ಭಾಷೆ ಅರ್ಥವಾಗುವುದಾದರೆ ನರಕವೂ ಲೇಸು

7
ಶ್ರೀರಂಗಪಟ್ಟಣ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾ.ಶಿ.ಮರುಳಯ್ಯ ಅಭಿಮತ

ಭಾಷೆ ಅರ್ಥವಾಗುವುದಾದರೆ ನರಕವೂ ಲೇಸು

Published:
Updated:

ಶ್ರೀರಂಗಪಟ್ಟಣ (ಡಾ.ಸಿ. ಬಂದೀಗೌಡ ಮತ್ತು ಸಂಚಿ ಹೊನ್ನಮ್ಮ ವೇದಿಕೆ): ‘ಅರ್ಥವಾಗದ ಭಾಷೆಯ ಸ್ವರ್ಗಕ್ಕಿಂತ ಅರ್ಥವಾಗುವ ಭಾಷೆಯ ನರಕವೇ ಲೇಸು’ ಎಂದು ಹಿರಿಯ ಸಾಹಿತಿ ಸಾ.ಶಿ. ಮರುಳಯ್ಯ ಹೇಳಿದರು.ಇಲ್ಲಿನ ಟಿಎಪಿಸಿಎಂಎಸ್‌ ಭವನದ ಡಾ.ಸಿ. ಬಂದೀಗೌಡ ಮತ್ತು ಸಂಚಿ ಹೊನ್ನಮ್ಮ ವೇದಿಕೆಯಲ್ಲಿ ಶುಕ್ರವಾರ ನಡೆದ 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.‘ಹೃದಯದ ಮಿಡಿತವನ್ನು ಮಾತಿನ ಮೂಲಕ ಅಭಿವ್ಯಕ್ತ ಮಾಡಬೇಕಾದರೆ ಭಾಷೆ ಅಗತ್ಯ. ಆ ಭಾಷೆ ತಾಯಿ ಭಾಷೆಯಾಗಿರಬೇಕು. ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗೆಗಿನ ಪ್ರೀತಿ ಕಡಿಮೆಯಾಗುತ್ತಿದೆ.ಜರ್ಮನ್‌ ಭಾಷಿಕ ರೆವೆರೆಂಡ್‌ ಕಿಟೆಲ್‌ ಮಹಾಶಯ ರಚಿಸಿದ ಕನ್ನಡ ನಿಘಂಟು ಇಂದಿಗೂ ಮಾದರಿಯಾಗಿದೆ. ಆದರೆ ಕನ್ನಡಿಗರು ಅಂತಹ ವಿಶೇಷ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ ಎಂದರು.‘ಆ ಭಾಷೆಯಿಂದ ಕನ್ನಡಕ್ಕೆ ಕಿತ್ತು, ಈ ಭಾಷೆಯಿಂದ ಕನ್ನಡಕ್ಕೆ ಧಕ್ಕೆ ಇತ್ಯಾದಿಯಾಗಿ ಹೇಳದೆ ಶಾಲೆ, ಕಾಲೇಜುಗಳಲ್ಲಿ  ಶುದ್ಧವಾಗಿ ಕನ್ನಡ ಓದುವ ಹಾಗೂ ಬರೆಸುವ ಮೂಲಕ ಕನ್ನಡ ಭಾಷೆಯನ್ನು ಉಜ್ವಲಗೊಳಿಸಬೇಕು.ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸಿದರೆ ಸಾಹಿತ್ಯ, ಭಾಷೆ ಬಗೆಗಿನ ಅಭಿಮಾನ ತನ್ನಿಂತಾನೆ ಮೂಡುತ್ತದೆ. ಸುಭಾಷ್‌ಚಂದ್ರ ಬೋಸ್‌ ಅವರ ನಿಕಟವರ್ತಿಯಾಗಿದ್ದ ಚಾಮರಾಜನಗರ ಮೂಲದ ಐಎನ್‌ಎ ರಾವ್‌ ಇತರರಿಗೆ ಕುವೆಂಪು ಅವರ ಕನ್ನಡದ ಕ್ರಾಂತಿಗೀತೆಗಳು ಪ್ರೇರಣೆಯಾಗಿದ್ದವು’ ಎಂದು ಸ್ಮರಿಸಿದರು.ರಂಗಕರ್ಮಿ ಮಂಡ್ಯ ರಮೇಶ್‌ ಮಾತನಾಡಿ, ಮುಂದಿನ ಪೀಳಿಗೆಗೆ ನೈಜ ಕನ್ನಡತನ ಉಳಿಯಬೇಕಾದರೆ ರಂಗಭೂಮಿಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಹಳ್ಳಿ ಹಳ್ಳಿಗಳಲ್ಲಿ ರಂಗಮಂದಿರಗಳು ನಿರ್ಮಾಣ ಆಗಬೇಕು.ಮೇಲಿಂದ ಮೇಲೆ ಕನ್ನಡ ಭಾಷೆಯ ನಾಟಕಗಳ ಪ್ರದರ್ಶನ ನಡೆಯುವಂತಾಗಬೇಕು. ಇತರ ಭಾಷೆ ಕಲಿಯುತ್ತಲೇ ಕನ್ನಡದಲ್ಲಿ ಬದುಕುವುದನ್ನು ಕಲಿಯಬೇಕು’ ಎಂದು ಹೇಳಿದರು.ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಸಾಹಿತಿಗಳಿಗೆ ಮಾತ್ರವಲ್ಲ. ಎಲ್ಲ ಜನರಿಗೂ ಇದು ಸ್ಫೂರ್ತಿಯಾಗಬೇಕು ಎಂದರು.ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ರೇಡಿಯೊ, ದೂರದರ್ಶನಗಳ ಕಾರ್ಯಕ್ರಮಗಳಲ್ಲಿ ಕೂಡ ಕನ್ನಡ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಎಂದು ವಿಷಾದಿಸಿದರು.ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸಿ. ಪುಟ್ಟಸ್ವಾಮಿ, ಕೋಶಾಧ್ಯಕ್ಷ ಹುಸ್ಕೂರು ಕೃಷ್ಣೇಗೌಡ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ, ಎನ್‌.ಕೆ. ನಂಜಪ್ಪಗೌಡ, ತಹಶೀಲ್ದಾರ್‌ ಬಿ.ಸಿ. ಶಿವಾನಂದಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುನಿತಾ, ಕಾರ್ಯನಿರ್ವಾಹಕ ಅಧಿಕಾರಿ ಅಮರನಾಥ್‌, ಶೀಲಾ ನಂಜುಂಡಯ್ಯ, ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕ ಮಹದೇವಪುರ ಬಸವರಾಜು, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಸ್ವಾಮಿಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್‌. ಲಿಂಗಣ್ಣ, ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ಡಾ.ಸಿ.ಮಹದೇವು, ಕ್ಷೇತ್ರ ಶಿಕ್ಷಣಾಧಿಕಾರಿ ಹೊನ್ನರಾಜು, ಟಿಎಪಿಸಿಎಂಎಸ್‌ ಅಧ್ಯಕ್ಷ ರಾಮಚಂದ್ರ ಇದ್ದರು.‘ಅಲ್ಪಸಂಖ್ಯಾತರ ವಿವಿ ಸ್ಥಾಪನೆಯಾಗಲಿ’

ಶ್ರೀರಂಗಪಟ್ಟಣ: ‘ಪಟ್ಟಣದಲ್ಲಿ ಅಲ್ಪಸಂಖ್ಯಾತರ ವಿಶ್ವವಿದ್ಯಲಯ ಸ್ಥಾಪನೆಗೆ ಕೇಂದ್ರ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಎನ್‌.ಎಸ್‌. ರಾಮೇಗೌಡ ಒತ್ತಾಯಿಸಿದರು.ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕು. ಶಿಕ್ಷಣ ಕ್ಷೇತ್ರಕ್ಕೆ ಆಯವ್ಯದಲ್ಲಿ ಶೇ 25 ಅನುದಾನ ಹೆಚ್ಚಿಸಿ ಪೂರ್ಣ ಪ್ರಮಾಣದಲ್ಲಿ ಅದು ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು. ರೋಗಗಳು ಹರಡುವುದನ್ನು ತಡೆಯಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತ್ಯೇಕ ಸಂಸ್ಥೆ ಸ್ಥಾಪಿಸಸಬೇಕು. ತಾಲ್ಲೂಕು ಮಟ್ಟದಲ್ಲಿ ಉದ್ಯೋಗ ವಿನಿಮಯ ಕೇಂದ್ರ ಆರಂಭಿಸಬೇಕು ಎಂದು ಸಲಹೆ ನೀಡಿದರು.ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಪರಂಪರೆಯನ್ನು ಕಾಪಾಡುವ ಉದ್ದೇಶದಿಂದ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ಕಮ್ಮಟಗಳನ್ನು ಏರ್ಪಡಿಸಬೇಕು. ವಯೋಮಾನದ ಆಧಾರದ ಮೇಲೆ ಸಾಹಿತ್ಯಕ ಕಾರ್ಯಕ್ರಮಗಳನ್ನು ರೂಪಿಸಬೇಕು. ನಮ್ಮ ಶಿಕ್ಷಣ ವ್ಯವಸ್ಥ ಮತ್ತು ಸಾಹಿತ್ಯದ ನಡುವೆ ಸಂಬಂಧವೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ.ಇದನ್ನು ಹೋಗಲಾಡಿಸಲು ಸರ್ಕಾರ ಕ್ರಮ ವಹಿಸಬೇಕು. ಇಲ್ಲಿ ರಾಜ ಮಹಾರಾಜರ ಕಾಲದಲ್ಲಿದ್ದ ಸಾಹಿತಿಗಳ ಅಪರೂಪದ ಕೃತಿಗಳನ್ನು ಸಂಪಾದಿಸಿ, ಆಧುನಿಕ ಕನ್ನಡ ಭಾಷೆಗೆ ಅನುವಾದ ಮಾಡಿ ಜನಪ್ರಿಯಗೊಳಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಎಲ್ಲ ವ್ಯವಹಾರಗಳು ಕನ್ನಡದಲ್ಲಿ ನಡೆಯುವಂತಾಗಬೇಕು ಎಂದು ಹೇಳಿದರು.‘ರೈತನೂ ಸಮ್ಮೇಳನಾಧ್ಯಕ್ಷನಾಗಲಿ’

ಶ್ರೀರಂಗಪಟ್ಟಣ: ಪಾಂಡಿತ್ಯ ಪಡೆದವನು ಮಾತ್ರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಬೇಕು ಎಂಬ ಮಡಿವಂತಿಕೆ ಸರಿಯಲ್ಲ ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶ್‌ಗೌಡ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.ಹೊಲ ಉಳುವುದು ಕೂಡ ಒಂದು ಬಗೆಯ ಸಾಹಿತ್ಯ ಕೃಷಿ. ಹಾಗಾಗಿ ಉತ್ತಮ ಕೃಷಿಕ, ಉತ್ತಮ ವ್ಯಾಪಾರಿ, ವೈದ್ಯ, ವಕೀಲ ಹೀಗೆ ತಮ್ಮ ಕ್ಷೇತ್ರದಲ್ಲಿ ಜನ ಮೆಚ್ಚುಗೆ ಗಳಿಸಿದ ವ್ಯಕ್ತಿಗಳಿಗೆ ಸಾಹಿತ್ಯ ಸಮ್ಮೇಳನಗಳಲ್ಲಿ ವಿಶಿಷ್ಟ ಸ್ಥಾನಮಾನ ನೀಡಬೇಕು. ಆದರೆ ಅಂತಹ ವ್ಯಕ್ತಿಗೆ ಮಾತೃ ಭಾಷೆಯ ಬಗ್ಗೆ ಅಭಿಮಾನ ಇರಬೇಕು. ಇತರರ ಜತೆ ಸುಲಭವಾಗಿ ಸಂವಹನ ಮಾಡುವ ಜಾಣ್ಮೆ ಮುಖ್ಯ. ಇಲ್ಲದಿದ್ದರೆ ಉದ್ದೇಶಿತ ಕಾರ್ಯ ಸಫಲವಾಗುವುದಿಲ್ಲ ಎಂದರು.ಕರವೇ ರಾಜ್ಯ ಉಪಾಧ್ಯಕ್ಷ ಮಾ.ಸೋ. ಚಿದಂಬರ್‌, ಗಾಂಧಿವಾದಿ ಡಾ.ಬಿ. ಸುಜಯಕುಮಾರ್‌, ಬಿಜೆಪಿ ಮುಖಂಡ ಕೆ.ಬಲರಾಂ, ಕಸಾಪ ಜಿಲ್ಲಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಗೌರವ ಕಾರ್ಯದರ್ಶಿ ಸಿ. ಪುಟ್ಟಸ್ವಾಮಿ, ಕೋಶಾಧ್ಯಕ್ಷ ಡಾ. ಹುಸ್ಕೂರು ಕೃಷ್ಣೇಗೌಡ, ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ, ಎನ್‌.ಕೆ. ನಂಜಪ್ಪಗೌಡ ಇದ್ದರು. ಒಂಟಿ ಕಾಲಿನ ಕೃಷಿಕ ನೆಲಮನೆ ಸ್ವಾಮಿಗೌಡ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ. ಅಮರನಾಥ್‌, ಡಾ.ಪಿ. ರಾಮಕೃಷ್ಣಯ್ಯ, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ಡಾ.ಬಿ. ನರಸಿಂಹಸ್ವಾಮಿ ಅವರನ್ನು ಸನ್ಮಾನಿಸಲಾಯಿತು.ಅನಂತಮೂರ್ತಿಗೆ ‘ಲೇಖನಿ ಇರಿತ’

‘ಮೋದಿ ಪ್ರಧಾನಿಯಾದರೆ ದೇಶ ತೊರೆಯುವೆ ಎನ್ನುವ ಸುದ್ದಿಶೂರ ಮೂರ್ತಿಗಳು, ನಿಜಾರ್ಥದಲ್ಲಿ ಅವಕಾಶ ವಾದಿ’ ಎಂದು ಕವಿ ದರಸಗುಪ್ಪ ಧನಂಜಯ ಜರಿದರು.

ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ತಮ್ಮ ಕವಿತೆಯ ಮೂಲಕ ಮೋದಿ ವಿರುದ್ಧ ಹೇಳಿಕೆ ನೀಡಿದ ಯು.ಆರ್‌. ಅನಂತಮೂರ್ತಿ ಅವರನ್ನು ಕುರಿತು ಖಾರವಾಗಿ ಚುಚ್ಚಿದರು. ‘ಇತರರನ್ನು ಹೊಗಳಿ ಅವಕಾಶ ಗಿಟ್ಟಿಸಿಕೊಳ್ಳುವ ‘ಸಂಸ್ಕಾರ’ ಮೂರ್ತಿಗಳು ಕಾರ್ಯ ಸಿದ್ಧಿಗಾಗಿ ಸಲ್ಲದ ಹೇಳಿಕೆ ನೀಡುವುದೇಕೆ? ರಾಜಕಾರಣಿಯೊಬ್ಬರನ್ನು ಟೀಕಿಸಿ ‘ಯಾರ್ರೀ ಅನಂತಮೂರ್ತಿ’ ಎಂದು ಕರೆಸಿಕೊಂಡವರು ತಮ್ಮ ಹೇಳಿಕೆಯನ್ನು ಮರೆಯುವುದೇಕೆ? ಪ್ರಾಜ್ಞರು ಎನಿಸಿಕೊಂಡ ಸಂಸ್ಕಾರ ಮೂರ್ತಿಗಳು ಇಂದಿನ ಅಶುದ್ಧ ರಾಜಕಾರಣದ ಬಗ್ಗೆ ಈಪಾಟಿ ಕಳಕಳಿ ಹೊಂದಿರುವ ಉದ್ದೇಶವೇನು?’ ಎಂದು ಪ್ರಶ್ನಿಸಿದರು.ಕವಿ ಎಸ್‌.ಎಂ. ಶಿವಕುಮಾರ್‌, ಸಾ.ವೆ.ರ. ಸ್ವಾಮಿ, ಎಂ.ಸಿ. ನಾಗರಾಜು, ಕೊ.ನಾ. ಪುರುಷೋತ್ತಮ, ಮಜ್ಜಿಗೆಪುರ ಕೆ. ಶಿವರಾಂ, ಸುಧಾಕರ್‌ ಹೊಸಳ್ಳಿ, ಕಡಿತನಾಳು ಮಹೇಶ್‌, ಸಿ.ಬಿ. ಉಮಾಶಂಕರ್‌, ಕೆ. ಶೆಟ್ಟಹಳ್ಳಿ ಅಪ್ಪಾಜಿ, ಶೈಲಜಾ, ಕೆ.ಜೆ. ಲೋಕೇಶ್‌, ಎ.ಎಚ್‌. ಚನ್ನೇಗೌಡ, ಗೀತಾ ಹೆಗಡೆ, ವಿನಯ್‌, ಬಿ. ರಮೇಶ್‌, ಶ್ರೀಲತಾ ಇತರರು ಕವಿತೆ ವಾಚಿಸಿದರು. ಪ್ರಾಂಶುಪಾಲ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಾರದಾ ರಮೇಶರಾಜು, ಅರಕೆರೆ ಸೋಮಣ್ಣ, ಕರವೇ ತಾಲ್ಲೂಕು ಅಧ್ಯಕ್ಷ ಕೆ.ಬಿ.ಬಸವರಾಜು, ಗೀತಾ ಹರೀಶ್‌ ಇದ್ದರು. ಮೋಹನ್‌ಕುಮಾರ್‌ ಮತ್ತು ತಂಡದಿಂದ ಸಮೂಹ ಗಾಯನ ನಡೆಯಿತು.ಅಧ್ಯಕ್ಷರ ಭಾಷಣ: ಇಂಗ್ಲಿಷ್‌ ಹೂರಣ!

ಶ್ರೀರಂಗಪಟ್ಟಣ: ಇಲ್ಲಿನ ಟಿಎಪಿಸಿಎಂಎಸ್‌ ಭವನದಲ್ಲಿ ಶುಕ್ರವಾರ ನಡೆದ 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣದಲ್ಲಿ ಕನ್ನಡ ಶಬ್ದಗಳಿಗಿಂತ ಆಂಗ್ಲ ಶಬ್ದಗಳೇ ಹೆಚ್ಚಗಿದ್ದುದು ಅಚ್ಚರಿ ಮೂಡಿಸಿತು.

ಸಮ್ಮೇಳನದ ಸರ್ವಾಧ್ಯಕ್ಷ  ಡಾ.ಎನ್‌.ಎಸ್‌. ರಾಮೇಗೌಡ ಅವರು ಸಿದ್ಧಪಡಿಸಿದ್ದ ಭಾಷಣ ಪ್ರತಿಯಲ್ಲಿ ಪ್ರತಿ ಪುಟದಲ್ಲಿ ಆಂಗ್ಲ ಶಬ್ದಗಳು ಕಣ್ಣಿಗೆ ರಾಚುತ್ತಿದ್ದವು. 20 ಪುಟಗಳ ಭಾಷಣದ ಪ್ರತಿಯಲ್ಲಿ 118 ಶಬ್ದಗಳು ಆಂಗ್ಲ ಭಾಷೆಯಲ್ಲಿ ಅಚ್ಚಾಗಿವೆ. ಈ ಪೈಕಿ ಕೆಲವು ಸಾಮಾನ್ಯ ಜನರು ಓದಿ ಅರ್ಥ ಮಾಡಿಕೊಳ್ಳಲು ಆಗದ ಕ್ಲಿಷ್ಟಕರ ಶಬ್ದಗಳೂ ಇದ್ದವು. ಕನ್ನಡದಲ್ಲಿ ‘ಕೌಶಲ’, ‘ಗ್ರಾಮೀಣ’, ‘ವೇದಿಕೆ’, ‘ಕೃಷಿ’, ‘ಜ್ಞಾನ’ ಎಂದು ಸರಳವಾಗಿ ಹೇಳಬಹುದಾದ ಕನ್ನಡ ಪದಗಳನ್ನು ಆಂಗ್ಲ ಭಾಷೆಯಲ್ಲಿ ಮುದ್ರಸಿದ್ದುದು ಓದುಗರನ್ನು ದಿಗಿಲುಗೊಳಿಸಿತು.ಅಧ್ಯಕ್ಷರ ಭಾಷಣದ ಪ್ರತಿಯಲ್ಲಿ ಆಂಗ್ಲ ಭಾಷೆಯ ಶಬ್ದಗಳ ಪ್ರಮಾಣವನ್ನು ಕಂಡು ಕೆಲವರು ‘ಕನ್ನಡ ನಾಡು ನುಡಿಗೆ ಪ್ರಾಧಾನ್ಯ ಇರುವ ಸಾಹಿತ್ಯ ಸಮ್ಮೇಳನದಲ್ಲಿ ಇದು ಸರಿಯೆ?’ ಎಂದು ಪ್ರಶ್ನೆ ಹಾಕಿಕೊಳ್ಳುತ್ತಿದ್ದು ಕೇಳಿ ಬಂತು. ಭಾಷಣದ ಪ್ರತಿಯಲ್ಲಿ, 14ರಿಂದ 19ನೇ ಪುಟದ ವರೆಗೆ ಸಾಲು ಸಾಲಿಗೂ ಅನ್ಯ ಭಾಷೆಯ ಅಕ್ಷರಗಳ ಹಾವಳಿ ಇತ್ತು. ತಮ್ಮ ಭಾಷಣದಲ್ಲಿ ಕೂಡ ಅಧ್ಯಕ್ಷರು ‘ಆಂಗ್ಲ ಪ್ರೌಢಿಮೆ’ ಮೆರೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry