ಭಾನುವಾರ, ನವೆಂಬರ್ 17, 2019
28 °C

ಭಾಷೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಅಗತ್ಯ: ಕಂಬಾರ

Published:
Updated:

ಬೆಂಗಳೂರು: `ನಮ್ಮ ಕನ್ನಡ ಭಾಷೆಯನ್ನು ತಾಂತ್ರಿಕವಾಗಿ ಕಟ್ಟುವ ಕೆಲಸವಾಗಬೇಕು. ಭಾಷೆಯಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆಯ ಕಾರ್ಯವು ನಡೆಯಬೇಕಾಗಿದೆ' ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.ನಗರದ ಯವನಿಕ ಸಭಾಂಗಣದಲ್ಲಿ ಭಾನುವಾರ ನಡೆದ ನಾಡೋಜ ಡಾ.ಬರಗೂರು ಪ್ರತಿಷ್ಠಾನದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಪೂರ್ಣಚಂದ್ರ ತೇಜಸ್ವಿ ಅವರು ಹೇಳಿದಂತೆ ಭಾಷೆಯು ಎಲ್ಲರಿಗೂ ಉಪಯುಕ್ತವಾಗಿರಬೇಕು. ಆಗ ಮಾತ್ರ ಭಾಷೆ ಕೊನೆಯವರೆಗೂ ಉಳಿಯುತ್ತದೆ. ಈ ನಿಟ್ಟಿನಲ್ಲಿ ಭಾಷೆಯನ್ನು ಎಲ್ಲರಿಗೂ ಉಪಯುಕ್ತವಾಗುವಂತೆ ಮಾಡುವ ಹೊಣೆ ಎಲ್ಲರ ಮೇಲಿದೆ' ಎಂದರು.`ಯಾವುದೇ ಪ್ರತಿಷ್ಠಾನವು ಆ ವ್ಯಕ್ತಿಯ ಆದರ್ಶಗಳನ್ನು ಎತ್ತಿ ಹಿಡಿದು ಸಾಗಬೇಕು. ಬರಗೂರು ಅವರು ತಾವು ನಂಬಿದ ಸಿದ್ಧಾಂತಗಳಿಗೆ ಬದ್ಧರಾದವರು. ಅವರು ಎಂದಿಗೂ ನಿರಾಶೆಯಾದವರಲ್ಲ ಆಶಾವಾದವನ್ನೇ ಪ್ರತಿಪಾದಿಸುತ್ತ ಬಂದವರಾಗಿದ್ದಾರೆ. ಅವರ ಹೆಸರಿನ ಈ ಪ್ರತಿಷ್ಠಾನ ಸಮಯೋಚಿತವಾಗಿದೆ' ಎಂದರು.ಪತ್ರಕರ್ತ ಗಂಗಾಧರ ಮೊದಲಿಯಾರ್ ಮಾತನಾಡಿ, `ಸಾಹಿತ್ಯ ಮತ್ತು ಸಿನಿಮಾ ಎರಡೂ ತಳುಕು ಹಾಕಿಕೊಂಡಿವೆ. ಕನ್ನಡ ಚಿತ್ರಗಳಿಗೆ ಮಾನ್ಯತೆಯಿಲ್ಲ, ಕನ್ನಡ ಚಿತ್ರಗಳನ್ನು ಗುರುತಿಸುವುದಿಲ್ಲವೆಂಬುದು ಬಹುತೇಕರ ಆಕ್ಷೇಪಣೆಯಾಗಿದೆ. ಆದರೆ, ನಮ್ಮವರನ್ನು ನಾವೇ ಗುರುತಿಸುವುದಿಲ್ಲ. ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದು ಸಾಮಾನ್ಯವಾಗಿದೆ. ಇದರಿಂದ ನಮ್ಮ ಕನ್ನಡ ಚಿತ್ರಗಳು ಯಶಸ್ವಿಯಾವುದಿಲ್ಲ' ಎಂದು ಹೇಳಿದರು.`ಹಿಂದಿನ ಸಿನಿಮಾಗಳಾದ ಸಂಸ್ಕಾರ, ಘಟಶ್ರಾದ್ಧ, ಹಂಸಗೀತೆ ಉತ್ತಮ ಚಿತ್ರಗಳು. ಬಂಡಾಯ ಧೋರಣೆಯ ಪ್ರತೀಕವಾಗಿ ಅನೇಕ ಸಿನಿಮಾಗಳು ಬಂದಿವೆ. ಒಳ್ಳೆಯ ಚಿತ್ರಗಳನ್ನು ನೋಡುವುದನ್ನು ನಮ್ಮ ಕನ್ನಡಿಗರಿಗೆ ತಿಳಿಸಬೇಕಾಗಿದೆ' ಎಂದು ಕನ್ನಡ ಚಿತ್ರರಂಗದ ಬಗ್ಗೆ ಬೆಳಕು ಚೆಲ್ಲಿದರು.ಲೇಖಕ ಬರಗೂರು ರಾಮಚಂದ್ರಪ್ಪ ಮಾತನಾಡಿ, `ನನ್ನ ಹೆಸರಿನಲ್ಲಿ ಪ್ರತಿಷ್ಠಾನದ ರಚನೆಯ ಅಗತ್ಯವಿರಲಿಲ್ಲ. ಆದರೆ, ಪ್ರೀತಿಯ ಸ್ನೇಹಿತರು ಮಾಡಿರುವುದರಿಂದ ಇದಕ್ಕೆ ಸಮ್ಮತಿಸಲೇ ಬೇಕಾಯಿತು. ಕನ್ನಡ ಮಕ್ಕಳಿಗೆ, ಬಡ ಮಕ್ಕಳಿಗೆ, ಮಣ್ಣಿನ ಮಕ್ಕಳಿಗೆ ಸಹಾಯ ಮಾಡಲು ಪ್ರತಿಷ್ಠಾನವು ದುಡಿಯಬೇಕು' ಎಂದು ಆಶಯವನ್ನು ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)