ಮಂಗಳವಾರ, ಮಾರ್ಚ್ 2, 2021
29 °C

ಭಿನ್ನ ದಾರಿಯ ಪಯಣಿಗರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಿನ್ನ ದಾರಿಯ ಪಯಣಿಗರು...

ಗೆರ್ರಿ ಮಾರ್ಟಿನ್

ಪರಿಸರ ಮತ್ತು ಪ್ರಾಣಿಗಳ ಮೇಲೆ ಪ್ರೀತಿ, ಕಾಳಜಿಯನ್ನು ಹೊಂದಿರುವ ಗೆರ್ರಿ ಮಾರ್ಟಿನ್, ಶಾಲಾ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ನಿಸರ್ಗ ಹಾಗೂ ಪ್ರಾಣಿಗಳನ್ನು ನೋಡುವ, ಪ್ರೀತಿಸುವ ಬಗೆ ಹೇಗೆ ಎಂಬುದನ್ನು ತಿಳಿಸಿಕೊಡುವ ಕಾಯಕ ಮಾಡುತ್ತಿದ್ದಾರೆ.ಗೆರ್ರಿ ಮಾರ್ಟಿನ್ ಮೂಲತಃ ಬೆಂಗಳೂರಿನವರು. ಕಾಡುಮೇಡುಗಳಲ್ಲಿನ ಅಲೆದಾಟ ಹಾಗೂ ಉರಗಗಳನ್ನು ಹಿಡಿಯುವ ಹವ್ಯಾಸ ಅವರನ್ನು ಹೆಚ್ಚು ಓದುವಂತೆ ಮಾಡಲಿಲ್ಲ! ಮುಂದೆ ಪ್ರಾಣಿಗಳನ್ನು ಹಿಡಿಯುವುದೇ ಅವರ ಅಭ್ಯಾಸವಾಯಿತು.  ಮಾರ್ಟಿನ್ ತಮ್ಮ ಅಜ್ಜನ ಪ್ರಭಾವದಿಂದಾಗಿ ನಿಸರ್ಗ ಮತ್ತು ಪ್ರಾಣಿಗಳ ಮೇಲೆ ಅತೀವ ಪ್ರೀತಿ ಬೆಳೆಸಿಕೊಂಡವರು. ‘ಕಾಳಿಂಗ ಸರ್ಪವನ್ನು ಹಿಡಿಯಲು ಕಲಿಸಿದ್ದು  ನಮ್ಮ ತಾತ’ ಎನ್ನುತ್ತಾರೆ ಮಾರ್ಟಿನ್.ಕಾಳಿಂಗ ಸರ್ಪ ಮತ್ತು ಮೊಸಳೆಗಳನ್ನು ಹಿಡಿಯುವುದರಲ್ಲಿ ಸಿದ್ಧ ಹಸ್ತರಾಗಿದ್ದ ಮಾರ್ಟಿನ್ ಅವರ ಪ್ರತಿಭೆಯನ್ನು ಗುರುತಿಸಿದ್ದು ನ್ಯಾಷನಲ್ ಜಿಯೋಗ್ರಫಿಕ್ ಚಾನೆಲ್‌ನವರು! ಕಾಳಿಂಗ ಸರ್ಪ ಮತ್ತು ಮೊಸಳೆಗಳ ಕುರಿತಂತೆ ಸಾಕ್ಷ್ಯಚಿತ್ರ ಹಾಗೂ ಟೆಲಿಚಿತ್ರಗಳನ್ನು ನಿರ್ಮಿಸಲು ಮಾರ್ಟಿನ್ ಅವರನ್ನು ಬಳಸಿಕೊಂಡಿದ್ದು ವಿಶೇಷ. ಹಾಗಾಗಿ ಅವರು ಹಲವು ದೇಶಗಳನ್ನು ಸುತ್ತುವುದರೊಂದಿಗೆ ಹೆಸರಾಂತ ವಿಜ್ಞಾನಿಗಳ ಜತೆಯಲ್ಲಿ ಕೆಲಸ ಮಾಡಿದ್ದಾರೆ.ಆ ಚಾನೆಲ್‌ನಿಂದ ಮರಳಿದ ಬಳಿಕ ಮಾರ್ಟಿನ್ ಪರಿಸರ ಮತ್ತು ಪ್ರಾಣಿಗಳ ಕುರಿತಂತೆ ಸಂಸ್ಥೆಯನ್ನು ಸ್ಥಾಪಿಸುವ ಆಲೋಚನೆ ಮಾಡಿದರು. ಮುಂದೆ ‘ದಿ ಗೆರ್ರಿ ಮಾರ್ಟಿನ್ ಪ್ರಾಜೆಕ್ಟ್’ ಎಂಬ ಸಂಸ್ಥೆ ಕಟ್ಟಿದರು. ಅದರ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪರಿಸರ ಹಾಗೂ ಪ್ರಾಣಿಗಳನ್ನು ನೋಡುವ, ಅವುಗಳ ಬಗ್ಗೆ ಅರಿಯುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದಾರೆ.ತಮ್ಮ ಫಾರ್ಮ್‌ನಲ್ಲಿ ಸಾಕಿರುವ ಪ್ರಾಣಿ ಪಕ್ಷಿಗಳ ಕುರಿತಂತೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ದಿ ಗೆರ್ರಿ ಮಾರ್ಟಿನ್ ಪ್ರಾಜೆಕ್ಟ್ ಸಂಸ್ಥೆಯನ್ನು ದೊಡ್ಡದಾಗಿ ಬೆಳೆಸುವುದು ಅವರ ಗುರಿ. ಪ್ರಾಣಿಗಳನ್ನು ಕಂಡು ಭಯಪಡುವ ಮಕ್ಕಳು ಮತ್ತು ಸಾರ್ವಜನಿಕರಿಗೆ ಧೈರ್ಯ ತುಂಬುವುದರ ಜತೆಗೆ ಅವುಗಳ ಮೇಲೆ ಪ್ರೀತಿ ಮೂಡುವಂತೆ ಮಾಡುತ್ತಿದ್ದಾರೆ. http://gerrymartin.in***

ಕೌಶಿಕ್ ಮತ್ತು ಪೀಯುಶ್


ವೃತ್ತಿಪರ ಕೋರ್ಸ್ ಪೂರೈಸುವ ಬಹುತೇಕ ಯುವಕ ಯುವತಿಯರು ಬಹುರಾಷ್ಟ್ರೀಯ ಅಥವಾ ದೊಡ್ಡ  ದೊಡ್ಡ ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕು ಎಂಬ ಕನಸು ಕಾಣುತ್ತಿರುತ್ತಾರೆ! ಆದರೆ ಇಬ್ಬರು ಯುವಕರು ಎಂಜಿನಿಯರಿಂಗ್ ಮುಗಿಸಿದ ಬಳಿಕ ಹಳ್ಳಿಗಳ ಉದ್ಧಾರಕ್ಕಾಗಿ ಅತ್ತ ದೌಡಾಯಿಸಿದ ಕಥೆ ಇದು.

ಆಂಧ್ರಪ್ರದೇಶದ ಕೌಶಿಕ್ ಮತ್ತು ಮಧ್ಯಪ್ರದೇಶದ ಪೀಯುಶ್ ಸೊಹಾನಿ ಅವರೇ ಹಳ್ಳಿಗಳತ್ತ ಹೆಜ್ಜೆ ಹಾಕಿದ ಯುವಕರು. ಕೌಶಿಕ್ ಬ್ಯಾಂಕ್ ಉದ್ಯೋಗಿಯ ಮಗನಾದರೂ, ಹಳ್ಳಿಗಳನ್ನು ನೋಡದೇ ಇದ್ದರೂ ಕೃಷಿರಂಗದ ಮೇಲೆ ಅತೀವ ಆಸಕ್ತಿ ಹೊಂದಿದ್ದವರು. ಕೃಷಿ ಎಂಜಿನಿಯರಿಂಗ್ ಪದವಿ ಬಳಿಕ ಉನ್ನತ ವ್ಯಾಸಂಗಕ್ಕಾಗಿ ದೆಹಲಿಯ ಐಐಟಿ ಸೇರಿಕೊಂಡರು. ಇಲ್ಲಿ ಕೌಶಿಕ್‌ಗೆ ಪೀಯುಶ್ ಸೊಹಾನಿ ಜತೆಯಾದರು.ಇಬ್ಬರಿಗೂ ಹಳ್ಳಿಗಳ ಮೇಲೆ ಆಸಕ್ತಿ ಇದ್ದುದರಿಂದ ಗ್ರಾಮೀಣ ಭಾಗದಲ್ಲಿ ಲಭ್ಯವಿರುವ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿಕರಿಗೆ ನೆರವಾಗುವ ಆಲೋಚನೆ ಮಾಡಿದರು. ಈ ಹಂತದಲ್ಲಿ ಅವರಿಗೆ ಹೊಳೆದಿದ್ದು ಬಯೋ ಗ್ಯಾಸ್ ಯೋಜನೆ.ಶಿಕ್ಷಣ ಮುಗಿದ ಕೂಡಲೇ ಹಳ್ಳಿಗಳತ್ತ ಮುಖ ಮಾಡಿದ ಈ ಯುವಕರು ಮೂರು ಲಕ್ಷ ರೂಪಾಯಿ ಬಂಡವಾಳದೊಂದಿಗೆ ಬಯೋ ಗ್ಯಾಸ್ ಘಟಕ ನಿರ್ಮಿಸಿಕೊಡುವ ‘ಸಸ್ಟೇನೆಬಲ್ ಅರ್ಥ್ ಎನರ್ಜಿ ಸಲ್ಯೂಶನ್’ ಎಂಬ ಕಂಪೆನಿಯನ್ನು ಆರಂಭಿಸಿದರು. ರೈತರ ಮೇಲಿನ ಕಾಳಜಿ, ಇಚ್ಛಾಶಕ್ತಿ ಮತ್ತು ಕಠಿಣ ಪರಿಶ್ರಮ ಇವರ ಯೋಜನೆಗಳನ್ನು ಯಶಸ್ವಿಗೊಳಿಸಿತು. ಇಂದು ಕರ್ನಾಟಕ, ಆಂಧ್ರ, ತೆಲಂಗಾಣ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ‘ಸಸ್ಟೇನೆಬಲ್ ಎನರ್ಜಿ ಸಲ್ಯೂಶನ್’ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ.ಎರಡು ಹಸು ಅಥವಾ ದನ ಕರುಗಳಿರುವ ಒಂದು ಮನೆಗೆ ಕೇವಲ 12 ಸಾವಿರ ರೂಪಾಯಿ ವೆಚ್ಚದಲ್ಲಿ ಬಯೋ ಗ್ಯಾಸ್ ಘಟಕ ನಿರ್ಮಾಣ ಮಾಡಿಕೊಡಲಾಗುತ್ತದೆ. ಮುಂದಿನ ವರ್ಷದಲ್ಲಿ ಐದು ಸಾವಿರ ಮನೆಗಳಿಗೆ ಈ ಸೌಲಭ್ಯ ಕಲ್ಪಿಸುವ ಯೋಜನೆ ಹೊಂದಿರುವುದಾಗಿ ಕೌಶಿಕ್ ತಿಳಿಸುತ್ತಾರೆ. ‘ಇದನ್ನು ಬಳಸುವುದರಿಂದ ಬರಿದಾಗುವ ಸಂಪನ್ಮೂಲಗಳನ್ನು ಉಳಿತಾಯ ಮಾಡಿದಂತಾಗುತ್ತದೆ. ಜತೆಗೆ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯೂ ತಪ್ಪುತ್ತದೆ’ ಎನ್ನುತ್ತಾರೆ ಪೀಯುಶ್. http://www.sustainearth.in***

ಸುಮೀತ್ ಮತ್ತು ಪ್ರಿಸಿಲಿಯಾ


ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸೈಕಲ್‌ನಲ್ಲಿ ದೇಶ ಸುತ್ತಿ ಹಣ ಸಂಗ್ರಹಿಸುತ್ತಿರುವ ಯುವಕ, ಯುವತಿಯ ಕಥೆ ಇದು. ನಾವು ಒಂದು ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿದರೆ ಆ ಮಗು ಭವಿಷ್ಯದಲ್ಲಿ ಇಡೀ ಕುಟುಂಬಕ್ಕೆ ಶಿಕ್ಷಣ ಕೊಡಿಸುತ್ತದೆ ಎನ್ನುತ್ತಾರೆ ಯುವತಿ ಪ್ರಿಸಿಲಿಯಾ. ‘ನಾನು ಅದೃಷ್ಟವಂತಳಾಗಿ ಹುಟ್ಟಿದ್ದೇನೆ. ಏಕೆಂದರೆ ನನ್ನ ಹೆತ್ತವರು ನನಗೆ ಸ್ನಾತಕೋತ್ತರ ಪದವಿ ಕೊಡಿಸಿದ್ದಾರೆ.ಆದರೆ ಶಾಲೆಯ ಬಾಗಿಲನ್ನೂ ಕಾಣದ ಎಷ್ಟೋ ಹೆಣ್ಣು ಮಕ್ಕಳು ಸುಭದ್ರ ಬದುಕನ್ನು ಕಟ್ಟಿಕೊಳ್ಳಲಾಗದೆ ಶೋಷಣೆಯಲ್ಲಿ ನಲುಗುತ್ತಿದ್ದಾರೆ. ಹಾಗಾಗಿ ಶಿಕ್ಷಣದಿಂದ ವಂಚಿತರಾಗಿರುವ ಹೆಣ್ಣು ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಕೊಡುವ ಸಲುವಾಗಿಯೇ ಈ ಸೈಕಲ್ ಯಾತ್ರೆ ಆರಂಭಿಸಿದ್ದೇವೆ’ ಎನ್ನುತ್ತಾರೆ ಪ್ರಿಸಿಲಿಯಾ.ಮುಂಬೈ ಮೂಲದ ಪ್ರಿಸಿಲಿಯಾ ಮದನ್ ಮತ್ತು ಸುಮೀತ್ ಪರಿಂಗೆ ಕಳೆದ ಜುಲೈ 14ರಿಂದ ಭಾರತ ಯಾತ್ರೆ ಆರಂಭಿಸಿದ್ದಾರೆ. ಕನ್ಯಾಕುಮಾರಿಯಿಂದ ಲಡಾಖ್‌ನ ಖರದುಂಗ್‌ ಲಾ ಪ್ರದೇಶದವರೆಗೂ ಸೈಕಲ್‌ನಲ್ಲಿ ಪಯಣಿಸುವ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಪಯಣಿಸುತ್ತಿರುವ ಈ ಯುವ ಜೋಡಿ ಇಲ್ಲಿಯವರೆಗೂ (ಆಗಸ್ಟ್ 1) 12 ಲಕ್ಷ ರೂಪಾಯಿ ಸಂಗ್ರಹಿಸಿದೆ. ಸುಮಾರು 50 ಲಕ್ಷ ರೂಪಾಯಿ ಸಂಗ್ರಹಿಸಿ ಆ ಹಣವನ್ನು 1500 ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುವ ಗುರಿಯನ್ನು ಹೊಂದಿದ್ದಾರೆ.ಸುಮಾರು 70 ದಿನಗಳಲ್ಲಿ ಭಾರತ ಯಾತ್ರೆಯನ್ನು ಪೂರ್ಣಗೊಳಿಸುವ ಯೋಚನೆ ಈ ಜೋಡಿಯದ್ದು. ರಸ್ತೆ ಬದಿಯ ಆಹಾರ ಸೇವಿಸುತ್ತ ದಾರಿ ಮಧ್ಯೆ  ಜನರನ್ನು ಭೇಟಿ ಮಾಡಿ ಅವರಿಂದ ದೇಣಿಗೆ ಪಡೆಯುತ್ತಾರೆ.  ಜತೆಗೆ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಇವರು ವರ್ಷದಲ್ಲಿ ಮೂರು ತಿಂಗಳು ಕೆಲಸಕ್ಕೆ ರಜೆ ಹಾಕಿ ಸೈಕ್ಲಿಂಗ್ ಮಾಡುವ ಮೂಲಕ ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಈ ಕೆಲಸ ಯುವಜನಕ್ಕೆ ಪ್ರೇರಣೆ. www.fueladream.com

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.