ಭಾಸ್ಕರರಾವ್ ನೂತನ ಲೋಕಾಯುಕ್ತ

7

ಭಾಸ್ಕರರಾವ್ ನೂತನ ಲೋಕಾಯುಕ್ತ

Published:
Updated:
ಭಾಸ್ಕರರಾವ್ ನೂತನ ಲೋಕಾಯುಕ್ತ

ಬೆಂಗಳೂರು: ರಾಜ್ಯ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವೈ. ಭಾಸ್ಕರ ರಾವ್ ಅವರನ್ನು ಲೋಕಾಯುಕ್ತರನ್ನಾಗಿ ಸರ್ಕಾರ ನೇಮಕ ಮಾಡಿದೆ. ರಾವ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವಂತೆ ಸರ್ಕಾರ ಮಾಡಿದ್ದ ಶಿಫಾರಸಿಗೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅಂಕಿತ ಹಾಕಿದ್ದಾರೆ.ರಾಜಭವನದಲ್ಲಿ ಗುರುವಾರ ಬೆಳಿಗ್ಗೆ ನಡೆಯಲಿರುವ ಸಮಾರಂಭದಲ್ಲಿ ನ್ಯಾ. ರಾವ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆಂಧ್ರಪ್ರದೇಶ ಮೂಲದ ರಾವ್ 1999ರ ಮಾರ್ಚ್‌ನಿಂದ 2000ನೇ ಜೂನ್‌ವರೆಗೆ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. 1999ರ ಜನವರಿಯಿಂದ ಮಾರ್ಚ್‌ವರೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು.ನ್ಯಾಯಮೂರ್ತಿ ಶಿವರಾಜ್ ಪಾಟೀಲ ಅವರು ರಾಜೀನಾಮೆ ನೀಡಿದ ನಂತರ ಲೋಕಾಯುಕ್ತ ಸ್ಥಾನಕ್ಕೆ ಯಾರನ್ನೂ ನೇಮಕ ಮಾಡಿರಲಿಲ್ಲ. ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್.ಆರ್. ಬನ್ನೂರಮಠ ಅವರ ಹೆಸರು ಈ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ ಅವರು ಕಾನೂನು ಬಾಹಿರವಾಗಿ ನಿವೇಶನ ಪಡೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದ ಕಾರಣ, ಅವರ ನೇಮಕಕ್ಕೆ ರಾಜ್ಯಪಾಲರು ಒಪ್ಪಿರಲಿಲ್ಲ. ಹೀಗಾಗಿ ಈ ಹುದ್ದೆ 2011 ಸೆ. 19ರಿಂದ ಖಾಲಿ ಇತ್ತು.ಈ ನಡುವೆ ಲೋಕಾಯುಕ್ತ ನೇಮಕದಲ್ಲಿ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

ವಕೀಲರ ವಿರೋಧ: ಲೋಕಾಯುಕ್ತರಾಗಿ ರಾವ್ ನೇಮಕವನ್ನು ಬೆಂಗಳೂರು ವಕೀಲರ ಸಂಘ ವಿರೋಧಿಸಿದೆ. ಈ ನಿಟ್ಟಿನಲ್ಲಿ ಕಾನೂನು ಸಮರ ಸಾರುವ ಸೂಚನೆ ನೀಡಿದೆ.ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ. ರಂಗನಾಥ್, `ಲೋಕಾಯುಕ್ತರನ್ನು ನೇಮಕ ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಜೊತೆ ಸಮಾಲೋಚನೆ ನಡೆಸಬೇಕು ಎಂದು ಕಾನೂನು ಹೇಳುತ್ತದೆ.ಆದರೆ ರಾಜ್ಯ ಹೈಕೋರ್ಟ್‌ಗೆ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಇಲ್ಲ. ಈಗ ಇರುವವರು ಹಂಗಾಮಿ ಮುಖ್ಯ ನ್ಯಾಯಮೂರ್ತಿ. ಲೋಕಾಯುಕ್ತ ನೇಮಕಾತಿಯಲ್ಲಿ ಅವರಿಗೆ ಮುಖ್ಯ ನ್ಯಾಯಮೂರ್ತಿಗೆ ಇರುವ ಅಧಿಕಾರ ಇದೆಯೇ ಎಂಬುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು' ಎಂದು ಹೇಳಿದರು.`ಲೋಕಾಯುಕ್ತಕ್ಕೆ ಸ್ಥಾನಕ್ಕೆ ಈ ಹಿಂದೆ ಬನ್ನೂರಮಠ ಅವರ ಹೆಸರು ಪ್ರಸ್ತಾವ ಆಗಿತ್ತು. ಆದರೆ ಅವರ ವಿರುದ್ಧ ಕೆಲವು ಆರೋಪಗಳು ಇರುವ ಕಾರಣ, ಅವರ ನೇಮಕಕ್ಕೆ ರಾಜ್ಯಪಾಲರು ಒಪ್ಪಲಿಲ್ಲ. ಅದೇ ಸ್ವರೂಪದ ಆರೋಪಗಳು ನ್ಯಾ. ರಾವ್ ವಿರುದ್ಧವೂ ಇದೆ' ಎಂದು ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ ಹೇಳಿದರು.`ರಾಜ್ಯ ಲೋಕಾಯುಕ್ತ ಸಂಸ್ಥೆಗೆ ಸಮರ್ಥ, ಪ್ರಾಮಾಣಿಕ ವ್ಯಕ್ತಿಯನ್ನು ನೇಮಕ ಮಾಡಬೇಕು' ಎಂದು ಸರ್ಕಾರಕ್ಕೆ ಮನವಿ ಮಾಡುವ ನಿರ್ಣಯವನ್ನು ಹೈಕೋರ್ಟ್‌ನಲ್ಲಿ ಮಂಗಳವಾರ ನಡೆದ ಸಂಘದ ಮಹಾಸಭೆ ತೆಗೆದುಕೊಂಡಿದೆ.`70 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡದಿರುವುದು ಸೂಕ್ತ. ನ್ಯಾ. ರಾವ್ ಅವರ ಆಯ್ಕೆ ಸೂಕ್ತವಲ್ಲ. ಅವರ ಹೊರತಾಗಿ ಬೇರೊಬ್ಬ ಅರ್ಹ ನ್ಯಾಯಮೂರ್ತಿಗಳನ್ನು ಈ ಸ್ಥಾನಕ್ಕೆ ನೇಮಕ ಮಾಡಬೇಕು' ಎಂದು ಸಂಘ ಒತ್ತಾಯಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry