`ಭೀಮಾಶಂಕರ ಕಾರ್ಖಾನೆ: ಸಿಎಂ ನೇತೃತ್ವದಲ್ಲಿ ಸಭೆ'

ಶನಿವಾರ, ಜೂಲೈ 20, 2019
22 °C

`ಭೀಮಾಶಂಕರ ಕಾರ್ಖಾನೆ: ಸಿಎಂ ನೇತೃತ್ವದಲ್ಲಿ ಸಭೆ'

Published:
Updated:

ವಿಜಾಪುರ: `ಅತ್ಯಂತ ಹಿಂದುಳಿದಿರುವ ಇಂಡಿ ಕ್ಷೇತ್ರದಲ್ಲಿ ಸಮಸ್ಯೆಗಳ ಮಹಾಪೂರವೇ ಇದೆ. ಭೀಮಾ ಶಂಕರ ಸಕ್ಕರೆ ಕಾರ್ಖಾನೆ ಸಹಕಾರಿ ರಂಗದಲ್ಲಿ ಆರಂಭಿಸುವುದೂ ಸೇರಿದಂತೆ ಚುನಾವಣೆ ಸಂದರ್ಭದಲ್ಲಿ ನಾನು ನೀಡಿರುವ ಭರವಸೆಗಳ ಈಡೇರಿಕೆಗೆ ಬದ್ಧತೆಯಿಂದ ಕೆಲಸ ಮಾಡುತ್ತೇನೆ. ಮಾತು ತಪ್ಪಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ' ಎಂದು ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.`ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ವಿಷಯದಲ್ಲಿ ಶೀಘ್ರವೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಹಕಾರಿ ಮತ್ತು ಸಕ್ಕರೆ ಸಚಿವರನ್ನೊಳಗೊಂಡ ಸಭೆ ನಡೆಯಲಿದೆ' ಎಂದು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಈ ಸಕ್ಕರೆ ಕಾರ್ಖಾನೆ ಸಹಕಾರಿ ರಂಗದಲ್ಲಿಯೇ ಆರಂಭವಾಗಬೇಕು ಎಂಬುದು ರೈತರ ಬಯಕೆ. 16,000 ಜನ ಶೇರುದಾರರು ಇದ್ದಾರೆ. ಕಾನೂನು ತೊಡಕು ನಿವಾರಣೆಯಾಗಿ ಈಗ ಸರ್ಕಾರ ಸಮಾಪನಾಧಿಕಾರಿ (ಲಿಕ್ವಿಡೆಟರ್)ಯನ್ನು ನೇಮಿಸಿದೆ. 2500 ಟನ್ ಕಬ್ಬು ಅರೆಯುವ ಸಾಮರ್ಥ್ಯದ ಕಾರ್ಖಾನೆ ಮತ್ತು ಸಹ ವಿದ್ಯುತ್ ಘಟಕ ಆರಂಭಿಸಲು ಅಂದಾಜು ರೂ.150 ಕೋಟಿ ಹಣದ ಅವಶ್ಯಕತೆ ಇದೆ. ಸರ್ಕಾರ ಶೇರು ಹಣ ನೀಡಿದರೆ ಉಳಿದ ಹಣವನ್ನು ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆಯುವ ಚಿಂತನೆ ಇದೆ' ಎಂದರು.ನೀರಾವರಿ

ಇಂಡಿ ತಾಲ್ಲೂಕಿನಲ್ಲಿ ಮುಳವಾಡ ಏತ ನೀರಾವರಿಯಿಂದ 8500 ಹೆಕ್ಟೇರ್, ಚಿಮ್ಮಲಗಿಯಿಂದ 1968 ಹೆಕ್ಟೇರ್, ಗುತ್ತಿ ಬಸವಣ್ಣ ಯೋಜನೆಯಿಂದ 19,726 ಹೆಕ್ಟೇರ್ ನೀರಾವರಿಯಾಗಲಿದೆ. ಇದರಲ್ಲಿ ಯಾವುದಾದರೂ ಗ್ರಾಮ ನೀರಾವರಿಯಿಂದ ವಂಚಿತವಾಗಿದ್ದರೆ ಮರು ಸಮೀಕ್ಷೆ ನಡೆಸಿ ಎಲ್ಲ 120 ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಕೆರೆಗಳಿಗೆ ನೀರು ತುಂಬುವ ಯೋಜನೆಯ ಅಣಚಿ ಪ್ಯಾಕೇಜ್‌ಗೆ ಸಿಎಂ ನೇತೃತ್ವದ ಸಮಿತಿ ಶೀಘ್ರವೇ ಅನುಮತಿ ನೀಡಲಿದ್ದು, ಕಾಮಗಾರಿ ಆರಂಭಿಸಲಾಗುವುದು. ಭುಂಯಾರ ಮತ್ತು ಸಂಖ ಪ್ಯಾಕೇಜ್‌ಗಳ ಅನುಷ್ಠಾನಕ್ಕೂ ಪ್ರಯತ್ನಿಸಲಾಗುವುದು ಎಂದು ಹೇಳಿದರು.ಕುಡಿಯುವ ನೀರು

ಸ್ಪಷ್ಟ ನೀತಿ ಇಲ್ಲದ ಕಾರಣ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. 1986ರಿಂದ 2013ರ ವರೆಗೆ 27 ವರ್ಷಗಳಲ್ಲಿ ಲೆಕ್ಕಸಿಗದಷ್ಟು ಖರ್ಚು ಮಾಡಿದ್ದೇವೆ. ಆದರೂ, ಶಾಶ್ವತ ಪರಿಹಾರ ದೊರೆತಿಲ್ಲ. ಅತ್ಯಂತ ಕ್ಲಿಷ್ಟಕರವಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕಿದೆ ಎಂದರು.ಸ್ವಾತಂತ್ರ್ಯ ಸಿಕ್ಕಿದೆ

ಇಂಡಿ ತಾಲ್ಲೂಕಿನ ಜನರಿಗೆ ಇನ್ನೂವರೆಗೆ ಸ್ವಾತಂತ್ರ್ಯ ದೊರೆತಿರಲಿಲ್ಲ. ಈಗ ದೊರೆತಿದ್ದು, ಅದೇ ಕಾರಣಕ್ಕೆ ಸ್ವಾತಂತ್ರ್ಯೋತ್ಸವದ ದಿನವಾದ ಆಗಸ್ಟ್ 15ರಂದು ಇಂಡಿಯಲ್ಲಿ ಶಾಸಕರ ಜನಸಂಪರ್ಕ ಕಚೇರಿ ಆರಂಭಿಸುತ್ತೇನೆ ಎಂದು ಹೇಳಿದರು. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಒಂದೇ ದಿನ ಕಡಿಮೆ ಮಾಡುತ್ತೇನೆ ಎಂದು ಹೇಳಲು ಆಗುವುದಿಲ್ಲ. ಭ್ರಷ್ಟ ರಹಿತ-ಸರಳ ಮತ್ತು ಸ್ನೇಹಪರ ಆಡಳಿತಕ್ಕೆ ತಾಲ್ಲೂಕಾ ಆಡಳಿತಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದರು.ಹಿರೇರೂಗಿ ಗ್ರಾಮದಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದೇನೆ. ತಪ್ಪಿತಸ್ಥರನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಮರಳು ಮಾಫಿಯಾ

ಭೀಮಾ ತೀರದಲ್ಲಿ ಈಗ ನಡೆಯುತ್ತಿರುವ ಅಪರಾಧಿಕ ಚಟುವಟಿಕೆಗಳಿಗೆ ಮರಳು ಮಾಫಿಯಾ ಕಾರಣ. ಈ ಮರಳು ಮಾಫಿಯಾ ನಿಯಂತ್ರಿಸಿದರೆ ಅಪರಾಧ ಕೃತ್ಯಗಳು ಕಡಿಮೆಯಾಗಲಿವೆ ಎಂದು ಯಶವಂತರಾಯಗೌಡ ಹೇಳಿದರು.`ಇಂಡಿ ಕ್ಷೇತ್ರದಲ್ಲಿ ಮರಳು ಮಾಫಿಯಾ ಇತ್ತು. ನಾನು ಶಾಸಕನಾಗಿ ಆಯ್ಕೆಯಾದ ಮೊದಲ ಸಭೆಯಲ್ಲಿಯೇ ಇದನ್ನು ಸಂಪೂರ್ಣವಾಗಿ ತಡೆಯುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೆ. ಈಗ ಎಲ್ಲಿಯೂ ಅನಧಿಕೃತ ಗಣಿಗಾರಿಕೆ ನಡೆಯುತ್ತಿಲ್ಲ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry