ಭಾವೈಕ್ಯ ಮಂದಿರ

7

ಭಾವೈಕ್ಯ ಮಂದಿರ

Published:
Updated:
ಭಾವೈಕ್ಯ ಮಂದಿರ

ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರಂತಹ ಮಹಾ ಪುರುಷರ ತತ್ವ ಆದರ್ಶಗಳನ್ನು ಪಾಲಿಸುತ್ತ, ಪ್ರಚಾರ ಪ್ರಸಾರ ಮಾಡುತ್ತ ಸಮಾಜದಲ್ಲಿ ನಾನಾ ರೀತಿಯ ಸೇವಾಕಾರ್ಯಗಳನ್ನು ನಡೆಸುತ್ತಿರುವುದರಲ್ಲಿ ಮುಂಚೂಣಿಯಲ್ಲಿದೆ ಶ್ರೀ ರಾಮಕೃಷ್ಣ ಸೇವಾ ಟ್ರಸ್ಟ್.  ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗದೇ, ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ನೀಡಿ ನಾನಾ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಸಾರ್ವಜನಿಕರಿಗೆ ಇನ್ನೂ ಹತ್ತಿರವಾಗುತ್ತಿದೆ. ಇದೇ ಉದ್ದೇಶದಿಂದ ಈಗ ಟ್ರಸ್ಟ್ ಗಿರಿನಗರದಲ್ಲಿ `ವಿಶ್ವ ಭಾವೈಕ್ಯ ಮಂದಿರ~ವನ್ನು ನೂತನವಾಗಿ ನಿರ್ಮಿಸಿದೆ. 

ಶ್ರೀ ರಾಮಕೃಷ್ಣ ಪರಮಹಂಸರು, ಮಾತೆ ಶಾರದಾ ದೇವಿ ಮತ್ತು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಪ್ರತಿಮೆಗಳು ಈ ಭಾವೈಕ್ಯ ಮಂದಿರದ ಕೇಂದ್ರ ಬಿಂದು. ಇದಲ್ಲದೇ ಮನಸ್ಸು ಹಗುರಾಗಿಸುವಂತಹ ಸುಂದರ ವಾತಾವರಣವನ್ನು ಮಂದಿರದಲ್ಲಿ ನಿರ್ಮಿಸಿ ಜನರ ಆಧ್ಯಾತ್ಮಿಕ ಹಸಿವನ್ನು ಹಿಂಗಿಸಲು ಸಜ್ಜಾಗುತ್ತಿದೆ.

ಸುಸಜ್ಜಿತವಾದ ಆಧ್ಯಾತ್ಮಿಕ ಗ್ರಂಥಾಲಯ, ಯೋಗ ಕೇಂದ್ರ ಈ ಮಂದಿರದ ವೈಶಿಷ್ಟ್ಯಗಳಲ್ಲಿ ಒಂದು. ಸುಮಾರು ಎರಡು ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಈ ಮಂದಿರದಲ್ಲಿ ಬಡ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ (ಡಯಾಗ್ನೋಸ್ಟಿಕ್ ಲ್ಯಾಬ್) ತಪಾಸಣಾ ಕೇಂದ್ರ ಸಹ ಇರುತ್ತದೆ.

ಸಂಜೆ ವೇಳೆ ಸಾರ್ವಜನಿಕರಿಗಾಗಿ  ಭಜನೆ, ಸತ್ಸಂಗ, ಭಕ್ತ ಸಮ್ಮೇಳನ, ಯುವ ಸಮ್ಮೇಳನ ಗಳನ್ನು ಆಯೋಜಿಸಲು ಅನುಕೂಲವಾಗಲಿ ಎಂದು ಬೃಹತ್ ಸಭಾಂಗಣ ಮತ್ತು ವಿಶ್ರಾಂತಿ ಗೃಹಗಳನ್ನು ಈ ಮಂದಿರ ಒಳಗೊಂಡಿದೆ. ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನಿಧಿ ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗಿದೆ.

`ಸಾಮಾಜಿಕ ಕಳಕಳಿಯನ್ನು ಹೊಂದಿರುವ ಶ್ರೀ ರಾಮಕೃಷ್ಣ ಟ್ರಸ್ಟ್ ಜನತೆಗೆ ಹತ್ತಿರವಾಗಿ ತನ್ನ ಸೇವಾಕ್ಷೇತ್ರವನ್ನು ವಿಸ್ತರಿಸುವ ನಿಟ್ಟಿನಲ್ಲಿ ವಿನೂತನವಾದ ವಿಶ್ವ ಭಾವೈಕ್ಯ ಮಂದಿರವನ್ನು ಗಿರಿನಗರದಲ್ಲಿ ನಿರ್ಮಿಸಿದೆ. ಬಡ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿ ದೇಶದ ಒಳ್ಳೆ ಪ್ರಜೆಗಳನ್ನಾಗಿ ರೂಪಿಸುವುದು ಮತ್ತು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರ ಆಯೋಜಿಸುವುದು ವಿಶ್ವ ಭಾವೈಕ್ಯ ಮಂದಿರದ ಮುಖ್ಯ ಉದ್ದೇಶವಾಗಿದೆ~ ಎನ್ನುತ್ತಾರೆ ಟ್ರಸ್ಟಿಗಳಲ್ಲಿ ಒಬ್ಬರಾದ ಮೋಹನ್.

ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ದಿವ್ಯ ಆದರ್ಶಗಳು ಮತ್ತು ಕನಸುಗಳನ್ನು ನನಸಾಗಿಸುವ ಉದ್ದೇಶದಿಂದ 1972 ರಲ್ಲಿ  ಶ್ರೀ ರಾಮಕೃಷ್ಣ ಟ್ರಸ್ಟ್ ಸ್ಥಾಪಿಸಲಾಯಿತ್ತು. ಸಮಾಜದ ಎಲ್ಲಾ ವರ್ಗದ ಜನರ ಮೆಚ್ಚುಗೆಗೆ ಪಾತ್ರವಾಗಿ ಸಮಾಜದ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸೇವೆ ಸಲ್ಲಿಸುತ್ತಾ ಬಂದಿದೆ ಎನ್ನುವುದು ಅವರ ಅಂತರಾಳದ ಮಾತು.

ನಗರ ಮತ್ತು ಹೊರವಲಯದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವಂತಹ  ಬಡ ಮಕ್ಕಳನ್ನು ಗುರುತಿಸಿ ಅಂತಹ ಮಕ್ಕಳಿಗೆ ಟ್ರಸ್ಟ್‌ನಿಂದಲೇ ಶಾಲೆಯ ಶುಲ್ಕವನ್ನು ಪಾವತಿಸಿ ಪುಸ್ತಕ ಮತ್ತು ಸಮವಸ್ತ್ರವನ್ನು ಉಚಿತವಾಗಿ ನೀಡುತ್ತಾ ಬಂದಿದೆ. ಪ್ರಸ್ತುತ 70 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎನ್ನುತಾರೆ ಟ್ರಸ್ಟ್‌ನ ಸದಸ್ಯರು.

ಬೆಂಗಳೂರು ಸುತ್ತಮುತ್ತಲ ಗ್ರಾಮಗಳಿಗೆ  ತಜ್ಞ ವೈದ್ಯರೊಂದಿಗೆ ಟ್ರಸ್ಟ್ ಸದಸ್ಯರು ವಾರಕ್ಕೊಮ್ಮೆ ಭೇಟಿ ನೀಡಿ ಆರೋಗ್ಯ ಶಿಬಿರ ನಡೆಸುತ್ತಾರೆ. 10 ರಿಂದ 15 ಗ್ರಾಮಗಳು ಇದರ ಸೌಲಭ್ಯ ಪಡೆಯುತ್ತಿವೆ.

ಪ್ರತಿ ವರ್ಷ ಯುವ ಜನ ಸಮ್ಮೇಳನ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಟ್ರಸ್ಟ್ ನಡೆಸಿಕೊಂಡು ಬಂದಿದೆ. ಈ ಕಾರ್ಯಕ್ರಮಕ್ಕೆ 25 ಶಾಲೆಗಳ 2000 ಮಕ್ಕಳನ್ನು ಆಹ್ವಾನಿಸುತ್ತೇವೆ. ಈ ಸಂದರ್ಭದಲ್ಲಿ ಬಡ ಮಕ್ಕಳನ್ನು ಗುರುತಿಸಿ ಅವರ ವಿದ್ಯಾಭ್ಯಾಸಕ್ಕಾಗಿ ಬೇಕಾದಂತಹ ನೆರವನ್ನು ಟ್ರಸ್ಟ್ ವತಿಯಿಂದ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ಟ್ರಸ್ಟ್‌ನ ಮತ್ತೊಬ್ಬ ಸದಸ್ಯರಾದ ಪದ್ಮನಾಭ.

`ನಾವು ಯಾರನ್ನು ತಿರಸ್ಕರಿಸುವುದಿಲ್ಲ; ಆಸ್ತಿಕನಾಗಲಿ, ನಾಸ್ತಿಕನಾಗಲಿ ಪ್ರಕೃತಿ ದೇವತಾವಾದಿಯಾಗಲೀ, ಬಹುದೇವತಾ ಪೂಜಕನಾಗಲೀ ಎಲ್ಲರನ್ನು ಸ್ವಾಗತಿಸುತ್ತೇವೆ~ಎಂಬ ಸ್ವಾಮಿ ವಿವೇಕಾನಂದರ ವಾಣಿಯನ್ನು ಪಾಲಿಸುತ್ತಾ ಸದಾ ಸಮಾಜದ ಒಳಿತಿಗಾಗಿ ಶ್ರಮಿಸಲು ಶ್ರೀ ರಾಮಕೃಷ್ಣ ಸೇವಾ ಟ್ರಸ್ಟ್‌ನ ಈ `ವಿಶ್ವ ಭಾವೈಕ್ಯ ಮಂದಿರ~ ಶುಕ್ರವಾರ ಕಾರ್ಯಾರಂಭ ಮಾಡಲಿದೆ.

ನಾಳೆ ಉದ್ಘಾಟನೆ

ಶ್ರೀ ರಾಮಕೃಷ್ಣ ಸೇವಾ ಟ್ರಸ್ಟ್: ಶುಕ್ರವಾರ ಬೆಳಿಗ್ಗೆ 5.30ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ರಾಮಕೃಷ್ಣ ಪರಮಹಂಸ, ಶಾರದಾದೇವಿ, ಸ್ವಾಮಿ ವಿವೇಕಾನಂದ ಮೂರ್ತಿಗಳ ಪ್ರತಿಷ್ಠಾಪನೆ. ಪ್ರತಿಷ್ಠಾಪನೆ, ಬೆಳಿಗ್ಗೆ 7ಕ್ಕೆ ಲಲಿತಾ ಸಹಸ್ರನಾಮ, ದೇವಿಸ್ತುತಿ. ನೇತೃತ್ವ: ದೆಹಲಿ ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಶಾಂತಾತ್ಮಾನಂದಜೀ ಮಹಾರಾಜ್.  

ಬೆಳಿಗ್ಗೆ 10.30ಕ್ಕೆ ಚೆನ್ನೈ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದಜೀ ಅವರಿಂದ ವಿಶ್ವ ಭಾವೈಕ್ಯ ಮಂದಿರ ಉದ್ಘಾಟನೆ. ಸ್ವಾಮಿ ಸ್ವಾತ್ಮಾರಾಮಾನಂದಜೀ ಅವರಿಂದ ಭಜನೆ. ಸಾನ್ನಿಧ್ಯ: ಬಸವನಗುಡಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದಜೀ, ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ. ಅತಿಥಿಗಳು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಂಸದ ಅನಂತಕುಮಾರ್, ಶಾಸಕರಾದ ಎಂ. ಶ್ರೀನಿವಾಸ್, ಅಶ್ವತ್ಥನಾರಾಯಣ, ಪಾಲಿಕೆ ಮಾಜಿ ಉಪಮೇಯರ್ ಎಂ. ಲಕ್ಷ್ಮಿನಾರಾಯಣ್. ಅಧ್ಯಕ್ಷತೆ: ಶಾಸಕ ಎಂ. ಕೃಷ್ಣಪ್ಪ.

ಸಂಜೆ 4.30ಕ್ಕೆ ವಿಷ್ಣು ಸಹಸ್ರನಾಮ, ಭಜನೆ. ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಡಿತ್ ಶಿವಕುಮಾರ್ ಶರ್ಮಾ ಅವರಿಂದ ಸಂತೂರ್ ವಾದನ. ತಬಲಾ: ಪಂಡಿತ್ ಯೋಗೇಶ್ ಸಂಶಿ. ತಾನ್‌ಪುರ: ಟಾಕಾ ಹೀರೋ. ಸ್ಥಳ: ಶಾರದಾ ಶಕ್ತಿ ಸಂಚಲನ ಕೇಂದ್ರ, ಗಿರಿನಗರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry