ಭಾಸ್ಕರ ಯುಗಳ

7

ಭಾಸ್ಕರ ಯುಗಳ

Published:
Updated:

ಮೊದಲ ದರ್ಜೆ ಕ್ರಿಕೆಟ್‌ ಆಡಬೇಕೆಂದು ಕನಸು ಕಂಡ ಭಾಸ್ಕರ್‌ ಅಲಿಯಾಸ್‌ ಬಾಜಿ ನಟನಾಗಿ ನಿರ್ದೇಶಕರ ಗಮನ ಸೆಳೆದಿದ್ದರೂ ‘ಸಿಸಿಎಲ್’ ಮೂಲಕವೇ ಹೆಚ್ಚು ಜನಪ್ರಿಯರು. ‘ವೀರಪರಂಪರೆ’  ಸಿನಿಮಾದಿಂದ ತಮ್ಮ ನಟನೆಯ ಯಾನ ಆರಂಭಿಸಿದ ಭಾಸ್ಕರ್ ಈವರೆಗೆ ನಟಿಸಿರುವುದು ಐದು ಸಿನಿಮಾ. ಸಿಕ್ಕ ಪ್ರತಿಯೊಂದು ಪಾತ್ರವೂ ವಿಭಿನ್ನವಾಗಿರುವುದು ಅವರಿಗೆ ಪಂಚಾಮೃತ ಸವಿಯ ಅನುಭವ ತಂದುಕೊಟ್ಟಿದೆ.ಭಾಸ್ಕರ್ ಹುಟ್ಟಿದ್ದು ಮೈಸೂರಿನಲ್ಲಿ. ಬೆಳೆದಿದ್ದು ಬೆಂಗಳೂರಿನಲ್ಲಿ. ಅವರ ತಂದೆ ವೆಂಕಟರಾಜು ಆಗಿನ ಕಾಲದಲ್ಲೇ ಮೈಸೂರು ತಂಡಕ್ಕೆ ಕ್ರಿಕೆಟ್‌ ಆಡಿದವರು. ಹೀಗಾಗಿ ತಮ್ಮ ಮಗನೂ ಕ್ರಿಕೆಟಿಗನಾಗಬೇಕೆಂಬ ಕನಸು ಕಂಡಿದ್ದರಂತೆ. ಹೀಗಾಗಿಯೇ ಭಾಸ್ಕರ್‌ ಅವರಿಗೆ ಬಾಲ್ಯದಿಂದಲೇ ಕ್ರಿಕೆಟ್‌ನ ಸಹವಾಸ. ರಣಜಿಯಲ್ಲಿ 15 ಜನರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು ಮಾತ್ರವಲ್ಲ, ಇಂಗ್ಲಿಷ್‌ ಕೌಂಟಿ ಆಡಿದ ಅಗ್ಗಳಿಕೆಯೂ ಅವರದ್ದು. ಇವರ ಆಟವನ್ನು ಮನಸಾರೆ ಮೆಚ್ಚಿದ್ದ ಮಾಜಿ ಕ್ರಿಕೆಟಿಗ ರೋಜರ್‌ ಬಿನ್ನಿ– ಭಾಸ್ಕರ್‌ಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಕೆಲಸ ಕೊಡಿಸಿದರಂತೆ.ಸದಾ ಕ್ರಿಕೆಟ್‌ನ ಗುಂಗಿನಲ್ಲೇ ಇದ್ದ ಭಾಸ್ಕರ್ ಅವರಿಗೆ ತಾನು ಒಂದು ದಿನ ನಟನಾಗಿ ಹೊರಹೊಮ್ಮಬಲ್ಲೆ ಎಂಬ ಕಲ್ಪನೆ ಇರಲಿಲ್ಲವಂತೆ. ಐದು ವರ್ಷಗಳ ಹಿಂದೆ ಕ್ರಿಕೆಟ್‌ ಆಡುವಾಗ ಸಿನಿಮಾ ಸಂಭಾಷಣೆಗಾರ ರಾಜೇಂದ್ರ ಕಾರಂತ್‌ ಕಣ್ಣಿಗೆ ಬಿದ್ದರು. ಅವರ ಮೂಲಕ ‘ಅಭಿನೇತ್ರಿ’ ನಾಟಕದಲ್ಲಿ ಮೊದಲ ಬಾರಿಗೆ ರಂಗವೇರಿದರು.‘ವಿಷ್ಣುವರ್ಧನ್‌ ಅವರು ಕಟ್ಟಿದ್ದ ಸ್ನೇಹಲೋಕ ಕ್ರಿಕೆಟ್‌ ತಂಡಕ್ಕೆ ಆಡುತ್ತಿದ್ದ ನನಗೆ ದಿನೇ ದಿನೇ ಸಿನಿಮಾ ಲೋಕದ ದಿಗ್ಗಜರ ಪರಿಚಯ ಬೆಳೆಯಿತು. ಅಂಬರೀಷ ಅವರೂ ಆಗ ಅಲ್ಲಿಗೆ ಬರುತ್ತಿದ್ದರು. ಒಮ್ಮೆ ನಿರ್ದೇಶಕ ಎಸ್‌. ನಾರಾಯಣ್‌ ನನ್ನ ಅಭಿನಯದ ನಾಟಕ ನೋಡಲು ಬಂದಿದ್ದರು. ಆಮೇಲೆ ‘ವೀರ ಪರಂಪರೆ’ ಚಿತ್ರದಲ್ಲಿ ನಟಿಸಲು ಆಹ್ವಾನಿಸಿದರು’ ಎಂದು ತಮ್ಮ ಮೊದಲ ಸಿನಿಮಾದ ಕಥೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು.‘ನನ್ನ ಮೊದಲ ದೃಶ್ಯ ಅಂಬರೀಷ ಹಾಗೂ ಸುದೀಪ್‌ ಅವರೊಂದಿಗಿತ್ತು. ಇನ್‌ಸ್ಪೆಕ್ಟರ್‌ ಸಮವಸ್ತ್ರ ಧರಿಸಿ ದರ್ಪದಿಂದ ಬಂದು ಸುದೀಪ್‌ ಕೆನ್ನೆಗೆ ಹೊಡೆದು ಅರೆಸ್ಟ್‌ ಮಾಡುವ ದೃಶ್ಯ ಅದಾಗಿತ್ತು. ನನ್ನ ಅದೃಷ್ಟವೋ ಅಥವಾ ಪರಿಶ್ರಮವೋ ಮೊದಲ ದೃಶ್ಯ ಓಕೆ ಆಯಿತು. ಯಾರ ಅಭಿನಯಕ್ಕೂ ಯಾವ ರೀತಿಯ ಪ್ರತಿಕ್ರಿಯೆ ನೀಡದ ಎಸ್‌. ನಾರಾಯಣ್‌ ಅಂದು ನನಗೆ ‘ವೆರಿಗುಡ್‌’ ಎಂದಿದ್ದು ನಿಜಕ್ಕೂ ನನಗೆ ಚಿತ್ರರಂಗದ ಕುರಿತಂತೆ ನಿರೀಕ್ಷೆಗಳು ಹೆಚ್ಚಾದವು’ ಎನ್ನುತ್ತಾ ಭಾಸ್ಕರ್‌.‘ವಾರೆವ್ಹಾ’, ‘ಮುಂಜಾನೆ’, ‘ಆನೆ ಪಟಾಕಿ’ ಹಾಗೂ ‘ಒಂದು ಕ್ಷಣದಲ್ಲಿ’ ಭಾಸ್ಕರ್ ಅಭಿನಯದ ಚಿತ್ರಗಳು. ‘ಬರುವ ಎಲ್ಲಾ ಅವಕಾಶಗಳನ್ನೂ ಒಪ್ಪಿಕೊಳ್ಳುವ ಬದಲು ಸವಾಲೆನಿಸುವ ಪಾತ್ರಗಳಲ್ಲಿ ಅಭಿನಯಿಸುವುದೇ ಲೇಸು. ’ವೀರಪರಂಪರೆ’ ನಂತರ ಪೊಲೀಸ್‌ ಪಾತ್ರಗಳಿಗೆ ಮಾತ್ರ ಅವಕಾಶಗಳು ಬಂದವು. ಏಕತಾನತೆಯ ಕಾರಣಕ್ಕೆ ಅಂಥ ಪಾತ್ರಗಳನ್ನು ನಿರಾಕರಿಸಿದೆ’ ಎನ್ನುವುದು ಅವರ ಮನದಾಳದ ಮಾತು.ಆರ್‌.ಕೆ. ಪದ್ಮನಾಭ ಅವರಲ್ಲಿ ಕೆಲ ಕಾಲ ಸಂಗೀತ ಅಭ್ಯಾಸ ಮಾಡಿರುವ ಭಾಸ್ಕರ್‌ ಅವರದ್ದು ಬಿಡುವಿಲ್ಲದ ದಿನಚರಿ. ಬೆಳಿಗ್ಗೆ ವ್ಯಾಯಾಮ, ಬ್ಯಾಂಕ್ ಕೆಲಸ, ಸಂಜೆ ನಾಟಕದ ತಾಲೀಮು. ಜೊತೆಗೆ ಸಿನಿಮಾದ ನಂಟು. ಈ ಬಿಡುವಿಲ್ಲದ ದೈನಿಕದಲ್ಲಿ ತಾಯಿ ಜಯಲಕ್ಷ್ಮೀ ಅವರೊಂದಿಗೆ ಕೆಲ ಕಾಲ ಕಳೆಯುವುದೂ ಸೇರಿದೆ.‘ಸರಸ್ವತಿ ಜರಡಿ ಆಡುತ್ತಾಳಂತೆ. ಗಟ್ಟಿ ಇರುವವರು ಉಳಿಯುತ್ತಾರೆ. ಹೀಗಾಗಿ ನನ್ನನ್ನು ನಾನು ಹೆಚ್ಚು ಪ್ರಯೋಗಗಳಿಗೆ ತೆರೆದುಕೊಳ್ಳಲು ಇಷ್ಟಪಡುತ್ತೇನೆ. ಇದರಿಂದ ಕಲಿಕೆಯೂ ಹೆಚ್ಚಾಗಲಿದೆ. ನಾಯಕನ ಪಾತ್ರಗಳೇ ಬೇಕೆಂಬ ಹಂಬಲ ನನಗಿಲ್ಲ. ಪಾತ್ರದಲ್ಲಿ ಗಟ್ಟಿತನ ಇದ್ದರೆ ಸಾಕು. ‘ದೃಶ್ಯಂ’ ಎಂಬ ಮಲಯಾಳಂ ಚಿತ್ರದಲ್ಲಿ ನಟಿಸುವ ಅವಕಾಶ ಒದಗಿ ಬಂದಿತ್ತು. ಕಾರಣಾಂತರದಿಂದ ಅದು ಕೈತಪ್ಪಿದ್ದಕ್ಕೆ ಇಂದಿಗೂ ಬೇಸರವಿದೆ’ ಎನ್ನುತ್ತಾರೆ ಭಾಸ್ಕರ್‌.ಸಿನಿಮಾವನ್ನು ಪ್ರವೃತ್ತಿಯಾಗಿಸಿಕೊಂಡಿರುವ ಭಾಸ್ಕರ್‌ ತಮ್ಮ ವೃತ್ತಿ ಹಾಗೂ ಪ್ರವೃತ್ತಿಯ ನಡುವೆ ಸಮತೋಲನ ಕಾಪಾಡಿಕೊಳ್ಳುತ್ತಿದ್ದಾರೆ. ‘ನನ್ನಲ್ಲಿರುವ ಪ್ರತಿಭೆಯನ್ನು ಹೊರ ಜಗತ್ತಿನ ಮುಂದೆ ಪ್ರಕಟಿಸಬೇಕೆಂದುಕೊಂಡಿದ್ದೇನೆ. ಅದಕ್ಕೆ ಸಿನಿಮಾ ಒಂದು ಉತ್ತಮ ಮಾಧ್ಯಮ. ಹೀಗಾಗಿ ಅಭಿಯನದತ್ತ ನನ್ನ ಗಮನ ಕೇಂದ್ರೀಕರಿಸಿದ್ದೇನೆ’ ಎಂದು ತಮ್ಮ ಸಿನಿಮಾ ಕನಸುಗಳನ್ನು ಭಾಸ್ಕರ್ ಹಂಚಿಕೊಳ್ಳುತ್ತಾರೆ.ಸಿನಿಮಾದಲ್ಲಿ ಸಿಕ್ಕ ಅವಕಾಶಗಳಿಂದ ಚಿತ್ರರಂಗದ ಪರಿಚಯವಾಯಿತು. ಸೆಲೆಬ್ರೆಟಿ ಕ್ರಿಕೆಟ್‌ ಲೀಗ್‌ ಮೂಲಕ ಜನರ ಪ್ರೀತಿ ಗಳಿಸಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಿನಿಮಾಗಳಲ್ಲಿ ನಟಿಸುವ ಗುರಿ ನನ್ನದು ಎನ್ನುವ ಭಾಸ್ಕರ್‌. ಕ್ರಿಕೆಟ್‌ನಲ್ಲಿ ಉತ್ತಮ ಆಲ್‌ರೌಂಡರ್‌ ಕೂಡಾ ಹೌದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry