ಭಾಷೆ ಅಭಿವೃದ್ಧಿಗೆ ತಂತ್ರಜ್ಞಾನ ಅಗತ್ಯ: ಡಾ.ಚಂದ್ರಶೇಖರ ಕಂಬಾರ

7

ಭಾಷೆ ಅಭಿವೃದ್ಧಿಗೆ ತಂತ್ರಜ್ಞಾನ ಅಗತ್ಯ: ಡಾ.ಚಂದ್ರಶೇಖರ ಕಂಬಾರ

Published:
Updated:

ದೊಡ್ಡಬಳ್ಳಾಪುರ: ಕನ್ನಡ ಭಾಷೆಯ ಬೆಳವಣಿಗೆಗೆ ತಂತ್ರಜ್ಞಾನದ ಸ್ಪರ್ಶ ಅಗತ್ಯ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.ನಗರದ ಕನ್ನಡ ಜಾಗೃತ ಭವನದಲ್ಲಿ ಗುರುವಾರ ಸಂಜೆ ಕನ್ನಡ ಪಕ್ಷ  ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿ, ಕನ್ನಡ ಬಳಕೆ ಸುಲಭವಾಗುವಂತೆ ತಂತ್ರಜ್ಞಾನ ಅಭಿವೃದ್ಧಿಯಾಗಬೇಕು. ಇಲ್ಲವಾದರೆ ಕನ್ನಡ ಭಾಷೆಗೆ ಅಪಾಯವಿದೆ ಎಂದು ಅವರು ಹೇಳಿದರು.ಇ-ಆಡಳಿತದ ಮೂಲಕ ಸರ್ಕಾರಿ ಕಚೇರಿಗಳಲ್ಲೂ ಏಕರೂಪದ ಕನ್ನಡ ತಂತ್ರಾಂಶ ಬಳಕೆಯಾಗಬೇಕಿದೆ. ಎಲ್ಲ ಕಡತಗಳೂ ಕಂಪ್ಯೂಟರ್ ಮೂಲಕವೇ ರವಾನೆಯಾಗುವಂತೆ ಕಡ್ಡಾಯ ಮಾಡಬೇಕು. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಭ್ರಷ್ಟಾಚಾರ ನಿಯಂತ್ರಣವಾಗಲಿದೆ.ಸಾಹಿತಿ ಎಲ್.ಎನ್.ಮುಕುಂದರಾಜ್, ಕನ್ನಡ ಸಾಹಿತ್ಯದಲ್ಲಿ ವೈಚಾರಿಕತೆ ಮತ್ತು ಜಾತ್ಯತೀತ ಮೌಲ್ಯವಿದೆ ಎಂಬುದಕ್ಕೆ ನಿದರ್ಶನ ಕನ್ನಡಕ್ಕೆ ಸಂದಿರುವ 8ನೇ ಜ್ಞಾನ ಪೀಠ ಪ್ರಶಸ್ತಿ ಎಂದರು.ಕನ್ನಡ ಪಕ್ಷದ ವತಿಯಿಂದ ಡಾ.ಚಂದ್ರಶೇಖರ ಕಂಬಾರ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ನಗರದ ಕಾರ್ಯಕ್ರಮಕ್ಕೆ ಕಂಬಾರರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ಸಮಾರಂಭದಲ್ಲಿ ಶಾಸಕ ಜೆ.ನರಸಿಂಹಸ್ವಾಮಿ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ನಗರಸಭೆ ಅಧ್ಯಕ್ಷ ಎಂ. ಜಗದೀಶ್ ರೆಡ್ಡಿ, ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್ ನಾಯಕ್, ಕಾರ್ಯದರ್ಶಿ ಡಿ.ಪಿ.ಅಂಜನೇಯ, ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry