ಭೂತಕನ್ನಡಿಯಲ್ಲಿ ಸಿನಿಮಾ!

7

ಭೂತಕನ್ನಡಿಯಲ್ಲಿ ಸಿನಿಮಾ!

Published:
Updated:
ಭೂತಕನ್ನಡಿಯಲ್ಲಿ ಸಿನಿಮಾ!

ಮಾಯಾಕನ್ನಡಿ ಎಂದಿದ್ದರೂ ಆಗುತ್ತಿತ್ತು. ಆದರೆ, ಈ ಸಿನಿಮಾಪ್ರಿಯರು ತಮ್ಮ ಬ್ಲಾಗ್ ಅನ್ನು `ಭೂತಕನ್ನಡಿ~ (http://bootagannadi.blogspot.in) ಎಂದು ಕರೆದುಕೊಂಡಿದ್ದಾರೆ. `ಲೆನ್ಸ್ ಕಣ್ಣಲ್ಲಿ ಲೈಫು~ ಎನ್ನುವುದು ಈ ಬ್ಲಾಗಿನ ಅಡಿ ಟಿಪ್ಪಣಿ.`ಸಿನಿಮಾ ಮನರಂಜನೆಯ ಮಾಧ್ಯಮವಷ್ಟೇ ಅಲ್ಲದೆ ಸ್ವತಂತ್ರವಾದ ಕಲಾಪ್ರಕಾರ ಎನ್ನುವ ಪರಿಕಲ್ಪನೆಯ ಬಗ್ಗೆ ಒಲವು ಇರುವ ಸಿನಿಮಾಸಕ್ತರ ತಾಣ~ ಇದೆಂದು ಭೂತಕನ್ನಡಿ ಗೆಳೆಯರು ಬಣ್ಣಿಸಿಕೊಂಡಿದ್ದಾರೆ. ಈ ಸಮಾನ ಆಸಕ್ತರು ಯಾರು ಯಾರೆಂದರೆ- ಎಂ. ಕಿರಣ್, ಕೆ.ಎಸ್. ಸುಪ್ರೀತ್, ಎಂ.ಎಸ್. ರೂಪಲಕ್ಷ್ಮಿ, ಮುಕುಂದ್, ಮಂಸೋರೆ ಹಾಗೂ ಹೇಮಾ ಪವಾರ್. ಕಲಿಕೆ ಮತ್ತು ವೃತ್ತಿ ಕಾರಣ ಬೇರೆ ಬೇರೆ ದಾರಿಯಲ್ಲಿರುವ ಈ ಗೆಳೆಯರು ಸಿನಿಮಾ ವಿಷಯದಲ್ಲಿ ಮಾತ್ರ ಸಮಾನ ಮನಸ್ಕರು.ಹಾಗೆಂದು ಎಲ್ಲರದೂ ಒಂದೇ ಅಭಿಪ್ರಾಯ ಎಂದಲ್ಲ. ಒಬ್ಬರ ಅನಿಸಿಕೆ ಇಷ್ಟವಾಗದೆ ಹೋದಾಗ ತಮ್ಮದೇ ಆದ ವಾದವನ್ನು ಮಂಡಿಸಿ ಕಾವೇರಿದ ಚರ್ಚೆಯೂ ಈ ತಂಡದಲ್ಲಿ ನಡೆದಿದೆ. ಈ ಎಲ್ಲ ಮಾತು-ಕತೆ ಒಂದು ಆರೋಗ್ಯಕರ ಚೌಕಟ್ಟಿನಲ್ಲಿ ನಡೆದಿರುವುದು ವಿಶೇಷ.ಸಿನಿಮಾ ಗ್ರಹಿಕೆಯ ಕುರಿತ ಟಿಪ್ಪಣಿಗಳು, ಚಿತ್ರವೊಂದರ ವಿಮರ್ಶೆ, ಕಿರುಚಿತ್ರಗಳ ಪರಿಚಯ, ಸಿನಿಮಾ ಕುರಿತು ಚರ್ಚೆ- ಹೀಗೆ, `ಭೂತಕನ್ನಡಿ~ಯಲ್ಲಿ ಕಾಣುವ ನೋಟಗಳು ಸಾಕಷ್ಟಿವೆ. ಸಿನಿಮಾ ಕುರಿತ ಪ್ರಮುಖ ಜಾಲತಾಣಗಳು ಮನರಂಜನೆಯ ಸುದ್ದಿಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿರುವಾಗ ಈ ಕನ್ನಡಿ ಬಳಗ ಸಿನಿಮಾದ ಗಂಭೀರ ಚರ್ಚೆಯಲ್ಲಿ ತೊಡಗುವ ಪ್ರಯತ್ನದಲ್ಲಿರುವುದು ಖುಷಿ ಹುಟ್ಟಿಸುತ್ತದೆ. ಅಂದಹಾಗೆ, ಡಬ್ಬಿಂಗ್ ಕುರಿತು `ಭೂತಕನ್ನಡಿ~ಯಲ್ಲಿ ಯಾವ ಪೋಸ್ಟೂ ಕಾಣಿಸುತ್ತಿಲ್ಲ! ಗೆಳೆಯರ ಗುಂಪು ವರ್ತಮಾನಕ್ಕೆ ಹೀಗೆ ಬೆನ್ನು ಹಾಕಬಹುದೇ?ಅದಿರಲಿ, `ಭೂತಕನ್ನಡಿ~ ಬ್ಲಾಗಿನ ಒಂದು ತುಣುಕನ್ನು ಈಗ ಓದೋಣ:“ಸಿನಿಮಾ ಗ್ರಹಿಕೆಯು ಓದಿಗಿಂತ complicated ಆದದ್ದು ಎಂದು ನನಗನ್ನಿಸುತ್ತಿದೆ. ಓದು ನಮ್ಮಲ್ಲಿ ಕಲ್ಪನೆಯ ಸ್ವಾತಂತ್ರ್ಯವನ್ನು ಉಳಿಸುತ್ತದೆ. ಆದರೆ ಸಿನಿಮಾದಲ್ಲಿ ನಾವು ಕಲ್ಪಿಸಿಕೊಳ್ಳುವ ಅವಕಾಶವಿರುವುದಿಲ್ಲ. ಸಾಹಿತ್ಯದಂತೆ ಸಿನಿಮಾ ಕೂಡ ಒಂದು ಕಾಲಘಟ್ಟದ ಸಂಸ್ಕತಿಯನ್ನು, ಜೀವನ ಶೈಲಿಯನ್ನು ಯಥಾವತ್ತಾಗಿ ಕಟ್ಟಿಕೊಡುವುದಕ್ಕೆ ಸಾಧ್ಯ, ಪ್ರಾಯಶಃ ಹೆಚ್ಚು ಪರಿಣಾಮಕಾರಿಯಾಗಿ ಕಟ್ಟಿಕೊಡಬಲ್ಲದು. ಆದರೆ ಅದನ್ನು ಗುರುತಿಸುವ, ಅರ್ಥಮಾಡಿಕೊಳ್ಳುವ ರೀತಿ ಅಷ್ಟು ಸುಲಭಕ್ಕೆ ಒಲಿಯುವಂತದ್ದಲ್ಲ. ಹಾಗಾಗಿ ಈ ಕುರಿತು ಹೆಚ್ಚಿನದೇನನ್ನು ಬರೆಯುವಷ್ಟು ತಿಳಿದಿಲ್ಲವಾದರೂ, ರಾಶೋಮನ್, ಪಥೇರ್ ಪಾಂಚಾಲಿ, ಒಂದಾನೊಂದು ಕಾಲದಲ್ಲಿ, ದ್ವೀಪ ಇತ್ಯಾದಿ ಸಿನಿಮಾಗಳಿಗೂ, `ಕಮರ್ಷಿಯಲ್~ ಎಂಬ ಹಣೆಪಟ್ಟಿಯಡಿ ವರ್ಗೀಕರಿಸಲಾದ ಇತರ ಜನಪ್ರಿಯ ಸಿನಿಮಾಗಳಿಗೂ ಇರಬಹುದಾದ ವ್ಯತ್ಯಾಸವನ್ನು ಗ್ರಹಿಸುವಲ್ಲಿ, ಅದರ ಅಗತ್ಯವೇನು ಎಂದು ತಿಳಿಯುವಲ್ಲಿ ಇತ್ತೀಚೆಗೆ ನಾನು ನೋಡಿದ ಸಿನಿಮಾಗಳು ಸಹಾಯ ಮಾಡುತ್ತಿವೆ.ಸಿನಿಮಾ ನೋಡುವ ರೀತಿಯನ್ನು ಕುರಿತು ಕಲಿಯುತ್ತಿದ್ದೇನೆ ಎಂದು ಹೇಳಿದೆನಷ್ಟೇ. ಮೊನ್ನೆ ಸಂವಾದ ತಂಡ ಆಯೋಜಿಸಿದ್ದ ಮಜಿದ್ ಮಜಿದಿ ಎಂಬ ಇರಾನಿ ನಿರ್ದೇಶಕನ `ಬರನ್~ ಸಿನಿಮಾ ವೀಕ್ಷಣೆ ಮತ್ತು ಚರ್ಚೆಯಲ್ಲಿ ಒಂದು ಮಾತು ಬಂದಿತು. `ಸಿನಿಮಾ ಹೇಗಿದೆ ಎಂದು ಹೇಳಲು, ವ್ಯಕ್ತಿಯೊಬ್ಬನ ಸಾಂಸ್ಕೃತಿಕ ಹಿನ್ನೆಲೆ ಕೂಡ ಮುಖ್ಯವಾಗುತ್ತದೆ~ ಎಂದು. ಸಿನಿಮಾ ಒಂದನ್ನು, ಅದು ತಯಾರಿಸಲ್ಪಟ್ಟ ಕಾಲ, ಅಲ್ಲಿನ ರಾಜಕೀಯ ಹಿನ್ನೆಲೆ, ಸಂಸ್ಕೃತಿಯ ವಿವರಗಳನ್ನೊಳಗೊಂಡು ಅರ್ಥ ಮಾಡಿಕೊಳ್ಳುವುದಕ್ಕೂ, ವೈಯಕ್ತಿಕವಾಗಿ ಅಥವಾ ನಮಗೆ ಲಭ್ಯವಿರುವ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೂ ವಿಪರೀತ ವ್ಯತ್ಯಾಸವಿದೆ ಎಂಬುವಂತಹದ್ದು. ಇದಕ್ಕೆ ತಳಕು ಹಾಕಿಕೊಂಡಂತೇ ಸಾಹಿತ್ಯದ ಬಗ್ಗೆ ಲಂಕೇಶರ ಟೀಕೆ ಟಿಪ್ಪಣಿಯಲ್ಲಿ ಒಂದು ಮಾತಿದೆ. ಲಂಕೇಶರಿಗೊಮ್ಮೆ ಯಾರೋ ಅಂದರಂತೆ `ನಿಮ್ಮ ಗದ್ಯ ತುಂಬಾ ಚೆನ್ನಾಗಿದೆ~ ಎಂದು. ಅದಕ್ಕೆ ಲಂಕೇಶರು ಹೇಳುತ್ತಾರೆ `ಇಲ್ಲ, ಗದ್ಯ ತಾನೇ ತಾನಾಗಿ ಚೆನ್ನಾಗಿರೋಲ್ಲ, ನೀವು, ನಿಮ್ಮ ಅನುಭವ ಚೆನ್ನಾಗಿ structured  ಆಗಿದ್ದು, ನಿಮ್ಮ ಪಂಚೇಂದ್ರಿಯಗಳು ಸರಿ ಇದ್ದರೆ ಮಾತ್ರ ಗದ್ಯ ಚೆನ್ನಾಗಿರುತ್ತೆ!~ಸಿನಿಮಾ ನೋಡುವ ಹೊಸ ದೃಷ್ಟಿಕೋನವನ್ನು ಅಳವಡಿಸಿಕೊಳುತ್ತಾ, ಸಾಹಿತ್ಯದೊಂದಿಗೆ ಅದನ್ನು ತಳಕು ಹಾಕುತ್ತ, ನಾನು ಇಲ್ಲಿಯವರೆಗೆ ನೋಡಿದ ಸಿನಿಮಾಗಳ ಮೆಲುಕು ಈಗೀಗ ಹೊಮ್ಮಿಸುತ್ತಿರುವ ಬೇರೆಯದೇ ಅರ್ಥಕ್ಕೆ ಬೆರಗಾಗುತ್ತಿದ್ದೇನೆ!                                                             

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry