ಮಂಗಳವಾರ, ಅಕ್ಟೋಬರ್ 15, 2019
28 °C

ಭಾಷಾ ಸಮಸ್ಯೆ ಬಗೆಹರಿಸಲು ಆಗ್ರಹ

Published:
Updated:

ಖಾನಾಪುರ: `ಕಳೆದ ತಿಂಗಳು ಬೆಳಗಾವಿ ತಾಲ್ಲೂಕಿನ ಸಾಂಬ್ರಾ ಗ್ರಾಮದಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದಲ್ಲಿ  ರಾಜ್ಯ ಸರ್ಕಾರದ ವಿರುದ್ಧ ನಿರ್ಣಯ ಮಂಡಿಸಿ ಸಮಸ್ಯೆ ಎದುರಿಸಿದ ಮರಾಠಿಗರು ಮಾಚಿಗಡ ಸಮ್ಮೇಳನದಲ್ಲಿ ಮತ್ತೊಮ್ಮೆ ಆ ತಪ್ಪನ್ನು ಮಾಡದೇ ಪರೋಕ್ಷವಾಗಿ ಕರ್ನಾಟಕ ಸರ್ಕಾರದ ಹಾಗೂ ಕನ್ನಡಿಗರ ವಿರುದ್ಧ ವಾಗ್ದಾಳಿ ನಡೆಸಿದರು.  60 ವರ್ಷಗಳಿಂದ ತಾವು ಇನ್ನೂ ಸಮಸ್ಯೆಗಳ ಸುಳಿಯಲ್ಲಿಯೇ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದು, ಕೇಂದ್ರ ಸರ್ಕಾರ ಮದ್ಯ ಪ್ರವೇಶಿಸಿ ಗಡಿ ವಿವಾದವನ್ನು ಕೊನೆಗೊಳಿಸಬೇಕು. ಮರಾಠಿ ಭಾಷಿಕರ ಪ್ರಾಂತ್ಯಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಇಲ್ಲವೇ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು~ ಎಂದು ಮಜಿ ಶಾಸಕ ವಸಂತರಾವ ಪಾಟೀಲ ಕರೆ ನೀಡಿದರು.ತಾಲ್ಲೂಕಿನ ಮಾಚಿಗಡ ಗ್ರಾಮದ ಸುಬ್ರಹ್ಮಣ್ಯ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ನಡೆದ 15ನೇ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೇಂದ್ರದ ರಾಜಕೀಯ ಮುಖಂಡರು ಗಡಿ ವಿಷಯದಲ್ಲಿ ನಿರುತ್ಸಾಹ ಹೊಂದಿದ್ದಾರೆ ಎಂದು ಆರೋಪಿಸಿದರು.`ಕಳೆದ 46 ವರ್ಷಗಳ ಅವಧಿಯಲ್ಲಿ ದಿ.ಖಾನಾಪುರ ಅರ್ಬನ್ ಕೋ-ಆಪ್ ಬ್ಯಾಂಕ್‌ನಲ್ಲಿ ಕೇವಲ ಮರಾಠಿ ಭಾಷೆಗೆ ಮಾತ್ರ ಪ್ರಾಧ್ಯಾನ್ಯತೆ ನೀಡಲಾಗಿದೆ. ತಮ್ಮ ಬ್ಯಾಂಕಿನ ಪ್ರತಿಯೊಂದು ದಾಖಲೆಗಳನ್ನು, ಠರಾವುಗಳನ್ನು, ನಾಮಫಲಕಗಳನ್ನು, ನೋಟಿಸ್‌ಗಳನ್ನು ಮಾರಾಠಿ ಭಾಷೆಯಲ್ಲಿ ನೀಡಿ ಮರಾಠಿತನವನ್ನು ಕಾಯ್ದುಕೊಂಡು ಬರಲಾಗಿದೆ. ತಮ್ಮ ಬ್ಯಾಂಕಿನ ಯಾವ ಶಾಖೆಯಲ್ಲೂ ಕನ್ನಡ ಸೂಚನಾ ಫಲಕಗಳಿಗೆ ಅವಕಾಶ ನೀಡಿಲ್ಲ.ಮುಂದಿನ ದಿನಗಳಲ್ಲೂ ಇದನ್ನೇ ಮುಂದುವರೆಸಿಕೊಂಡು ಹೋಗಲಾಗುವುದು~ ಎಂದು ಖಾನಾಪುರ ಅರ್ಬನ್ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಬಾಬುರಾವ ಚಿತ್ರಗಾರ ಹೇಳಿದರು.ಮಹಾರಾಷ್ಟ್ರದ ಪುಣೆಯಲ್ಲಿರುವ ಪುಣೆ ವಿಶ್ವವಿದ್ಯಾಲಯಕ್ಕೆ ವೀರವನಿತೆ ಜೀಜಾಮಾತಾ ವಿಶ್ವವಿದ್ಯಾಲಯವೆಂದು ಮರುನಾಮಕರಣ ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು.ಮಹಾರಾಷ್ಟ್ರದ ಪರಭಣಿ ನಗರದ ಸಾಹಿತಿ ಹಾಗೂ ಕವಿ ಡಾ.ಇಂದ್ರಜಿತ್ ಭಾಲೇರಾವ್ ಅಧ್ಯಕ್ಷತೆಯಲ್ಲಿ ಜರುಗಿದ ಪಟ್ಟಣದ ಹಿರಿಯ ವಕೀಲ ಅರುಣ ಸರದೇಸಾಯಿ, ಮಾಜಿ ಶಾಸಕ ವಸಂತರಾವ ಪಾಟೀಲ್, ಇತಿಹಾಸ ಸಂಶೋಧಕಿ ಡಾ.ಸುವರ್ಣಲತಾ ಇವರು “ಜೈ ಮಹಾರಾಷ್ಟ್ರ” ಘೋಷಣೆಗಳನ್ನು ಕೂಗಿದರು. ಸಮ್ಮೇಳನದಲ್ಲಿ ಮರಾಠಿ ಲೇಖಕ ಪ್ರಕಾಶ ಪಾಟೀಲ ಬರೆದ ಭಾಷಾ ಸಮಸ್ಯೆಗೆ ಸಂಬಂಧಿಸಿದ ಮರಾಠಿ ಜನರ ಬೇಡಿಕೆಗಳ ಕುರಿತ `ಮಾಗಣಿ ಹಕ್ಕಾಚೇ~ (ಹಕ್ಕಿನ ಬೇಡಿಕೆಗಳು) ಎಂಬ ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು.ಗಂದಿಗವಾಡ ಗ್ರಾಮದ ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ನಾಸೀರ್ ಬಾಗವಾನ , ಇರ್ಫಾನ್ ತಾಳಿಕೋಟಿ ಜಿ.ಪಂ. ಸದಸ್ಯ ಜ್ಯೋತಿಬಾ ರೆಹಮಾನಿ, ತಾ.ಪಂ. ಅಧ್ಯಕ್ಷ ಸಯ್ಯಾಜಿ ಪಾಟೀಲ್, ಸುಬ್ರಹ್ಮಣ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಾಬುರಾವ ಪಾಟೀಲ್, ಪಿರಾಜಿ ಕುರಾಡೆ, ಪುಂಡಲಿಕ ಕಾರಲಗೇಕರ ಮತ್ತಿತರರು ಉಪಸ್ಥಿತರಿದ್ದರು.

Post Comments (+)