ಭಿನ್ನರಿಗೆ ಮಣಿದ ವರಿಷ್ಠರು

ಗುರುವಾರ , ಜೂಲೈ 18, 2019
29 °C

ಭಿನ್ನರಿಗೆ ಮಣಿದ ವರಿಷ್ಠರು

Published:
Updated:

ನವದೆಹಲಿ: ಸದಾನಂದಗೌಡರ `ಪದಚ್ಯುತಿ~ ಹಾಗೂ ಜಗದೀಶ್ ಶೆಟ್ಟರ್‌ಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ದಿನಗಣನೆ ಆರಂಭವಾಗಿದೆ. ಶನಿವಾರ ಬಿಜೆಪಿ ಸಂಸದೀಯ ಮಂಡಳಿ ನಾಯಕತ್ವ ಬದಲಾವಣೆಗೆ ಅಂತಿಮವಾಗಿ ಒಪ್ಪಿಗೆ ನೀಡಿದೆ. ಈ ಬಗ್ಗೆ ಭಾನುವಾರ ಅಧಿಕೃತ ಪ್ರಕಟಣೆ ಹೊರಬೀಳಲಿದೆ.ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರ ನಾಲ್ಕು ವರ್ಷಗಳಲ್ಲಿ ಮೂರನೇ ಮುಖ್ಯಮಂತ್ರಿಯನ್ನು ಕಾಣುತ್ತಿದೆ. ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಕಳೆದ ವರ್ಷ ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಸದಾನಂದಗೌಡರು ಮುಖ್ಯಮಂತ್ರಿ ಗದ್ದುಗೆ ಏರಿದ್ದರು. ಹನ್ನೊಂದು ತಿಂಗಳ ಅವಧಿ ಮುಗಿಸಿರುವ ಗೌಡರ ಪದಚ್ಯುತಿಗೆ ಯಡಿಯೂರಪ್ಪ ಬಣ ಒತ್ತಡ ಹೇರಿದೆ. ಕೊನೆಗೂ ಒತ್ತಡಕ್ಕೆ ವರಿಷ್ಠರು ಮಣಿದಿದ್ದಾರೆ.ಬಿಜೆಪಿ ಅಧ್ಯಕ್ಷ ಗಡ್ಕರಿ ಮನೆಯಲ್ಲಿ ಸೇರಿದ್ದ ಸಂಸದೀಯ ಮಂಡಳಿ ನಾಯಕತ್ವ ಬದಲಾವಣೆಗೆ ಅಂತಿಮ ಮುದ್ರೆ ಹಾಕಿತು. ಸಂಸದೀಯ ಮಂಡಳಿ ಸಭೆಯಲ್ಲಿ ಅಡ್ವಾಣಿ, ಸುಷ್ಮಾ ಸ್ವರಾಜ್, ಅನಂತಕುಮಾರ್, ರಾಜನಾಥ್ ಸಿಂಗ್, ಧರ್ಮೇಂದ್ರ ಪ್ರಧಾನ್ ಹಾಗೂ ರಾಂಲಾಲ್, ಹಾಗೂ ಸತೀಶ್ ಭಾಗವಹಿಸಿದ್ದರು. ಸಂಜೆ ಹಿರಿಯ ಮುಖಂಡ ಎಲ್. ಕೆ.ಅಡ್ವಾಣಿ ಮನೆಯಲ್ಲಿ ಮತ್ತೆ ಸೇರಿದ ವರಿಷ್ಠರು ದೆಹಲಿಗೆ ಬಂದಿದ್ದ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಸಭೆ ತೀರ್ಮಾನ ತಿಳಿಸಿದರು. ಅಡ್ವಾಣಿ ಜೇಟ್ಲಿ, ಸುಷ್ಮಾ, ಅನಂತ ಕುಮಾರ್, ಸದಾನಂದಗೌಡ ಮತ್ತು ಸಚಿವ ಸುರೇಶ್ ಕುಮಾರ್ ಅವರಿದ್ದರು.ಬೆಳಿಗ್ಗೆ ಕೆಲವು ಬಿಜೆಪಿ ವರಿಷ್ಠರು ಗೌಡರ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದರು. ನಾಯಕತ್ವ ಬದಲಾವಣೆ ಮಹತ್ವವನ್ನು ನಿತಿನ್ ಗಡ್ಕರಿ ಮನವರಿಕೆ ಮಾಡಿಕೊಟ್ಟರು. ಮುಂದಿನ ವರ್ಷದ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಲಿಂಗಾಯತ ಸಮಾಜಕ್ಕೆ ಸೇರಿದ ಜಗದೀಶ್ ಶೆಟ್ಟರ್ ನೇಮಕಕ್ಕೆ ಒಪ್ಪಿಗೆ ನೀಡಬೇಕೆಂದು ಮನವಿ ಮಾಡಿದರು.

 

ಆದರೆ, ಉತ್ತರಾಖಂಡದಲ್ಲಿ ರಮೇಶ್ ನಿಶಾಂಕ್ ಅವರನ್ನು ಬದಲಾವಣೆ ಮಾಡಿ ಖಂಡೂರಿ ಅವರನ್ನು ನೇಮಕ ಮಾಡಲಾಯಿತು. ಆದರೂ ಪಕ್ಷ ಅಧಿಕಾರಕ್ಕೆ ಬರಲಿಲ್ಲ ಎಂದು ಈ ನಾಯಕರು ವಾದಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.ಪದತ್ಯಾಗಕ್ಕೆ ಸದಾನಂದಗೌಡರು ಸಮ್ಮತಿಸಿದ್ದಾರೆ. ಗಡ್ಕರಿ ಮಧ್ಯಪ್ರದೇಶಕ್ಕೆ ಹೋಗಿದ್ದು ಭಾನುವಾರ ಬೆಳಿಗ್ಗೆ ನಗರಕ್ಕೆ ಆಗಮಿಸಲಿದ್ದಾರೆ.  ಅಧ್ಯಕ್ಷರನ್ನು ಭೇಟಿ ಮಾಡಿ ಮಧ್ಯಾಹ್ನ ಬೆಂಗಳೂರಿಗೆ ಹಿಂತಿರುಗುವ ಮುಖ್ಯಮಂತ್ರಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ.

 

ಸೋಮವಾರ ಬಿಜೆಪಿ ಶಾಸಕಾಂಗ ಪಕ್ಷ ಸಭೆ ಸೇರಿ ಶೆಟ್ಟರ್ ಅವರನ್ನು ಹೊಸ ನಾಯಕರಾಗಿ ಆರಿಸಲಿದೆ. ಮಂಗಳವಾರ ಹೊಸ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ನಡೆಯುವ ಸಂಭವವಿದೆ. ಹೈಕಮಾಂಡ್ ವೀಕ್ಷಕರಾಗಿ ಜೇಟ್ಲಿ ಮತ್ತಿತರರು ತೆರಳಲಿದ್ದಾರೆ ಎಂದು  ಮೂಲಗಳು ಹೇಳಿವೆ. ಸದಾನಂದಗೌಡರಿಗೆ ಯಾವ ಹುದ್ದೆ ನೀಡಬೇಕು, ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೇ, ಅಧಿಕಾರಕ್ಕಾಗಿ ಕಿತ್ತಾಡಿದ ಎಲ್ಲ ಬಣಗಳಿಗೂ ಹೇಗೆ ಪ್ರಾತಿನಿಧ್ಯ ನೀಡಬೇಕೆಂಬ ಬಗ್ಗೆ ನಾಯಕರು ಸಮಾಲೋಚಿಸಿದರು. ಅನಂತರ ನಾಯಕತ್ವ ಬದಲಾವಣೆ ಕುರಿತು ಭಾನುವಾರ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಜೇಟ್ಲಿ ತಿಳಿಸಿದರು.

ಭಾವುಕರಾದ ಅಡ್ವಾಣಿ- ಗೌಡ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸದಾನಂದಗೌಡರಿಗೆ ತಿಳಿಸುವಾಗ ಅಡ್ವಾಣಿ ಮತ್ತು ಗೌಡರು ಭಾವುಕರಾದರು. `ನೀವು ಉತ್ತಮವಾಗಿ ಕೆಲಸ ಮಾಡಿದ್ದೀರಿ. ಪಕ್ಷ ಮತ್ತು ಸರ್ಕಾರದ ವರ್ಚಸ್ಸು ಹೆಚ್ಚಿಸಿದ್ದೀರಿ.ಪ್ರತಿಕೂಲ ಪರಿಸ್ಥಿತಿಯಲ್ಲೂ ಮುನ್ನಡೆದಿದ್ದೀರಿ. ಆದರೇನು ಮಾಡುವುದು ಪರಿಸ್ಥಿತಿ ಒತ್ತಡದಿಂದ ಅಧಿಕಾರ ತ್ಯಜಿಸಬೇಕಾಗಿದೆ ಎಂದು ಅಡ್ವಾಣಿ ಹೇಳಿದರು. ಗೌಡರ ಬೆನ್ನು ತಟ್ಟಿ ಮೆಚ್ಚುಗೆ ಸೂಚಿಸಿದರು.`ನಾನು ಪಕ್ಷದ ಶಿಸ್ತಿನ ಸಿಪಾಯಿ. ಸಾಮಾನ್ಯ ಕಾರ್ಯಕರ್ತನಾಗಿ ದುಡಿಯಲು ಬಯಸಿದ್ದೇನೆ. ಯಾವ ಹುದ್ದೆಯೂ ಬೇಡ. ಸಿಕ್ಕ ಅವಕಾಶ ಸಮರ್ಪಕವಾಗಿ ಬಳಸಿಕೊಂಡು ಪಕ್ಷ ಬಯಸಿದ ಸರ್ಕಾರ ನೀಡಿದ್ದೇನೆ~ ಎಂದು ಡಿವಿಎಸ್ ಅಡ್ವಾಣಿ ಅವರಿಗೆ ವಿವರಿಸಿದರು ಎಂದು ಮೂಲಗಳು ಸ್ಪಷ್ಟಪಡಿಸಿವೆ.

  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry