ಭಿನ್ನರಿಗೆ ಬಿಸಿ ಮುಟ್ಟಿಸಿದ ಬಿಜೆಪಿ

7

ಭಿನ್ನರಿಗೆ ಬಿಸಿ ಮುಟ್ಟಿಸಿದ ಬಿಜೆಪಿ

Published:
Updated:
ಭಿನ್ನರಿಗೆ ಬಿಸಿ ಮುಟ್ಟಿಸಿದ ಬಿಜೆಪಿ

ಬೆಂಗಳೂರು: ಹಾವೇರಿಯಲ್ಲಿ ಭಾನುವಾರ ನಡೆಯುವ ಕೆಜೆಪಿ ಸಮಾವೇಶಕ್ಕೆ ಭರದ ಸಿದ್ಧತೆ ನಡೆದಿರುವ ಬೆನ್ನಿಗೇ  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಆಪ್ತರಾದ ಸಹಕಾರ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವರನ್ನು ಸಂಪುಟದಿಂದ ವಜಾ ಮಾಡುವ ಮೂಲಕ ಕೆಜೆಪಿಯೊಂದಿಗೆ ಗುರುತಿಸಿಕೊಂಡಿರುವ ಸಚಿವರು, ಶಾಸಕರಿಗೆ ಆಡಳಿತಾರೂಢ ಬಿಜೆಪಿ ಶಿಸ್ತುಕ್ರಮದ ಸಂದೇಶ ರವಾನಿಸಿದೆ.ಪುಟ್ಟಸ್ವಾಮಿ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ಅಷ್ಟೇ ಅಲ್ಲದೆ, ಪಕ್ಷದಿಂದಲೂ ಅಮಾನತುಗೊಳಿಸಲಾಗಿದೆ. ಹೈಕಮಾಂಡ್ ವಿರುದ್ಧ ಬಂಡಾಯ ಸಾರಿದ್ದ ತುಮಕೂರು ಸಂಸದ ಜಿ. ಎಸ್. ಬಸವರಾಜ್ ಅವರನ್ನೂ ಪಕ್ಷದಿಂದ ಅಮಾನತು ಮಾಡುವ ಮೂಲಕ ಬಿಜೆಪಿ ವರಿಷ್ಠರು ಭಿನ್ನರಿಗೆ ಮೊದಲ ಪೆಟ್ಟು ಕೊಟ್ಟಿದ್ದಾರೆ.ಅಮಾನತುಗೊಂಡಿರುವ ಇಬ್ಬರೂ ಯಡಿಯೂರಪ್ಪನವರಿಗೆ ಆಪ್ತರು. ಅಷ್ಟೇ ಅಲ್ಲದೆ ಅವರ ಸಮುದಾಯಕ್ಕೇ ಸೇರಿದವರು. ಬಸವರಾಜ್ ಲೋಕಸಭಾ ಸದಸ್ಯರಾದರೆ, ಪುಟ್ಟಸ್ವಾಮಿ ವಿಧಾನ ಪರಿಷತ್ ಸದಸ್ಯರು. ಹೀಗಾಗಿ ಅವರ ಅಮಾನತಿನಿಂದ ಸರ್ಕಾರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.ಪುಟ್ಟಸ್ವಾಮಿ, ಬಸವರಾಜ್ ಅವರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಅವರಿಂದ ಉತ್ತರ ಬಂದ ನಂತರ ಪಕ್ಷದಿಂದ ಉಚ್ಚಾಟಿಸಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಭಾನುವಾರ ನಡೆಯುವ ಕೆಜೆಪಿ ಸಮಾವೇಶದಲ್ಲಿ ಸಚಿವರು, ಶಾಸಕರು ಭಾಗವಹಿಸಿದರೆ, ಅಂತಹವರ ವಿರುದ್ಧವೂ ಇದೇ ರೀತಿ ಶಿಸ್ತುಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾಡಿದ ಶಿಫಾರಸು ಆಧರಿಸಿ, ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಸಚಿವ ಪುಟ್ಟಸ್ವಾಮಿ ಅವರನ್ನು ಸಂಪುಟದಿಂದ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ದೆಹಲಿಯಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ (ಕೋರ್ ಕಮಿಟಿ) ನಿರೀಕ್ಷೆಯಂತೆ ಕೆಜೆಪಿಯೊಂದಿಗೆ ಗುರುತಿಸಿಕೊಂಡಿರುವ ಯಡಿಯೂರಪ್ಪ ಅವರ ಬೆಂಬಲಿಗರ ವಿರುದ್ಧ ಶಿಸ್ತುಕ್ರಮದ ಚಾಟಿ ಬೀಸುವ ತೀರ್ಮಾನ ತೆಗೆದುಕೊಳ್ಳಲಾಯಿತು.ಕೋರ್ ಕಮಿಟಿ ಸಭೆಯ ನಂತರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, `ಪುಟ್ಟಸ್ವಾಮಿ ಅವರು ಪಕ್ಷದ ಶಿಸ್ತು ಉಲ್ಲಂಘಿಸಿ ಕೆಜೆಪಿಯ ಹಲವು ಸಭೆಗಳಲ್ಲಿ ಪಾಲ್ಗೊಂಡು ಆ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದ ಕಾರಣ ಅವರನ್ನು ಸಂಪುಟದಿಂದ ವಜಾ ಮಾಡಲಾಗಿದೆ' ಎಂದು ತಿಳಿಸಿದರು.ಉಪಮುಖ್ಯಮಂತ್ರಿಯೂ ಆದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, `ಪಕ್ಷದ ಶಿಸ್ತು ಉಲ್ಲಂಘಿಸಿದ ಕಾರಣಕ್ಕಾಗಿ ಬಸವರಾಜ್ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಲಾಗಿದೆ. ಬಿಜೆಪಿಯಲ್ಲಿ ಇದ್ದುಕೊಂಡೇ ಕೆಜೆಪಿಯೊಂದಿಗೆ ಗುರುತಿಸಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ' ಎಂದು ಎಚ್ಚರಿಕೆ ನೀಡಿದರು.ಪಕ್ಷದ ವರಿಷ್ಠರು ಹಾಗೂ ರಾಜ್ಯ ಘಟಕದ ನಾಯಕರ ವಿರುದ್ಧ ಬಸವರಾಜ್ ಅವರು ಟೀಕೆಗಳನ್ನು ಮಾಡುವ ಮೂಲಕ ಹಗುರವಾಗಿ ಮಾತನಾಡಿದ್ದರು.  ಹೀಗಾಗಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದರು.

`ಕೆಜೆಪಿಗೆ ಹೋಗುವುದಾದರೆ ಯಡಿಯೂರಪ್ಪನವರ ಹಾಗೆ, ಅವರ ಬೆಂಬಲಿಗರೂ ಬಿಜೆಪಿಗೆ ರಾಜೀನಾಮೆ ನೀಡಲಿ. ಅದು ಬಿಟ್ಟು ಪಕ್ಷದಲ್ಲಿ ಇದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಸಹಿಸುವುದಿಲ್ಲ' ಎಂದು ಕಠಿಣ ಎಚ್ಚರಿಕೆ ನೀಡಿದರು.ಬಿಜೆಪಿ ತೊರೆದು ಕೆಜೆಪಿ ಸಾರಥ್ಯ ವಹಿಸುತ್ತಿರುವ ಯಡಿಯೂರಪ್ಪ ಅವರೊಂದಿಗೆ ಬಹಿರಂಗವಾಗಿ ಗುರುತಿಸಿಕೊಂಡು ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿರುವವರ ವಿರುದ್ಧ ಶಿಸ್ತುಕ್ರಮಕ್ಕೆ ಕೈಹಾಕಿದರೆ ಸರ್ಕಾರದ ಸ್ಥಿರತೆಗೆ ತೊಂದರೆಯಾಗಬಹುದೆಂಬ ಕಾರಣಕ್ಕಾಗಿ ಪಕ್ಷದ ವರಿಷ್ಠರು ಆರಂಭದಲ್ಲಿ ಮೀನಮೇಷ ಎಣಿಸಿದ್ದರು.ಆದರೆ, ಯಡಿಯೂರಪ್ಪ ಬೆಂಬಲಿಗರು ಸರ್ಕಾರದ ವಿರುದ್ಧವೇ ಟೀಕೆಗಳನ್ನು ಮಾಡುವುದರ ಜೊತೆಗೆ, ಕೆಜೆಪಿ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಶುರು ಮಾಡಿದರು. ಯಡಿಯೂರಪ್ಪ ಶುಕ್ರವಾರ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ 23 ಶಾಸಕರು, ಏಳು ಜನ ಸಚಿವರು ಭಾಗವಹಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದರು.ಭಾನುವಾರ ನಡೆಯುವ ಹಾವೇರಿ ಸಮಾವೇಶದಲ್ಲಿ ಇವರೆಲ್ಲ ಭಾಗವಹಿಸಿದ್ದರೆ ಪಕ್ಷ ಮುಜುಗರಕ್ಕೆ ಸಿಲುಕುತ್ತದೆ ಎಂಬ ಹಿನ್ನೆಲೆಯಲ್ಲಿ ಕೊನೆಗೂ ಶಿಸ್ತುಕ್ರಮಕೈಗೊಳ್ಳುವ ದಿಟ್ಟ ನಿಲುವನ್ನು ಬಿಜೆಪಿ ವರಿಷ್ಠರು ಕೈಗೊಂಡಿದ್ದಾರೆ.ಶುಕ್ರವಾರ ರಾತ್ರಿ ಗಡ್ಕರಿ ಅವರ ನಿವಾಸದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, `ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷ ಉಳಿಯಬೇಕಾದರೆ ಅಶಿಸ್ತನ್ನು ಸಹಿಸಬಾರದು. ಪಕ್ಷದ ಮರ್ಯಾದೆ ಹರಾಜು ಆಗುತ್ತಿದೆ. ಪಕ್ಷದ ಮುಖಂಡರು, ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡುವವರ ಮೇಲೆ ಕ್ರಮಕೈಗೊಳ್ಳದಿದ್ದರೆ ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗುತ್ತದೆ' ಎಂಬ ಆತಂಕ ವ್ಯಕ್ತಪಡಿಸಿದರು ಎನ್ನಲಾಗಿದೆ.ಐದು ತಿಂಗಳ ಅಧಿಕಾರಕ್ಕಾಗಿ ಪಕ್ಷವನ್ನು ಕಳೆದುಕೊಳ್ಳುವುದು ಸರಿಯಲ್ಲ. ಸರ್ಕಾರ ಹೋದರೂ ಪರವಾಗಿಲ್ಲ, ಭಿನ್ನರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು ಎಂದು ಗೊತ್ತಾಗಿದೆ. ಉಪ ಮುಖ್ಯಮಂತ್ರಿ ಆರ್.ಅಶೋಕ ಅವರು, ಕ್ರಮಕೈಗೊಂಡರೆ ಸರ್ಕಾರದ ಸ್ಥಿರತೆಗೆ ತೊಂದರೆಯಾಗುತ್ತದೆ. ಈಗಲೇ ಅಧಿಕಾರ ಕಳೆದುಕೊಳ್ಳುವುದು ಬೇಡ ಎಂದು ಸಲಹೆ ಮಾಡಿದ್ದಾಗಿ ಗೊತ್ತಾಗಿದೆ.ಬಿಜೆಪಿಯ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಶೆಟ್ಟರ್, ಈಶ್ವರಪ್ಪ, ಸದಾನಂದಗೌಡ, ಸಂಸದರಾದ ಪ್ರಹ್ಲಾದ ಜೋಶಿ, ನಳಿನ್‌ಕುಮಾರ್ ಕಟೀಲು, ರಾಜ್ಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರು ಶುಕ್ರವಾರ ತಡರಾತ್ರಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.ರಾತ್ರಿಯ ಸಭೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಒಮ್ಮತ ಮೂಡಲಿಲ್ಲ. ಕೊನೆಗೆ ಗಡ್ಕರಿ ಅವರು, `ರಾಜ್ಯ ಘಟಕದ ಮುಖಂಡರು ಶನಿವಾರ ಮತ್ತೊಮ್ಮೆ ಸಭೆ ಸೇರಿ ಸೂಕ್ತ ತೀರ್ಮಾನಕ್ಕೆ ಬನ್ನಿ. ಅದಕ್ಕೆ ನನ್ನ ಬೆಂಬಲ ಇರುತ್ತದೆ' ಎಂದು ತಿಳಿಸಿ ಸಭೆಯನ್ನು ಮುಕ್ತಾಯಗೊಳಿಸಿದರು. ಅವರ ಆದೇಶದಂತೆ ಶನಿವಾರ ಬೆಳಿಗ್ಗೆ ಕರ್ನಾಟಕ ಭವನದಲ್ಲಿ ಸೇರಿದ್ದ ಸಭೆಯಲ್ಲಿ ಅಂತಿಮವಾಗಿ ಶಿಸ್ತುಕ್ರಮಕೈಗೊಳ್ಳಲು ನಿರ್ಧರಿಸಲಾಯಿತು ಎಂದು ಗೊತ್ತಾಗಿದೆ.

ಚರ್ಚೆಯಾಗದ ಅಧ್ಯಕ್ಷರ ವಿಷಯ

ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರ ನೇಮಕ ವಿಷಯ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಗೆ ಬರಲಿಲ್ಲ. ರಾಜ್ಯದ ಬಿಜೆಪಿ ಮುಖಂಡರ ಮನವಿಯಂತೆ ಅಧ್ಯಕ್ಷರ ಆಯ್ಕೆ ವಿಷಯವನ್ನು ಮುಂದಕ್ಕೆ ಹಾಕಲಾಯಿತು. ಮುಂದಿನ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.ಎರಡು ಸಲಹೆ

ಯಡಿಯೂರಪ್ಪ ಅವರ ಎಲ್ಲ ಬೆಂಬಲಿಗರನ್ನು ವಜಾ ಮಾಡುವುದು ಮತ್ತು ತಕ್ಷಣ ವಿಧಾನಸಭೆಯನ್ನು ವಿಸರ್ಜಿಸುವ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪವಾಯಿತು. ಆದರೆ, ಕೆಲ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ.ಎಲ್ಲರ ವಿರುದ್ಧ ಕ್ರಮಕೈಗೊಂಡರೆ ಸರ್ಕಾರ ಉರುಳುತ್ತದೆ. ಆಗ  ಸಹಜವಾಗಿಯೇ ರಾಷ್ಟ್ರಪತಿ ಆಡಳಿತ ಜಾರಿಗೆ ಬರುತ್ತದೆ. ಚುನಾವಣೆ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತದ ಬದಲು, ನಮ್ಮದೇ ಸರ್ಕಾರ ಇದ್ದರೆ ಒಳ್ಳೆಯದು ಎಂದು ಸಲಹೆ ಮಾಡಿದರು.

ನಾನೀಗ ಸ್ವತಂತ್ರ ವ್ಯಕ್ತಿ- ಪುಟ್ಟಸ್ವಾಮಿ

ಬೆಳಗಾವಿ: `ನಾನೀಗ ಸ್ವತಂತ್ರ ವ್ಯಕ್ತಿ. ಬಿ.ಎಸ್. ಯಡಿಯೂರಪ್ಪ ನಮ್ಮ ನಾಯಕರಾಗಿದ್ದು, ಹಾವೇರಿಯ ಕೆಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದೇನೆ. ನನ್ನಂತೆಯೇ ಹಲವು ನಾಯಕರು ಹಾವೇರಿಗೆ ಹೋಗಲಿದ್ದಾರೆ' ಎಂದು ಸಂಪುಟದಿಂದ ವಜಾಗೊಂಡ ಬಿ.ಜೆ.ಪುಟ್ಟಸ್ವಾಮಿ ಶನಿವಾರ ಇಲ್ಲಿ ಹೇಳಿದರು.

`ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು, `ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ರಾಜೀನಾಮೆ ನೀಡುವಂತೆ ನನ್ನನ್ನು ಕೇಳಿದ್ದರೆ, ಆ ಕ್ಷಣದಲ್ಲೇ ಸಚಿವ ಸ್ಥಾನ ತ್ಯಜಿಸುತ್ತಿದ್ದೆ. ನನ್ನ ಅಭಿಪ್ರಾಯವನ್ನು ಪಡೆಯದೇ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪನವರ ಮಾತು ಕೇಳಿಕೊಂಡು ನನ್ನನ್ನು ವಜಾ ಮಾಡುವ ಮೂಲಕ ಶೆಟ್ಟರ್ ಸಣ್ಣತನ ಪ್ರದರ್ಶಿಸಿದ್ದಾರೆ' ಎಂದು ಟೀಕಿಸಿದರು.`ನನ್ನೊಬ್ಬನ ಮೇಲೆ ಮಾತ್ರ ಕ್ರಮ ಕೈಗೊಂಡಿರುವುದನ್ನು ನೋಡಿದರೆ ಬಿಜೆಪಿ ಎಷ್ಟು ದುರ್ಬಲಗೊಂಡಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಎಲ್ಲರ ಮೇಲೆ ಕ್ರಮ ಕೈಗೊಳ್ಳುವ ಧೈರ್ಯ ಪಕ್ಷದ ವರಿಷ್ಠರಿಗೆ ಇಲ್ಲ' ಎಂದು ಕುಟುಕಿದರು.`ಸಂಪುಟದಿಂದ ನನ್ನನ್ನು ವಜಾ ಮಾಡಿರುವುದಾಗಿ ದೆಹಲಿಯಲ್ಲಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿರುವ ವಿಷಯವು ಮಾಧ್ಯಮಗಳಿಂದ ತಿಳಿಯಿತು. ಯಾವುದೇ ಕಾರಣವನ್ನು ನೀಡದೆ, ಹಿಂದುಳಿದ ವರ್ಗದವನಾದ ನನ್ನ ಮೇಲೆ ಗದಾ ಪ್ರಹಾರ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಬಿಜೆಪಿ ಮೇಲೆ ಹೇಗೆ ಗದಾ ಪ್ರಹಾರ ನಡೆಸುತ್ತೇವೆ, ನೋಡಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.`ಅಧಿಕಾರ ಕಳೆದುಕೊಂಡ ಬಗ್ಗೆ ನನಗೆ ಮಾನಸಿಕವಾಗಿ ನೋವಾಗಿಲ್ಲ. 40 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಎಂದೂ ಭ್ರಷ್ಟಾಚಾರದ ಕಪ್ಪು ಚುಕ್ಕೆಯನ್ನು ಅಂಟಿಸಿಕೊಂಡಿಲ್ಲ. 24 ವರ್ಷಗಳ ಕಾಲ ಅಧಿಕಾರ ಇಲ್ಲದೇ ಕಳೆದಿದ್ದೇನೆ. ಸಚಿವನಾದ ಬಳಿಕ ಸಹಕಾರಿ ಇಲಾಖೆಗೆ ಶಕ್ತಿ ತುಂಬಿದ್ದೇನೆ.ಜನಸಾಮಾನ್ಯರ ಪರವಾಗಿ ಹಲವು ಕೆಲಸ ಮಾಡಿದ್ದೇನೆ. ಶೋಷಿತರಿಗೆ ಮೀಸಲಾತಿ ತರುವ ಸಂವಿಧಾನದ 97ನೇ ತಿದ್ದುಪಡಿಯನ್ನು ಅಳವಡಿಸಿಕೊಂಡು ಸಹಕಾರಿ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಸೋಮವಾರ ನಡೆಯುವ ಅಧಿವೇಶನದಲ್ಲಿ ಮಂಡಿಸುವವನಿದ್ದೆ. ಏಕಾಏಕಿ ಸಂಪುಟದಿಂದ ವಜಾಗೊಳಿಸಿರುವುದು ಬೇಸರ ತಂದಿದೆ' ಎಂದು ಹೇಳಿದರು.`ಯಡಿಯೂರಪ್ಪನವರನ್ನು ಪಕ್ಷದಿಂದ ಹೊರ ಹೋಗುವಂತೆ ಮಾಡಿರುವ ಈಶ್ವರಪ್ಪ ಅವರು ಬಿಜೆಪಿಯನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ' ಎಂದು ಪುಟ್ಟಸ್ವಾಮಿ ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry