ಭಾವ ಲಯಮಯ ಪ್ರಬುದ್ಧ ಗಾಯನ

7

ಭಾವ ಲಯಮಯ ಪ್ರಬುದ್ಧ ಗಾಯನ

Published:
Updated:
ಭಾವ ಲಯಮಯ ಪ್ರಬುದ್ಧ ಗಾಯನ

ನಾದ- ನೃತ್ಯ

ಸಂಗೀತ ಕಛೇರಿಗಳನ್ನು ಮಾಡುವುದಕ್ಕಿಂತಲೂ ನೃತ್ಯಕ್ಕೆ ಹಾಡುವುದೇ ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ನೃತ್ಯ-ಗಾಯಕರಿಗೆ ಸಂಗೀತ ಸಭೆಯೊಂದರಲ್ಲಿ ಪೂರ್ಣಪ್ರಮಾಣದ ಕಛೇರಿಯನ್ನು ನೀಡುವ ಅವಕಾಶ ಕಲ್ಪಿಸಿದರೆ ಅವರು ಸಂಗೀತ ಕ್ಷೇತ್ರದ ಇತರ  ಗಾಯಕರಂತೆಯೇ ಸಂಗೀತ ಪ್ರೇಮಿಗಳನ್ನು ಗೆಲ್ಲಬಲ್ಲರು ಎಂಬ ವಾಸ್ತವಿಕ ಸತ್ಯ ಭಾನುವಾರ ಬೆಂಗಳೂರು ಗಾಯನ ಸಮಾಜದಲ್ಲಿ ನಡೆದ ಪ್ರತಿಭಾನ್ವಿತ ಗಾಯಕ ಬಾಲಸುಬ್ರಹ್ಮಣ್ಯ ಶರ್ಮ ಅವರ ಕಛೇರಿಯಲ್ಲಿ ಪ್ರಕಟಗೊಂಡಿತು.ಶಾಸ್ತ್ರೀಯ ಭರತನಾಟ್ಯ ಕ್ಷೇತ್ರದಲ್ಲಿ ಬಹು ಬೇಡಿಕೆಯ ನುರಿತ ಗಾಯಕ ಬಾಲಸುಬ್ರಹ್ಮಣ್ಯ ಶರ್ಮ ಅವರು. ಬಹುಮುಖ ಪ್ರತಿಭೆ-ಪರಿಣತಿ. ಸಂಗೀತ ಸಂಯೋಜಕರಾಗಿ ಹಾಗೂ ಕಿರುತೆರೆಯ ಧಾರಾವಾಹಿಗಳ ಹಿನ್ನೆಲೆ ಗಾಯನವನ್ನೂ ಮಾಡಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ನಡೆದ ಅವರ ಕಛೇರಿ ಸಭಾ-ಕಛೇರಿಯ ಘನತೆ ಗಾಂಭೀರ್ಯಗಳಿಂದ ತುಂಬಿತ್ತು. ಅವರ ವಿದ್ವತ್ಪರಿಣತಿಗಳೂ ಉನ್ನತ ಮಟ್ಟದಾಗಿದ್ದವು.ಸಭಾಂಗಣದಲ್ಲಿ ತುಂಬಿದ್ದ ಸಂಗೀತ ಪ್ರೇಮಿಗಳನ್ನು ಸಂಪೂರ್ಣವಾಗಿ ತಣಿಸಲು ತಮಗೆ ದೊರೆತ ಅವಕಾಶವನ್ನು ಬಹಳ ಯಶಸ್ವಿಯಾಗಿ ಅವರು ಬಳಸಿಕೊಂಡರು. ಶ್ರವಣ ಮಧುರ ಕಂಠ, ಮೂರೂವರೆ ಸ್ಥಾಯಿಗಳನ್ನೂ ಕ್ರಮಿಸಬಲ್ಲ ವ್ಯಾಪ್ತಿ, ಭಾವಪೂರ್ಣ ಆಕರ್ಷಕ ಅಭಿವ್ಯಕ್ತಿ, ರಚನೆಗಳ ಸಾಹಿತ್ಯ ಮತ್ತು ರಾಗ- ಭಾವಗಳ ಸರಿಯಾದ ಅರಿವು, ಲಯದ ಸೂಕ್ಷ್ಮ ಜ್ಞಾನ ಮತ್ತು ಪ್ರಭುತ್ವ ಇತ್ಯಾದಿ ವಿಶೇಷತೆಗಳಿಂದ ಶರ್ಮ ಅವರ ಅಂದಿನ ಕಛೇರಿ ಶೋಭಿಸಿತು.ಬಹು ಕಲಾ ಸೂಕ್ಷ್ಮತೆಗಳು ಮತ್ತು ಭಾವ, ರಾಗ ಮತ್ತು ತಾಳಗಳ ಘನತೆಯಿಂದ ಓತಪ್ರೋತವಾಗಿದ್ದ ರಾಗ, ತಾನ ಮತ್ತು ಪಲ್ಲವಿಯನ್ನೂ ಹಾಡಿ ಸಭಾ-ಕಛೇರಿಯ ಹಿರಿಮೆಯನ್ನು ಎತ್ತಿ ತೋರಿದರು. ಅವರ ಕಛೇರಿಯ ಪರಿವಿಡಿ ಮತ್ತು ನಿರೂಪಣೆ ಪ್ರೌಢವೂ ಕಲಾತ್ಮಕವೂ ಆಗಿತ್ತು.ಅನುಕೂಲಕರವಾಗಿ ಸ್ಪಂದಿಸಿದ ಗಣೇಶ ಕುಮಾರ್ (ಪಿಟೀಲು), ಸಿ.ಚೆಲುವರಾಜು (ಮೃದಂಗ) ಮತ್ತು ಸಿ.ಪಿ. ವ್ಯಾಸವಿಠಲ (ಖಂಜರಿ) ಅವರ ಪ್ರಬುದ್ಧ ಸಹಕಾರದೊಂದಿಗೆ ಶರ್ಮ ಅವರು ತಮ್ಮ ಕಛೇರಿಯನ್ನು ನಡೆಸಿದರು. ಸಿದ್ಧಿವಿನಾಯಕಂ (ಷಣ್ಮುಖಪ್ರಿಯ) ಕೃತಿಗೆ ಸುಂದರವಾದ ಕಲ್ಪನಾ ಸ್ವರಗಳನ್ನು ಜೋಡಿಸಿ ಹಾಡಿ ಗಣೇಶ ವಂದನೆಯನ್ನು ಮಾಡಿ ರಾಜ ಗಾಂಭಿರ್ಯದ ಬೇಗಡೆ ರಾಗವನ್ನು ಪರಿಚಯಿಸಿದರು.ತ್ಯಾಗರಾಜರ ಮೇರು ಕೃತಿ ನಾದೋಪಾಸನ ಸೊಗಸಾಗಿತ್ತು. ಮನೋರಂಜಿನಿ ರಾಗದ ಅಟುಕಾರಾದನಿ ಚುರುಕಾದ ಲಯದಲ್ಲಿ ಕಛೇರಿಯ ಓಟಕ್ಕೆ ಇಂಬು ಕೊಟ್ಟಿತು. ವಿಳಂಬ ಕಾಲದ ಬೆಡಗನ್ನು ರೀತಿಗೌಳ ರಾಗಾಲಾಪನೆ ಮತ್ತು `ಜನನೀ ನಿನ್ನುವಿನಾ' (ಸುಬ್ಬರಾಯಶಾಸ್ತ್ರಿ) ಕೀರ್ತನೆಯ ಗಾಯನದಲ್ಲಿ ಅವರು ಸೆರೆ ಹಿಡಿದರು. ದಾಸರ `ಓಡಿ ಬಾರಯ್ಯ' ಭಾವಮಯವಾಗಿತ್ತು.

ಗಾಢವಾದ ಪಾಂಡಿತ್ಯ- ಪರಿಣತಿಗಳಿಂದ ತುಳುಕಿದ ರಾಗ, ತಾನ ಮತ್ತು ಪಲ್ಲವಿಯನ್ನು ಹಾಡಿ ತಮ್ಮ ಕಛೇರಿಗೆ ಸಭಾ-ಕಛೇರಿಯ ಗಣ್ಯತೆಯನ್ನು ಅವರು ಒದಗಿಸಿದರು. ಅಪರೂಪವೂ ರೋಚಕವೂ ಆಗಿದ್ದ ಪೂರ್ವಿ ಕಲ್ಯಾಣಿ ರಾಗದ ಶಿವೆ ಪಾಹಿಮಾಂ ನಾದ ಸ್ವರೂಪಿಣಿ ಮಾಲಿನಿ ಶೂಲಿನಿ ಜನನಿ ಪಲ್ಲವಿಯನ್ನು ಖಂಡತ್ರಿಪುಟ ತಾಳದಲ್ಲಿ ವಿಶಾಲವಾಗಿ ಹಾಡಿದರು. ಬಾಯಿ ಮುಚ್ಚಿ ಮತ್ತು ತೆರೆದು ಅವರು ಹೊಮ್ಮಿಸಿದ ಸಂಚಾರಗಳು ರಂಜಿಸಿದವು. ಪಲ್ಲವಿಯನ್ನು ಬೇರೆ ಬೇರೆ ಕಾಲಗಳು, ನಡೆಗಳು ಮತ್ತು ಸಂಗತಿಗಳಲ್ಲಿ ಚಲ್ಲವರಿದು ಅದಕ್ಕೆ ಮುಖಾರಿ, ವರಾಳಿ ಮತ್ತು ನಳಿನಕಾಂತಿ ರಾಗಗಳ ರಾಗಮಾಲಿಕಾ ಸ್ವರವಿನ್ಯಾಸದ ಮುಕುಟವನ್ನು ತೊಡಿಸಿದರು.ಮಾನ್ಯವಾದ ಭರತನಾಟ್ಯ

ಯುವ ನತ್ಯಾಕಾಂಕ್ಷಿ ಎಂ.ಎಸ್. ಕೀರ್ತನ ಗಾಯಕಿ -ನರ್ತಕಿ-ಗುರು ಮಂಜುಳಾ ಪರಮೇಶ್ ಅವರ ಭರವಸೆ ಮೂಡಿಸುವಂತಹ ಭರತನಾಟ್ಯ ಪ್ರದರ್ಶನವನ್ನು ಎಡಿಎ ರಂಗಮಂದಿರದಲ್ಲಿ ನೀಡಿದರು. ಕಲಿಕೆಯಲ್ಲಿನ ಶ್ರದ್ಧೆ ಮತ್ತು ನಿಷ್ಠೆಗಳು ಸರಿಯಾದ ರೀತಿ ನೀತಿಗಳಲ್ಲಿ ಪ್ರಕಟಗೊಂಡವು. ಮಂಜುಳಾ ಪರಮೇಶ್ (ನಟುವಾಂಗ, ಗಾಯನ), ಹೇಮಂತ ಕುಮಾರ್ (ಪಿಟೀಲು), ನರಸಿಂಹಮೂರ್ತಿ (ಕೊಳಲು), ಜನಾರ್ದನರಾವ್ (ಮೃದಂಗ) ಮತ್ತು ಪ್ರಸನ್ನಕುಮಾರ್ (ಖಂಜರಿ) ಅವರ ಪಕ್ಕವಾದ್ಯಗಳ ಬೆಂಬಲವನ್ನು ಪರಿಣಾಮಕಾರಿಯಾಗಿ ಬಳಸಿ ಕೀರ್ತನ ಎಂದಿನಂತೆ ಗಣೇಶ ಸ್ತುತಿ ಮತ್ತು ಪುಷ್ಪಾಂಜಲಿಯ ಆರಂಭವನ್ನು ಹೊಂದಿದ್ದರು.ಆಕರ್ಷಕ ಭಂಗಿಗಳು ಮತ್ತು ನಡೆಗಳನ್ನು ಉಪಯೋಗಿಸಿ ರೇವತಿ ರಾಗದ ಜಯ ಶಂಕರ ಪಾರ್ವತಿ ರಚನೆಯನ್ನು ಅರ್ಥೈಸಲಾಯಿತು. ಶಿವನ ಮದನಾಂತಕ, ಭಕ್ತವತ್ಸಲ, ನರ್ತನಪ್ರಿಯ ಮುಂತಾದ ರೂಪಗಳು ಸೊಗಸಾಗಿದ್ದವು. ರಾಗಮಾಲಿಕಾ ಜತಿಸ್ವರ ಅವರ ಶುದ್ಧ ನೃತ್ತದ ಹಿಡಿತವನ್ನು ಬಿಂಬಿಸಿತು. ಸ್ವಾತಿ ತಿರುನಾಳರ ಶಬ್ದ ಸರಸಿಜಾಕ್ಷುಡು ಜಳಕವಾಡೆ  ಮತ್ತು ಮುಂದಿನ `ಭಜರೇ ಗೋವಿಂದಂ ಮಾನಸ' (ಹಿಂದೋಳ) ಕೃತಿಗಳನ್ನು ಆಧರಿಸಿ ಅಭಿನಯಿಸಿದ ಕೃಷ್ಣನ ಹಿರಿಮೆ-ಗರಿಮೆಗಳು ಇಷ್ಟವಾದವು. ಪ್ರಧಾನ ಬಂಧವಾಗಿದ್ದ `ಅರಿಮೈ ನಾಟ್ಟಿಕುರಂಜಿ' ವರ್ಣದ ಪ್ರಸ್ತುತಿ ಗಟ್ಟಿಯಾಗಿದ್ದ ಲಯ ಪ್ರೇರಿತ ನೃತ್ತ, ಸೊಗಸಾದ ನೃತ್ಯ ಮತ್ತು ಉತ್ತಮ ದರ್ಜೆಯ ನಟನಾ ಕೌಶಲ್ಯದಿಂದ ಕಂಗೊಳಿಸಿತು. ಶೃಂಗಾರ ಮತ್ತು ವಿರಹಗಳ ಅಭಿವ್ಯಕ್ತಿ ಔಚಿತ್ಯಪೂರ್ಣವಾಗಿತ್ತು.ಗಮನ ಸೆಳೆದ ಅಭಿನಯ

ಕ್ರಿಯಾಶೀಲರೂ ನಿಪುಣರೂ ಆಗಿರುವ ನೃತ್ಯ ಗುರುಗಳಾದ ಗುರು ನಾಗಭೂಷಣ ಅವರದೇ ನಟುವಾಂಗ ಮತ್ತು ಗಾಯನ ಸಹಕಾರದ ಹಿನ್ನೆಲೆಯಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಪನ್ನವಾದ ಕಾರ್ಯಕ್ರಮದಲ್ಲಿ ಅವರ ಶಿಷ್ಯೆ ನೃತ್ಯಲಕ್ಷ್ಮಿ ಜಯರಾಮನ್ ಅವರು ನರ್ತಿಸಿ ಅಭಿನಯ ಕೌಶಲವನ್ನು ಸಕಾರಾತ್ಮಕವಾಗಿ ಪರಿಚಯಿಸಿದರು. ನವಿರಾದ ಸರಸವಾಗಿ ಒಗ್ಗುವಂತಹ ಶರೀರ ಮತ್ತು ಸಂವಹನಾಶೀಲ ಕಣ್ಣುಗಳ ಸಂಪತ್ತನ್ನು ಹೊಂದಿರುವ ನೃತ್ಯಲಕ್ಷ್ಮಿ ತಮ್ಮ ಹೆಸರನ್ನು ಸಾರ್ಥಕಗೊಳಿಸುವಂತಿದೆ. ಊತ್ತುಕ್ಕಾಡು ಕವಿಯ ಚಿರಪರಿಚಿತ `ತಾಯೇ ಯಶೋದಾ' (ತೋಡಿ)ದ ಸಾಹಿತ್ಯದ ಪದಾಭಿನಯ ಬಹುತೇಕ ಪರಿಪೂರ್ಣವಾಗಿತ್ತು. ಕೃಷ್ಣನ ವಿಷಯ-ವಸ್ತುವನ್ನೇ ಹೊಂದಿದ್ದ ಜಗನ್ಮೋಹನನೇ ಕೃಷ್ಣ ಪದದ ಬದಲು ಬೇರೊಂದು ರಚನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ದೀಕ್ಷಿತರ `ಪನ್ನಗಶಯನ' ಕೃತಿಯ ಅಭಿನಯದ ನಂತರ ಫರಜ್ ತಿಲ್ಲಾನದೊಂದಿಗೆ ನೃತ್ಯಲಕ್ಷ್ಮಿ ಅವರ ಪ್ರದರ್ಶನ ಮುಕ್ತಾಯವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry