ಭಾನುವಾರ, ಜೂಲೈ 12, 2020
22 °C

ಭೂತದಹನದ ಜತೆ ಲೋಸಾರ್ಗೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂತದಹನದ ಜತೆ ಲೋಸಾರ್ಗೆ ತೆರೆ

ಮುಂಡಗೋಡ: ಟಿಬೇಟಿಯನ್‌ರ ಹೊಸ ವರ್ಷ ‘ಲೋಸಾರ್’ ಹಬ್ಬದ ಕೊನೆಯ ದಿನವಾದ ಸೋಮವಾರ ಭೂತ, ಪಿಶಾಚಿಗಳ ಹೆಸರಿನಲ್ಲಿ ದವಸ, ಧಾನ್ಯ ಮತ್ತಿತರ ವಸ್ತುಗಳನ್ನು ದಹನ ಮಾಡಲಾಯಿತು. ಇಲ್ಲಿಯ ಲಾಮಾ ಕ್ಯಾಂಪ್ ನಂ.2ರ ಲೋಸಲಿಂಗ್ ಮೊನಾಸ್ಟ್ರಿ ಎದುರಿನ ಆವರಣದಲ್ಲಿ ಸಹಸ್ರಾರು ಟಿಬೇಟಿಯನ್‌ರ ಸಮ್ಮುಖದಲ್ಲಿ ಭೂತದಹನ ನಡೆಯಿತು.ಭೂತದಹನದ ಸಮಯದಲ್ಲಿ ಭಾರತೀಯ ನೋಟು, ನಾಣ್ಯಗಳನ್ನು ಸುಡಲಾಗುತ್ತಿತ್ತು. ಆದರೆ ಎರಡು ವರ್ಷದ ಹಿಂದೆ ಇಂತಹ ಸಂಪ್ರದಾಯಕ್ಕೆ ಸ್ಥಳೀಯರಿಂದ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ‘ಲೋಸಾರ್’ ಹಬ್ಬದ ಕೊನೆಯ ದಿನದಂದು ಧವಸ, ಧಾನ್ಯಗಳನ್ನು ಮಾತ್ರ ಸುಡಲಾಯಿತು.  ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಹಾಗೂ ಟಿಬೇಟಿಯನ್ ಮುಖಂಡರು ಭಾರತೀಯ ನೋಟು, ನಾಣ್ಯಗಳನ್ನು ಸುಡದಂತೆ ಎಲ್ಲವನ್ನೂ ಪರಿಶೀಲಿಸುತ್ತಿರುವುದು ಕಂಡುಬಂತು.ಎರಡು ವರ್ಷದ ಹಿಂದೆ ‘ಲೋಸಾರ್’ ಹಬ್ಬದ ಕೊನೆಯ ದಿನದಂದು ಟಿಬೇಟಿಯನ್‌ರು ದವಸ, ಧಾನ್ಯಗಳ ಜೊತೆಗೆ ಹಣವನ್ನು ಸುಡುವ ಕ್ರಮಕ್ಕೆ ರಾಜ್ಯಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಅಂದಿನಿಂದ ಎಚ್ಚೆತ್ತುಕೊಂಡ ಸ್ಥಳಿಯ ಟಿಬೇಟಿಯನ್ ಮುಖಂಡರು ಅಗತ್ಯ ಕ್ರಮಗಳನ್ನು ಕೈಗೊಂಡು ದವಸ, ಧಾನ್ಯವನ್ನು ಮಾತ್ರ ಸುಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಟಿಬೇಟಿಯನ್ ತಂದಿರುವ ಚೀಲವನ್ನು ಪರಿಶೀಲಿಸಿ ನಂತರ ದಹನ ನಡೆಯುವ ಸ್ಥಳದಲ್ಲಿ ಹಾಕಲು ಸೂಚಿಸಲಾಗುತ್ತಿತ್ತು.ಇದಕ್ಕೂ ಮೊದಲು ಲೊಸಲಿಂಗ್ ಮೊನಾಸ್ಟ್ರಿಯಲ್ಲಿ ವಿಶೇಷ ಪೂಜೆ ನಡೆಸಿ ನಂತರ ಮಂದಿರದ ಆವರಣದಲ್ಲಿ ಕಟ್ಟಿಗೆಯಿಂದ ತಯಾರಿಸಲಾದ ಭೂತವನ್ನು ಪೂಜಿಸಲಾಯಿತು. ಅಲ್ಲಿಂದ ಮೆರವಣಿಗೆಯಲ್ಲಿ ಸಾಗಿದ ಜನರು ಟಿಬೇಟಿಯನ್ ಸಂಪ್ರದಾಯದಂತೆ ವಿಧಾನಗಳನ್ನು ಅನುಸರಿಸಿ ಭೂತದಹನ ಮಾಡಿದರು.ಭೂತದಹನದ ಸ್ಥಳದಿಂದ ನೂರು ಮೀಟರ್ ಅಂತರದಲ್ಲಿ ಟಿಬೇಟಿಯನ್‌ರಿಗೆ ನಿಲ್ಲಲು ಅವಕಾಶ ಮಾಡಿಕೊಡಲಾಗಿತ್ತು.ಹಬ್ಬದ ವೈಶಿಷ್ಟ್ಯ

ಟಿಬೇಟಿಯನ್‌ರಿಗೆ ಹೊಸ ವರ್ಷ ‘ಲೋಸಾರ್’ ಹಬ್ಬದ ದಿನಗಳಲ್ಲಿ ವಿವಿಧ ದವಸ, ಧಾನ್ಯಗಳಿಂದ ಮೂರ್ತಿಗಳನ್ನು ತಯಾರಿಸಿ ಅವುಗಳಿಗೆ ಪೂಜೆ ಸಲ್ಲಿಸುತ್ತಾರೆ. ಹಬ್ಬದ ಕೊನೆಯ ದಿನದಂದು ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರ ಸಮ್ಮುಖದಲ್ಲಿ ಬಯಲು ಪ್ರದೇಶದಲ್ಲಿ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತಂದು ದವಸ, ಧಾನ್ಯಗಳ ಜೊತೆಗೆ ಸುಡುತ್ತಾರೆ. ಇದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಟಿಬೇಟಿಯನ್‌ರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.