ಗುರುವಾರ , ಮೇ 19, 2022
21 °C

ಭಿತ್ತಿಯಮೇಲೆ ಪ್ರಕೃತಿ ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಿತ್ತಿಯಮೇಲೆ ಪ್ರಕೃತಿ ಚಿತ್ರ

ಕಲಾಪ

`ಕಣ್ಣಿಗೆ ಕಂಡಿದ್ದನ್ನೆಲ್ಲ ಗೀಚುವುದು ಸಾಧ್ಯವಾಗದ ಮಾತು. ಏನೋ ಒಂದು ಗೆರೆ ಎಳೆದರೆ ಅದು ಕಲೆಯಾಗಲ್ಲ. ಕಲಾವಿದನಿಗೆ ಯಾವುದೇ ಮಿತಿಯಿಲ್ಲ. ಆದರೆ ಅವನ ಕಣ್ಣು ಸದಾ ಚಲನಶೀಲವಾಗಿರಬೇಕು.ಕಣ್ಣಲ್ಲಿ ಕಂಡ ವಸ್ತು ಬಣ್ಣದಿಂದ ಮೆರುಗು ಪಡೆದು ಕ್ಯಾನ್ವಾಸ್ ಮೆಲೆ ರಾರಾಜಿಸಬೇಕಾದರೆ ಅವನು ಆ ವಸ್ತುವಿನ ಮೇಲೆ ಏಕಾಗ್ರತೆಯ ದೃಷ್ಟಿ ಬೆಳೆಸಿಕೊಳ್ಳಬೇಕು. ಕುಂಚ ಕೈಗೆತ್ತಿಕೊಳ್ಳುವಾಗ ಚಿತ್ತದ ಸುಖಕ್ಕೆ ಭಂಗ ಬರಬಾರದು. ಈ ಉದ್ದೇಶದಿಂದ ನಾನು ಬಾದಾಮಿ ಪಟ್ಟದ ಕಲ್ಲಿಗೆ ಆಗಾಗ ಭೇಟಿ ನೀಡುತ್ತೇನೆ. ಪ್ರಕೃತಿಯ ಬಗ್ಗೆ ಚಿತ್ರಿಸುವಾಗ ಪ್ರಕೃತಿಯ ಮಡಿಲಿಗಿಂತ ಬೇರೆ ತಾಣ ಬೇಕಾ...? ಎಷ್ಟೆಲ್ಲಾ ವಿಸ್ಮಯಗಳನ್ನು ತನ್ನ ಸೆರಗಿನ ತುದಿಗೆ ಕಟ್ಟಿಕೊಂಡಿದ್ದಾಳೆ ಪ್ರಕೃತಿ ಮಾತೆ. ಮೊಗೆದಷ್ಟು ವಿಷಯ ಅವಳಲ್ಲಿದೆ. ಆ ಬೆಟ್ಟ, ಬೆಳದಿಂಗಳು, ಹರಿವ ಜರಿಯ ನಿನಾದ, ಹಚ್ಚಹಸಿರು ಎಲ್ಲವು ನನ್ನ ಚಿತ್ರದ ಮೂಲವಾಗಿದೆ~ ಎಂದು ಮಾತಿಗಿಳಿಯುತ್ತಾರೆ ಕಾಂತರಾಜ್ ಎನ್. `ನಾನು ಬೆಂಗಳೂರಿನವ. ಕಲೆಯ ಬಗ್ಗೆ ಬಾಲ್ಯದಿಂದಲೂ ಒಲವಿತ್ತು. ಕಣ್ಣಲ್ಲಿ ತುಂಬಿಕೊಂಡ ಕನಸಿಗೆ ಸ್ಪಷ್ಟ ಚಿತ್ರಣ ನೀಡಲು ಈ ಪ್ರವೃತ್ತಿಯನ್ನೇ ಜೀವನವಾಗಿಸಿಕೊಂಡಿದ್ದೇನೆ. ಲ್ಯಾಂಡ್‌ಸ್ಕೇಪ್ ಮೇಲೆ ಜಲವರ್ಣ ಬಳಸಿ ಪ್ರಕೃತಿಯ ಸೌಂದರ್ಯವನ್ನು ಎಳೆ ಎಳೆಯಾಗಿ ಚಿತ್ರಿಸಿದ್ದೇನೆ. ಹೊಸತನವನ್ನು ಚಿತ್ರಿಸಬೇಕು ಎಂಬ ಹಂಬಲವಿದೆ. ಹಾಗಾಗಿ ಊರೂರು ಸುತ್ತುತ್ತೇನೆ. ಕಾಡುಮೇಡು ಅಲೆಯುತ್ತೇನೆ.ಈವರೆಗೆ ಇಪ್ಪತ್ನಾಲ್ಕು ಗುಂಪು ಪ್ರದರ್ಶನ ನೀಡಿದ್ದೇನೆ. ಆದರೆ ಇತ್ತೀಚೆಗೆ ಜಲವರ್ಣ ಬಳಕೆ ಕಡಿಮೆಯಾಗುತ್ತಿದೆ. ಈ ಉದ್ದೇಶದಿಂದ ನಾನು ಜಲವರ್ಣ ಬಳಕೆ ಹೆಚ್ಚಿಸಿದ್ದೇನೆ. ತಂಪಾದ ಗಾಳಿ, ಸುಂದರ ಬೆಳದಿಂಗಳಿನ ಚಂದಮಾಮ ಚುಕ್ಕಿಗಳ ಮಧ್ಯೆ ಮಿನುಗುವಾಗ ಕಣ್ಣಲ್ಲಿ ಕನಸು ಮೂಡುವುದಲ್ಲದೇ ನನ್ನ ಕೈಗಳು ಕೂಡ ಸದ್ದಿಲ್ಲದೇ ಗೀಚಲು ಶುರು ಮಾಡುತ್ತದೆ.ಆದರೆ ಏನೇ ಗೀಚಿದರು ಆ ಗೆರೆಯಲ್ಲಿ ನಾ ಕಂಡ ಭಾವನೆಗಳನ್ನು ವ್ಯಕ್ತಪಡಿಸಬೇಕು. ಆಗ ಅದು ಚಿತ್ರವಾಗಲು ಸಾಧ್ಯ~ ಎಂದು ಚಿತ್ರಕಲೆ ಬಗ್ಗೆ ತನ್ನದೇ ಆಗಿರುವ ಮಾತು ಹೇಳುತ್ತಾರೆ.ಇವರ ಕೈಯಲ್ಲಿ ಮೂಡಿಬಂದಿರುವ ಪೂರ್ಣಚಂದ್ರನಾಗಿರಬಹುದು, ಪ್ರಕೃತಿಯ ವಿವಿಧ ರೂಪಗಳಾಗಿರಬಹುದು ನೋಡುವ ಕಣ್ಣಿಗೆ ಹಬ್ಬವೆಂದರೆ ತಪ್ಪಾಗಲಾರದು.

`ರಮ್ಯ ಪ್ರಕೃತಿಯ ಮಡಿಲಾದ ಕೊಡಗು ನನ್ನೂರು. ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬಂತೆ ಮೊದಲು ಈ ವಾಕ್ಯದ ಪರಿಪಾಲನೆ ಮಾಡಿದೆ.ದಾರಿಯಲ್ಲಿ ಸಾಗುವಾಗ ಚಲಿಸುವಂತೆ ಕಾಣುವ ಮರಗಳು, ಅದರ ತೊಗಟೆಯ ವಿನ್ಯಾಸ, ಒಂದು ಎಲೆ ಹಿಡಿದರೆ ಅದರ ಒಳಗೆ ಚಿತ್ತಾರಗೊಂಡ ಗೆರೆಗಳು ಇವುಗಳೇ ನನಗೆ ಸ್ಫೂರ್ತಿ ತುಂಬಿದ್ದು~ ಎಂದು ಹೇಳುತ್ತಾರೆ ಸುಪ್ರಿಯಾ ಮೂರ್ತಿ.ಅವರು ತಮ್ಮ ಚಿತ್ರಕ್ಕೆ ಯಾವುದೇ ಶೀರ್ಷಿಕೆ ಇಟ್ಟಿಲ್ಲ. `ನಾ ಕಂಡ ದೃಶ್ಯಕ್ಕೆ ಭಾವನೆಗಳನ್ನು ತುಂಬಿದ್ದೇನೆ. ಅದನ್ನು ನೋಡುವವರು ಕೂಡ ಅವರದೇ ಭಾವದಲ್ಲಿ ನೋಡಲಿ. ಆಗ ಚಿತ್ರಕ್ಕೆ ಸಾರ್ಥಕ್ಯ ಸಿಗುತ್ತದೆ~ ಎಂಬುದು ಅವರ ಮಾತು.ಅವರು ಕೂಡ ಲ್ಯಾಂಡ್‌ಸ್ಕೇಪ್ ಮೇಲೆ ಜಲವರ್ಣ ಬಳಸಿ ಪ್ರಕೃತಿಯ ಚಿತ್ತಾರವನ್ನು ಚಿತ್ರಿಸಿದ್ದಾರೆ. ಕಲೆಯಲ್ಲಿಯೇ ಮುಂದುವರಿಯುವ ಕನಸು ಕಂಗಳು ಇವರದು. ಚಿತ್ರಕಲಾ ಪರಿಷತ್‌ನಲ್ಲಿ ಇಂದು (ಜೂನ್ 27) ಇವರ ಪ್ರದರ್ಶನ ನಡೆಯಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.