ಭಿನ್ನರಿಗೆ ಪ್ರತಿಯಾಗಿ ಸಿಎಂ ಸಭೆ

7

ಭಿನ್ನರಿಗೆ ಪ್ರತಿಯಾಗಿ ಸಿಎಂ ಸಭೆ

Published:
Updated:
ಭಿನ್ನರಿಗೆ ಪ್ರತಿಯಾಗಿ ಸಿಎಂ ಸಭೆ

ಬೆಂಗಳೂರು: ಭಿನ್ನಮತೀಯ ಶಾಸಕರ ಸಭೆಗೆ ಪ್ರತಿಯಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಕರೆದಿದ್ದ ‘ಶಕ್ತಿ ಪ್ರದರ್ಶನದ’ ಸಭೆಯಲ್ಲಿ 40ರಿಂದ 45 ಮಂದಿ ಶಾಸಕರು ಹಾಜರಿದ್ದು, ತಮ್ಮ ಬೆಂಬಲ ಸೂಚಿಸಿದರು.ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಸೇರಿದಂತೆ ಇತರರು ಇತ್ತೀಚೆಗೆ ಕರೆದಿದ್ದ ಅತೃಪ್ತ ಶಾಸಕರ ಸಭೆಗೆ ತಕ್ಕ ಉತ್ತರ ನೀಡಲು ಯಡಿಯೂರಪ್ಪ ತಮ್ಮ ರೇಸ್‌ಕೋರ್ಸ್ ರಸ್ತೆಯ ನಿವಾಸದಲ್ಲಿ ಶುಕ್ರವಾರ ಶಾಸಕರ ಸಭೆ ಕರೆದಿದ್ದರು.ಈ ಸಭೆಗೆ ವಿಧಾನ ಪರಿಷತ್ತಿನ ಸದಸ್ಯರಾದ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಹಾಗೂ ವಸತಿ ಸಚಿವ ವಿ.ಸೋಮಣ್ಣ ಸೇರಿದಂತೆ 12 ಸಚಿವರು ಹಾಗೂ 30ಶಾಸಕರು ಮಾತ್ರ ಹಾಜರಾಗಿದ್ದರು.ಸಚಿವರಾದ ಜಗದೀಶ ಶೆಟ್ಟರ್, ಆರ್.ಅಶೋಕ, ಜಿ.ಕರುಣಾಕರ ರೆಡ್ಡಿ, ಜಿ.ಜನಾರ್ದನ ರೆಡ್ಡಿ, ಸುರೇಶ್            ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್.ಎ.ರಾಮದಾಸ್ ಸೇರಿದಂತೆ 13 ಮಂದಿ ಗೈರುಹಾಜರಾಗಿದ್ದರು.ಮುಖ್ಯಮಂತ್ರಿಯವರ ಆಪ್ತರಲ್ಲಿ ಒಬ್ಬರಾದ ಸಚಿವೆ ಶೋಭಾ ಕರಂದ್ಲಾಜೆ ವಿಧಾನಸೌಧದಲ್ಲೇ ಇದ್ದರೂ ಸಭೆಗೆ ಹೋಗಲಿಲ್ಲ.ಈಶ್ವರಪ್ಪ ಸೇರಿದಂತೆ ಕರಾವಳಿಯ ಬಹುತೇಕ ಶಾಸಕರೂ ಸಭೆಗೆ ಬಂದಿರಲಿಲ್ಲ. ಬೆಂಗಳೂರು ನಗರದ ಶಾಸಕರಾದ ಎಸ್.ಆರ್.ವಿಶ್ವನಾಥ್, ನಂದೀಶ್ ರೆಡ್ಡಿ, ಎಂ.ಶ್ರೀನಿವಾಸ್ ಮಾತ್ರ ಹಾಜರಾಗಿದ್ದರು. ಒಟ್ಟಿನಲ್ಲಿ ಮುಖ್ಯಮಂತ್ರಿ ಕರೆದ ಸಭೆಗೆ ಕಡಿಮೆ ಸಂಖ್ಯೆಯ ಶಾಸಕರು ಹಾಜರಾಗಿದ್ದ ಕಾರಣಕ್ಕೆ ಅತೃಪ್ತ ಶಾಸಕರ ಪಾಳಯದಲ್ಲಿ ಸಂತಸ ಮೂಡಿದೆ. ಈ ಬಗ್ಗೆ ಪಕ್ಷದ ಹೈಕಮಾಂಡ್‌ಗೆ ದೂರು ನೀಡಲು ವಿರೋಧಿ ಗುಂಪಿನಲ್ಲಿ ಪ್ರಯತ್ನಗಳು ಸಾಗಿವೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಭಿನ್ನಮತೀಯ ಚಟುವಟಿಕೆಗಳು ಸದ್ಯಕ್ಕೆ ಸ್ಥಗಿತಗೊಳ್ಳಲಿದ್ದು, ನಂತರ ಮತ್ತೆ ಗರಿಗೆದರುವ ಸಾಧ್ಯತೆ ಇದೆ ಎನ್ನಲಾಗಿದೆ.ಅತೃಪ್ತರ ಸಭೆಗೆ ಪ್ರತಿಯಾಗಿ ಸಭೆ ನಡೆಸಲು ಮುಖ್ಯಮಂತ್ರಿ ಕಡೆಯ ಗುಂಪಿನಲ್ಲಿ ಬಹಳಷ್ಟು ಕಸರತ್ತು ನಡೆಸಲಾಯಿತು. ಗುರುವಾರ ಇಡೀ ದಿನ ಕೆಲ ಸಚಿವರಲ್ಲದೆ, ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿ ಶಾಸಕರಿಗೆ ಹಲವು ಬಾರಿ ದೂರವಾಣಿ ಕರೆ ಮಾಡಿ ಸಭೆಗೆ ಆಹ್ವಾನ ನೀಡಿದ್ದರು. ಕೆಲವರು ನೈಜ ಕಾರಣ ನೀಡಿ ಸಭೆಗೆ ಗೈರುಹಾಜರಾಗಿದ್ದರೆ, ಇನ್ನೂ ಕೆಲವರು ಬೆಂಗಳೂರಿನಲ್ಲೇ ಇದ್ದರೂ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದಾರೆ. ಅತೃಪ್ತ ಶಾಸಕರ ಸಭೆಗೂ ಹೋಗಿದ್ದ ಇನ್ನೂ ಕೆಲವರು ಸಿಎಂ ಸಭೆಯಲ್ಲೂ ಕಾಣಿಸಿದ್ದು ಕುತೂಹಲ ಕೆರಳಿಸಿದೆ.ಮುಖ್ಯಮಂತ್ರಿ ಕರೆದಿದ್ದ ಸಭೆಗೆ ಹೋಗದಂತೆ ಅತೃಪ್ತರ ಬಣದಿಂದಲೂ ಶಾಸಕರ ಮೇಲೆ ಒತ್ತಡ ಇತ್ತು ಎನ್ನಲಾಗಿದೆ.

ಹೀಗಾಗಿ ಆರ್‌ಎಸ್‌ಎಸ್ ಪ್ರಮುಖರ ಸಲಹೆಯಂತೆ ಕೆಲವರು ಎರಡೂ ಗುಂಪುಗಳ ಸಭೆಯಿಂದ ದೂರ ಉಳಿದಿದ್ದಾರೆ.ಸಚಿವರಾದ ಅಶೋಕ ಮತ್ತು ಸುರೇಶ್‌ಕುಮಾರ್ ನಗರದಲ್ಲೇ ಇದ್ದರೂ ಗುಂಪುಗಾರಿಕೆ ಬೇಡ ಎನ್ನುವ ಕಾರಣಕ್ಕೆ ಸಭೆಯಿಂದ ದೂರ  ಉಳಿದಿದ್ದರು ಎನ್ನಲಾಗಿದೆ.ಸತೀಶ್ ಭೇಟಿ:  ಈ ನಡುವೆ ಭಿನ್ನಮತ ಶಮನಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸತೀಶ್ ಅವರು ಶನಿವಾರ    ನಗರಕ್ಕೆ ಬರಲಿದ್ದು ಅವರು ಎರಡೂ ಬಣಗಳ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry