ಶುಕ್ರವಾರ, ಮೇ 7, 2021
27 °C

`ಭಾಷೆಯ ಬಳಕೆ ಬೆಳದಿಂಗಳಂತಿರಲಿ'

ಪ್ರಜಾವಾಣಿ ವಾರ್ತೆ/ ಮಲ್ಲೇಶ್ ನಾಯಕನಹಟ್ಟಿ Updated:

ಅಕ್ಷರ ಗಾತ್ರ : | |

ದಾವಣಗೆರೆ (ಮುದೇನೂರು ಸಂಗಣ್ಣ ವೇದಿಕೆ): ಭಾಷೆ ಸೂರ್ಯ ಇದ್ದಂತೆ. ಸೂರ್ಯನನ್ನು ನೇರವಾಗಿ ನೋಡಲಾಗುವುದಿಲ್ಲ. ಆದರೆ, ಅದೇ ಸೂರ್ಯನ ಪ್ರಖರ ಕಿರಣಗಳು ಚಂದ್ರ ಮೇಲೆ ಬಿದ್ದು ಪ್ರತಿಫಲಿಸಿದಾಗ ಅದನ್ನು ನಾವು `ಬೆಳದಿಂಗಳು' ಎಂದು ಪರಿಭಾವಿಸಿ ಆನಂದಿಸುತ್ತೇವೆ. ಹಾಗೆ ನಾವು ಬಳಸುವ ಭಾಷೆ ಕೂಡ ಬೆಳದಿಂಗಳಿನಂತಿರಬೇಕು' ಎಂದು `ಸುಧಾ' ವಾರಪತ್ರಿಕೆಯ ಸಹಾಯಕ ಸಂಪಾದಕ ಬಿ.ಎಂ. ಹನೀಫ್ ಅಭಿಪ್ರಾಯಪಟ್ಟರು.ಸಮ್ಮೇಳನದ ಅಂಗವಾಗಿ ಭಾನುವಾರ ಹ್ಮಮಿಕೊಂಡಿದ್ದ `ಸಮೂಹ ಮಾಧ್ಯಮ' ಗೋಷ್ಠಿಯಲ್ಲಿ `ಮಾಧ್ಯಮಗಳಲ್ಲಿ ಕನ್ನಡ ಭಾಷೆಯ ಬಳಕೆ' ವಿಷಯ ಕುರಿತು ಅವರು ವಿಷಯ ಮಂಡಿಸಿದರು.`ವೃತ್ತ ಪತ್ರಿಕೆಗಳಲ್ಲಿ ಭಾಷೆಯ ಬಳಕೆ ದಿನದಿಂದ ದಿನಕ್ಕೆ ಕ್ಲಿಷೆಯಾಗುತ್ತಿದೆ. ಭಾಷಾ ಮಡಿವಂತಿಕೆ ಸಲ್ಲ; ಆದರೆ, ಮಡಿವಂತಿಕೆ ಭಾಷಾಭಿವೃದ್ಧಿಗೆ ಅಡ್ಡಿಯಾಗಬಾರದು. ಭಾಷೆಯನ್ನು ವೈವಿಧ್ಯ ರೀತಿಯಲ್ಲಿ ಬಳಸಬಹುದು. ಆದರೆ, ಪತ್ರಿಕೆಗಳು ಈಗ ಋಣಾತ್ಮಕ ಭಾಷಾ ಪದ ಪ್ರಯೋಗವನ್ನು ಹೆಚ್ಚಾಗಿ ಬಳಸುತ್ತಿವೆ. ಅದರ ಉದ್ದೇಶ ಬರಹದ ತೀವ್ರತೆಯನ್ನು ಪ್ರತಿಬಿಂಬಿಸುವುದಾಗಿದೆ. ಆದರೆ, ಧನಾತ್ಮಕವಾಗಿಯೂ ಪದ ಪ್ರಯೋಗ ಮಾಡುವ ಮೂಲಕ ಬರವಣಿಗೆಯ ತೀವ್ರತೆಯನ್ನು ಅಭಿವ್ಯಕ್ತಿಗೊಳಿಸಬಹುದು. ಇಂದು ಪತ್ರಿಕಾ ಭಾಷೆ ವೇಗ ಪಡೆದಿದೆ. ಹಾಗಾಗಿ, ಮಾಧ್ಯಮಗಳಲ್ಲಿ ಭಾಷೆ-ದೃಶ್ಯ-ವಿಷಯ ಅಶ್ಲೀಲತೆ ಹೆಚ್ಚುತ್ತಿದೆ ಎಂದರು.ಜಾಹೀರಾತು ಮಾಧ್ಯಮಗಳ ಮೆದುಳಾಗಬಾರದು

`ಸಮೂಹ ಮಾಧ್ಯಮಗಳಿಗೆ ಜಾಹೀರಾತುಗಳು ಅನಿವಾರ್ಯ. ಆದರೆ, ಜಾಹೀರಾತುಗಳೇ ಮಾಧ್ಯಮಗಳ ಮೆದುಳಾಗಬಾರದು' ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಪ್ರತಿಪಾದಿಸಿದರು.ಸಮೂಹ ಮಾಧ್ಯಮ ಗೋಷ್ಠಿಯಲ್ಲಿ `ಜಾಹೀರಾತು ಮತ್ತು ಸಮೂಹ ಮಾಧ್ಯಮಗಳು' ವಿಷಯ ಕುರಿತು ಅವರು ಮಂಡಿಸಿದರು.

ನಿಯತಕಾಲಿಕಗಳು, ಟಿ.ವಿ. ಇತರೆ ಎಲ್ಲಾ ರೀತಿಯ ಸಮೂಹ ಮಾಧ್ಯಮಗಳು ಜಾಹೀರಾತಿನಿಂದಾಗಿ ಅಸ್ತಿತ್ವ ಉಳಿಸಿಕೊಂಡು ಉಸಿರಾಡು ವಂತಾಗಿದೆ. ಆದರೆ, ಜಾಹೀರಾತಿಗೆ ಪ್ರಾಧಾನ್ಯತೆ ನೀಡುವ ಮೂಲಕ ಪ್ರಸ್ತುತ ದಿನಗಳಲ್ಲಿ ಪತ್ರಿಕೋದ್ಯಮದ ತತ್ವ- ಸಿದ್ಧಾಂತವನ್ನು ಕಳೆದುಕೊಳ್ಳುತ್ತಿದೆ. ಸುದ್ದಿ- ಜಾಹೀರಾತುವಿನ ಸಮತೋಲ ಕಾಯ್ದುಕೊಂಡು ಪತ್ರಿಕಾ ಸಿದ್ಧಾಂತದ ಕಟಿಬದ್ಧತೆ ಕಾಪಾಡಿಕೊಳ್ಳಬೇಕು ಎಂದು ವಿಶ್ಲೇಷಿಸಿದರು.ಮೈಮರೆತ ಮಾಧ್ಯಮಗಳು

`ವರ್ತಮಾನದ ತಲ್ಲಣಗಳು ಮತ್ತು ಸಮೂಹ ಮಾಧ್ಯಮ' ಕುರಿತು ಲೇಖಕ ಆರ್.ಜಿ. ಹಳ್ಳಿ ನಾಗರಾಜ್ ಮಾತನಾಡಿ, `ಸಮೂಹ ಮಾಧ್ಯಮಗಳು ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುವುದನ್ನು ಮರೆತಿವೆ. ವ್ಯವಹಾರಿಕ ಮಾರ್ಗದ ಧಾವಂತದಲ್ಲಿ ಇಂದು ಪತ್ರಿಕೋದ್ಯಮ ಸಾಗುತ್ತಿದೆ. ಇದರಿಂದಾಗಿ ಸಾಮಾಜಿಕ ಹೊಣೆಗಾರಿಕೆಯನ್ನು ಮಾಧ್ಯಮಗಳು ಮರೆತಿವೆ ಎಂದು ವಿಷಾದಿಸಿದರು.ಒಂದು ಪತ್ರಿಕೆಗೆ ಜಾಹೀರಾತು ಎಷ್ಟಿರಬೇಕು ಎಂಬುದರ ಬಗ್ಗೆ ಚಿಂತನೆ ನಡೆಯಬೇಕಿದೆ. ಜಾಹೀರಾತು ವಿಚಾರದಲ್ಲಿ ಸ್ವ

ನಿಯಂತ್ರಣವನ್ನು ಮಾಧ್ಯಮ ಸಂಸ್ಥೆಗಳು ಅಳವಡಿಸಿಕೊಂಡಲ್ಲಿ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು ಮತ್ತು ಮಾನವೀಯ ನೆಲೆಗಟ್ಟು ಗಟ್ಟಿಗೊಳಿಸಲು ಸಾಧ್ಯ ಎಂದರು.ಹಳ್ಳಿಗಳಲ್ಲಿನ ನಿರುದ್ಯೋಗಿಗಳು ನಗರ ಮುಖಿಗಳಾಗುತ್ತಿದ್ದಾರೆ; ವೃದ್ಧರು ಆಶ್ರಮ ಸೇರುತ್ತಿದ್ದಾರೆ; ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ; ಭಯೋತ್ಪಾದನೆ, ಕೋಮುಗಲಭೆ, ಪರಿಸರ ನಾಶದಂತಹ ಆತಂಕಕಾರಿ ತಲ್ಲಣಗಳು ನಿರಂತರ ದೇಶವನ್ನು ಬಾಧಿಸುತ್ತಿದ್ದರೂ, ಸಮೂಹ ಮಾಧ್ಯಮಗಳು ಕ್ರೌರವನ್ನು ವಿಜೃಂಭಿಸುತ್ತಾ ಸುಖಿಸುತ್ತಿವೆ. ಇಲ್ಲವೇ ವ್ಯಕ್ತಿಗತ ವಿಚಾರಗಳನ್ನು ವಿಸ್ತ್ರೃತಗೊಳಿಸುತ್ತಾ ಬಿತ್ತರಿಸತೊಡಗಿರುವುದು ಸದ್ಯದ ಪತ್ರಿಕೋದ್ಯಮದ ದುರಂತ ಎನ್ನಬಹುದು. ಕಡಿಮೆ ದರದಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಇನ್ನ ಮುಂದೆ ಮುಗ್ಧ ಹಳ್ಳಿಗಳು ಮದ್ಯ ಮಾರಾಟ ಕೇಂದ್ರಗಳಾಗುವ ಭೀತಿ ರಾಜ್ಯಕ್ಕೆ ಎದುರಾಗಿದೆ. ಇಂಥದನ್ನು ವಿರೋಧಿಸಿ ಜನಜಾಗೃತಿ ಮೂಡಿಸಬೇಕಾದ ಸಮೂಹ ಮಾಧ್ಯಮಗಳು ಜವಾಬ್ದಾರಿ ಮರೆತು ವರ್ತಿಸುತ್ತಿವೆ. ಸಮಾಜದಲ್ಲಿ ದುಷ್ಪರಿಣಾಮ ಬೀರುವ `ರಿಯಾಲಿಟಿ ಶೋ'ದಂತಹ ಕಾರ್ಯಕ್ರಮಗಳನ್ನು ಸಂಘಟಿಸುತ್ತಿವೆ ಎಂದರು.ಪ್ರಭಾವಿ ಮಾಧ್ಯಮ ಟಿ.ವಿ. ಚಾನಲ್‌ಗಳು ಆತ್ಮ ವಿಶ್ವಾಸ ನೀಡುವ, ಸಾಧನೆಗೆ ಪ್ರೇರಣೆ ನೀಡುವ, ಬೌದ್ಧಿಕ ಬದುಕು ಹಸನುಗೊಳಿಸುವಂತಹ ಕಾರ್ಯಕ್ರಮ ಮತ್ತು ವರದಿಗಳತ್ತ ಗಮನ ಹರಿಸಬೇಕಿದೆ ಎಂದು ಸಲಹೆ ನೀಡಿದರು.

ಕುಂ.ಬಾ.ಸದಾಶಿವಪ್ಪ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.  ಪತ್ರಕರ್ತ ಟಿ.ಎನ್. ಷಣ್ಮುಖ, ಕಸಾಪ  ಜಿಲ್ಲಾ ಘಟಕದ ಅಧ್ಯಕ್ಷ ಉಜ್ಜನಪ್ಪ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.