ಭುಗಿಲೆದ್ದ ಆಕ್ರೋಶ

7
ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ

ಭುಗಿಲೆದ್ದ ಆಕ್ರೋಶ

Published:
Updated:

ನವದೆಹಲಿ (ಪಿಟಿಐ):  ರಾಜಧಾನಿಯಲ್ಲಿ ಭಾನುವಾರ ರಾತ್ರಿ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ  ನಡೆದ ಸಾಮೂಹಿಕ ಅತ್ಯಾಚಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಬುಧವಾರ ಸಂಜೆ ನವದೆಹಲಿಯ ಇಂಡಿಯಾ ಗೇಟ್ ಬಳಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಬೀದಿ ನಾಟಕ ಆಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ, ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಿದ್ದ ಇವರೆಲ್ಲ ಮೇಣದ ಬತ್ತಿ ಬೆಳಗಿಸಿ ಆರೋಪಿಗಳ ವಿರುದ್ಧ ಅತ್ಯುಗ್ರ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಒಂದು ಹಂತದಲ್ಲಿ 200 ಜನರ ಗುಂಪು ಘೋಷಣೆಗಳನ್ನು ಕೂಗುತ್ತ ರಾಷ್ಟ್ರಪತಿ ಭವನ ಇರುವ ರೈಸೀನಾ ಹಿಲ್ ಕಡೆಗೆ ಚಲಿಸಿ, ಪೊಲೀಸರ ಮುಖದಲ್ಲಿ ಬೆವರಿಳಿಸಿತು.ಆ ರಸ್ತೆಯಲ್ಲಿ ಪೊಲೀಸರು ತಡೆಬೇಲಿ ಹಾಕಿದರೂ ಸೌತ್‌ಬ್ಲಾಕ್ ತಲುಪುವಲ್ಲಿ ಈ ಗುಂಪು ಯಶಸ್ವಿಯಾಯಿತು. ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಅಥವಾ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಅವರನ್ನು ಭೇಟಿಗೆ ಅವಕಾಶ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.ಇದಕ್ಕೂ ಮುನ್ನ ಬೆಳಿಗ್ಗೆ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ನಿವಾಸದ ಮುಂದೆ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ಉದ್ರಿಕ್ತ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪರದಾಡಿದ ಪೊಲೀಸರು, ಅಂತಿಮವಾಗಿ ಜಲಫಿರಂಗಿ ಪ್ರಯೋಗಿಸಿ ವಿದ್ಯಾರ್ಥಿಗಳನ್ನು ಚದುರಿಸಲು ಯತ್ನಿಸಿದರು.ದೆಹಲಿ ಪೊಲೀಸ್ ಪ್ರಧಾನ ಕಚೇರಿ ಎದುರೂ ವಿದ್ಯಾರ್ಥಿನಿಯರ ಗುಂಪೊಂದು ಪ್ರತಿಭಟನೆ ನಡೆಸಿ, `ರಾತ್ರಿ ವೇಳೆ ರಸ್ತೆಗಳಲ್ಲಿ ಪೊಲೀಸರ ಗಸ್ತು ಹೆಚ್ಚಿಸಬೇಕು ಮತ್ತು ಅತ್ಯಾಚಾರ ಪ್ರಕರಣಗಳನ್ನು ತ್ವರಿತಗತಿ ನ್ಯಾಯಾಲಯಗಳಲ್ಲಿ ಆರು ತಿಂಗಳೊಳಗೆ ಇತ್ಯರ್ಥಪಡಿಸಬೇಕು' ಎಂದು ಆಗ್ರಹಿಸಿತು.ಮಾರ್ಗದರ್ಶಿ ಸೂತ್ರ: ಸಾಮೂಹಿಕ ಅತ್ಯಾಚಾರ ಘಟನೆಗೆ ಸಮಾಜದ ಎಲ್ಲ ವರ್ಗಗಳಿಂದ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ, ಭವಿಷ್ಯದಲ್ಲಿ ಇಂತಹ ಅಪರಾಧಗಳು ಘಟಿಸದಂತೆ ತಡೆಯಲು ಕೆಲ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ.

ರಾಜ್ಯಸಭೆಯಲ್ಲಿ ಬುಧವಾರ ಈ ಪ್ರಕರಣದ ಕುರಿತು ಚರ್ಚೆ ನಡೆಯುತ್ತಿದ್ದಾಗ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ, ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು.ಭುಗಿಲೆದ್ದ ಆಕ್ರೋಶ

ದೆಹಲಿಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳು ಕಪ್ಪುಗಾಜು ಹಾಗೂ ಪರದೆಗಳನ್ನು ತೆಗೆದುಹಾಕಬೇಕು. ತೆಗೆದುಹಾಕದಿದ್ದಲ್ಲಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ರಾತ್ರಿ ವೇಳೆ ಸಂಚರಿಸುವಾಗ ಎಲ್ಲ ಬಸ್‌ಗಳಲ್ಲಿ ಲೈಟ್ ಹಾಕಿರಬೇಕು ಎಂದು ಶಿಂಧೆ ಸೂಚಿಸಿದರು.

ದೆಹಲಿಯಲ್ಲಿ ವಾಹನಗಳ ಕಪ್ಪುಗಾಜು ಹಾಗೂ ಪರದೆಗಳನ್ನು ತೆಗೆಸಿ ಹಾಕಲು ಅಭಿಯಾನ ಆರಂಭಿಸಲು ಸಹ ಸರ್ಕಾರ ನಿರ್ಧರಿಸಿದೆ. 

ಸಾಮೂಹಿಕ ಅತ್ಯಾಚಾರದ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗೃಹ ಸಚಿವ ಶಿಂಧೆ ಹಾಗೂ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಕಟುವಾದ ಶಬ್ದಗಳಲ್ಲಿ ಪತ್ರ ಬರೆದ ಮಾರನೇ ದಿನ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪ್ರಕರಣದ ತನಿಖೆಗಾಗಿ ಡಿಸಿಪಿ ಛಾಯಾ ಶರ್ಮಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.ಹೈಕೋರ್ಟ್ ಅಸಮಾಧಾನ: ಈ ಮಧ್ಯೆ ಚಲಿಸುವ ಬಸ್‌ನಲ್ಲಿ ನಡೆದ ಈ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.ಇದು ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆಗೆ ಸಂಬಂಧಿಸಿದ ವಿಚಾರವಾಗಿದ್ದು, ಎರಡು ದಿನಗಳ ಒಳಗೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ಮುರುಗೇಶನ್ ಅವರ ನೇತೃತ್ವದ ಪೀಠ ಪೊಲೀಸರಿಗೆ ಸೂಚಿಸಿದೆ. ಅತ್ಯಾಚಾರಕ್ಕೆ ಒಳಗಾದ 23 ವರ್ಷದ ಯುವತಿ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದು, ಬುಧವಾರ ಆಕೆಗೆ ಐದನೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆಕೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸಹ ದೆಹಲಿ ಹೈಕೋರ್ಟ್ ಸೂಚಿಸಿದ್ದು, ಸ್ಥಳಾಂತರಿಸಲು ಸಾಧ್ಯವಾಗದಿದ್ದಲ್ಲಿ ತಜ್ಞ ವೈದ್ಯರು ಅಲ್ಲಿಗೆ ಬಂದು ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದೆ.ಐದು ತ್ವರಿತಗತಿ ನ್ಯಾಯಾಲಯ: ದೆಹಲಿ ಸರ್ಕಾರದ ಮನವಿಯಂತೆ ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ರಾಜಧಾನಿಯಲ್ಲಿ ಐದು ತ್ವರಿತಗತಿ ನ್ಯಾಯಾಲಯ ಸ್ಥಾಪಿಸಲು ಹೈಕೋರ್ಟ್ ನಿರ್ಧರಿಸಿದೆ.ಪ್ರಧಾನಿ ಮನಮೋಹನ್ ಸಿಂಗ್ ಇದೊಂದು ಹೇಯ ಕೃತ್ಯ ಎಂದು ಆಘಾತ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರಿಗೆ ಸೂಚಿಸಿದ್ದಾರೆ.ಸಾಕ್ಷ್ಯ ನಾಶ ಆರೋಪ

ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಆರು ಜನರ ವಿರುದ್ಧ ಪೊಲೀಸರು ಮತ್ತಷ್ಟು ಕಠಿಣವಾದ ಕೊಲೆ ಯತ್ನ ಮತ್ತು ಸಾಕ್ಷ್ಯನಾಶದ ಆರೋಪ ಹೊರಿಸಿದ್ದಾರೆ.ಆರೋಪಿಗಳ ವಿರುದ್ಧ ಐಪಿಸಿ 307 (ಕೊಲೆ ಯತ್ನ) ಹಾಗೂ 201 (ಸಾಕ್ಷ್ಯನಾಶದ) ಕಲಂ ಅನ್ವಯ ಆರೋಪ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.ಇದಕ್ಕೂ ಮುನ್ನ ಐಪಿಸಿ 365 (ಅಪಹರಣ), 376 (2) (ಜಿ) (ಸಾಮೂಹಿಕ ಅತ್ಯಾಚಾರ), 377 (ಅಸಹಜ ಅಪರಾಧ), 394 (ದರೋಡೆ ಮಾಡುವಾಗ ಗಾಯ ಮಾಡುವುದು) ಹಾಗೂ 34 (ಸಾಮಾನ್ಯ ಉದ್ದೇಶ)ದ ಆರೋಪ ಹೊರಿಸಲಾಗಿತ್ತು.ಬಿಹಾರದಲ್ಲಿ ಮತ್ತೊಬ್ಬ ಆರೋಪಿ ಬಂಧನ

ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಐದನೆಯ ಆರೋಪಿ ಅಕ್ಷಯ್ ಠಾಕೂರ್‌ನನ್ನು ಬಿಹಾರದ ಔರಂಗಾಬಾದ್‌ನಲ್ಲಿ ಬಂಧಿಸಲಾಗಿದೆ.

ಈಗಾಗಲೇ ಬಂಧಿಸಲಾಗಿರುವ ನಾಲ್ವರಲ್ಲಿ ಮೂವರನ್ನು ಬುಧವಾರ ದೆಹಲಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. 

ಜಿಮ್ ಸಹಾಯಕನಾಗಿದ್ದ ವಿನಯ್ ಶರ್ಮಾ ಹಾಗೂ ಹಣ್ಣಿನ ವ್ಯಾಪಾರಿ ಪವನ್ ಗುಪ್ತಾನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಹಾಗೂ ಚಾಲಕ ರಾಮ್ ಸಿಂಗ್‌ನ ಸಹೋದರ ಮುಖೇಶ್ ಎಂಬಾತನನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಆತನನ್ನು ಗುರುತು ಪತ್ತೆ ಪೆರೇಡ್‌ಗೆ ಒಳಪಡಿಸಲಾಗುತ್ತದೆ.ಆದರೆ, ವಿನಯ್ ಶರ್ಮಾ ಮತ್ತು ಪವನ್ ಗುಪ್ತಾ ಗುರುತು ಪತ್ತೆ ಪೆರೇಡ್‌ಗೆ ಒಳಪಡಲು ನಿರಾಕರಿಸಿದರು. ಜಿಮ್ ಸಹಾಯಕ ವಿನಯ್ ಶರ್ಮಾ, `ನಾನು ಆ ಹುಡುಗನನ್ನು ಹೊಡೆದಿದ್ದೆ. ಹುಡುಗಿಗೆ ಏನೂ ಮಾಡಿಲ್ಲ, ನನ್ನನ್ನು ನೇಣಿಗೆ ಹಾಕಿ' (ಮುಝೆ ಫಾಸಿ ದೇ ದೊ) ಎಂದು ನ್ಯಾಯಾಧೀಶರ ಎದುರು ಕೂಗು ಹಾಕಿದ. `ನಾನು ಅಪರಾಧದದಲ್ಲಿ ಭಾಗಿಯಾಗಿಲ್ಲ' ಎಂದು ಪವನ್ ಗುಪ್ತಾ ಸಹ ಗುರುತು ಪತ್ತೆ ಪೆರೇಡ್‌ಗೆ ಒಳಪಡಲು ನಿರಾಕರಿಸಿದ.ಯುವತಿಗೆ ಶಸ್ತ್ರಚಿಕಿತ್ಸೆ

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಯುವತಿಗೆ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಬುಧವಾರ ಐದನೇ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಆಕೆಯ ದೇಹಸ್ಥಿತಿ ಗಂಭೀರವಾಗಿದ್ದರೂ, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. 23 ವರ್ಷದ ಈ ಯುವತಿಗೆ ಹೊಟ್ಟೆಯ ಶಸ್ತ್ರಚಿಕಿತ್ಸೆ ನಡೆಸಿ, ಕೊಳೆಯುತ್ತಿದ್ದ ಸಣ್ಣ ಕರುಳಿನ ಭಾಗವನ್ನು ತೆಗೆದುಹಾಕಲಾಗಿದೆ. ಆಕೆ ಕರುಳಿನ ಬಹುತೇಕ ಭಾಗವನ್ನು ಕಳೆದುಕೊಂಡಿದ್ದಾಳೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಬಿ.ಡಿ. ಅಥಾಣಿ ಹೇಳಿದ್ದಾರೆ.ಆಕೆಗೆ ಜೀವರಕ್ಷಕ ಯಂತ್ರದ ನೆರವು ನೀಡಲಾಗಿದೆ. ಶಸ್ತ್ರಚಿಕಿತ್ಸಾ ಕೊಠಡಿಗೆ ಹೋಗುವ ಮುನ್ನ ಆಕೆ ತನ್ನ ತಾಯಿ ಮತ್ತು ಸಹೋದರನ ಜತೆ ಮಾತನಾಡಿದ್ದಳು ಎಂದೂ ವೈದ್ಯರು ತಿಳಿಸಿದ್ದಾರೆ.ಬೆಂಗಳೂರಲ್ಲೂ...

ಬೆಂಗಳೂರು:
ಚಿಪ್ಸ್ ಕೊಳ್ಳಲು ಬಂದಿದ್ದ 15 ವರ್ಷದ ಬಾಲಕಿಯನ್ನು ಅಂಗಡಿ ಮಾಲೀಕ, ತನ್ನ ಇಬ್ಬರು ಸ್ನೇಹಿತರ ನೆರವಿನಿಂದ ಒಳಗೆ ಎಳೆದೊಯ್ದು ಅತ್ಯಾಚಾರ ನಡೆಸಿರುವ ಘಟನೆ ನಗರದ ಕಾಡುಗೋಡಿ ಬಳಿಯ ಪಟಾಲಮ್ಮ ಲೇಔಟ್‌ನಲ್ಲಿ ಮಂಗಳವಾರ ಸಂಜೆ ನಡೆದಿದೆ. ಈ ಸಂಬಂಧ ಪೊಲೀಸರು ಅಂಗಡಿ ಮಾಲೀಕ ಅಶ್ವತ್ಥ್ (28) ಎಂಬಾತನನ್ನು ಬುಧವಾರ ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry