ಭುಗಿಲೆದ್ದ ಆಕ್ರೋಶ: ಕೆಆರ್‌ಎಸ್ ಮುತ್ತಿಗೆ ಯಶ

7

ಭುಗಿಲೆದ್ದ ಆಕ್ರೋಶ: ಕೆಆರ್‌ಎಸ್ ಮುತ್ತಿಗೆ ಯಶ

Published:
Updated:

ಮಂಡ್ಯ: ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಕೃಷ್ಣರಾಜಸಾಗರ ಅಣೆಕಟ್ಟೆಯ ನಾರ್ಥ್ ಬ್ಯಾಂಕ್ ಬಳಿ ಬೃಹತ್ ಪ್ರತಿಭಟನೆಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ಸಾಕ್ಷಿಯಾದರು.

ನೀರು ಹರಿದು ಹೋಗುತ್ತಿರುವುದರಿಂದ ಉಂಟಾಗಿರುವ ಒಡಲಾಳದಲ್ಲಿನ ರೈತರ ಆಕ್ರೋಶ ಜನಪ್ರತಿನಿಧಿಗಳ ವಿರುದ್ಧ ತಿರುಗಿದ ಘಟನೆಯೂ ನಡೆಯಿತು.ಮುತ್ತಿಗೆ ಹಾಕುವುದಕ್ಕೆ ಮುಂದಾಗದೇ ಶಾಂತಿಯಿಂದ ಇರಿ ಎಂದು ಹೇಳಲು ಸಂಸದ ಚಲುವರಾಯಸ್ವಾಮಿ, ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ ಮತ್ತಿತರರು ಇದ್ದ ವಾಹನವನ್ನೇ ನಾಲೆ ದೂಡಲು ಪ್ರತಿಭಟನಾಕಾರರು ಮುಂದಾದರು.ಈ ಘಟನೆಯ ನಂತರ ಸಂಸದ ಎನ್.ಚಲುವರಾಯಸ್ವಾಮಿ, ಶಾಸಕ ಸಿ.ಎಸ್. ಪುಟ್ಟರಾಜು, ಬಿ. ರಾಮಕೃಷ್ಣ ಅವರು ಪ್ರತಿಭಟನೆಯ ಸ್ಥಳದಲ್ಲಿ ಕಾಣಿಸಲಿಲ್ಲ.ಪೊಲೀಸರು ಬಂಧನಕ್ಕೆ ಮುಂದಾಗುತ್ತಿದ್ದಂತೆಯೇ ಪೊಲೀಸ್ ವಾಹನ ಏರಲು ಮುಂದಾದ ಶಾಸಕ ಎಂ.ಶ್ರೀನಿವಾಸ್ ಮತ್ತಿತರರು ಜನರ ಆಕ್ರೋಶಕ್ಕೆ ಈಡಾದರು.ಜಿಲ್ಲೆಯನ್ನು ಪ್ರತಿನಿಧಿಸುವ ಶಾಸಕರಾದ ಕೆ. ಸುರೇಶಗೌಡ, ಬಿ.ಕೆ.ಚಂದ್ರಶೇಖರ್ ಹಾಗೂ ಪಿ.ಎಂ. ನರೇಂದ್ರಸ್ವಾಮಿ ಕಾಣಲಿಲ್ಲ.ಶಾಸಕಿ ಕಲ್ಪನಾ ಸಿದ್ದರಾಜು, ರೈತ ನಾಯಕಿ ಸುನಂದಾ ಜಯರಾಮ್, ಶಂಭೂನಹಳ್ಳಿ ಸುರೇಶ್, ಎಲ್.ಡಿ. ರವಿ, ಕೆಪಿಸಿಸಿ ಸದಸ್ಯ ಟಿ.ಎಸ್. ಸತ್ಯಾನಂದ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ. ಮಹೇಶ್, ಯುವ ಮುಖಂಡರಾದ ಗಣಿಗ ರವಿಕುಮಾರ್, ಅಶೋಕ್ ಜಯರಾಮ್, ಚಿದಂಬರ್,  ಕರ್ನಾಟಕ ರಕ್ಷಣಾ ವೇದಿಕೆಯ ಎಂ.ಎಸ್.ಚಿದಂಬರ್, ವಿ.ಸಿ. ಉಮಾಶಂಕರ್, ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್, ಜಯರಾಮ್ ಮತ್ತಿತರರು ಪಾಲ್ಗೊಂಡಿದ್ದರು.ಸಂಯಮ ಕಾಯ್ದುಕೊಂಡ ಪೊಲೀಸರು

ಕೆಆರ್‌ಎಸ್ (ಮಂಡ್ಯ):
ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಬೆಳಿಗ್ಗೆ 11 ರಿಂದ ಸಂಜೆ 4ರ ವರೆಗೂ ಅಣೆಕಟ್ಟೆಯತ್ತ ಒಳನುಗ್ಗಲು ಪ್ರಯತ್ನಿಸುತ್ತಲೇ ಇದ್ದರು. ಆದರೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಷ್ಟೇ ತಾಳ್ಮೆಯಿಂದ ನಿರ್ವಹಿಸಿದರು.ಒಳನುಗ್ಗಲು ಯತ್ನಿಸುತ್ತಿದ್ದವರನ್ನು ತಡೆದು ಹಿಂದಕ್ಕೆ ಸರಿಸುವ ಕೆಲಸ ನಿರಂತರವಾಗಿ ನಡೆದಿತ್ತು. ಆಗ, ಆಕ್ರೋಶಗೊಂಡ ರೈತರು ತಮ್ಮ ಸಿಟ್ಟನ್ನು ಪೊಲೀಸರ ಮೇಲೆ ತೋರಿಸುತ್ತಿದ್ದರು. ಮಾತಿನ ಚಕಮಕಿಯೂ ನಡೆಯಿತು. ಕೂಡಲೇ ಪೊಲೀಸರೇ, ರೈತರನ್ನು ಶಾಂತ ಮಾಡಿ ಕಳುಹಿಸುತ್ತಿದ್ದರು.ಪೊಲೀಸ್ ವಾಹನದ ಮೇಲೆ ಅಲ್ಲದೇ, ಬೇರೆ, ಬೇರೆ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಬೇಲಿ ಹಾಗೂ ಬ್ಯಾರಿಕೇಡ್‌ಗಳನ್ನು ಕಿತ್ತೆಸದರು. ಆಗಲೂ ಅವರು, ತಾಳ್ಮೆ ಕಳೆದುಕೊಳ್ಳಲಿಲ್ಲ.

ಕೇಂದ್ರ ವಲಯ ಐಜಿಪಿ ಅಮರಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಜಿಲ್ಲಾ ಪೊಲೀಸ್ ವರಿಷ್ಠ ಕೌಶಲೇಂದ್ರಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಸಿ. ಜಯಣ್ಣ, ಉಪವಿಭಾಗಾಧಿಕಾರಿ ಆರ್. ಲತಾ ಬೆಳಿಗ್ಗೆಯಿಂದ ಸಂಜೆಯವರೆಗೂ ಅಲ್ಲಿಯೇ ಮೊಕ್ಕಾಂ ಹೂಡಿದ್ದರು. ಹಿರಿಯ  ಅಧಿಕಾರಿಗಳು ಕಾಲ ಕಾಲಕ್ಕೆ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಪ್ರತಿಭಟನೆಯನ್ನು ಶಾಂತವಾಗಿಸುವಲ್ಲಿ ಯಶಸ್ವಿಯಾದರು.ಯಾಕೆ ರೈತ್ರ ಹೊಟ್ಟೆ ಮೇಲೆ ಒಡಿತೀರಿ...

ಮಂಡ್ಯ:  `ಹೋದ್ ವರ್ಷನೂ ಬೆಳೆ ಇಲ್ಲ. ಈ ವರ್ಷವೂ ಬೆಳೆ ಇಲ್ಲ. ಯಾಕೆ ಹೊಟ್ಟೆ ಮೇಲೆ ಒಡಿತೀರಿ, ರೈತ್ರ ಕತ್ ಕುಯ್ದು, ನಿಮ್ ಬೆಳೆ ಬೇಯಿಸಿಕೊಳ್ಳೋಬದ್ಲು ಇವತ್ತೆ ಸಾಯ್ಸಿ, ಎದೆಗೆ ಗುಂಡ್ ಒಡೀರಿ, ಒಂಬತ್ ಸಾವ್ರ ಏಕೆ ಎಲ್ಲ ನೀರ್‌ನೂ ಹರ್ಸಿ...ಶ್ರೀರಂಗಪಟ್ಟಣದ ಕೃಷ್ಣರಾಜಸಾಗರ ಜಲಾಶಯದ ನಾರ್ತ್ ಬ್ಯಾಂಕ್ ಸೇತುವೆ ಬಳಿ ಜಮಾಯಿಸಿದ್ದ ಅನ್ನದಾತರ ಒಡಲಾಳದ ಮಾತುಗಳಿವು.ಮನದ ನೋವು, ಪ್ರಶ್ನೆ, ಸಂಕಟ, ಆಕ್ರೋಶ... ಹೀಗೆ ಆತನ ಹೃದಯದ ಬೇಗುದಿಗೆ ಅಲ್ಲಿ ನಾನಾ ರೂಪ ದೊರೆತಿತ್ತು.ಬುಧವಾರ ಬೆಳಿಗ್ಗೆ ಬಾನಂಗಳದಲ್ಲಿ ಮೋಡ ಚದುರಿತ್ತು. ಆದರೆ ರೈತ ಸಮೂಹ ಒಂದೆಡೆ ಸೇರಿತ್ತು. ಎಂದಿಗಿಂತ ಬಿಸಿಲೂ ಹೆಚ್ಚಿತ್ತು. ಹೊತ್ತು ಸರಿದಂತೆ, ಬಿಸಿಲ ಝಳವೂ ಹೆಚ್ಚುತ್ತಾ ಹೋಯ್ತು. ಝಳ ಏರಿದಂತೆ ರೈತರ ಆಕ್ರೋಶವೂ ಕ್ಷಣಕ್ಷಣಕ್ಕೆ ಹೆಚ್ಚುತ್ತಾ ಸಾಗಿತ್ತು.ಕಣ್ಣ ಮುಂದೆಯೇ ಹರಿದು ಹೋಗುತ್ತಿದ್ದ ನೀರು, ಅವರ ಆಕ್ರೋಶಕ್ಕೆ ತಪ್ಪು ಸುರಿಯಿತು. ಅಕ್ಷರಶಃ ಅನ್ನದಾತರು, ಕಿಡಿಕಿಡಿಯಾದರು.`ನೀವ್ ಕಾವೇರಿ ನೀರ್ ಕುಡಿಯಲ್ವಾ.. ನಿಮ್ಗೆ ನೋವು ಹಾಗಾಲ್ವ. ಜಾಗ ಬಿಡಿ. ನಿಮ್ಗೆ ಸಂಬಳ ಇದೆ. ನಮ್ಗೆ ಬೆಳೆ ಹೊದ್ರೆ ಬದಕಿಲ್ಲ. ನೀರ್ ನಿಲ್ಸಿ, ಇಲ್ಲ ಎದೆಗೆ ಗುಂಡ್ ಹೋಡಿರಿ..~ ಎಂದು ಸರ್ಪಗಾವಲಿನಲ್ಲಿದ್ದ ಅಧಿಕಾರಿಗಳು ಮತ್ತು ಪೊಲೀಸರನ್ನು ಪದೇಪದೇ ಪ್ರಶ್ನಿಸುತ್ತಿದ್ದ ರೈತರು, ಮನದ ನೋವನ್ನು ಹೊರಹಾಕುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.ಬೆಳೆಗ್ಯಾಕೆ ಕುಡಿಯೋಕೆ ನೀರಿಲ್ಲ.  ನೀರಿಗಾಗಿ ಪರದಾಡುತ್ತಿದ್ದೇವೆ. ಹತ್ತು ವರ್ಷದ ಹಿಂದೆ ಇಂತಹದೇ ಹೋರಾಟದಲ್ಲಿ ಭಾಗವಹಿಸಿದ್ದೆ. ಈಗ ಮತ್ತೆ ಭಾಗವಹಿಸಿದ್ದೇನೆ. ನೀರಿಗಾಗಿ ಹೋರಾಡುವುದೇ ನಮ್ಮ ಬದುಕಾಗಿದೆ ಎಂದು ಶ್ರೀರಂಗಪಟ್ಟಣದ ಬಾಬುರಾಯನಕೊಪ್ಪಲಿನ ಬೆಟ್ಟೇಗೌಡ ದೂರಿದರು.ಸೇತುವೆಯ ಬಳಿ ಹರಿಯುತ್ತಿದ್ದ ನೀರಿನ ಓಘವನ್ನೂ ಮೀರಿಸುವಂತೆ ರೈತರ ಸಂಕಟ ತೋಡಿಕೊಂಡರು.

 

ಉತ್ಸಾಹದ ಚಿಲುಮೆಯಂತಿದ್ದ ಜಿ. ಮಾದೇಗೌಡ

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆಯ ಬಳಿ ಬುಧವಾರ ನಡೆದ ಪ್ರತಿಭಟನೆಯಲ್ಲಿ 85ರ ವಯಸ್ಸಿನ ಜಿ. ಮಾದೇಗೌಡರ ಚಟುವಟಿಕೆ 25ರ ಯುವಕರನ್ನು ನಾಚಿಸುವಂತಿತ್ತು.ಸುಡು ಬಿಸಿಲಿನಲ್ಲಿಯೂ ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರತಿಭಟನೆಯ ಸ್ಥಳದಲ್ಲಿ ಕುಳಿತುಕೊಂಡಿದ್ದರು. ಅಷ್ಟೇ ಅಲ್ಲ, ಆಗಾಗ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಪ್ರತಿಭಟನಾಕಾರರನ್ನು ಹುರುದುಂಬಿಸುವ ಕೆಲಸ ಮಾಡುತ್ತಿದ್ದರು.ಜಿ. ಮಾದೇಗೌಡರು ರೈತರು, ವಿವಿಧ ಸಂಘಟನೆಗಳವರು ಹಾಗೂ ಸಾರ್ವಜನಿಕರು ಸದಾ ಮುತ್ತಿಕೊಂಡೇ ಇದ್ದರು. ಗಾಳಿಯಾಡಲೂ ಬಿಡುತ್ತಿರಲಿಲ್ಲ. ಆದರೂ, ಅವರು ಸೇನಾನಿಯಂತೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತಲೇ ಇದ್ದರು. ಗಲಾಟೆ ನಡೆದಾಗ ಸುರಕ್ಷತೆಯ ದೃಷ್ಟಿಯಿಂದ ಅವರನ್ನು ಕೆಲವರು ಹೊರಗಡೆ ಎತ್ತಿಕೊಂಡು ಹೋದರು. ಅಲ್ಲಿಯೇ ಕುಳಿತು ವಿರಮಿಸುವಂತೆ ಹೇಳಿದರು. ಆದರೆ, ಅದಕ್ಕವರು ಒಪ್ಪಲಿಲ್ಲ. ಮತ್ತೆ ಮರಳಿ ಬಂದು ಮುಂಚೂಣಿಯಲ್ಲಿಯೇ ಕುಳಿತಿದ್ದರು. ಒಟ್ಟಿನಲ್ಲಿ ಅವರ ಉತ್ಸಾಹ ಯುವಕರಿಗೆ ಮಾದರಿಯಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry