ಭಾನುವಾರ, ಜೂನ್ 20, 2021
28 °C

ಭಾಷಣದಲ್ಲಿ ಶೇಕ್ಸ್‌ಪಿಯರ್...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಬಜೆಟ್ ಭಾಷಣದಲ್ಲಿ ಆಗಾಗ ಕಾಣಿಸಿಕೊಳ್ಳುವ ಸಾಹಿತ್ಯ ಕೃತಿಗಳ ನುಡಿಗಟ್ಟುಗಳಲ್ಲಿ ಈ ಬಾರಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಅತಿ ಶ್ರೇಷ್ಠ ನಾಟಕಕಾರ ಶೇಕ್ಸ್‌ಪಿಯರ್‌ನನ್ನು ನೆನಪಿಸಿಕೊಂಡರು.

ಈ ಹಿಂದಿನ ಬಜೆಟ್‌ಗಳಲ್ಲಿ ಪ್ರಾಚೀನ ಅರ್ಥಶಾಸ್ತ್ರಜ್ಞ ಕೌಟಿಲ್ಯನ ನೀತಿಗಳನ್ನು ಉದ್ಧರಿಸಿದ್ದ ಪ್ರಣವ್ ಮುಖರ್ಜಿ ಈ ಬಾರಿ, `ದಯಾಮಯಿಯಾಗುವ ಮುನ್ನ ನಾನು ಕ್ರೂರಿಯಾಗಬೇಕಾಗುತ್ತದೆ~ (ಐ ಮಸ್ಟ್ ಬಿ ಕ್ರೂಯಲ್ ಒನ್ಲಿ ಟು ಬಿ ಕೈಂಡ್) ಎಂಬ ಹ್ಯಾಮ್ಲೆಟ್ ನಾಟಕದ ಸಂಭಾಷಣೆಯನ್ನು ಉದ್ಧರಿಸಿದರು.

ದೀರ್ಘಕಾಲದಲ್ಲಿ ಆರ್ಥಿಕತೆಗೆ ಚೇತರಿಕೆಗೆ ನೀಡಲು ಕೆಲ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ ಪ್ರಣವ್, ಶೇಕ್ಸ್‌ಪಿಯರ್ ನಾಟಕದ ಡೆನ್ಮಾರ್ಕ್ ರಾಜಕುಮಾರ ಹ್ಯಾಮ್ಲೆಟ್‌ನ ಈ ಮಾತುಗಳನ್ನು ಉಲ್ಲೇಖಿಸಿದರು.

`ನೀತಿ ನಿರೂಪಕರು, ರಾಜಕಾರಣಿಗಳು, ಕೃಷಿಕರು, ಉದ್ಯಮ ಸಮೂಹಗಳು ಆರ್ಥಿಕತೆಯನ್ನು ರೂಪಿಸುತ್ತಾರೆ. ಎಲ್ಲವೂ ಸರಿಯಾಗಿ ನಡೆದಾಗ ಎಲ್ಲರೂ ಸಂತಸ ಹಂಚಿಕೊಳ್ಳುತ್ತಾರೆ. ಆದರೆ, ಅರ್ಥ ವ್ಯವಸ್ಥೆಯಲ್ಲಿ ಏರುಪೇರಾದಾಗ ಹಣಕಾಸು ಸಚಿವರು ಔಷಧ ನೀಡಬೇಕಾಗುತ್ತದೆ.~ `ಆರ್ಥಿಕ ನೀತಿಯೂ ವೈದ್ಯಕೀಯ ಚಿಕಿತ್ಸೆಯಂತೆ. ಗುಣಪಡಿಸಲು ನಾವು ಏನನ್ನಾದರೂ ಮಾಡಬೇಕಾಗುತ್ತದೆ. ಆ ಕ್ಷಣಕ್ಕೆ ಅದು ನೋವು ನೀಡಿದರೂ ದೀರ್ಘಕಾಲದಲ್ಲಿ ಅದು ಒಳ್ಳೆಯದನ್ನು ಮಾಡುತ್ತದೆ~ ಎಂದು ಹೇಳಿದರು.

ಶೇಕ್ಸ್‌ಪಿಯರ್‌ನ ಅಮರ ವಾಣಿಯಂತೆ `ದಯಾಮಯಿಯಾಗುವ ಮುನ್ನ ನಾನು ಕ್ರೂರಿಯಾಗಬೇಕಾಗುತ್ತದೆ~ ಎಂದು ಪ್ರಣವ್ ನುಡಿದರು.

ಇದಕ್ಕೂ ಮುನ್ನ 2010, 2009ರ ಬಜೆಟ್ ಭಾಷಣದಲ್ಲಿ ಹಾಗೂ ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದಾಗ ಮಂಡಿಸಿದ್ದ 1984ರ ಬಜೆಟ್ ಭಾಷಣದಲ್ಲಿ ಪ್ರಣವ್ ಮುಖರ್ಜಿ ಕೌಟಿಲ್ಯನ ಅರ್ಥಶಾಸ್ತ್ರದ ನೀತಿಗಳನ್ನು ಉಲ್ಲೇಖಿಸಿದ್ದರು. 1999ರಲ್ಲಿ ಎನ್‌ಡಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ಸಹ ಕೌಟಿಲ್ಯನನ್ನು ನೆನಪಿಸಿಕೊಂಡಿದ್ದರು.

`ಶೀರ್ಷಿಕೆ ರೂಪಿಸುವ ಬಜೆಟ್~

ಪ್ರಣವ್ ಮುಖರ್ಜಿ ತಮ್ಮ ಭಾಷಣವನ್ನು ಅಂತ್ಯಗೊಳಿಸದ ರೀತಿ ಸಹ ಬಹುಜನರ ಮೆಚ್ಚುಗೆಗೆ ಕಾರಣವಾಯಿತು.

`ಇಂದಿನ ಪ್ರಕಟಣೆಗಳು, ನಾಳೆಯ ಪತ್ರಿಕೆಗಳ ಶೀರ್ಷಿಕೆ ಆಗುತ್ತವೋ ಇಲ್ಲವೋ ಎಂಬುದು ಮುಖ್ಯವಲ್ಲ. ಅವು ದಶಕಗಳ ನಂತರದ ಭಾರತವನ್ನು ಬಣ್ಣಿಸುವ ಶೀರ್ಷಿಕೆಗಳನ್ನು ರೂಪಿಸಿದರೆ ಸಾಕು~ ಎಂದು ಪ್ರಣವ್ ಹೇಳಿದರು.

ಪ್ರಣವ್ ಬಜೆಟ್ ಮಂಡಿಸುತ್ತಿದ್ದಾಗ ಇಪಿಎಫ್ ಬಡ್ಡಿದರ ಇಳಿಸಿದ್ದಕ್ಕೆ ಎಡಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಸದಸ್ಯರೊಬ್ಬರು ಭಾಷಣ ಪುನರುಚ್ಚರಿಸಿ ಎಂದು ಹೇಳಲು `ಹಿಂದಕ್ಕೆ ಹೋಗಿ~ (ರೋಲ್ ಬ್ಯಾಕ್) ಎಂದರು.

ಪ್ರಣವ್ ಭಾಷಣವನ್ನೇ ಹಿಂದಕ್ಕೆ ಪಡೆಯಲೇ ಎಂದು ಪ್ರಶ್ನಿಸಿದಾಗ ಸದನದಲ್ಲಿ ನಗೆಬುಗ್ಗೆ ಎದ್ದಿತ್ತು.

ರೈಲ್ವೆ ಸಚಿವ ದಿನೇಶ್ ತ್ರಿವೇದಿ ಮೊದಲ ಸಾಲಿನಲ್ಲೇ ಕುಳಿತಿದ್ದರು. ಪಶ್ಚಿಮ ಬಂಗಾಳದ ಶಾಸಕರಾಗಿರುವ ಪ್ರಣವ್ ಪುತ್ರ ಅಭಿಜಿತ್ ಹಾಗೂ ಇತರ ಕುಟುಂಬ ಸದಸ್ಯರು ಗ್ಯಾಲರಿಯಲ್ಲಿ ಕುಳಿತಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.