ಶನಿವಾರ, ಮೇ 21, 2022
25 °C

ಭೂಕಂಪ ವಲಯ: ಭಾರತದ ಅಣು ಘಟಕಗಳ ಸುರಕ್ಷೆಯ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಭೂಕಂಪ ಮತ್ತು ಸುನಾಮಿ ಅಲೆಗಳ ಹೊಡೆತಕ್ಕೆ ಜಪಾನಿನ ಫುಕುಶಿಮಾ ಪರಮಾಣು ಘಟಕ ಸ್ಫೋಟಗೊಂಡಿರುವುದು ಭಾರತದಲ್ಲಿ ಆತಂಕದ ವಾತಾವರಣವನ್ನು ಮೂಡಿದೆ.ದೇಶದ ಪರಮಾಣು ಘಟಕಗಳ ಅದರಲ್ಲೂ ಭೂಕಂಪನ ವಲಯದಲ್ಲಿ ಬರುವ ಮಹಾರಾಷ್ಟ್ರದ ಜೈತ್‌ಪುರದಲ್ಲಿಯ ಉದ್ದೇಶಿತ ಪರಮಾಣು ವಿದ್ಯುತ್ ಘಟಕದ ಸುರಕ್ಷತೆಯ ಬಗ್ಗೆ ಪರಿಸರವಾದಿಗಳು ಮತ್ತು ಪರಮಾಣು ವಿದ್ಯುತ್ ಘಟಕ ವಿರೋಧಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.ಜೈತ್‌ಪುರ ಭಾರಿ ಭೂಕಂಪನ ವಲಯದಲ್ಲಿ ಬರುವುದರಿಂದ ಅಪಾಯ ತಪ್ಪದ್ದಲ್ಲ ಎಂಬುದು ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ. ಉದ್ದೇಶಿತ ಜೈತ್‌ಪುರ ಪರಮಾಣು ಘಟಕದ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 1985ರಿಂದ 2005ರ ವರಗೆ 2.9 ರಿಂದ 6.3 ತೀವ್ರತೆಯ 91 ಭೂಕಂಪಗಳು ಸಂಭವಿಸಿವೆ ಎಂದು ಭಾರತೀಯ ಭೂಗರ್ಭ ಸರ್ವೇಕ್ಷಣಾಲಯದ ಮೂಲಗಳು ಮಾಹಿತಿ ಹಕ್ಕು ಅರ್ಜಿಗೆ ಉತ್ತರವಾಗಿ ತಿಳಿಸಿವೆ. ಈಗ ಜಪಾನಿನ ಫುಕುಶಿಮಾ ಪರಮಾಣು ವಿದ್ಯುತ್ ಘಟಕವು ಭೂಕಂಪ ಮತ್ತು ದೈತ್ಯ ಸುನಾಮಿ ಅಲೆಗೆ ಸಿಕ್ಕು ಸ್ಫೋಟಗೊಂಡು ವಿಕಿರಣ ಸೋರಿಯಾಗುತ್ತಿರುವುದರಿಂದ ಭಾರತದಲ್ಲಿ ಅದರಲ್ಲೂ ಜೈತಪುರ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಭಾರಿ ಆತಂಕವನ್ನು ಮೂಡಿಸಿದೆ.ಆದರೆ ಅಧಿಕಾರಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ದೇಶದ ಎಲ್ಲಾ ಪರಮಾಣು ಘಟಕಗಳನ್ನು ಯಾವುದೇ ರೀತಿಯ ತುರ್ತು ಸ್ಥಿತಿಯನ್ನು ಎದುರಿಸುವಷ್ಟು ಸುರಕ್ಷಿತವಾಗಿ ನಿರ್ಮಿಸಲಾಗಿದೆ ಎಂದು ಭಾರತೀಯ ಪರಮಾಣು ವಿದ್ಯುತ್ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.ಭಾರಿ ಅವಘಡದ ಸಂದರ್ಭದಲ್ಲಿಯೂ ಪರಮಾಣು ಘಟಕಗಳಿಂದ ವಿಕಿರಣ ಹೊರ ಸೂಸದಂತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪರಮಾಣು ಇಂಧನ ಇಲಾಖೆಯ ಸಾರ್ವಜನಿಕ ಜಾಗೃತ ವಿಭಾಗದ ಮುಖ್ಯಸ್ಥ ಎಸ್. ಕೆ. ಮಲ್ಹೋತ್ರ ತಿಳಿಸಿದ್ದಾರೆ.ಅಪಘಾತ ಅಥವಾ ನೈಸರ್ಗಿಕ ವಿಪತ್ತು ಸಂಭವಿಸಿದ  ಕೂಡಲೇ ಅಣು ಸ್ಥಾವರಗಳಲ್ಲಿ ಸ್ವಯಂಚಾಲಿತ ವ್ಯವಸ್ಥೆಗಳು ಕಾರ್ಯಾರಂಭ ಮಾಡಿ ಎಲ್ಲ ಸ್ವಿಚ್‌ಗಳನ್ನು ಬಂದ್ ಮಾಡುತ್ತವೆ ಮತ್ತು ಶೀತಕ ವ್ಯವಸ್ಥೆ ಮುಂದುವರಿದಿರುತ್ತದೆ. ಇದರಿಂದ ವಿಕಿರಣ ಹೊರ ಸೂಸುವುದಿಲ್ಲ ಎಂದು ಅವರು ಹೇಳಿದ್ದಾರೆ.ಅಣು ಇಂಧನ ನಿಯಂತ್ರಣ ಮಂಡಳಿಯ ಮಾಜಿ ಕಾರ್ಯದರ್ಶಿ ಹಾಗೂ ವಿಜ್ಞಾನಿ ಕೆ. ಎಸ್. ಪಾರ್ಥಸಾರಥಿ ಅವರೂ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಮಾಲಯದ ತಪ್ಪಲಲ್ಲಿ ಮಾತ್ರ 8.9 ತೀವ್ರತೆಯ ಭೂಕಂಪ ಸಂಭವಿಸಬಹುದು. ದೇಶದ ಉಳಿದ ಭಾಗಗಳಲ್ಲಿ ಇಷ್ಟು ತೀವ್ರತೆಯ ಭೂಕಂಪ ಸಂಭವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.ಜಪಾನಿನ ಪರಮಾಣು ಘಟಕಗಳು ಅತ್ಯಂತ ಸುರಕ್ಷಿತ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಆದದ್ದೇನು? ಎಂದು ಗ್ರೀನ್‌ಪೀಸ್ ಸಂಘಟನೆಯ ಕರುಣಾ ರೈನಾ ಅವರು ಪ್ರಶ್ನಿಸಿದ್ದಾರೆ.ಭಾರತದ ಹುತೇಕ ಪರಮಾಣು ಘಟಕಗಳು ಕಡಲ ತೀರದಲ್ಲೇ ಇರುವುದರಿಂದ ಜಪಾನ್ ಘಟನೆಯ ನಂತರ ಸಹಜವಾಗಿ ಆತಂಕವನ್ನು ಉಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.