ಭಿನ್ನ ಕಲಾವಿದರು ವಿಭಿನ್ನ ಕಲಾಶೈಲಿ

7

ಭಿನ್ನ ಕಲಾವಿದರು ವಿಭಿನ್ನ ಕಲಾಶೈಲಿ

Published:
Updated:
ಭಿನ್ನ ಕಲಾವಿದರು ವಿಭಿನ್ನ ಕಲಾಶೈಲಿ

ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ಕುಂಚದಲ್ಲಿ ಅದ್ದಿ ಕ್ಯಾನ್ವಾಸ್ ಮೇಲೆ ಅದಕ್ಕೆ ಜೀವಂತಿಕೆ ನೀಡುವ ಕಲೆ ಕಲೆಗಾರನಿಗಷ್ಟೇ ಸಿದ್ಧಿಸುತ್ತದೆ ಎಂದು ನಂಬಿರುವ ಪ್ರಸನ್ನ ಕುಮಾರ್ ಅಂತಹ ವಿಶಿಷ್ಟ ಶಕ್ತಿಯನ್ನು ಕ್ರೋಢೀಕರಿಸಿ ಕಲಾಕೃತಿಯನ್ನು ಮೂಡಿಸುತ್ತಾರೆ.ಅವರಿಗೆ ಮೊದಲಿನಿಂದಲೂ ಕಲೆಯ ಮೇಲೆ ವಿಶೇಷವಾದ ಆಸಕ್ತಿ. `ಒಂಟಿ ಕಣ್ಣಿನ ಬೆಕ್ಕು~ ಎಂಬ ಅವರ ಸಂಗ್ರಹದಲ್ಲಿ ಚಿತ್ರಕಲೆಯಲ್ಲಿನ ವೈಶಿಷ್ಟ್ಯ ಎದ್ದು ಕಾಣುತ್ತದೆ. ಒಂಟಿ ಕಣ್ಣಿನ ಬೆಕ್ಕನ್ನು ನೋಡಿದರೆ ಒಳ್ಳೆದಾಗುತ್ತದೆ ಎಂಬ ಭಾವನೆ ಜನರಲ್ಲಿ ಇದೆ.

 

ಆ ಬೆಕ್ಕನ್ನು ನೋಡಿದರೆ ಹೆಬ್ಬೆರಳಿನಿಂದ ಅಂಗೈಯನ್ನು ಒತ್ತಿ ಹಿಡಿಯಬೇಕು. ಆಗ ನಾವು ಮನಸ್ಸಿನಲ್ಲಿ ಬಯಸಿದ್ದು ಆಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳುವ ಅವರ ಈ ಚಿತ್ರಕಲೆಯಲ್ಲಿ ಮುಖ್ಯವಾಗಿ ಕಂಡು ಬರುವುದು ದೇಹದ ಅಂಗಾಂಗಗಳು.

 

ಹಳದಿ ಬಣ್ಣ ಪುರುಷನ ಅವಯವದ ಸಂಕೇತ, ಕಪ್ಪು ಬಣ್ಣ ಸ್ತ್ರೀಯ ಸಂಕೇತ. ಏನಾದರೊಂದು ಹೊಸತನ್ನು ಕಲೆಯಲ್ಲಿ ತರಬೇಕು ಎಂಬ ಉದ್ದೇಶ ನನ್ನದು. ಕುಂಚ ಹಿಡಿದ ನನಗೆ ಬೇರೇನೂ ಕಾಣಿಸಲ್ಲ. ಗೆರೆಗಳೊಂದಿಗೆ ಆಡುವ ನನ್ನ ಕೈ ಇನ್ನಷ್ಟು ಪಳಗಬೇಕು ಎಂಬ ಅಭಿಲಾಷೆ ಹೊರಹಾಕುತ್ತಾರೆ.ಅವರ ಆಸಕ್ತಿ ಕಲೆಯ ಮೇಲೆ. ಆದರೆ ಬದುಕು ಸಾಗಿಸಲು ಒಂದು ಉದ್ಯೋಗ ಬೇಕು. ಹಸಿದ ಹೊಟ್ಟೆಗೆ ತುತ್ತು ಅನ್ನ ನೀಡಿದರೆ ಕೈಗೂ ಬಲ. ಹಾಗಾಗಿ ಜಾಹೀರಾತು ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದೇನೆ ಎನ್ನುತ್ತಾರೆ ಪಟ್ಟಣದಲ್ಲೇ ಬದುಕು ಕಟ್ಟಿಕೊಂಡಿರುವ ಪ್ರಸನ್ನ ಕುಮಾರ್.ಮೀರತ್‌ನ ಶಾಲಿನಿ ಅವರದ್ದು ವಿಭಿನ್ನ ಆಸಕ್ತಿ. ಸ್ತ್ರೀಪರ ನಿಲುವು, ಒಲುಮೆ ಅವರ ಕಲಾಕೃತಿಗಳಲ್ಲಿ ಮೇಲುಗೈ ಸಾಧಿಸುತ್ತವೆ.ಊಟದ ತಟ್ಟೆಯ ಮುಂದೆ ಕುಳಿತರೂ ನನಗೆ ಸದಾ ಬಣ್ಣದ ಗೀಳು. ಪ್ಲೇಟಿನ ಮೇಲೆ ಗೆರೆ ಎಳೆದು ಅದರಲ್ಲಿ ಚಿತ್ರ ಮೂಡಿಸುತ್ತಿದ್ದೆ. ಆದರೆ ನನ್ನ ಚಿತ್ರಕಲೆ ಮುಂದುವರಿಸಲು ಅವಕಾಶ ಸಿಗಲಿಲ್ಲ. ಆರ್ಮಿ ಆಫೀಸರ್ ಜತೆ ಮದುವೆಯಾಯಿತು, ಮಗುವೂ ಆಯಿತು.

 

ಗಂಡ ಆಫೀಸ್‌ಗೆ ಹೋದರೆ ಮಗು ಸ್ಕೂಲ್‌ಗೆ ಹೋಗುತ್ತಿತ್ತು. ಒಂಟಿತನ ಕಾಡುತ್ತಿತ್ತು. ಕೊನೆಗೆ ಆ ಏಕಾಂಗಿತನವನ್ನೇ ನನ್ನ ಆಸಕ್ತಿಯತ್ತ ಹರಿಯಬಿಟ್ಟೆ. ಅದೇ ಸ್ಫೂರ್ತಿಯಾಯಿತು. ಹೆಣ್ಣಿನ ಮನದಲ್ಲಿ ಮೂಡುವ ಭಾವನೆಗಳನ್ನು ತೈಲವರ್ಣದಲ್ಲಿ ಸೆರೆಹಿಡಿದೆ.

 

ನಾನೂ  ಹೆಣ್ಣಾಗಿರುವುದಕ್ಕೆ ಸಹಜವಾಗಿ ಅವಳ ಮನದಲ್ಲಿ ಅಡಗಿರುವ ಭಾವನೆಗಳನ್ನು ಕ್ಯಾನ್ವಾಸ್ ಮೇಲೆ ಚಿತ್ರಿಸಿದೆ. ಇಬ್ಬರು ಹೆಣ್ಣುಮಕ್ಕಳು ಸಿಕ್ಕಾಗ ಅವರ ಮಾತಿನ ಲಹರಿ ಹರಿಯುವ ಶೈಲಿ ಇವರ ಕಲಾಕೃತಿಯಲ್ಲಿ ಸಹಜವಾಗಿ ಮೂಡಿದೆ.ಗುಜರಾತ್‌ನ ಶಂತನು ನಂದನ್ ದಿಂಡಾ ಹಾಗೂ ಸುನಿತಾ ದಿಂಡಾ ಕಲಾಕಾರ ದಂಪತಿಗೆ ಸಮಕಾಲೀನ ಕಲಾಕೃತಿಗಳಲ್ಲಿ ಭಾರತೀಯ ಶೈಲಿ ಅಚ್ಚುಮೆಚ್ಚು. ದೇಶಾದ್ಯಂತ ಸಂಚರಿಸಿರುವ ಇವರಿಬ್ಬರ ಚಿತ್ರಗಳಲ್ಲಿ ನೈಜ ಹಳ್ಳಿಗಾಡಿನ ಸೊಗಡು ಮೈವೆತ್ತಿವೆ. ಬಣ್ಣಗಳನ್ನು ವಿಭಿನ್ನವಾಗಿ ಬಳಸುವ ಕಲೆ ಈ ದಂಪತಿಗೆ ಕರಗತ. ಅವುಗಳಲ್ಲೇ ಕತೆ ಹೇಳುತ್ತಾ ಮನೋಭಾವ ವ್ಯಕ್ತಪಡಿಸುತ್ತಾರೆ. ರಿನೈಸೆನ್ಸ್ ಗ್ಯಾಲರಿ 104, ವೆಸ್ಟ್ ಮಿನಿಸ್ಟರ್, 13, ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಇದೇ 19ರವರೆಗೆ ಪ್ರದರ್ಶನ ನಡೆಯಲಿದೆ. ದೂ: 2220 2232.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry