ಭಾಷಾ ಭಾವೈಕ್ಯ ಸಮಾವೇಶ: ಮರಾಠಿ, ಕನ್ನಡಿಗರಲ್ಲಿ ವೈಷಮ್ಯ ಇಲ್ಲವೇ ಇಲ್ಲ

7

ಭಾಷಾ ಭಾವೈಕ್ಯ ಸಮಾವೇಶ: ಮರಾಠಿ, ಕನ್ನಡಿಗರಲ್ಲಿ ವೈಷಮ್ಯ ಇಲ್ಲವೇ ಇಲ್ಲ

Published:
Updated:

ಸೋಲಾಪುರ (ಮಹಾರಾಷ್ಟ್ರ): `ಮರಾಠಿ-ಕನ್ನಡಿಗರಲ್ಲಿ ಭಾಷೆ-ಗಡಿಯ ವೈಷಮ್ಯ ಇಲ್ಲವೇ ಇಲ್ಲ.  ರಾಜಕೀಯ ಕಾರಣಕ್ಕಾಗಿ ಭಾಷೆ-ಗಡಿ ಹೆಸರಿನಲ್ಲಿ ಬೆಳೆಯಬೇಕೆಂಬ ಚಿಲ್ಲರೆ ಮನುಷ್ಯರು ಹುಟ್ಟು ಹಾಕುತ್ತಿರುವ ಭಾಷಾ ಕಲಹಕ್ಕೆ ಕಿವಿಗೊಡುವುದು, ಕುತಂತ್ರಕ್ಕೆ ಬಲಿಯಾಗಿ ಸೌಹಾರ್ದಕ್ಕೆ ಧಕ್ಕೆ ತಂದುಕೊಳ್ಳುವುದು ಬೇಡ~ ಎಂದು ಕರ್ನಾಟಕ ಮತ್ತು ಮಹಾರಾಷ್ಟ್ರದ ಸಚಿವರು, ಮಠಾಧೀಶರು ಹಾಗೂ ಗಡಿನಾಡ ಕನ್ನಡಿಗರು ಸೋಮವಾರ ಇಲ್ಲಿ ಪಣ ತೊಟ್ಟರು.ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾರಾಷ್ಟ್ರದ ನಾಗನಸೂರ ಶ್ರೀ ಗುರು ಬಮಲಿಂಗೇಶ್ವರ ಕಲ್ಯಾಣ ಕೇಂದ್ರದ ಆಶ್ರಯದಲ್ಲಿ ಸಿದ್ಧರಾಮನ ಕಾಯಕ ಭೂಮಿ `ಸೊನ್ನಲಗಿ~ಯಲ್ಲಿ ಸೋಮವಾರ ನಡೆದ `ಭಾಷಾ ಭಾವೈಕ್ಯ ಸಮಾವೇಶ ಹಾಗೂ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಪುರಸ್ಕಾರ ಸಮಾರಂಭ~ದಲ್ಲಿ ಮಾತನಾಡಿದ ಎಲ್ಲರೂ ಸೌಹಾರ್ದದ ಮಂತ್ರ ಪಠಿಸಿದರು.ಬೆಳಗಾವಿಯ ಯಳ್ಳೂರಿನಲ್ಲಿ ಎಂಇಎಸ್ ಮಹಾಮೇಳಾವದ ಮರುದಿನವೇ ಈ ಸಮಾರಂಭದ ನಡೆಯಿತು. ಅದರ `ಪರಿಣಾಮ~, `ಧಿಕ್ಕಾರ~ದ ಘೋಷಣೆಯಾಗಲಿ, ಪ್ರತಿಭಟನೆಯ ಬಿಸಿಯಾಗಲಿ ಇಲ್ಲಿ ಕಂಡು ಬರಲಿಲ್ಲ.  ಸೋಲಾಪುರದ ಬೀದಿಗಳಲ್ಲಿ ಕರ್ನಾಟಕ ಜಾನಪದ ವೈಭವ ಮೇಳೈಸಿತು. ಸಮಾವೇಶದ ಕನ್ನಡ ಬ್ಯಾನರ್‌ಗಳು ಎಲ್ಲೆಡೆ ರಾರಾಜಿಸಿದವು!ಸಮಾವೇಶ ಉದ್ಘಾಟಿಸಿದ ಮಹಾರಾಷ್ಟ್ರದ ಹೈನುಗಾರಿಕೆ ಅಭಿವೃದ್ಧಿ ಖಾತೆ ಸಚಿವ ಮಧುಕರರಾವ್ ಚವ್ಹಾಣ, `ಅವರವರ ಮಾತೃಭಾಷೆಯಲ್ಲಿ ಮಾತನಾಡುವ, ಅದನ್ನು ಗೌರವಿಸುವ, ಅದೇ ಭಾಷೆಯಲ್ಲಿ ವ್ಯಾಸಂಗ ಮಾಡುವ ಹಕ್ಕು ಎಲ್ಲರಿಗೂ ಇದ್ದೇ ಇದೆ. ಅದನ್ನೇ ವಿವಾದವನ್ನಾಗಿಸುವುದು ಸಲ್ಲ. ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳು ಎರಡಾಗಿದ್ದರೂ ಉಭಯ ರಾಜ್ಯಗಳ ಜನತೆಯ ಭಾವನೆ ಒಂದೇ ಆಗಿದೆ~ ಎಂದರು.ಕನ್ನಡದಲ್ಲಿಯೇ ಮಾತನಾಡಿದ ಸೋಲಾಪುರದ ಮಾಜಿ ಶಾಸಕ, ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ವಿಶ್ವನಾಥ ಚಾಕೋತೆ, `ಬೆಳಗಾವಿ ನಮಗೆ ಬೇಕು. ಸೋಲಾಪುರ ನೀವು ತೆಗೆದುಕೊಳ್ಳಿ ಎಂದು ರಾಜಕಾರಣಿಗಳು ಭಾವೈಕ್ಯತೆ  ಕೆಡಿಸುತ್ತಿದ್ದಾರೆ. ಭಾಷೆ ಎಂಬುದು ಯಾರೊಬ್ಬರ ಸ್ವತ್ತಲ್ಲ. ಭಾಷೆ-ಗಡಿ ಹೆಸರಿನಲ್ಲಿ ಗೊಂದಲ ಸೃಷ್ಟಿಸುವವರ ಬಗ್ಗೆ ಎಚ್ಚರದಿಂದ ಇರಿ~ ಎಂದು ಮನವಿ ಮಾಡಿದರು.`ಮಹಾರಾಷ್ಟ್ರವೂ ಸೇರಿದಂತೆ ಹೊರರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಕರ್ನಾಟಕ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಇದೇ ಮಾದರಿಯ ಸಹಕಾರವನ್ನು ನಮ್ಮಲ್ಲಿಯ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆಯಾ ರಾಜ್ಯ ಸರ್ಕಾರಗಳು ನೀಡಬೇಕು~ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಆಹ್ವಾನ ನೀಡಿದರು.`ಮಹಾರಾಷ್ಟ್ರ ಸರ್ಕಾರ 30 ವರ್ಷಗಳಿಂದ ಬಸವ ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುತ್ತಿದೆ. ಕರ್ನಾಟಕ ಸರ್ಕಾರ ಈ ವರ್ಷದಿಂದ ಶಿವಾಜಿ ಮಹಾರಾಜರ ಜಯಂತಿಯನ್ನು ರಾಷ್ಟ್ರೀಯ ಉತ್ಸವವನ್ನಾಗಿ ಆಚರಿಸಲು ಆರಂಭಿಸಿದೆ. ಇದು ಉಭಯ ರಾಜ್ಯಗಳು ಹೊಂದಿರುವ ಸೌಹಾರ್ದತೆಯ ಸಂಕೇತ~ ಎಂದು ಕನ್ನಡ ಮತ್ತು ಸಂಸ್ಕೃತಿ, ಸಣ್ಣ ನೀರಾವರಿ ಖಾತೆ ಸಚಿವ ಗೋವಿಂದ ಕಾರಜೋಳ ಬಣ್ಣಿಸಿದರು.`ಇಲ್ಲಿರುವ ಕನ್ನಡಿಗರು ಕನ್ನಡವನ್ನು ಉಳಿಸಿ ಬೆಳೆಸುವ ಜೊತೆಗೆ ತಾವಿರುವ ಮಹಾರಾಷ್ಟ್ರ ರಾಜ್ಯವನ್ನು ಪ್ರೀತಿಸುತ್ತ ಸುಖವಾಗಿದ್ದಾರೆ~ ಎಂದು ಸೋಲಾಪುರ ನಗರ ಶಾಸಕ ವಿಜಯಕುಮಾರ ದೇಶಮುಖ ಪ್ರಶ್ನಿಸಿದರು.

ಸಾನ್ನಿಧ್ಯ ವಹಿಸಿದ್ದ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು, `ಭಾಷೆ ನಮ್ಮ ಭಾವನೆಯ ಅಭಿವ್ಯಕ್ತಿಯ ಸಾಧನ. ಭಾಷೆಯ ಹೆಸರಿನಲ್ಲಿ ಕಲಹ ಮಾಡುವುದು ನಮ್ಮ ಅವಿವೇಕತನದ ಪರಮಾವಧಿ. ನಮ್ಮ ತಾಯಿಯನ್ನು ಗೌರವಿಸಬೇಕು. ಪರರ ತಾಯಿಗೆ ಅಗೌರವ ಸಲ್ಲ. ಮಾತೃ ಭಾಷೆಯಲ್ಲಿ ನಿಷ್ಠೆ ಇಟ್ಟುಕೊಂಡು ಅನ್ಯ ಭಾಷೆಗಳ ಬಗ್ಗೆ ಸಹನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು~ ಎಂದು ಕಿವಿ ಮಾತು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry