ಗುರುವಾರ , ಮೇ 6, 2021
27 °C

ಭಾವ ತಂತಿ ಮೀಟುವ ಬದುಕಿನ ಬಣ್ಣದಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾವಿನ ಕಾಯಿಯ ಹುಳಿ, ಅರೆ ಮಾಗಿದ ಕಿತ್ತಲೆಯ ಹುಳಿ ಜೊತೆಗೆ ಬೆರೆತ ಮಧುರ ಸಿಹಿ, ಮಳೆ ಮೊದಲ ಹನಿ ಬುವಿಯ ನೆನೆಸಿದಾಗ ಬರುವ ಪರಿಮಳ... ಹೊಸ ಪುಸ್ತಕದ ಹಾಳೆ, ಬೇಯುತ್ತಿರುವ ಬ್ರೆಡ್ ವಾಸನೆ... ಕಿಟಕಿಯಾಚೆಯಿಂದ ತೇಲಿ ಬರುವ ಚಿಲಿಪಿಲಿ... ಇವೆಲ್ಲವೂ ಜೀವನಪ್ರೀತಿಯನ್ನು ನೀಡುತ್ತವೆ. ಬಣ್ಣಗಳೊಂದಿಗೆ ಆಡಲು ಪ್ರೇರೇಪಿಸುತ್ತವೆ...ಹೀಗೆ ತೀರಾ ಮುಗ್ಧರಂತೆ ಮಾತನಾಡುತ್ತಾರೆ ಶಿರೀನ್ ಅಬ್ರಹಾಂ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಶಿರಿನ್ ಸದ್ಯ ದುಬೈ ಕಾರ್ಪೋರೆಟ್ ಜಗತ್ತಿನೊಂದಿಗೆ ನಂಟು ಬೆಸೆದು, ಅಲ್ಲಿಯೇ ನೆಲೆಸಿರುವ ಕಲಾವಿದೆ.ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ಆಕಾಶದಲ್ಲಿ ಸೃಷ್ಟಿಕರ್ತನೇ ಓಕುಳಿಯಾಡುತ್ತಾನೆ. ಹಲವಾರು ಬಣ್ಣಗಳು... ಆ ವರ್ಣವೈಭವ ಯಾವತ್ತಿಗೂ ಸೋಜಿಗವೆನಿಸುತ್ತದೆ. ಅದೆಷ್ಟು ವೈವಿಧ್ಯಮಯ ವರ್ಣ ಸಂಯೋಜನೆ. ಇಡೀ ಆಕಾಶವೇ ಕ್ಯಾನ್ವಾಸಿನಂತೆ. ಸೃಷ್ಟಿಯ ಬಗ್ಗೆ ಬೆರುಗು ಮೂಡಿಸುತ್ತದೆ ಎನ್ನುತ್ತಾರೆ ಶಿರೀನ್.ಬಣ್ಣಗಳಿಗೆ ಚಿಕಿತ್ಸಾ ಶಕ್ತಿ ಇದೆ ಎಂಬುದು ಶಿರೀನ್ ನಂಬಿಕೆ. ವರ್ಣಗಳು ನಮ್ಮ ಭಾವನೆಗಳನ್ನು ಬದಲಿಸುತ್ತವೆ. ಮನೋಭಾವವನ್ನು ಸಂಕೇತಿಸುತ್ತವೆ. ನಮ್ಮ ಮೂಡನ್ನೇ ಬದಲಿಸುವ ಶಕ್ತಿ ಈ ಬಣ್ಣಗಳಿಗಿದೆ. ಅದಕ್ಕೇ ಬಣ್ಣಗಳೊಂದಿಗೆ ಆಟವಾಡುವದು ಇಷ್ಟ ಎನ್ನುತ್ತಾರೆ ಶಿರೀನ್. ಬಣ್ಣಗಳೊಂದಿಗೆ ಬದುಕನ್ನು ಕಲಿಯುವದು ಬಲು ಇಷ್ಟ ಎನ್ನುವ ಶಿರೀನ್‌ಗೆ ಅನುಭವದ ಮಹತ್ವವೂ ಗೊತ್ತು. ಗಾಢ ವರ್ಣಗಳಲ್ಲಿಯೇ ಭಾವತಂತಿಯನ್ನು ಮೀಟುವ ಅವರ ಚಿತ್ರಗಳಲ್ಲಿ ದಟ್ಟವರ್ಣಗಳದ್ದೇ ಸಿಂಹಪಾಲು.ಕೆಂಪು ಹಿನ್ನೆಲೆಯಲ್ಲಿ ಉರಿದೇಳುವ ಜ್ವಾಲೆಯಂತೆ ಕಾಣುವ ಹಳದಿ ವರ್ಣ ಇವರ `ಫೈರ್ಸ್‌ ಆಫ್ ಇಮ್ಯಾಜಿನೇಶನ್ ~ ಕೃತಿಯ ವಿಶೇಷ. ಸಣ್ಣ ಎಳೆಗಳಲ್ಲಿಯೂ ವೈವಿಧ್ಯಮಯ ವರ್ಣಗಳನ್ನು ಬಿಡಿಸಿ `ಮಿಕ್ಸ್ಡ್ ಇಮೋಶನ್ಸ್~ ಟೈಟಲ್ ನೀಡಿದ್ದಾರೆ. ಆದರೆ ಚಿತ್ರಗಳ ಹೆಸರಿಗಿಂತಲೂ ಮಿಗಿಲಾದ ಅರ್ಥ ವಿನ್ಯಾಸ ಈ ಕೃತಿಗಳಿಗಿವೆ. ಅವು ಭಾವನೆಯಷ್ಟೇ ಗಾಢ, ನಾಜೂಕು ಹಾಗೂ ಆಳ.ತಮ್ಮಳಗಿನ ಹಾಗೂ ತಮ್ಮ ಸುತ್ತಲಿನ ಜೀವನವನ್ನು ಬೆರಗು ಕಣ್ಣುಗಳಿಂದ ನೋಡುತ್ತಾರೆ.  ಬಣ್ಣಗಳಿಂದ ತಮ್ಮ ಭಾವನೆಗಳಿಗೆ ಮೂರ್ತ ರೂಪ ನೀಡುತ್ತಾರೆ.

ಇಂಥವೇ ಕೃತಿಗಳ `ಮೈ ಕಲರ್ಸ್‌ ಆಫ್ ಲೈಫ್~ ಚಿತ್ರ ಸಂಗ್ರಹವನ್ನು ಏ.10ರಿಂದ ಏ14ರವರೆಗೆ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಿನೈಸೆನ್ಸ್ ಗ್ಯಾಲರಿ, 104, ವೆಸ್ಟ್ ಮಿನಿಸ್ಟರ್ ನಲ್ಲಿ ಪ್ರದರ್ಶನಕ್ಕಿಡಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.