ಭಾರಿ ಸ್ಫೋಟಕ ಪತ್ತೆ: ಉಗ್ರರ ಸಂಚು ವಿಫಲ

7

ಭಾರಿ ಸ್ಫೋಟಕ ಪತ್ತೆ: ಉಗ್ರರ ಸಂಚು ವಿಫಲ

Published:
Updated:

ಅಂಬಾಲ (ಹರಿಯಾಣ) (ಪಿಟಿಐ): ಇಲ್ಲಿನ ದಂಡು ರೈಲು ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ಕಾರೊಂದರಿಂದ ಬುಧವಾರ ರಾತ್ರಿ ಸುಮಾರು ಐದು ಕೆ.ಜಿ ಸ್ಫೋಟಕ ಮತ್ತು ಅದಕ್ಕೆ ಸಂಬಂಧಿಸಿದ ಸಾಧನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ದೀಪಾವಳಿ ಸಂದರ್ಭದಲ್ಲಿ ಭಾರಿ ವಿಧ್ವಂಸಕ ಕೃತ್ಯ ಎಸಗುವ ಉಗ್ರರ ಸಂಚನ್ನು ವಿಫಲಗೊಳಿಸಿದ್ದಾರೆ.

ಖಚಿತ ಸುಳಿವಿನ ಆಧಾರದ ಮೇಲೆ ದೆಹಲಿ ಮತ್ತು ಹರಿಯಾಣ ಜಂಟಿ ಪೊಲೀಸ್ ತಂಡ, ರೈಲು ನಿಲ್ದಾಣದ ಹೊರಗೆ ನಿಲ್ಲಿಸಿದ್ದ ನೀಲಿ ಬಣ್ಣದ ಇಂಡಿಕಾ ಕಾರಿನಲ್ಲಿ ಇರಿಸಲಾಗಿದ್ದ ಈ ವಸ್ತುಗಳನ್ನು ವಶಪಡಿಸಿಕೊಂಡು ಸಂಭವಿಸಲಿದ್ದ ಭಾರಿ ಅನಾಹುತವನ್ನು ತಪ್ಪಿಸಿದೆ.

ಎರಡು ಪೊಟ್ಟಣಗಳಲ್ಲಿ ಐದು ಕೆ.ಜಿ ಸ್ಫೋಟಕ, ಐದು ಸ್ಫೋಟಕ ಸಾಧನಗಳು, ಎರಡು ಟೈಮರ್‌ಗಳು ಮತ್ತು ಎರಡು ಬ್ಯಾಟರಿಗಳು ಕಾರಿನಲ್ಲಿ ಪತ್ತೆಯಾಗಿವೆ.

ಪೊಲೀಸ್ ಮಹಾ ನಿರ್ದೇಶಕ ರಂಜೀವ್ ದಲಾಲ್ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.  ಮಧುಬನ್ ಮತ್ತು ಇನ್ನಿತರ ಸ್ಥಳಗಳಿಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕರೆಸಿ ಶೋಧ ನಡೆಸಲಾಯಿತು.

ಕಾರಿನಲ್ಲಿ ಪತ್ತೆಯಾಗಿರುವ ಒಂದು ಸಿಹಿ ತಿನಿಸಿನ ಪೊಟ್ಟಣದ ಮೇಲೆ ಜಮ್ಮುವಿನ ಅಂಗಡಿ ವಿಳಾಸವಿದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಕಟವಾಗುವ ಎರಡು ವೃತ್ತಪತ್ರಿಕೆಗಳು ಸಹ ಸಿಕ್ಕಿವೆ.

ಕಾರಿನ ಮೇಲೆ ಇರುವುದು ಹರಿಯಾಣ ನೋಂದಣಿಯ ನಕಲಿ ಸಂಖ್ಯೆಯಾಗಿದ್ದು ಅದನ್ನು ಕಳ್ಳತನ ಮಾಡಿ ಇಲ್ಲಿಗೆ ತಂದಿರಬಹುದು ಎಂದು ಶಂಕಿಸಲಾಗಿದೆ. ದೆಹಲಿಯಲ್ಲಿ ಬಾಂಬ್ ಸ್ಫೋಟಿಸುವ ಉದ್ದೇಶದಿಂದ ಈ ಸ್ಫೋಟಕಗಳನ್ನು ಸಾಗಿಸಲಾಗುತ್ತಿತ್ತೇ ಅಥವಾ ಅಂಬಾಲದಲ್ಲಿ ದಂಡು ಪ್ರದೇಶ ಇರುವುದರಿಂದ ಸೇನಾ ಕಟ್ಟಡಗಳು ಮತ್ತು ಸ್ಥಾವರಗಳನ್ನು ಗುರಿಯಾಗಿಟ್ಟುಕೊಂಡು ಭಯೋತ್ಪಾದಕರು ದಾಳಿ ನಡೆಸಲು ಉದ್ದೇಶಿಸಿದ್ದರೇ ಎಂಬ ವಿಚಾರದ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ದಲಾಲ್ ತಿಳಿಸಿದ್ದಾರೆ.

ವಶಪಡಿಸಿಕೊಂಡಿರುವ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ತಂಡವೊಂದು ದೆಹಲಿಯಿಂದ ಅಂಬಾಲ ತಲುಪಿದೆ.

ತನಿಖೆ ನಡೆಸುತ್ತಿರುವ ವಿವಿಧ ತನಿಖಾ ಸಂಸ್ಥೆಗಳು ಪಂಜಾಬ ಮತ್ತು ಹರಿಯಾಣ ಗಡಿಯಲ್ಲಿನ ನಾಕಾಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಯಾವ ರಾಜ್ಯದಿಂದ ಈ ಕಾರು ಇಲ್ಲಿಗೆ ಬಂದಿದೆ ಎಂಬ ಬಗ್ಗೆ ತನಿಖೆ ಮಾಡುತ್ತಿವೆ. ಕಾರಿನ ಅನೇಕ ಭಾಗಗಳನ್ನು ತೆಗೆದು ಸ್ಫೋಟಕಗಳನ್ನು ಅಡಗಿಸಿಟ್ಟಿರುವ ಸಾಧ್ಯತೆ ಬಗ್ಗೆಯೂ ತಪಾಸಣೆ ನಡೆಸಲಾಗಿದೆ.

ದೀಪಾವಳಿ ಸಮೀಪಿಸುತ್ತಿರುವುದರಿಂದ ರೈಲು, ಬಸ್ ನಿಲ್ದಾಣ ಸೇರಿದಂತೆ ಜನದಟ್ಟಣೆಯ ಪ್ರದೇಶ ಮತ್ತು ಪ್ರಮುಖ ಕಟ್ಟಡಗಳ ಬಳಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry