ಭುಲ್ಲರ್, ಲಾಹಿರಿ ಭಾರತದ ಭರವಸೆ

7

ಭುಲ್ಲರ್, ಲಾಹಿರಿ ಭಾರತದ ಭರವಸೆ

Published:
Updated:

ಬೆಂಗಳೂರು: ಯೂರೋಪಿಯನ್ ಟೂರ್‌ನಲ್ಲಿ ಚಾಂಪಿಯನ್ ಆಗಿರುವ  ಪ್ರಮುಖ ಆಟಗಾರರು ಹಾಗೂ ಭಾರತದ ಯುವ ಸ್ಪರ್ಧಿಗಳು ಗುರುವಾರ ಇಲ್ಲಿ ಆರಂಭವಾಗುವ ಹೀರೊ ಇಂಡಿಯನ್ ಓಪನ್ ಗಾಲ್ಫ್ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ) ಕೋರ್ಸ್‌ನಲ್ಲಿ ನಡೆಯುವ ಈ ಪ್ರತಿಷ್ಠಿತ ಟೂರ್ನಿ ಭಾರತದ ಸ್ಪರ್ಧಿಗಳಿಗೆ ಸಾಮರ್ಥ್ಯ ತೋರಿಸಲು ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ. ಇಂಡಿಯನ್ ಓಪನ್ ಟೂರ್ನಿ ತನ್ನ 48 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ನಡೆಯುತ್ತಿದೆ.ಅತ್ಯುತ್ತಮ ಫಾರ್ಮ್‌ನಲ್ಲಿರುವ ಗಗನ್‌ಜೀತ್ ಭುಲ್ಲರ್, ಅನಿರ್ಬನ್ ಲಾಹಿರಿ, ಹಿಮ್ಮತ್ ಸಿಂಗ್ ರಾಯ್, ಶಿವ ಕಪೂರ್, ಜ್ಯೋತಿ ರಾಂಧವಾ ಮತ್ತು ಸ್ಥಳೀಯ ಆಟಗಾರ ಸಿ. ಮುನಿಯಪ್ಪ ಅವರು 6.60 ಕೋಟಿ ರೂ. ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸುವರು.ಕಳೆದ ವಾರ ನಡೆದ ಮಕಾವ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭುಲ್ಲರ್ ಪ್ರಸಕ್ತ ಋತುವಿನ ಏಷ್ಯನ್ ಟೂರ್‌ನಲ್ಲಿ ಮೂರನೇ ಪ್ರಶಸ್ತಿಯ ಕನಸಿನಲ್ಲಿದ್ದಾರೆ. 2009ರ ಚಾಂಪಿಯನ್ ಮುನಿಯಪ್ಪ ಹಳೆಯ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.ವಿದೇಶದ ಪ್ರಮುಖ ಆಟಗಾರರೂ ಕಣದಲ್ಲಿದ್ದಾರೆ. ಸ್ವೀಡನ್‌ನ ಪೀಟರ್ ಹ್ಯಾನ್ಸನ್ ಇಲ್ಲಿ ಗೆಲ್ಲುವ `ಫೇವರಿಟ್~ ಎನಿಸಿಕೊಂಡಿದ್ದಾರೆ. ವಿಶ್ವ ರ‌್ಯಾಂಕಿಂಗ್‌ನಲ್ಲಿ 25ನೇ ಸ್ಥಾನದಲ್ಲಿರುವ ಅವರು ಯೂರೋಪಿಯನ್ ಟೂರ್‌ನಲ್ಲಿ ಐದು ಪ್ರಶಸ್ತಿಗಳ ಜೊತೆ ರೈಡರ್ ಕಪ್‌ನಲ್ಲೂ ಜಯ ಪಡೆದಿದ್ದಾರೆ.ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ಡೇವಿಡ್ ಗ್ಲೀಸನ್, ಸ್ಕಾಟ್ಲೆಂಡ್‌ನ ರಿಚೀ ರಾಮ್‌ಸೆ, ಇಂಗ್ಲೆಂಡ್‌ನ ಜೇಮ್ಸ ಮಾರಿಸನ್ ಮತ್ತು ಥಾಯ್ಲೆಂಡ್‌ನ ಚಾಪ್‌ಚೈ ನಿರಾತ್ ಅವರೂ ಪ್ರಶಸ್ತಿ ಜಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಟೂರ್ನಿಯ ವಿಜೇತರು ಒಂದು ಕೋಟಿ 5 ಲಕ್ಷ ರೂ. ನಗದು ಬಹುಮಾನ ಪಡೆಯಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry