ಭಾವೋನ್ಮಾದಿಂದ ದಿಕ್ಕುತಪ್ಪುವ ಚಳವಳಿ

7

ಭಾವೋನ್ಮಾದಿಂದ ದಿಕ್ಕುತಪ್ಪುವ ಚಳವಳಿ

Published:
Updated:

ಬೆಂಗಳೂರು: `ಕಾವೇರಿ ಜಲವಿವಾದದ ವಿಚಾರದಲ್ಲಿ ಬಲ ಪ್ರದರ್ಶನಕ್ಕಾಗಿ ಹೋರಾಟ ಮಾಡುವುದು ಉತ್ತಮ ಬೆಳವಣಿಗೆ ಅಲ್ಲ. ಹೋರಾಟಗಳು ನೈತಿಕ ಶಕ್ತಿಯ ಪ್ರತೀಕ ಆಗಬೇಕು. ಅಂತಹ ಹೋರಾಟಕ್ಕೆ ಬಲ ಸಿಗುತ್ತದೆ ಹಾಗೂ ಹೋರಾಟಗಾರರಿಗೂ ಘನತೆ ಬರುತ್ತದೆ~ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಲಹೆ ನೀಡಿದರು.ಕನ್ನಡ ಸಂಘರ್ಷ ಸಮಿತಿಯ ಆಶ್ರಯದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ `ಕಾವೇರಿ ಜಲವಿವಾದ ಮುಂದೇನು?~ ಕುರಿತ ಚಿಂತನಾಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಕಾವೇರಿ ನೀರಿಗಾಗಿ ಶಾಸಕ ಪುಟ್ಟರಾಜು ಅವರು ಆತ್ಮಹತ್ಯೆಗೂ ಸಿದ್ಧ ಎಂದು ಜನರನ್ನು ಪ್ರಚೋದಿಸುತ್ತಾರೆ. ಇದೇ ರೀತಿಯ ಪ್ರವೃತ್ತಿ ಚಳವಳಿಯ ನಾಯಕರಲ್ಲಿ ಕಂಡು ಬರುತ್ತಿದೆ. ಹೋರಾಟಗಾರರಿಗೆ ಭಾವಾವೇಶ ತಪ್ಪಲ್ಲ. ನೆಲ, ಜಲ, ಜಾತಿ, ಭಾಷೆ ವಿಚಾರಗಳು ತುಂಬಾ ಸೂಕ್ಷ್ಮ. ಭಾವನೆಯ ಹಂತದಿಂದ ಭಾವೋನ್ಮಾದದ ಹಂತಕ್ಕೆ ಹೋರಾಟಗಾರರು ತಲುಪಿದರೆ ಚಳವಳಿ ದಿಕ್ಕು ತಪ್ಪುತ್ತದೆ~ ಎಂದು ಅವರು ಎಚ್ಚರಿಸಿದರು.`ಪ್ರಧಾನಿಯ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಯಲಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿಯ ಪ್ರತಿಕೃತಿ ದಹನ ಮಾಡಲಾಗಿದೆ. ಅವರೆಲ್ಲ ನಮ್ಮ ದೇಶದ ಪ್ರಜೆಗಳು. ಪ್ರಧಾನಿಯನ್ನು ಈ ರೀತಿಯಲ್ಲಿ ಅಪಮಾನಿಸುವುದು ತಪ್ಪು. ವಾಟಾಳ್ ನಾಗರಾಜ್ ಅಂತಹ ಕೆಲವು ಹೋರಾಟಗಾರರು ನಿವೃತ್ತರಾಗಿ ಮನೆಯಲ್ಲಿದ್ದರೆ ಹೋರಾಟಕ್ಕೆ ಘನತೆ ಬರುತ್ತದೆ~ ಎಂದು ಅವರು ಕಿಡಿಕಾರಿದರು.ರಾಜಕೀಯ ಜಾಣ್ಮೆ ಬೇಕು: ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಮಾತನಾಡಿ, `ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ 1892 ಹಾಗೂ 1924ರ ಒಪ್ಪಂದಗಳು ಇನ್ನೂ ಜೀವಂತವಾಗಿವೆ. ಈ ಒಪ್ಪಂದಗಳೇ ಕರ್ನಾಟಕಕ್ಕೆ ತಾಪತ್ರಯ ತಂದಿವೆ. ಈ ನಿಟ್ಟಿನಲ್ಲಿ ಕಾವೇರಿ ವಿವಾದವನ್ನು ಭಾವೋನ್ಮಾದದ ಹೋರಾಟದಿಂದ ಬಗೆಹರಿಸಲು ಸಾಧ್ಯವಿಲ್ಲ. ಇದಕ್ಕೆ ರಾಜಕೀಯ ಜಾಣ್ಮೆ ಬೇಕು~ ಎಂದು ಪ್ರತಿಪಾದಿಸಿದರು.`ವ್ಯರ್ಥವಾಗಿ ಸಮುದ್ರ ಸೇರುವ ಕಾವೇರಿ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ಎಚ್.ಡಿ.ದೇವೇಗೌಡ ಪ್ರಧಾನಿಯಾಗಿದ್ದಾಗ ಕೆಆರ್‌ಎಸ್ ಹಾಗೂ ಮೆಟ್ಟೂರು ನಡುವೆ 600 ಕೋಟಿ ರೂಪಾಯಿ ವೆಚ್ಚದಲ್ಲಿ ಆಣೆಕಟ್ಟು ಕಟ್ಟಲು ಯೋಜನೆ ತಯಾರಿಸಿದ್ದರು. ಕೇಂದ್ರವೇ ಯೋಜನೆಗೆ ಬಂಡವಾಳ ಹೂಡಲಿದೆ ಎಂದು ಭರವಸೆ ನೀಡಿದ್ದರು. ಆದರೆ, ತಮಿಳುನಾಡು ಒಪ್ಪಿರಲಿಲ್ಲ. ರಾಜಕೀಯ ಕಾರಣಕ್ಕಾಗಿ ತಮಿಳುನಾಡಿಗೆ ಜಲವಿವಾದ ಜೀವಂತವಾಗಿರಬೇಕು. ಈ ಕಾರಣಕ್ಕಾಗಿಯೇ ಆಗ ವಿರೋಧ ವ್ಯಕ್ತಪಡಿಸಲಾಗಿತ್ತು~ ಎಂದರು.ಕನ್ನಡ ಸಂಘರ್ಷ ಸಮಿತಿಯ ನೂತನ ಅಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣೇಗೌಡ, `ರಾಜ್ಯದಲ್ಲಿ ಆಡಳಿತ ನಡೆಸುವವರು ನಿದ್ರಾವಸ್ಥೆಯಲ್ಲಿದ್ದಾರೆ. ಸಮಸ್ಯೆ ಜಟಿಲವಾದಾಗ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ ಹೊರತು, ಸಮಸ್ಯೆಯನ್ನು ಬಗೆಹರಿಸುವ ನೈಜ ಕಳಕಳಿ ಇಲ್ಲ~ ಎಂದು ಕಿಡಿಕಾರಿದರು.  ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಅಧ್ಯಕ್ಷತೆ ವಹಿಸಿದ್ದರು.

`ಬೀದಿ ಜಗಳದ ಸಮಸ್ಯೆ ಅಲ್ಲ~

`ಕನ್ನಡಿಗರೇ ಹುಟ್ಟು ಹಾಕಿಕೊಂಡಿರುವ ಸಮಸ್ಯೆ ಕಾವೇರಿ ಸಮಸ್ಯೆ. ಕಾವೇರಿ ನೀರು ಬಿಡುಗಡೆ ಮಾಡುವಂತೆ ತಮಿಳುನಾಡಿನಿಂದ ಒತ್ತಡ ಬರುವವರೆಗೆ ನಾವು ಕುಂಭಕರ್ಣನ ನಿದ್ದೆ ಮಾಡುತ್ತಿರುತ್ತೇವೆ. ನಾವು ಹೇಡಿಗಳಾಗಿದ್ದೇವೆ. ನೀರು ಬಿಡಿ ಎಂದಾಗ ಗಲಾಟೆ ಮಾಡುತ್ತೇವೆ. ಬೀದಿ ಜಗಳದಿಂದ ಬಗೆಹರಿಸುವ ಸಮಸ್ಯೆ ಇದಲ್ಲ~ ಎಂದು ಚಿಂತಕ ಡಾ.ಕೆ.ಎಸ್.ಭಗವಾನ್ ಕಿವಿಮಾತು ಹೇಳಿದರು.

`ತಜ್ಞರ ಸಮಿತಿ ಕಳಿಸಿ~

`ಅಕ್ರಮ ಗಣಿಗಾರಿಕೆಯ ಆಳ ಹಾಗೂ ವಾಸ್ತವಾಂಶ ಅರಿಯಲು ಸುಪ್ರೀಂಕೋರ್ಟ್ ರಾಜ್ಯಕ್ಕೆ ಕೇಂದ್ರ ಉನ್ನತಾಧಿಕಾರ ಸಮಿತಿಯನ್ನು ಕಳುಹಿಸಿದ ಮಾದರಿಯಲ್ಲೇ ಈಗಲೂ ತಜ್ಞರ ತಂಡವನ್ನು ಕಳುಹಿಸಿ ಕಾವೇರಿ ನೀರಿನ ಸ್ಥಿತಿಗತಿಯ ವಾಸ್ತವಾಂಶದ ಬಗ್ಗೆ ಮಾಹಿತಿ ಪಡೆದು ತೀರ್ಪು ನೀಡಬೇಕು~ ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry