ಬುಧವಾರ, ಅಕ್ಟೋಬರ್ 23, 2019
27 °C

ಭಿನ್ನಮತ: ಸಂಪುಟ ವಿಸ್ತರಣೆ ವಿಳಂಬ...!

Published:
Updated:

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ನಡುವಿನ ಭಿನ್ನಮತ, ಮತ್ತೆ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ನಡೆಸುತ್ತಿರುವ ಕಸರತ್ತಿನಿಂದಾಗಿ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗಲಿದೆ.ಸಂಕ್ರಾಂತಿ ನಂತರ ಆಡಳಿತಾರೂಢ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಯಾಗುವ ಲಕ್ಷಣಗಳು ಕಂಡು ಬರುತ್ತಿರುವುದು, ಈಶ್ವರಪ್ಪ ಮೌನಕ್ಕೆ ಶರಣಾಗಿರುವುದು, ಯಡಿಯೂರಪ್ಪ ಅವರು ಸಂಕ್ರಾಂತಿ ನಂತರ ಬದಲಾಗುತ್ತೇನೆ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಸೋಮವಾರ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, `ಹೈಕಮಾಂಡ್ ಒಪ್ಪಿದರೆ ಮಾತ್ರ ಸಚಿವ ಸಂಪುಟದ ವಿಸ್ತರಣೆ ನಡೆಯಲಿದೆ. ಈ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಇದು ಹೈಕಮಾಂಡ್‌ಗೆ ಬಿಟ್ಟ ವಿಷಯ~ ಎಂದರು.ಬಿಜೆಪಿ ರಾಜ್ಯ ಘಟಕದಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, `ಸ್ವಲ್ಪ ದಿನ ಕಾದು ನೋಡಿ~ ಎಂದಷ್ಟೆ ಹೇಳಿದರು. ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳು ಬಗೆಹರಿದ ನಂತರವೇ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸದಾನಂದಗೌಡ ಅವರೂ ಹೇಳಿದ್ದಾರೆ.ಯಡಿಯೂರಪ್ಪ ಅವರು ಕೆಲ ದಿನಗಳ ಹಿಂದೆ ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ನಂತರ ಮೌನಕ್ಕೆ ಶರಣಾಗಿರುವ ಈಶ್ವರಪ್ಪ ಸೋಮವಾರ ಕೂಡ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಮಾತನಾಡಲು ಬಯಸಲಿಲ್ಲ.ಭಾನುವಾರ ಬೆಳಿಗ್ಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಯಡಿಯೂರಪ್ಪ ವಿಶ್ರಾಂತಿ ಪಡೆಯುತ್ತಿದ್ದರೆ, ಈಶ್ವರಪ್ಪ  ಸೋಮವಾರ ಹೈದರಾಬಾದ್‌ಗೆ ತೆರಳಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಪಕ್ಷದ ಸ್ಥಳೀಯ ಘಟಕಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಯುವ ದೃಷ್ಟಿಯಿಂದ ವರ್ಷಕ್ಕೊಮ್ಮೆ ಬಿಜೆಪಿ ರಾಜ್ಯ ಘಟಕಗಳ ಅಧ್ಯಕ್ಷರು ಅಂತರರಾಜ್ಯ ಪ್ರವಾಸ ನಡೆಸುತ್ತಾರೆ. ಆ ಪ್ರಕಾರ ಈಶ್ವರಪ್ಪ ಅವರು ಎರಡು ದಿನಗಳ ಕಾಲ ಆಂಧ್ರಪ್ರದೇಶ ಪ್ರವಾಸದಲ್ಲಿರುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಯಡಿಯೂರಪ್ಪ ಬೇಕು: ಕಾರಜೋಳ

ಬಾಗಲಕೋಟೆ:
ಯಡಿಯೂರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂಬ ಬಿಜೆಪಿ ಹಿರಿಯ ಮುಖಂಡ ಬಿ.ಬಿ.ಶಿವಪ್ಪ ಅವರ ಹೇಳಿಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ.ಕಾರಜೋಳ ವಿರೋಧ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಯಡಿಯೂರಪ್ಪ  ಪ್ರಮುಖ ಪಾತ್ರ ವಹಿಸಿದ್ದಾರೆ. ಪಕ್ಷವನ್ನು ಮುನ್ನಡೆಸಲು ಯಡಿಯೂರಪ್ಪ ಸಹಕಾರದ ಅಗತ್ಯವಿದೆ.  ಅಂತಹವರನ್ನು ಉಚ್ಚಾಟಿಸುವ ಮಾತು ಅನಗತ್ಯ ಎಂದರು.`ಯಡಿಯೂರಪ್ಪ ಕೈಗೊಂಡಿರುವ ಪ್ರವಾಸದಲ್ಲಿ ಭಾಗವಹಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾರಜೋಳ, ಇದುವರೆಗೂ ಪ್ರವಾಸದ ಸಂಬಂಧ ನನಗೆ ಮಾಹಿತಿಯೂ ಬಂದಿಲ್ಲ, ಆಹ್ವಾನವೂ ಬಂದಿಲ್ಲ. ಆಹ್ವಾನ ಬಂದರೆ ಪಕ್ಷದ ಹಿತದೃಷ್ಟಿಯಿಂದ ಭಾಗವಹಿಸುತ್ತೇನೆ~ ಎಂದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)