ಭಾರೀ ಕಬ್ಬು

7

ಭಾರೀ ಕಬ್ಬು

Published:
Updated:
ಭಾರೀ ಕಬ್ಬು

ಒಂದು ಎಕರೆಗೆ 170 ಟನ್ ಇಳುವರಿ. ಇದು ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕು ಕುಡಚಿಯ ರೈತ ಮಧು ದೋಂಡಿಬಾ ಬಾಬರ ಅವರ ಸಾಧನೆ.ಮೊದಲು ಭೂಮಿಯನ್ನು ಹದ ಮಾಡಿ ಸಿಓ 86032 ತಳಿಯ ಮೂರು ಕಣ್ಣುಳ್ಳ ಕಬ್ಬಿನ ತುಂಡುಗಳನ್ನು ಆರು ಅಡಿ ಸಾಲಿನಲ್ಲಿ ನಾಟಿ ಮಾಡಿದರು.  ಅದಕ್ಕೆ ಕೃಷಿ ತಜ್ಞರ ಸಲಹೆಯಂತೆ ರಸಗೊಬ್ಬರ ಕೊಟ್ಟರು. ನಂತರ ಲಘು ಪೋಷಕಾಂಶವಾಗಿ 150 ಕಿಲೊ ಸಿಟ್ರೇಟ್, ಬೋರೋಕಾಲ್ 10 ಕಿಲೊ ನೀಡಿದರು. ನಾಟಿ ಮಾಡಿದ 38 ಮತ್ತು 88 ನೆಯ ದಿವಸಕ್ಕೆ ಕ್ರಮವಾಗಿ ಮಣ್ಣೇರಿಸಿದರು. ಮೂರು ದಿನಕ್ಕೊಮ್ಮೆ ನೀರು ಒದಗಿಸಿದರು.90 ದಿನಗಳ ನಂತರ ಪ್ರತಿ ಎಕರೆಗೆ ಒಂದು ಚೀಲ ಯೂರಿಯಾ, ಒಂದು ಚೀಲ ಡಿಎಪಿಯನ್ನು 200 ಲೀಟರ್ ನೀರಿನಲ್ಲಿ ಕರಗಿಸಿ ಡ್ರಿಪ್ ಮೂಲಕ ಬೆಳೆಗೆ ಪೂರೈಸಲಾಯಿತು.

ಅಲ್ಲದೆ 20 ಕಿಲೊ ಮ್ಯಾಗ್ನೇಸಿಯಂ ಸಲ್ಫೇಟ್, 20 ಕಿಲೊ ಅಮೋನಿಯಂ ಸಲ್ಫೇಟ್ 50 ಲೀಟರ್ ನೀರಿನಲ್ಲಿ ಕರಗಿಸಿ ಹನಿ ನೀರಾವರಿ ಜತೆ ಕೊಡಲಾಯಿತು. 115 ದಿನಗಳ ನಂತರ ಪ್ರತಿ ಎಕರೆಗೆ ಮತ್ತೆ 100 ಕಿಲೊ ಸಿಟ್ರೇಟ್ ಮಣ್ಣಿಗೆ ಸೇರಿಸಲಾಯಿತು. ಶಿಫಾರಸಿನಂತೆ ಉಳಿದ ರಸಗೊಬ್ಬರವನ್ನು ಮಣ್ಣಿಗೆ ಬೆರೆಸಿ ಬೆಳೆ ಕಟಾವು ಆಗುವವರೆಗೆ ಪ್ರತಿ ದಿನ ಎರಡು ಗಂಟೆ ಡ್ರಿಪ್ ಮೂಲಕ ನೀರುಣಿಸಲಾಯಿತು.ಕಬ್ಬು ಕಟಾವಿನ ಹಂತಕ್ಕೆ ಬಂದಾಗ ಬೆಳೆಗೆ 14 ತಿಂಗಳಾಗಿತ್ತು. ಆ ವೇಳೆಗೆ ಕಬ್ಬಿನ ಗಣಿಕೆಗಳ ಸರಾಸರಿ ಸಂಖ್ಯೆ 45 ರಿಂದ 50 ರ ವರೆಗೆ ಇತ್ತು. ಕಬ್ಬು 4.5ದಿಂದ 5 ಮೀಟರ್‌ವರೆಗೆ ಬೆಳೆದಿತ್ತು. ಇಳುವರಿ ಎಕರೆಗೆ ಸರಾಸರಿ 170 ಟನ್‌ಗಳಾಗಿತ್ತು.`ಸಾಮಾನ್ಯವಾಗಿ ರೈತರು ಸಾಲುಗಳ ನಡುವೆ ಅಂತರ ಬಿಡದೆ ನಾಟಿ ಮಾಡುವದರಿಂದ ಬೆಳೆ ಅಷ್ಟೊಂದು ಹುಲುಸಾಗಿ ಬೆಳೆಯುವುದಿಲ್ಲ. ಅಂತರ ಹೆಚ್ಚಿದ್ದಷ್ಟು ಕಬ್ಬಿನ ಬೆಳೆ ದಷ್ಟಪುಷ್ಟ ಹಾಗೂ ಎತ್ತರವಾಗಿ ಬೆಳೆಯುತ್ತದೆ~ ಎನ್ನುತ್ತಾರೆ ಮಧುಕರ ಬಾಬರ.ಇವರು ಶಾಸಕ ಎಸ್.ಬಿ. ಘಾಟೆಯವರ ಸಂಬಂಧಿ. ಶಾಸಕರು ಹಿಂದೆ ದಕ್ಷಿಣ ಆಫ್ರಿಕಕ್ಕೆ ಭೇಟಿ ಕೊಟ್ಟು ಕಬ್ಬು ಬೆಳೆಯ ಸುಧಾರಿತ ವಿಧಾನಗಳನ್ನು ಕಣ್ಣಾರೆ ಕಂಡು ಬಂದಿದ್ದರು. ಅದನ್ನು ಅನೇಕ ರೈತರಿಗೂ ವಿವರಿಸಿದ್ದರು.ಮಧುಕರ ಅದನ್ನು ಅಕ್ಷರಶಃ ಅನುಸರಿಸಿ ಬಂಪರ್ ಇಳುವರಿ ಪಡೆದುಕೊಂಡಿದ್ದಾರೆ. ಮಾಹಿತಿಗೆ ಅವರ ಸಂಪರ್ಕ ಸಂಖ್ಯೆ 94481 22663 ಮತ್ತು 99802 45805.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry