ಗುರುವಾರ , ಮೇ 13, 2021
35 °C

ಭಿತ್ತಿಪತ್ರ ಹಚ್ಚಲು ಭೀತಿಯೇ ಇಲ್ಲ!

ನಾಗರಾಜ ಚಿನಗುಂಡಿ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಿತ್ತಿಪತ್ರ ಹಚ್ಚಲು ಭೀತಿಯೇ ಇಲ್ಲ!

ಗುಲ್ಬರ್ಗ: ನಗರದ ಪ್ರಮುಖ ಸ್ಥಳಗಳು ತರಹೇವಾರಿ ಭಿತ್ತಿಪತ್ರಗಳಿಂದ ವಿಕಾರಗೊಳ್ಳುತ್ತಿದ್ದರೂ ಇದಕ್ಕೆ ಕಡಿವಾಣ ಹಾಕಿ ನಿಯಂತ್ರಿಸಬೇಕಿದ್ದ ಮಹಾನಗರ ಪಾಲಿಕೆ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ!ಸರ್ಕಾರಿ ಕಚೇರಿಗಳು, ಖಾಸಗಿ ಕಟ್ಟಡಗಳು, ಗೂಡಂಗಡಿಗಳ ಮೇಲೆ, ರಸ್ತೆ ವರ್ತುಲಗಳ ಕಾಂಪೌಂಡ್, ಗಣ್ಯರ ಪುತ್ಥಳಿ ಸುತ್ತಲಿನ ಜಾಗದಲ್ಲಿ, ಸಾರ್ವಜನಿಕ ಶೌಚಾಲಯ ಕಟ್ಟಡ, ಜೆಸ್ಕಾಂ ಟಿಸಿ ತಡೆಗೋಡೆ ಸುತ್ತಲೂ, ವಿದ್ಯುತ್ ಕಂಬಗಳು, ಶಾಲಾ-ಕಾಲೇಜುಗಳ ತಡೆಗೋಡೆಗಳ ಮೇಲೆ ಭಿತ್ತಿಪತ್ರಗಳ ಹಾವಳಿ ಕಾಣುತ್ತದೆ.ಆರೋಗ್ಯ ತಪಾಸಣೆ, ಜೋತಿಷ್ಯ, ತರಬೇತಿಗಳು, ಶಾಲಾ-ಕಾಲೇಜುಗಳ ಪ್ರವೇಶ, ಸಿನಿಮಾ, ನಾಟಕ, ಉದ್ಯೋಗಾವಕಾಶ, ಅತಿಥಿ ಗೃಹಗಳ ಬಗ್ಗೆ ಹಾಗೂ ನಗರಕ್ಕೆ ಬರಲಿರುವ ಗಣ್ಯರ ಬಗ್ಗೆ ... ಹೀಗೆ ನಾನಾ ನಮೂನೆಯ ಭಿತ್ತಿಪತ್ರಗಳು ಕಣ್ಣಿಗೆ ರಾಚುತ್ತಿವೆ.

ಬಸ್ ನಿಲ್ದಾಣ, ಸೂಪರ್ ಮಾರ್ಕೆಟ್, ಗಂಜ್ ಪ್ರದೇಶ, ದರ್ಗಾ ರಸ್ತೆ ಹಾಗೂ ಸಾರ್ವಜನಿಕ ಶೌಚಾಲಯಗಳ ಮೂಲೆಗಳಲ್ಲಿ ಇನ್ನೊಂದು ನಮೂನೆಯ ಚಿತ್ರ ವಿಚಿತ್ರ ಭಿತ್ತಿಪತ್ರಗಳು ಗಮನ ಸೆಳೆಯುತ್ತಿವೆ. ಭಿತ್ತಿಪತ್ರಗಳು ಗರಿಷ್ಠ ಪ್ರಮಾಣದಲ್ಲಿ ರಾರಾಜಿಸುವ ಜಾಗಗಳೆಂದರೆ ರಸ್ತೆ ವಿಭಜಕಗಳು ಹಾಗೂ ವಿದ್ಯುತ್ ಕಂಬಗಳ ಮೇಲೆ!ಜನರಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ವಿವಿಧ ಸಂಘ-ಸಂಸ್ಥೆಗಳು ಭಿತ್ತಿಪತ್ರಗಳ ಮೊರೆ ಹೋಗುತ್ತಿರುವುದು ಸಾಮಾನ್ಯ. ಅಂಟಿಕೊಂಡ ಭಿತ್ತಿಪತ್ರಗಳು ಸ್ವಲ್ಪ ದಿನಗಳ ಬಳಿಕ ಸ್ಥಳವನ್ನು ವಿರೂಪಗೊಳಿಸುತ್ತವೆ. ಎಲ್ಲೆಲ್ಲಿ ಭಿತ್ತಿಪತ್ರಗಳನ್ನು ಅಂಟಿಸಬೇಕು ಎನ್ನುವುದನ್ನು ಪಾಲಿಕೆಯು ಸ್ಥಳ ನಿಗದಿ ಪಡಿಸಬೇಕು. ಅನಂತರ ಅವುಗಳನ್ನು ತೆರವುಗೊಳಿಸುವ ಕೆಲಸವನ್ನು ಪಾಲಿಕೆ ಮಾಡಬೇಕಿದೆ.ಸದ್ಯಕ್ಕೆ ನಗರದಾದ್ಯಂತ ಫ್ಲೆಕ್ಸ್ ಹಾಗೂ ಭಿತ್ತಿಪತ್ರಗಳನ್ನು ಅಂಟಿಸುವ ಕಾರ್ಯ ಮುಂದುವರಿದಿದೆ. ಆದರೆ, ವಿರೂಪವಾಗಿ ಜೋತು ಬಿದ್ದ ಭಿತ್ತಿಪತ್ರಗಳನ್ನು ತೆಗೆದುಹಾಕುವ ವ್ಯವಸ್ಥೆ ಇಲ್ಲ. ಹೀಗಾಗಿ ವಿದ್ಯುತ್ ಕಂಬಗಳು ಹಾಗೂ ರಸ್ತೆ ವಿಭಜಕಗಳು ನಗರದ ಕನಿಷ್ಠ ಸೌಂದರ್ಯಕ್ಕೂ ಮಂಕು ಕವಿಯುವಂತೆ ಮಾಡಿವೆ.ಮುಖ್ಯರಸ್ತೆಗೆ ಹೊಂದಿಕೊಂಡ ಖಾಸಗಿ ಮನೆಗಳ ಮೇಲೂ ಪೂರ್ವಾನುಮತಿಯಿಲ್ಲದೆ ಭಿತ್ತಿಪತ್ರಗಳನ್ನು ಅಂಟಿಸಲಾಗುತ್ತಿದೆ. `ಸ್ಟಿಕ್ ನೋ ಬಿಲ್ಸ್' `ಚೀಟಿಗಳನ್ನು ಅಂಟಿಸಬಾರದು' ಎಂದು ಬರೆದಿರುವ ನಗರದ ಖಾಸಗಿ ಆಸ್ಪತ್ರೆ, ಖಾಸಗಿ ಕಟ್ಟಡದ ಗೋಡೆಗಳ ಮೇಲೂ ಭಿತ್ತಿಪತ್ರ ಅಂಟಿಸಿರುವುದು ಕಾಣುತ್ತದೆ.ಆಯಾ ಪ್ರದೇಶದ ಸ್ಥಳ ಮಾಹಿತಿ ನೀಡುವ ಸೂಚನಾ ಫಲಕ ಹಾಗೂ ಐತಿಹಾಸಿಕ ಕೇಂದ್ರಗಳಿಗೆ ದಾರಿ ತೋರುವ ಫಲಕಗಳ ಮೇಲೆ ಕೂಡ ಭಿತ್ತಿಪತ್ರಗಳ ಹಾವಳಿ ಕಾಣಬಹುದು. ಗುಲ್ಬರ್ಗದ ಜಗತ್ ಸರ್ಕಲ್ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಫಲಕಗಳು ವಿರೂಪವಾಗಿರುವುದು ಕಾಣುತ್ತದೆ.

ಒಂದೇ ಜಾಗದಲ್ಲಿ ವೈವಿಧ್ಯಮಯ ಭಿತ್ತಿಪತ್ರಗಳನ್ನು ಅಂಟಿಸಿರುವುದರಿಂದ ಜನರಿಗೆ ತಿಳಿವಳಿಕೆಗೆ ಬದಲು, ಗೊಂದಲ ಮೂಡುವಂತಾಗಿದೆ. ನಗರದ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಗೋಡೆ ಬರಹವನ್ನು ಬರೆಸುವುದು, ಭಿತ್ತಪತ್ರ ಅಂಟಿಸುವುದು, ಜಾಹೀರಾತು ಫಲಕ ಅಳವಡಿಸುವುದು, ಬ್ಯಾನರ್ ಕಟ್ಟುವುದಕ್ಕೆ ಮಹಾನಗರ ಪಾಲಿಕೆಯು ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ನೀಡುವುದು ಅವಶ್ಯ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.