ಭೂಕಂಪ ಅಧ್ಯಯನಕ್ಕೆ ತಜ್ಞರ ದಂಡು

7

ಭೂಕಂಪ ಅಧ್ಯಯನಕ್ಕೆ ತಜ್ಞರ ದಂಡು

Published:
Updated:

ಆಲಮಟ್ಟಿ: ಒಂದೇ ವರ್ಷದಲ್ಲಿ 25 ಬಾರಿ ಭೂಕಂಪ ಸಂಭವಿಸಿದ ಮಲಘಾಣ ಸುತ್ತಮುತ್ತಲಿನ ಪ್ರದೇಶದ ಅಧ್ಯಯನ, ಜನತೆ ಹಾಗೂ ಅಧಿಕಾರಿಗಳ ಜೊತೆ ಸಂವಾದ ನಡೆಸಲು ಉನ್ನತ ಮಟ್ಟದ ಅಧ್ಯಯನ ಸಮಿತಿಯೊಂದ ಫೆ. 14ರಂದು ವಿಜಾಪುರ ಜಿಲ್ಲೆಗೆ ಆಗಮಿಸಲಿದೆ.ಕರ್ನಾಟಕ ಪ್ರಕೃತಿ ವಿಕೋಪ ಕೇಂದ್ರದ ನಿರ್ದೇಶಕ ಡಾ. ಪ್ರಕಾಶ, ಪ್ರಜಾವಾಣಿ ಜೊತೆ ಮಾತನಾಡಿ ಕಳೆದ ವರ್ಷ ಮೇ ತಿಂಗಳಿನಲ್ಲಿಯೇ ವಿಜ್ಞಾನಿಗಳ ತಂಡ ಭೂಕಂಪ ಬಾಧಿತ ಸ್ಥಳಕ್ಕೆ ತೆರಳಿ ಸೂಕ್ತ ಅಧ್ಯಯನ ನಡೆಸಿದೆ. ಅದಾಗ್ಯೂ ಮೇಲಿಂದ ಮೇಲೆ ಭೂಕಂಪ ಸಂಭವಿಸುತ್ತಿದೆ. ಈ ಬಗ್ಗೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಭಯಪಡುವ ವಾತಾವರಣ ಇಲ್ಲ. ಭೂಕಂಪನದ ಕಾರಣದ ಬಗ್ಗೆ ತಜ್ಞರು ಅಧ್ಯಯನ ನಡೆಸಿ ಘಟನೆಯ ಸತ್ಯಾಸತ್ಯತೆ ತಿಳಿಸಲಿದ್ದಾರೆ ಎಂದು ಹೇಳಿದರು.ಜನರ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಜಿಲ್ಲಾಡಳಿತ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. ಫೆ. 14 ಉನ್ನತ ಮಟ್ಟದ ವಿಜ್ಞಾನಿಗಳ ತಂಡ ಆಗಮಿಸಲಿದೆ. ಈ ತಂಡದಲ್ಲಿ ಹೈದರಾಬಾದದ ರಾಷ್ಟ್ರೀಯ ಭೂಭೌತ ವಿಜ್ಞಾನ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಸಿ. ನಾಗೇಶ, ಬಾಬಾ ಅಣುವಿಜ್ಞಾನ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ದಿನೇಶ, ರಾಷ್ಟ್ರೀಯ ಭೂವಿಜ್ಞಾನ ಸರ್ವೇಕ್ಷಣಾ ಕೇಂದ್ರದ ಡೆಪ್ಯುಟಿ ಡೈರೆಕ್ಟರ್ ಆಫ್ ಜನರಲ್ ಡಾ. ಸೂರ್ಯ ಪ್ರಕಾಶಂ, ಸೆಂಟರ್ ಫಾರ್ ಮೆಥಮಟಿಕಲ್ ಮೌಡೆಲಿಂಗ್ ಕಂಪ್ಯೂಟರ್ ಸ್ಟಿಮ್ಯೂಲೇಟ್ ಕೇಂದ್ರದ ಡಾ. ಇಂತಿಯಾಜ್ ಫರ್ವೆಜ್, ಬೆಂಗಳೂರು ಭೂವಿಜ್ಞಾನ ಸರ್ವೇಕ್ಷಣಾ ಕೇಂದ್ರದ ಡಾ. ನಾಯಕ ಭಾಗವಹಿಸುವರು. ಇವರಲ್ಲದೇ ನ್ಯಾಷನಲ್ ಜಿಯಾಗ್ರಾಫಿ ಸರ್ವೇ ಆಫ್ ಇಂಡಿಯಾದ ವಿಜ್ಞಾನಿಗಳು, ನ್ಯಾಷನಲ್ ಜಿಯಾಗ್ರಫಿ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಸೇರಿದಂತೆ ಸುಮಾರು 14 ಜನರ ತಂಡ ಭಾಗವಹಿಸಲಿದೆ ಎಂದರು.ಫೆ. 14ರಂದು ಬೆಳಿಗ್ಗೆ ವಿಜಾಪುರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ಜೊತೆ ವಿಜ್ಞಾನಿಗಳು ಭೂಕಂಪದ ಕುರಿತು ಚರ್ಚೆ ನಡೆಸಲಿದ್ಧಾರೆ. ನಂತರ ಜಿಲ್ಲಾಧಿಕಾರಿ, ಜಿಲ್ಲೆಯ ಹಿರಿಯ ಅಧಿಕಾರಿಗಳ ಜೊತೆಗೆ ವಿಜ್ಞಾನಿಗಳ ತಂಡ ಭೂಕಂಪ ಬಾಧಿತ ಪ್ರದೇಶಗಳಾದ ಮಲಘಾಣ, ಮಸೂತಿ, ಕಲಗುರ್ಕಿ, ತಳೇವಾಡ ಮೊದಲಾದ ಗ್ರಾಮಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಲಿದೆ. ಗ್ರಾಮಸ್ಥರ ಜೊತೆಗೂ ಚರ್ಚಿಸಿ ಆಲಮಟ್ಟಿಗೆ ಆಗಮಿಸುವುದು. ಆಲಮಟ್ಟಿಯ ಹಿನ್ನೀರು ಮತ್ತಿತರ ವಿಷಯಗಳ ಕುರಿತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ಜೊತೆ ವಿಜ್ಞಾನಿಗಳು ಚರ್ಚಿಸಲಿದ್ದಾರೆ ಎಂದರು.ಜನತೆಯಲ್ಲಿ ಆತಂಕ

ಕಲಗುರ್ಕಿ, ತಳೇವಾಡ, ಮಲಘಾಣ, ಮಸೂತಿ ಮೊದಲಾದ ಗ್ರಾಮಗಳಲ್ಲಿ ಸರಣಿಯಾಗಿ ಕಳೆದ ಒಂದು ವರ್ಷದಲ್ಲಿ 25 ಬಾರಿ ಭೂಕಂಪ ಸಂಭವಿಸಿದೆ. ಇದರಿಂದ ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಭೂಕಂಪನಕ್ಕೆ ಇದುವರೆಗೆ ನಿರ್ದಿಷ್ಟ ಕಾರಣವನ್ನೂ ತಿಳಿಸಿಲ್ಲ. ಕಾರಣವೇನು? ಯಾವ ಪ್ರಮಾಣದಲ್ಲಿ ಭೂಕಂಪ ಸಂಭವಿಸಬಹುದು ಎಂಬೆಲ್ಲಾ ಪ್ರಶ್ನೆಗಳಿಗೂ ತಜ್ಞರ ತಂಡ ಇದುವರೆಗೆ ಉತ್ತರಿಸಲಿದೆ ಎಂಬುದು ಗ್ರಾಮಸ್ಥರ ನಿರೀಕ್ಷೆ.2010ರ ಜನವರಿ 10ರಂದು ಆರಂಭವಾದ ಭೂಕಂಪ ಮೊದಲು ತಳೇವಾಡ, ನಂತರ ಕಲಗುರ್ಕಿ, ಮಲಘಾಣ ಮತ್ತಿತರ 10 ಕಿ.ಮೀ ವ್ಯಾಪ್ತಿಯ ಒಳಗೇ ಹೆಚ್ಚಾಗಿ ಲಘು ಭೂಕಂಪ ಸಂಭವಿಸಿದೆ. ರಿಕ್ಚರ್ ಮಾಪಕದಲ್ಲಿ 3.1ಗಿಂತ ಹೆಚ್ಚಿಗೆ ಪ್ರಮಾಣದ ಭೂಕಂಪನ ಆಗಿಲ್ಲ ಎಂಬುದನ್ನು ವರದಿ ತಿಳಿಸಿದೆ.ಕಳೆದ ವರ್ಷ ಸರಣಿ ಭೂಕಂಪವಾದ ನಂತರ ಮಲಘಾಣ ಹಾಗೂ ಕಲಗುರ್ಕಿಯಲ್ಲಿ ‘ಡಿಜಿಟಲ್ ಪ್ರಾಯನ್ಶಿಯಲ್ ಬ್ರಾಡ್‌ಬ್ಯಾಂಡ್ ಸ್ಪೈಸ್ಮೋಮೀಟರ್’ ಎಂಬ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರವನ್ನು ತಾತ್ಕಾಲಿಕವಾಗಿ ಕೂಡಿಸಲಾಗಿತ್ತು. ನಂತರ ಅಕ್ಟೋಬರ್‌ನಲ್ಲಿ ಇದನ್ನು ಬೇರೆಡೆ ಜೋಡಿಸಲಾಯಿತು. ಭೂಕಂಪಕ್ಕೆ ಕಾರಣ ತಿಳಿಯುವ ಪ್ರಯತ್ನ ಕೈಗೂಡಲಿಲ್ಲ.ಕಾರಣವೇನು?


 ಶಿಲಾಸ್ಥರಗಳಲ್ಲಿ ಆಂತರಿಕ ಚಲನೆಯಿಂದ ಭೂಕಂಪನದ ಅನುಭವ ಉಂಟಾಗುತ್ತಿದೆ. ಆ ಭಾಗದಲ್ಲಿ ನ್ಯೂಮರಿಕಲ್ ಫಾಲ್ಟ್ ಲೈನ್ (ಶಿಲೆಗಳ ಪದರುಗಳು ಕೂಡುವ ಸಂಧಿ) ಇದ್ದು, ಅದೇ ಭಾಗದಲ್ಲಿ ಹೆಚ್ಚಾಗಿ ಭೂಕಂಪನ ಸಂಭವಿಸುತ್ತಿದೆ. ಅಲ್ಲಿಯ ಶಿಲೆಗಳು ಹಗುರು ಹಾಗೂ ಮೆದುವಾಗಿದ್ದು, ಪದರು ಶಿಲೆಗಳಿಂದ ಕೂಡಿದೆ. ಈ ಶಿಲೆಗಳಲ್ಲಿ ಬಿರುಕು ಬಿಡುವ ಸಂಭವ ಹೆಚ್ಚಿದೆ.ಬಯಲಲ್ಲೇ ನಿದ್ದೆ

ಆತಂಕದಿಂದ ಕಂಗೆಟ್ಟಿರುವ ಬಾಧಿತ ಗ್ರಾಮದ ಬಹುತೇಕ ಜನತೆ ಬಯಲಿನಲ್ಲಿಯೇ ಮಲಗುತ್ತಿದ್ದಾರೆ. ಕಂಪನವಾದಾಗ ಸ್ಫೋಟ ರೀತಿಯ ಶಬ್ದ ಕೇಳಿಸುತ್ತಿದೆ. ಕೆಲ ಕ್ಷಣಗಳ ಕಾಲ ಭೂಮಿ ನಡಗುತ್ತದೆ ಎಂಬುದು ಬಾಧಿತ ಗ್ರಾಮಸ್ಥರ ಅನಿಸಿಕೆ.ಆಕ್ರಮ ಗಣಿಗಾರಿಕೆ

ಭೂಕಂಪ ಸಂಭವಿಸಿದ ಪ್ರದೇಶಗಳು ಸೇರಿದಂತೆ ಅನೇಕ ಕಡೆ ಅನಧಿಕೃತವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ಅದನ್ನು ಕಲ್ಲಿನ ಗಣಿಗಾರಿಕೆಗಳಿಗೆ ಶಾಶ್ವತವಾಗಿ ತಾಲ್ಲೂಕು ಆಡಳಿತ ಕಡಿವಾಣ ಹಾಕಬೇಕಿದೆ. ಅದಲ್ಲದೇ ಆಲಮಟ್ಟಿ ಜಲಾಶಯದಿಂದ ಕೇವಲ 20 ಕಿ.ಮೀ ಅಂತರದಲ್ಲಿಯೇ ಈ ಬಾಧಿತ ಗ್ರಾಮಗಳಿವೆ. ಕೇಂದ್ರ ಸರಕಾರದ ಎನ್.ಟಿ.ಪಿ.ಸಿ. ಸ್ಥಾಪಿಸಲು ಉದ್ದೇಶಿಸಿರುವ ನಿಯೋಜಿತ 4000 ಮೆಗಾವ್ಯಾಟ್ ಸಾಮರ್ಥ್ಯದ ಕೂಡಗಿ ಶಾಖೋತ್ಪನ್ನ ಕೇಂದ್ರ ಕೇವಲ 5 ಕಿ.ಮೀ ಅಂತರದಲ್ಲಿದೆ. ಇದನ್ನು ಗಮನಿಸಿದರೆ ಕೂಡಗಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಸ್ಥಾಪನೆಯ ಸುರಕ್ಷತೆಯ ಬಗ್ಗೆಯೂ ಶಂಕೆ ಮೂಡುತ್ತಿದೆ ಎನ್ನುವುದು ತಜ್ಞರ ಅಭಿಪ್ರಾಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry