಉತ್ತಮ ಮಳೆಯಾಗಿರುವುದರಿಂದ ರೈತರು ಬಿತ್ತನೆಗೆ ಸಿದ್ದರಾಗಿದ್ದಾರೆ.ಕೆಲವು ರೈತರು ಹತ್ತಿ ಬೀಜ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.  ಹತ್ತಿ ಬೆಳೆಗೆ ಉತ್ತಮ ವಾತಾವರಣ ಹಾಗೂ  ಉತ್ತಮ ಬೆಲೆ ಸಿಕ್ಕಿದ್ದರಿಂದ ಹೆಚ್ಚಿನ ರೈತರು ಹತ್ತಿ ಬೀಜಕ್ಕಾಗಿ ಮುಗಿಬಿದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.