ಭಾವಪರವಶ ಭಕ್ತರಿಂದ ಅಂತಿಮ ದರ್ಶನಕ್ಕೆ ನೂಕುನುಗ್ಗಲು

7

ಭಾವಪರವಶ ಭಕ್ತರಿಂದ ಅಂತಿಮ ದರ್ಶನಕ್ಕೆ ನೂಕುನುಗ್ಗಲು

Published:
Updated:
ಭಾವಪರವಶ ಭಕ್ತರಿಂದ ಅಂತಿಮ ದರ್ಶನಕ್ಕೆ ನೂಕುನುಗ್ಗಲು

ಪುಟ್ಟಪರ್ತಿ: ಸತ್ಯ ಸಾಯಿ ಬಾಬಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಭಕ್ತರ ದಂಡು ಸಾಗರೋಪಾದಿಯಲ್ಲಿ ಹರಿದು ಬರುತ್ತಿದೆ. ಬಾಬಾ ಅವರ ಆಶ್ರಮ ಪ್ರಶಾಂತಿ ನಿಲಯದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಭಾನುವಾರ ಸಂಜೆಯೇ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.ಬುಧವಾರದವರೆಗೂ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ.ಪ್ರಶಾಂತಿ ನಿಲಯದ ಆವರಣದಲ್ಲಿರುವ ‘ಯಜುರ್ ಮಂದಿರ’ದಲ್ಲಿ ಬಾಬಾ ವಾಸಿಸುತ್ತಿದ್ದರು. ಸಮೀಪದ ‘ಕುಲವಂತ’ ಸಭಾಂಗಣದಲ್ಲಿ ಅವರು ಭಕ್ತರಿಗೆ ದರ್ಶನ ನೀಡುತ್ತಿದ್ದರು. ಭಾನುವಾರ ಮೂರು ಗಂಟೆಯಿಂದ ಕುಲವಂತ ಸಭಾಂಗಣದಲ್ಲಿ ಬಾಬಾ ಪಾರ್ಥಿವ ಶರೀರವನ್ನು ಇರಿಸಿದ್ದು, ಆರು ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಪ್ರಶಾಂತಿ ನಿಲಯದ ಮುಖ್ಯ ದ್ವಾರದ ಮೂಲಕವೇ ಭಕ್ತರನ್ನು ಒಳಕ್ಕೆ ಬಿಡಲಾಗುತ್ತಿದೆ. ರಸ್ತೆಯುದ್ದಕ್ಕೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಸರತಿ ಸಾಲಿನಲ್ಲಿ ಒಳಕ್ಕೆ ಹೋಗಲು ವ್ಯವಸ್ಥೆ ಮಾಡಲಾಗಿದೆ.ಪೊಲೀಸರು ಮತ್ತು ಆಶ್ರಮದ ಕಾರ್ಯಕರ್ತರು ಹಲವು ಸುತ್ತಿನ ತಪಾಸಣೆ ನಡೆಸಿದ ಬಳಿಕ ಸಾರ್ವಜನಿಕರನ್ನು ಒಳಕ್ಕೆ ಬಿಡುತ್ತಿದ್ದಾರೆ. ಕ್ಯಾಮೆರಾ ಸೇರಿದಂತೆ ಯಾವುದೇ ವಸ್ತುಗಳನ್ನೂ ಒಳಕ್ಕೆ ಕೊಂಡೊಯ್ಯಲು ಅವಕಾಶವಿಲ್ಲ.ಮೊದಲ ದಿನವೇ ನೂಕಾಟ: ಮಧ್ಯಾಹ್ನ ಮೂರು ಗಂಟೆಗೆ ಬಾಬಾ ಪಾರ್ಥಿವ ಶರೀರವನ್ನು ಆಶ್ರಮಕ್ಕೆ ತರುವ ಸಂದರ್ಭದಲ್ಲೇ ಪ್ರವೇಶದ್ವಾರದ ಬಳಿ ಸಾವಿರಾರು ಜನರು ಜಮಾಯಿಸಿದ್ದರು. ಆರು ಗಂಟೆಗೆ ಸಾರ್ವಜನಿಕ ದರ್ಶನ ಆರಂಭವಾದಾಗ ಒಂದೇ ಬಾರಿಗೆ ಜನರು ನುಗ್ಗಿದಾಗ ಕೆಲಕಾಲ ಗದ್ದಲ ಉಂಟಾಯಿತು.ಪರಿಸ್ಥಿತಿಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾದ ಪೊಲೀಸರು, ಜನರು ಸರತಿ ಸಾಲಿನಲ್ಲಿ ಸಾಗುವಂತೆ ನಿಯಂತ್ರಿಸುತ್ತಿದ್ದಾರೆ.ವಿದೇಶಗಳಿಂದ ಆಗಮಿಸಿರುವ ಭಕ್ತರೂ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಬಾಬಾ ಅಂತಿಮ ದರ್ಶನ ಪಡೆದರು. ಅವರು ತಮ್ಮೊಂದಿಗೆ ಇಲ್ಲ ಎಂಬ ಸುದ್ದಿ ತಿಳಿದೇ ಆಘಾತಕ್ಕೆ ಒಳಗಾಗಿರುವ ಭಕ್ತವೃಂದ, ಅಂತಿಮ ದರ್ಶನದ ವೇಳೆ ಭಾವಪರವಶರಾಗಿದ್ದುದು ಕಂಡು ಬಂತು. ಕೆಲ ವಿದೇಶಿ ಭಕ್ತರಂತೂ ಮೌನವಾಗಿಯೇ ಕಣ್ಣೀರು ಹಾಕುತ್ತಿದ್ದರು.ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿರುವ ಸ್ಥಳ, ಆಶ್ರಮದ ಆವರಣ ಮತ್ತು ಹೊರ ಭಾಗದಲ್ಲಿ ದೊಡ್ಡ ಟೆಲಿವಿಷನ್ ಪರದೆಗಳನ್ನು ಅಳವಡಿಸಿದ್ದು, ಬಾಬಾ ಜೀವನದ ವಿವಿಧ ಸಂದರ್ಭಗಳ ಚಿತ್ರಗಳು, ದೃಶ್ಯಾವಳಿಗಳನ್ನು ಬಿತ್ತರಿಸಲಾಗುತ್ತಿದೆ. ಧ್ವನಿವರ್ಧಕಗಳಲ್ಲಿ ನಿರಂತರವಾಗಿ ಬಾಬಾ ಅವರಿಗೆ ಸಂಬಂಧಿಸಿದ ಭಜನೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ರಸ್ತೆಗಳಲ್ಲಿ ಬಾಬಾ ಚಿತ್ರಗಳ ಮಾರಾಟವೂ ಭರಾಟೆಯಿಂದ ನಡೆಯುತ್ತಿದೆ.ಆಂಧ್ರಪ್ರದೇಶ ಮತ್ತು ದೇಶದ ವಿವಿಧೆಡೆಯಿಂದ ಭಕ್ತರು ಈಗಾಗಲೇ ಆಗಮಿಸುತ್ತಿದ್ದು, ಸೋಮವಾರ ಜನದಟ್ಟಣೆ ಹೆಚ್ಚುವ ಸಾಧ್ಯತೆ ಕಾಣುತ್ತಿದೆ. ಆಂಧ್ರಪ್ರದೇಶದ ವಿವಿಧ ಸ್ಥಳಗಳಿಂದ ಪುಟ್ಟಪರ್ತಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಆಂಧ್ರ ಸರ್ಕಾರ ಯೋಚಿಸಿದೆ. ಸೋಮವಾರ ಬೆಳಿಗ್ಗೆಯಿಂದ ಹೆಚ್ಚಿನ ಸಂಖ್ಯೆಯ ಜನರು ಆಗಮಿಸುವ ನಿರೀಕ್ಷೆ ಇರುವುದರಿಂದ ಅವರನ್ನು ನಿಯಂತ್ರಿಸಲು ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.ುಟ್ಟಪರ್ತಿಯ ಬಹುತೇಕ ವಸತಿ ಗೃಹಗಳಲ್ಲಿ ಈಗಾಗಲೇ ಕೊಠಡಿಗಳನ್ನು ಮುಂಗಡ ಕಾಯ್ದಿರಿಸಿದ್ದು, ಬುಧವಾರದವರೆಗೂ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಆಗಮಿಸಬಹುದು ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ.ಗಣ್ಯರ ದಂಡು: ಆಂಧ್ರಪ್ರದೇಶ ರಾಜ್ಯಪಾಲ ಎಲ್.ನರಸಿಂಹನ್, ಮುಖ್ಯಮಂತ್ರಿ ಎನ್.ಕಿರಣ್‌ಕುಮಾರ್ ರೆಡ್ಡಿ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಸಚಿವರಾದ ಜೆ.ಗೀತಾ ರೆಡ್ಡಿ, ಸವಿತಾ ಇಂದ್ರಾ ರೆಡ್ಡಿ, ಚಿತ್ರನಟ ಚಿರಂಜೀವಿ, ಲಕ್ಷ್ಮೀಪಾರ್ವತಿ, ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಟ್ರಸ್ಟ್ ಮಾಜಿ ಅಧ್ಯಕ್ಷ ಆದಿಕೇಶವುಲು, ಸಂಸದ ಅನಂತವೆಂಕಟರಾಮ ರೆಡ್ಡಿ, ಮಾಜಿ ಸಚಿವ ಜೆ.ಸಿ.ದಿನಕರ್ ರೆಡ್ಡಿ, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಮತ್ತಿತರ ಗಣ್ಯರು ಭಾನುವಾರವೇ ಪುಟ್ಟಪರ್ತಿಗೆ ಆಗಮಿಸಿ, ಬಾಬಾ ಅಂತಿಮ ದರ್ಶನ ಪಡೆದರು.ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯ ಗಣ್ಯರು ಅಂತಿಮ ದರ್ಶನಕ್ಕೆ ಆಗಮಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪುಟ್ಟಪರ್ತಿಯ ವಿಮಾನ ನಿಲ್ದಾಣವನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.  ವಿಮಾನ ನಿಲ್ದಾಣಕ್ಕೆ ಸಮೀಪವಿರುವ ದಿಣ್ಣೆಗಳ ಮೇಲೆ ನಿಂತ ಪೊಲೀಸರು ಎ.ಕೆ-47ರಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದು ಕಣ್ಗಾವಲು ಕಾಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry