ಸೋಮವಾರ, ಡಿಸೆಂಬರ್ 9, 2019
17 °C
ಭಿಕ್ಷಾಟನೆ ಬಗ್ಗೆ ಜನಸಾಮಾನ್ಯರಲ್ಲಿರುವ ಮನೋಭಾವ ಬದಲಿಸುವ ಅವಶ್ಯಕತೆ ಇದೆ

ಭಿಕ್ಷುಕರ ಗೋಳು ಕೇಳುವವರಾರು?

Published:
Updated:

ಕಲ್ಲ ನಾಗರ ಕಂಡರೆ ಹಾಲೆರೆದು ದಿಟ ನಾಗರ ಕಂಡರೆ ಕೊಲ್ಲುವುದು ನಮ್ಮ ಸಂಸ್ಕೃತಿ. ಶಿವನೂ ಭಿಕ್ಷಾಟನೆ ಮಾಡುತ್ತಿದ್ದ ಎಂದು ಹೇಳುತ್ತ ಅವನನ್ನು ಪೂಜಿಸುವ ನಮ್ಮ ಜನ, ನಿಜವಾದ ಭಿಕ್ಷುಕರನ್ನು ಮಾತ್ರ ಅತ್ಯಂತ ತಿರಸ್ಕಾರ ಮನೋಭಾವದಿಂದ ನೋಡುತ್ತಾರೆ. ‘ಪುಷ್ಪಕ ವಿಮಾನ’ ಸಿನಿಮಾದಲ್ಲಿ ಭಿಕ್ಷುಕ ಕುಳಿತುಕೊಳ್ಳುವ ಗೋಣಿಚೀಲದ ಕೆಳಗೆ ಸಾವಿರಾರು ರೂಪಾಯಿಗಳಿರುವ ಚಿತ್ರವೇ ಸಾಮಾನ್ಯವಾಗಿ ಜನರ ಕಣ್ಮುಂದೆ ಬರುತ್ತದೆ. ಹಲವರ ಪ್ರಕಾರ ಭಿಕ್ಷಾಟನೆ ಒಂದು ಫ್ಯಾಷನ್, ಒಂದು ಉದ್ಯೋಗ, ಒಂದು ಮನರಂಜನೆ. ಇನ್ನೊಬ್ಬರ ಪ್ರಕಾರ ಅದೊಂದು ಅಪರಾಧ, ಭಿಕ್ಷಾಟನೆಯನ್ನು ಕಾನೂನುಬಾಹಿರ ಎಂದು ಘೋಷಿಸಬೇಕು, ಭಿಕ್ಷಾಟನೆ ಮಾಡುವವರನ್ನು ಶಿಕ್ಷಿಸಬೇಕು.‘ಭಿಕ್ಷೆ ನೀಡುವ ಮೂಲಕ ಭಿಕ್ಷಾಟನೆಯನ್ನು ಪ್ರೋತ್ಸಾಹಿಸಬೇಡಿ’ ಎಂದು ಸಾರುವ ಸರ್ಕಾರಿ ಜಾಹೀರಾತುಗಳೂ ಇವೆ.  ಹೌದು, ಭಿಕ್ಷಾಟನೆಯನ್ನು ಒಂದು ಲಾಭದಾಯಕ ಉದ್ಯೋಗ ಮಾಡಿಕೊಂಡ ಭಿಕ್ಷುಕರೂ ಇದ್ದಾರೆ. ಅವರು ಅಪವಾದ ಮಾತ್ರ. ಭಿಕ್ಷುಕರ ಸಮಸ್ಯೆಗಳನ್ನು ನಾವು ನಮ್ಮ ದೃಷ್ಟಿಕೋನದಿಂದ ನೋಡುತ್ತೇವೆಯೇ ಹೊರತು ಅವರ ದೃಷ್ಟಿಕೋನದಿಂದ ನೋಡುತ್ತೇವೆಯೇ? ಅದು ಸಾಧ್ಯವಿದೆಯೇ? ತನ್ನ ಮನೆಯಲ್ಲಿ ಆತ್ಮಗೌರವದೊಂದಿಗೆ ಎರಡು ಹೊತ್ತಿನ ಊಟ ಸಿಕ್ಕುವ ಯಾರು ಭಿಕ್ಷೆ ಬೇಡುತ್ತಾರೆ ಹೇಳಿ? ಭಿಕ್ಷಾಟನೆಯನ್ನು ಅಪರಾಧವೆಂದು ಘೋಷಿಸಿ ಭಿಕ್ಷುಕರನ್ನು ಶಿಕ್ಷೆಗೆ ಒಳಪಡಿಸುವ ಕಾನೂನೊಂದು ಕರ್ನಾಟಕದಲ್ಲಿ ಜಾರಿಯಲ್ಲಿದೆ- ಕರ್ನಾಟಕ ಪ್ರಾಹಿಬಿಷನ್ ಆಫ್ ಬೆಗ್ಗರಿ ಆ್ಯಕ್ಟ್‌–1975. ಇಂತಹ ಕಾನೂನುಗಳು ಇನ್ನೂ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿವೆ. ಈ ಕಾನೂನಿನಲ್ಲಿ ಭಿಕ್ಷುಕರ ಬಗ್ಗೆ ಸ್ವಲ್ಪ ಮಾನವೀಯ ದೃಷ್ಟಿಯೂ ಇದೆ- ಅವರಿಗೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗುತ್ತದೆ, ಅವರನ್ನು ಬಂಧಿಸಿದರೂ ಒಂದರಿಂದ ಮೂರು ವರ್ಷಗಳವರೆಗೆ ಪರಿಹಾರ ಕೇಂದ್ರದಲ್ಲಿ ಇರಬೇಕೆಂದು ಕಡ್ಡಾಯಗೊಳಿಸಲಾಗುತ್ತದೆ, ಅವರು ಮತ್ತೆ ಭಿಕ್ಷಾಟನೆ ಮಾಡುವುದಿಲ್ಲ ಎಂದು ಭರವಸೆ ಕೊಟ್ಟರೆ ಅವರನ್ನು ಬಿಟ್ಟುಬಿಡಲಾಗುತ್ತದೆ.ಆದರೂ ಈ ಕಾನೂನು ಭಿಕ್ಷಾಟನೆಯನ್ನು ಅಪರಾಧವೆಂದು ಪರಿಗಣಿಸುತ್ತದೆ, ಮತ್ತೆ ಮತ್ತೆ ಭಿಕ್ಷಾಟನೆ ಮಾಡುವವರನ್ನು ಜೈಲಿಗೆ ದೂಡುತ್ತದೆ. ಈ ಕಾನೂನನ್ನು 1976ರ ಏಪ್ರಿಲ್ ಒಂದರಂದು ರಾಜ್ಯದಲ್ಲಿ ಭಿಕ್ಷುಕರಿಗೆ ಪರಿಹಾರ ನೀಡುವ ವ್ಯವಸ್ಥೆ ಇರುವ ಹಲವು ನಗರಗಳಲ್ಲಿ ಜಾರಿಗೆ ತರಲಾಯಿತು. ನಂತರ ರಾಜ್ಯದ ಎಲ್ಲಾ ಕಡೆಗೆ ಅವರಿಗೆ ಪರಿಹಾರ ನೀಡುವ ವ್ಯವಸ್ಥೆಯನ್ನು ಕಲ್ಪಿಸಿದ್ದರಿಂದ ರಾಜ್ಯದಲ್ಲೆಲ್ಲ 1997ರ ನವೆಂಬರ್‌ 6ರಂದು ಜಾರಿಗೆ ತರಲಾಯಿತು. ಸ್ಥಳೀಯ ಸಂಸ್ಥೆಗಳು ವಸೂಲು ಮಾಡುವ ಹಲವು ತೆರಿಗೆಗಳ ಜೊತೆಗೆ, ಉದಾಹರಣೆಗೆ ಆಸ್ತಿತೆರಿಗೆಯ ಜೊತೆಗೆ, ತೆರಿಗೆಯ ಮೊತ್ತದ ಮೇಲೆ ಪ್ರತಿಶತ 3ರಷ್ಟು ಭಿಕ್ಷಾಟನಾ ಶುಲ್ಕವನ್ನೂ ವಸೂಲು ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಹಣ ಕೇಂದ್ರ ಪರಿಹಾರ ನಿಧಿಗೆ ಸೇರುತ್ತದೆ. ಈ ನಿಧಿಯನ್ನು  ಭಿಕ್ಷುಕರಿಗೆ ಪರಿಹಾರವನ್ನು ಕಲ್ಪಿಸಲು ಒಂದು ಸಮಿತಿ ಖರ್ಚು ಮಾಡುತ್ತದೆ. ಬೆಂಗಳೂರಿನಲ್ಲಿರುವ ಭಿಕ್ಷುಕರ ಪರಿಹಾರ ಕೇಂದ್ರವನ್ನು ಮೊದಲು ಭಿಕ್ಷುಕರ ಬಡಾವಣೆ- ಬೆಗ್ಗರ್ಸ್‌ ಕಾಲೊನಿ- ಎಂದು ಕರೆಯಲಾಗುತ್ತಿತ್ತು.ಇತ್ತೀಚೆಗೆ ಅದರ ಹೆಸರನ್ನು ಬದಲಾಯಿಸಿ ನಿರಾಶ್ರಿತರ ಪರಿಹಾರ ಕೇಂದ್ರ ಎಂದು ಕರೆಯಲಾಗುತ್ತಿದೆ. ಇಂಥ ಕೇಂದ್ರಗಳಲ್ಲಿ ಭಿಕ್ಷುಕರಿಗೆ ಸ್ವಾತಂತ್ರ್ಯ ಇಲ್ಲದಿರುವುದರಿಂದ ಅವರ ಪಾಲಿಗೆ ಅವು ಜೈಲುಗಳಿದ್ದಂತೆಯೇ. ಆದುದರಿಂದಲೇ ಭಿಕ್ಷುಕರು ಈ ಕೇಂದ್ರಗಳಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ತಪ್ಪಿಸಿಕೊಂಡು ಹೋದ ಭಿಕ್ಷುಕ ಮತ್ತೆ ಸಿಕ್ಕಿಹಾಕಿಕೊಂಡರೆ ಅವನನ್ನು ಮೂರು ತಿಂಗಳು ಜೈಲಿಗೆ ದೂಡಲಾಗುತ್ತದೆ. 2011ರಲ್ಲಿ ನಡೆದ ಜನಗಣತಿ ಪ್ರಕಾರ ಗ್ರಾಮಾಂತರ ಭಾರತದಲ್ಲಿರುವ 17.97 ಕೋಟಿ ಕುಟುಂಬಗಳಲ್ಲಿ 6.69 ಲಕ್ಷ  ಕುಟುಂಬಗಳು ಭಿಕ್ಷಾಟನೆ ಮಾಡಿ ಬದುಕುತ್ತಿರುವ ನಿರ್ಗತಿಕ ಕುಟುಂಬಗಳು.ಇವುಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಅಂದರೆ 1.97 ಲಕ್ಷ ಕುಟುಂಬಗಳು ಹಲವಾರು ದಶಕಗಳವರೆಗೆ ಕಮ್ಯುನಿಸ್ಟರು ಆಡಳಿತ ನಡೆಸಿದ ಪಶ್ಚಿಮ ಬಂಗಾಳದಲ್ಲಿವೆ ಹಾಗೂ 9,650  ಕುಟುಂಬಗಳು ಕರ್ನಾಟಕದಲ್ಲಿವೆ. ಕರ್ನಾಟಕದಲ್ಲಿಯೂ ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಅಂದರೆ 1,333 ಹಾಗೂ ಕೊಡಗಿನಲ್ಲಿ ಬರಿ 31 ಇಂತಹ ಕುಟುಂಬಗಳಿವೆ. ಈ ಜನಗಣತಿಯ ನಗರ ಪ್ರದೇಶಗಳ ಅಂಕಿಸಂಖ್ಯೆಗಳನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಆದರೆ ಕರ್ನಾಟಕದಲ್ಲಿ ಬರಿ 13 ಪರಿಹಾರ ಕೇಂದ್ರಗಳಿದ್ದು ಅವುಗಳಲ್ಲಿ ಬರಿ 831 ನಿರಾಶ್ರಿತರು ಇದ್ದಾರೆ.ಈ ಕೇಂದ್ರಗಳಲ್ಲಿ ಅವರಿಗೆ ಆಹಾರ, ವಸತಿ ಹಾಗೂ ವೃತ್ತಿ ತರಬೇತಿಗಳನ್ನು ನೀಡಲಾಗುತ್ತದೆ. 2011–12ರ ಕೇಂದ್ರ ಪರಿಹಾರ ಸಮಿತಿಯು ₹ 70 ಕೋಟಿ ಮೊತ್ತದ  ಮುಂಗಡ ಪತ್ರವನ್ನು ಹೊಂದಿತ್ತು. ಆದರೆ ಆದಾಯ ₹ 47.78 ಕೋಟಿ ಹಾಗೂ ಖರ್ಚು ₹ 45.70 ಕೋಟಿ ಮಾತ್ರವಾಗಿತ್ತು. ಬರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2015–16ರ ಮುಂಗಡಪತ್ರದ ಪ್ರಕಾರ ₹ 176 ಕೋಟಿ ಮೊತ್ತ ಭಿಕ್ಷುಕರ ಶುಲ್ಕದ ಖಾತೆಯಲ್ಲಿ ಜಮೆ ಇದ್ದು ಈ ವರ್ಷ ₹ 57 ಕೋಟಿ ಆದಾಯವನ್ನು ಅಂದಾಜು ಮಾಡಲಾಗಿದೆ.ಈ ವಿಪರ್ಯಾಸಕ್ಕೆ ಕಾರಣ ಶುಲ್ಕವನ್ನು ವಸೂಲಿ ಮಾಡುವ ಸ್ಥಳೀಯ ಸಂಸ್ಥೆಗಳು ಕೇಂದ್ರ ಪರಿಹಾರ ನಿಧಿಗೆ ಆ ಹಣವನ್ನು ರವಾನಿಸದಿರುವುದು  ಹಾಗೂ ಆ ಹಣವನ್ನು ಬೇರೆ ಯಾವುದಾದರೂ ಖಾತೆಯ ಕೆಳಗೆ ಖರ್ಚು ಮಾಡುವುದು. ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿ ನಿರಾಶ್ರಿತರಿಗೆ ರಾತ್ರಿ ಕಳೆಯಲು ಎಂದಿರುವ ಒಂದು ಕಟ್ಟಡಕ್ಕೆ ಯಾವಾಗಲೂ ಬೀಗ ಹಾಕಿರುತ್ತದೆ. ನಾನು ಭೇಟಿಯಾಗಿರುವ ನಗರಸಭೆಗಳ ಹಲವಾರು ಸದಸ್ಯರಿಗೆ ತಮ್ಮ ನಗರಸಭೆಯಲ್ಲಿ ಭಿಕ್ಷುಕರ ಶುಲ್ಕದ ಹೆಸರಿನಲ್ಲಿ ಎಷ್ಟು ಹಣ ಸಂಗ್ರಹವಾಗಿದೆ ಎಂಬುದಾಗಲೀ ಅದು ಕೇಂದ್ರ ಪರಿಹಾರ ನಿಧಿಗೆ ಜಮೆ ಆಗಿದೆಯೋ ಇಲ್ಲವೋ ಎಂಬುದಾಗಲೀ ಗೊತ್ತೇ ಇರಲಿಲ್ಲ.ಬಹುಶಃ ಜನಪ್ರತಿನಿಧಿಗಳಿಗೆ ಭಿಕ್ಷುಕರು ಅದೃಶ್ಯರೇ ಹೌದು. ಇಡೀ ವಿಶ್ವದಲ್ಲಿಂದು ಅಪರಾಧಿಕ ನ್ಯಾಯಶಾಸ್ತ್ರ ಬದಲಾಗುತ್ತಿದೆ, ಕೊಲೆಯಂತಹ ಭೀಕರ ಅಪರಾಧಗಳನ್ನೂ ಮಾನಸಿಕ ವಿಪಥನ, ಚ್ಯುತಿ ಎಂದು ಪರಿಗಣಿಸಿ ಅದನ್ನು ಎಸಗುವವರನ್ನು ದಂಡಿಸದೇ ಅವರಿಗೆ ಮಾನಸಿಕ ಚಿಕಿತ್ಸೆ ನೀಡಿ ಅವರು ಮತ್ತೆ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಭಿಕ್ಷುಕರ ಹಾಗೂ ಭಿಕ್ಷಾಟನೆ ಬಗ್ಗೆ ಜನಸಾಮಾನ್ಯರಲ್ಲಿರುವ ಮನೋಭಾವವನ್ನು ಬದಲಿಸುವ ಅವಶ್ಯಕತೆ ಇದೆ;ಕಾನೂನಿನಲ್ಲಿ ಭಿಕ್ಷುಕರನ್ನು, ಭಿಕ್ಷಾಟನೆಯನ್ನು ದಂಡಿಸುವ ಅಂಶಗಳನ್ನು ಕಿತ್ತುಹಾಕಿ ಬರಿ ಪರಿಹಾರ ಒದಗಿಸುವ ಅಂಶಗಳನ್ನು ಉಳಿಸಿಕೊಳ್ಳುವ ಆವಶ್ಯಕತೆ ಇದೆ; ಭಿಕ್ಷುಕರ ಹೆಸರಿನಲ್ಲಿ ಸಂಗ್ರಹಿಸುವ ಧನರಾಶಿಯ ನೇರ ಪ್ರಯೋಜನ ಭಿಕ್ಷುಕರಿಗೇ ಆಗುವಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳುವ ಆವಶ್ಯಕತೆ ಇದೆ. ಭಿಕ್ಷುಕರು ಕೂಡ ಆತ್ಮಗೌರವದಿಂದ  ಬದುಕು ಸಾಗಿಸುವಂತಾಗಲಿ. ಜೀವನೋಪಾಯ ಕಂಡುಕೊಳ್ಳಲು ಅವರಿಗೆ ಅನುಕೂಲಗಳನ್ನು ಕಲ್ಪಿಸುವ ಅವಶ್ಯಕತೆ ಇದೆ.

ಪ್ರತಿಕ್ರಿಯಿಸಿ (+)