ಭಾಷಾ ಪ್ರಯೋಗಾಲಯ

7

ಭಾಷಾ ಪ್ರಯೋಗಾಲಯ

Published:
Updated:

ವಿವಿಧ ಭಾಷೆಗಳ ಕಲಿಕೆಯಿಂದ ಬೌದ್ಧಿಕ ಸಾಮರ್ಥ್ಯ ಮತ್ತು ಅರಿವಿನ ವಿಸ್ತಾರ ಹೆಚ್ಚುತ್ತದೆ.ಜ್ಞಾನವೃದ್ಧಿಯಲ್ಲಿ ಭಾಷಾ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ಮಾತೃ ಭಾಷೆಯ ಜೊತೆಗೆ ಮತ್ತೊಂದು ಭಾಷೆ ಕಲಿಯಬೇಕು ಎಂದು ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರ ರಚಿಸಿ ದೇಶದ ವಿವಿಧೆಡೆಗಳಲ್ಲಿ ಪ್ರಾದೇಶಿಕ ಭಾಷಾ ಕೇಂದ್ರಗಳನ್ನು ಸ್ಥಾಪಿಸಿದೆ.ದೇಶೀಯ ಭಾಷೆಗಳ ರಕ್ಷಣೆ, ಸಂಶೋಧನೆ, ಅಭಿವೃದ್ಧಿ, ಕಲಿಕೆ, ತರಬೇತಿ ನೀಡುತ್ತಿದೆ. ಮೈಸೂರಿನ ಭಾಷಾ ಸಂಸ್ಥಾನದಲ್ಲಿ ಭಾಷಾ ತಜ್ಞರು ಬಹುಮಾಧ್ಯಮ ತಂತ್ರಜ್ಞಾನ ಮತ್ತು ಭಾಷಾ ಪ್ರಯೋಗಾಲಯಗಳ ಮೂಲಕ ಬೋಧಿಸುತ್ತಾ ಭಾಷೆಗಳ ಕಂಪನ್ನು ಎಲ್ಲೆಡೆ ಪಸರಿಸಲು ಸರ್ವದಾ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ.ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಲ್ಲಿ (ಭಾಷಾ ಸಂಸ್ಥಾನ) ಭಾಷಾ ಶಿಕ್ಷಣಕ್ಕೆ ಸಂಬಂಧಿಸಿದ 10 ತಿಂಗಳ ಡಿಪ್ಲೊಮಾ ಕೋರ್ಸ್ ಕಲಿಯಲು ಅವಕಾಶವಿದೆ.ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳನ್ನು ಇಲ್ಲಿ ಕಲಿಸಲಾಗುತ್ತಿದೆ. ಈ ಕೋರ್ಸ್‌ನಲ್ಲಿ ಶಿಕ್ಷಕರಿಗೆ ಶೇ 50, ಸಂಶೋಧಕರಿಗೆ ಶೇ 20, ಅಲ್ಪಸಂಖ್ಯಾತ ಭಾಷಿಗರಿಗೆ ಶೇ 10 ಮತ್ತು ಇತರರಿಗೆ ಶೇ 20 ಸೀಟುಗಳನ್ನು ಮೀಸಲಿಡಲಾಗಿದೆ.ಕೋರ್ಸ್‌ಗೆ ಆಯ್ಕೆಯಾದವರಿಗೆ ಶಿಷ್ಯವೇತನ ಸಿಗುತ್ತದೆ.ಇಲ್ಲಿ ಕಲಿತ ಭಾಷೆಯನ್ನು ಶಿಕ್ಷಕರು ಇತರ 10 ಮಂದಿಗೆ ಕಲಿಸಬೇಕಾದುದು ಕಡ್ಡಾಯ. ಭಾಷೆ ಕಲಿಸಲು ಅಗತ್ಯವಿರುವ ಪರಿಕರಗಳನ್ನುಶಿಕ್ಷಕರಿಗೆ ಭಾಷಾ ಸಂಸ್ಥಾನ ಒದಗಿಸುತ್ತದೆ. ಭಾಷೆ ಕಲಿಸಿದ್ದಕ್ಕೆ ಶಿಕ್ಷಕರು ಒದಗಿಸುವ ಪುರಾವೆಗಳನ್ನು ಭಾಷಾ ಸಂಸ್ಥಾನ ಮೌಲ್ಯಮಾಪನ ಮಾಡುತ್ತದೆ. ವಿದ್ಯಾರ್ಥಿಗಳ ಭಾಷೆ ಕಲಿಕೆ ಮಟ್ಟ ತಿಳಿಯಲು ಜನವರಿಯಲ್ಲಿ ಲಾಂಗ್ವೇಜ್ ಎನ್‌ವಿರಾನ್‌ಮೆಂಟಲ್ ಟೂರ್ (ಎಲ್‌ಇಟಿ) ಏರ್ಪಡಿಸಲಾಗುವುದು. ಈ ಟೂರ್ ಕೋರ್ಸ್‌ನ ಒಂದು ಭಾಗವಾಗಿದ್ದು, ಇದಕ್ಕೆ ಅಗತ್ಯ ಪೂರ್ವಸಿದ್ಧತೆ ಎಲ್ಲವೂ ಭಾಷಾ ಸಂಸ್ಥಾನದ್ದೇ. ಪ್ರವಾಸದಲ್ಲಿ ವಿದ್ಯಾರ್ಥಿಗಳು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶದ (ಆ ರಾಜ್ಯದ ಭಾಷೆ ತಿಳಿದಿರುವ) ರಾಜ್ಯಪಾಲರು, ನ್ಯಾಯಾಧೀಶರು, ವಿಶ್ವವಿದ್ಯಾನಿಲಯಗಳ ಕುಲಪತಿಗಳು ಇತರರೊಂದಿಗೆ ಮಾತುಕತೆ ನಡೆಸಲು ಅವಕಾಶ ಕಲ್ಪಿಸಲಾಗುವುದು.ತೆಲುಗು ಕಲಿತವರು ಆಂಧ್ರದಲ್ಲಿ, ತಮಿಳು ಕಲಿತವರು ತಮಿಳುನಾಡಿನಲ್ಲಿ, ಮಲೆಯಾಳಂ ಕಲಿತವರು ಕೇರಳದಲ್ಲಿ, ಕನ್ನಡ ಕಲಿತವರು ಕರ್ನಾಟಕದಲ್ಲಿ ವಿವಿಗಳ ಕುಲಪತಿಗಳು, ನ್ಯಾಯಾಧೀಶರು ಇತರರೊಂದಿಗೆ ಸಂವಾದ ನಡೆಸುತ್ತಾರೆ.ಪ್ರವಾಸದಿಂದ ತಾವು ಕಲಿತ ಭಾಷೆಯ ನಾಡಿನ ಸಂಪ್ರದಾಯ, ಆಚಾರ-ವಿಚಾರಗಳು ತಿಳಿಯುತ್ತವೆ.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಭಾಷಾ ಶಿಷ್ಟಾಚಾರ, ಸಂಬೋಧನಾ ವಿಧಾನ, ಮಾತಿನ ಶೈಲಿ ಇತ್ಯಾದಿಗಳ ಮಟ್ಟವನ್ನು ತಜ್ಞರು ಪರೀಕ್ಷಿಸುತ್ತಾರೆ. ಯಶಸ್ವಿಯಾಗಿ ಕೋರ್ಸ್ ಮುಗಿಸಿದವರು ಸಿಐಐಎಲ್ ಏರ್ಪಡಿಸುವ ಪುನಃಶ್ಚೇತನ ಕಾರ್ಯಾಗಾರ, ಭಾಷಾ ತರಬೇತಿ ಶಿಬಿರ, ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಸಂಶೋಧಕರು ಬೇರೆ ಭಾಷೆಯಲ್ಲಿ ಸಾಹಿತ್ಯವನ್ನು ಅಭ್ಯಸಿಸಲು ಸಹಾಯಕವಾಲಿದೆ. ಭಾಷಾ ಶಿಕ್ಷಕರಿಗೆ ಪ್ರೌಢಿಮೆ ಪಡೆಯಲು ವರದಾನ. ಅಲ್ಲದೇ ಶಿಕ್ಷಕರಿಗೆ ವೃತ್ತಿಯಲ್ಲಿ ಬಡ್ತಿ, ಸಂಬಳ ಹೆಚ್ಚಳ (ಮಾಹೆಯಾನರೂ 70) ದೊರೆಯಲಿವೆ. ಭಾಷೆಯಲ್ಲಿ ವರ್ಣಮಾಲೆ ಅಭ್ಯಾಸ, ಪದಗಳ ಸ್ಪಷ್ಟ ಉಚ್ಚಾರಣೆ, ಅರ್ಥವಿವರಣೆ, ಪ್ರಯೋಗ, ವಾಕ್ಯ ರಚನೆ. ಇವುಗಳನ್ನು ವ್ಯವಸ್ಥಿತವಾಗಿ ಕಲಿಸುವ ಸಲುವಾಗಿ ಇಲ್ಲಿ ತರಗತಿ ಪ್ರವಚನದ ಜೊತೆಗೆ ಸುಸಜ್ಜಿತ ಭಾಷಾ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಇದನ್ನು Audio Active Comparative Lab ಎಂದೂ ಕರೆಯಲಾಗುತ್ತದೆ. ತರಗತಿ ಪ್ರವಚನ ಏಕಮುಖ ಆಯಾಮ ಹೊಂದಿದ್ದರೆ ಪ್ರಯೋಗಾಲಯ ಕಲಿಕೆ ಬಹುಮುಖ ಆಯಾಮ ಹೊಂದಿದೆ.

 ಭಾಷಾ ಪ್ರಯೋಗಾಲಯದಲ್ಲಿ ಏನೇನಿದೆ?

* 30 ಆಸನಗಳ ಈ (wired) ಭಾಷಾ ಪ್ರಯೋಗಾಲಯದಲ್ಲಿ ಮಾಸ್ಟರ್ ಕನ್‌ಸೋಲ್ ಮತ್ತು ಸ್ಟೂಡೆಂಟ್ ಬೂತ್ ಎಂಬ     ಎರಡು ವಿಭಾಗಗಳಿವೆ.

* ವಿದ್ಯಾರ್ಥಿಗಳಲ್ಲಿ ಸ್ವಯಂ ಕಲಿಕೆ-ಸ್ವಯಂ ಭಾಷಾ ಶಿಕ್ಷಕನಾಗಲು ಸಿ.ಡಿಗಳ ಮೂಲಕ ಭಾಷಾಧ್ಯಯನ ಹೇಗೆ ಎಂಬುದನ್ನು ತಿಳಿಸಲಾಗುತ್ತದೆ. 

* ಭಾಷೆಯ ವೈಜ್ಞಾನಿಕ ಅಧ್ಯಯನ ಸುಲಭ ಸಾಧ್ಯ. ಏಕೆಂದರೆ ಶಿಕ್ಷಕ ಮತ್ತು ಪ್ರತಿ ವಿದ್ಯಾರ್ಥಿ ಪರಸ್ಪರ ನಡುವೆ ದ್ವಿಮುಖ   ಸಂವಹನ ಏರ್ಪಡುವುದರಿಂದ ವಿದ್ಯಾರ್ಥಿ ಸಂದೇಹಗಳನ್ನು ಶಿಕ್ಷಕರಿಂದ ತಕ್ಷಣವೇ ಪರಿಹರಿಸಿಕೊಳ್ಳಬಹುದು. 

* ಅಪ್ಪರ್ ಮತ್ತು ಲೋಯರ್ ಟ್ರ್ಯಾಕ್ ಎಂಬ ಎರಡು ಟ್ಯಾಕ್ ಮೂಲಕ ಕಲಿಸುವಿಕೆ, ಕಲಿಕೆ ನಡೆಯತ್ತದೆ.

*  ಅಪ್ಪರ್ ಟ್ರ್ಯಾಕ್ ಭಾಷಾ ತಜ್ಞರದ್ದು, ಲೋಯರ್ ಟ್ರ್ಯಾಕ್ ವಿದ್ಯಾರ್ಥಿಗಳದ್ದು.

* ವಿದ್ಯಾರ್ಥಿಏನು ಚಟುವಟಿಕೆಯಲ್ಲಿ ತೊಡಗಿದ್ದಾನೆ ಎಂಬುದನ್ನು ಆ ವಿದ್ಯಾರ್ಥಿಗೂ ತಿಳಿಯದಂತೆ ಶಿಕ್ಷಕರು ಗಮನಿಸುವ ವ್ಯವಸ್ಥೆ ಇದೆ.

* ವಿದ್ಯಾರ್ಥಿ ಗುಂಡಿ ಒತ್ತುವ ಮೂಲಕ ಶಿಕ್ಷಕರ ಗಮನ ಸೆಳೆದು ಸಮಸ್ಯೆ ಪರಿಹರಿಸಿಕೊಳ್ಳಬಹುದು.

* ಹೆಡ್‌ಸೆಟ್ ವ್ಯವಸ್ಥೆ ಇರುವುದರಿಂದ ಪದ ಪ್ರಯೋಗ, ವಾಕ್ಯರಚನೆಯಲ್ಲಿ ಸ್ಫುಟತೆ, ಸರಾಗ ಕಂಡುಕೊಳ್ಳಬಹುದು.

* ಇಲ್ಲಿ ನಾಲ್ಕರಿಂದ ಆರು ಮಂದಿ ಗುಂಪಾಗಿ ಮತ್ತು ಇಬ್ಬಿಬ್ಬರು ಜೊತೆಯಾಗಿ ಅಭ್ಯಸಿಸಲೂ ಅವಕಾಶವಿರುವುದರಿಂದ ಭಾಷೆಯನ್ನು ಸುಲಲಿತವಾಗಿ ಮತ್ತು ತ್ವರಿತವಾಗಿ ಕಲಿಯಲು ಸಾಧ್ಯವಾಗುತ್ತದೆ.

* ಭಾಷೆ ಪ್ರೌಢಿಮೆ, ಸಂಸ್ಕೃತಿ, ವೈಶಿಷ್ಟ್ಯತೆ ಹಿರಿಮೆ ಗರಿಮೆಗಳ ಬಗ್ಗೆ ದೃಶ್ಯ ಮತ್ತು ಶ್ರಾವ್ಯದ ಮೂಲಕ ತಿಳಿಸಲಾಗುತ್ತದೆ.

* ತರಗತಿಯಲ್ಲಿ ಸೈದ್ಧಾಂತಿಕವಾಗಿ ಕಲಿತ ಅಂಶಗಳನ್ನು ಮತ್ತಷ್ಟು ನಿಖರವಾಗಿ, ಸಮರ್ಪಕವಾಗಿ ತಿಳಿಯಲು ಅವಕಾಶ ಇದೆ.

* ಶಬ್ದದ ಅಲೆಗಳು, ಪದಗಳ ಉಚ್ಚಾರಣೆ ನಿಯಮಗಳು, ವ್ಯಾಕರಣ ಇತ್ಯಾದಿಗಳ ಬಗ್ಗೆ ಅರಿಯಬಹುದು.

* ಕಲಿಕೆಗೆ ಅಗತ್ಯವಿರುವ ಹಿಂದಿ, ಕನ್ನಡ, ತೆಲುಗು, ತಮಿಳು ಮಲಯಾಳಂ ಭಾಷಾ ಸಿಡಿಗಳು ಇಲ್ಲಿ ಲಭ್ಯ.

* ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆ ನಡೆಸುವುದರಿಂದ ಗೊಂದಲ, ದ್ವಂದ್ವಗಳಿಗೆ ಅವಕಾಶ ಇರುವುದಿಲ್ಲ.

* ಮೀಡಿಯಾ ಮ್ಯಾನೇಜರ್ ಡಾಟಾ ಬೇಸ್ ವಿದ್ಯಾರ್ಥಿಗಳಿಗೆ ಅಗತ್ಯ ಕಲಿಕಾ ದಾಖಲೆ, ಸಾಮಗ್ರಿಗಳನ್ನು ಒದಗಿಸುತ್ತದೆ.

ಕನ್‌ಸೋಲ್ ಮತ್ತು ಬೂತ್ ಟೂಲ್‌ಬಾರ್‌ನಲ್ಲಿನ ಸೌಲಭ್ಯಗಳು:ಆಲ್ ಕಾಲ್, ಕ್ಲಾಸ್ ಸ್ಪೀಕರ್, ದ್ವಿ-ಭಾಷಾ ಪದಕೋಶಗಳು, ದೂರವಾಣಿ ಸಂಭಾಷಣೆ, ಪರಸ್ಪರ ಸಂವಾದ (ಪೇರ್ ಡಿಸ್‌ಕಷನ್), ಸಮೂಹ ಸಮ್ಮೇಳನ (ಗ್ರೂಪ್ ಕಾನ್ಫರೆನ್ಸ್), ಗ್ರೂಪ್ ಬಟನ್ಸ್, ಬುಕ್ ಮಾರ್ಕ್ಸ್ಮೇಲ್ವಿಚಾರಣಾ ವಿಧಾನ: ಇಂಟರ್‌ಕಾಮ್, ಮಾನಿಟರ್, ಆಟೋಮಾನಿಟರ್, ಸ್ಟೂಡೆಂಟ್ ನೋಟ್ಸ್ ವಿಧಾನಗಳ ಮೂಲಕ ಭಾಷಾ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಪರಸ್ಪರ ಸಂಭಾಷಿಸುತ್ತಾರೆ. ಮಾಹಿತಿಗೆ ದೂ: 0821-2512128/2345159 ಅಥವಾ ವೆಬ್‌ಸೈಟ್ http://www.ciil.org ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry