ಭಿಕ್ಷುಕಿ ಬಳಿಯಿತ್ತು ರೂ 31,200!

ಶುಕ್ರವಾರ, ಜೂಲೈ 19, 2019
23 °C
ಬಸ್‌ನಿಲ್ದಾಣವನ್ನು ಆಶ್ರಯವಾಗಿಸಿಕೊಂಡಿದ್ದ ಮಹಿಳೆ

ಭಿಕ್ಷುಕಿ ಬಳಿಯಿತ್ತು ರೂ 31,200!

Published:
Updated:

ದಾವಣಗೆರೆ: ಕೆಲಸ- ಅಲ್ಲಲ್ಲಿ ಭಿಕ್ಷೆ ಬೇಡುವುದು. ಬಸ್ ನಿಲ್ದಾಣವೇ ಸೂರು. ಮೈತುಂಬಾ ಕೊಳಕು ಕೊಳಕಾದ ಬಟ್ಟೆ. ಜತೆಯಲ್ಲಿ ಮೂರ‌್ನಾಲ್ಕು ಗಂಟುಗಳು. ಹೀಗಿರುವ ಆಕೆಯ ಬಳಿ ಇದ್ದದ್ದು ಬರೋಬ್ಬರಿ ರೂ 31,200. ಈ ಹಣವೆಲ್ಲಾ ಬರಿ ನಾಣ್ಯಗಳೇ!ಇಲ್ಲಿನ ಕೆಟಿಜೆ ನಗರ ಠಾಣೆಯ ಪೊಲೀಸರ ನೆರವಿನಿಂದ ಭಾನುವಾರ ಪುನರ್ವಸತಿ ಕೇಂದ್ರದಲ್ಲಿ `ಆಶ್ರಯ' ಪಡೆದ ಭಿಕ್ಷುಕಿಯೊಬ್ಬರ ಕಥೆ ಇದು.ಸುಮಾರು 70 ವರ್ಷದ ಕಾಳೀಬಾಯಿ ಎನ್ನುವವರು ಆಶ್ರಯ ಪಡೆದ ಮಹಿಳೆ. ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ ತಾಂಡಾದವರು ಎನ್ನಲಾದ ಅವರು, 10 ವರ್ಷಗಳಿಂದಲೂ ನಗರದ ವಿವಿಧ ಕಡೆ ಭಿಕ್ಷೆ ಬೇಡುತ್ತಿದ್ದರು. ಆರಂಭದಲ್ಲಿ ಕ್ರೀಡಾಂಗಣದ ಬಳಿ ಇರುತ್ತಿದ್ದರು; ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಠಾಣೆ ಎದುರಿನ ಬಸ್ ನಿಲ್ದಾಣದ ಮೂಲೆಯನ್ನೇ `ಆಶ್ರಯ ತಾಣ'ವನ್ನಾಗಿ ಮಾಡಿಕೊಂಡಿದ್ದರು. ಭಿಕ್ಷೆ ಬೇಡಿದ್ದರಿಂದ ಬಂದ ಚಿಲ್ಲರೆಯನ್ನು ಆಕೆ, ಅಂಗಡಿಗಳವರಿಗೆ ನೀಡಿ ನೋಟುಗಳನ್ನಾಗಿಯೂ ಮಾಡಿಕೊಂಡಿರಲಿಲ್ಲ. ಅಲ್ಲದೇ, ಖರ್ಚನ್ನೂ ಮಾಡಿರಲಿಲ್ಲ. ಹರಿದ ಸೀರೆಯಲ್ಲಿಯೇ ಭಿಕ್ಷಾಟನೆಯಲ್ಲಿ ತೊಡಗಿಕೊಂಡಿದ್ದಳು.ಗೊತ್ತಾಗಿದ್ದು ಹೇಗೆ?: `ಗ್ರಾಮಾಂತರ ಠಾಣೆ ಎದುರಿನ ಬಸ್‌ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ; ಸ್ವಚ್ಛತೆ ಇಲ್ಲ' ಎಂದು ಸ್ಥಳೀಯರು ನಗರಪಾಲಿಕೆಗೆ ದೂರು ನೀಡಿದ್ದರು. ಸ್ವಚ್ಛಗೊಳಿಸಲು ಪಾಲಿಕೆ ಸಿಬ್ಬಂದಿ ಭಾನುವಾರ ಸ್ಥಳಕ್ಕೆ ಆಗಮಿಸಿದ್ದಾರೆ. ಆಗ, ಅಲ್ಲಿದ್ದ ಮಹಿಳೆ ಹಲವು ಗಂಟುಗಳನ್ನು ಇಟ್ಟುಕೊಂಡಿದ್ದುದು ಪತ್ತೆಯಾಗಿದೆ. ತಮ್ಮನ್ನು ಅಲ್ಲಿಂದ ಹೊರಕಳುಹಿಸಲು ಮುಂದಾಗುತ್ತಿದ್ದಂತೆಯೇ ಆ ಮಹಿಳೆ ಆತಂಕಗೊಂಡ್ದ್ದಿದರು. ಈ ನಡುವೆ, ಸ್ಥಳೀಯರು ಕೆಟಿಜೆ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಬಂದ ಪೊಲೀಸರು, ಮಹಿಳೆಯ ಬಳಿ ಇದ್ದ ಕೊಳಕಾಗಿದ್ದ ಮೂರು ಗಂಟುಗಳಲ್ಲಿ ನಾಣ್ಯಗಳು ತುಂಬಿದ್ದನ್ನು ಗಮನಿಸಿದ್ದಾರೆ. ನಂತರ ಮಹಿಳೆಯನ್ನು ಠಾಣೆಗೆ ಕರೆತರಲಾಯಿತು. ಮೂರು ಗಂಟುಗಳಲ್ಲಿ ನೂರಾರು ನಾಣ್ಯಗಳಿದ್ದವು. ಇದು, ಪೊಲೀಸರಿಗೆ ಆಶ್ಚರ್ಯ ತರಿಸಿತು. ಪೊಲೀಸ್ ಸಿಬ್ಬಂದಿ ಹಾಗೂ ಕೆಲ ಸ್ಥಳೀಯರು, ನಾಣ್ಯಗಳ ಎಣಿಕೆ ಮಾಡಿದರು. ಕೊಳಕಾದ ಬಟ್ಟೆಯಿಂದ ಕಟ್ಟಿದ್ದ ಗಂಟಿನಲ್ಲಿ ಇದ್ದುದ್ದರಿಂದ ಹಾಗೂ ನೀರು ಸಹ ಬೆರೆತಿದ್ದರಿಂದ ಕೆಲ ನಾಣ್ಯಗಳು ಮಣ್ಣು ಮೆತ್ತಿಕೊಂಡಂತೆ ಇದ್ದದ್ದು ಕಂಡುಬಂದಿತು.`ಮಹಿಳೆಯ ಬಳಿ ಮೂರು ಗಂಟುಗಳಲ್ಲಿದ್ದ ಹಣವನ್ನು ಠಾಣೆಯಲ್ಲಿ ಎಣಿಕೆ ಮಾಡಲಾಯಿತು. ಬಹುತೇಕ ನಾಣ್ಯಗಳೇ ಇದ್ದವು. ಒಟ್ಟು ್ಙ 31,200 ಇತ್ತು. ಆ ಮಹಿಳೆಯನ್ನು ಸಮಾಜ ಕಲ್ಯಾಣ ಇಲಾಖೆಯವರಿಗೆ ಒಪ್ಪಿಸಲಾಯಿತು. ಆಕೆಗೆ ಕೈಗಾರಿಕಾ ಪ್ರದೇಶದಲ್ಲಿರುವ ಮಹಿಳಾ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ' ಎಂದು ಕೆಟಿಜೆ ನಗರ ಠಾಣೆಯ ರಮೇಶ್ ಕುಲಕರ್ಣಿ `ಪ್ರಜಾವಾಣಿ'ಗೆ ತಿಳಿಸಿದರು. ಮಹಿಳೆಯ ಬಳಿ ಇದ್ದ ಹಣವನ್ನು, ಬ್ಯಾಂಕ್‌ನಲ್ಲಿ ಆಕೆಯ ಹೆಸರಿನಲ್ಲಿಯೇ ಠೇವಣಿ ಇಡಲಾಗುವುದು ಎಂದು ಸ್ಪಷ್ಟಪಡಿಸಿದರು.`ಸುಮಾರು ಹತ್ತು ವರ್ಷಗಳ ಹಿಂದೆಯೇ ಲಕ್ಷ್ಮೀಪುರ ತಾಂಡ ಬಿಟ್ಟು ಬಂದಿದ್ದೇನೆ. ಮಕ್ಕಳು, ಸೊಸೆಯ ಕಾಟ ತಾಳಲಾರದೇ ದೂರ ಬಂದೆ. ಅಲ್ಲಲ್ಲಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿದ್ದೇನೆ. ಇರಲು ಜಾಗವಿಲ್ಲದೇ ನಿಲ್ದಾಣ ಮೊದಲಾದ ಕಡೆ ಉಳಿದುಕೊಳ್ಳುತ್ತಿದ್ದೆ' ಎಂದು ಕಾಳೀಬಾಯಿ ಮಾಧ್ಯಮದವರಿಗೆ ತಿಳಿಸಿದರು. `ಪಾಲಿಕೆಯವರು ಎಂದುಕೊಂಡು ಹಿಂದೆ ಬಂದಿದ್ದ ಕೆಲವರು ಇನ್ನೂ ಕೆಲ ಗಂಟು ತೆಗೆದುಕೊಂಡು ಹೋದರು' ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry