ಭೂತಪ್ಪನಿಗೆ ಭಂಗಿ ನೈವೇದ್ಯ

7

ಭೂತಪ್ಪನಿಗೆ ಭಂಗಿ ನೈವೇದ್ಯ

Published:
Updated:

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರಂ ಸನಿಹದ ಯಡೇಹಳ್ಳಿಯಿಂದ ಹೊಸನಗರ ಮಾರ್ಗದಲ್ಲಿ ಸುಮಾರು 2 ಕಿ.ಮೀ. ದೂರ ದೂರ ಹೋದರೆ ಬಸವನಹೊಂಡ ಬರುತ್ತದೆ. ಅಲ್ಲಿದೆ ಭೂತಪ್ಪನ ದೇವಾಲಯ. ಆದರೆ ಈ ದೇವರನ್ನು ಭಂಗಿಭೂತಪ್ಪ ಎಂದೇ ಕರೆಯುತ್ತಾರೆ. ಅದಕ್ಕೊಂದು ವಿಶಿಷ್ಟ ಕಾರಣವೂ ಇದೆ.ಹೆದ್ದಾರಿ ಪಕ್ಕದ ಆಲದ ಮರದ ಬುಡವೊಂದರಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಈ ದೇವರ ಮೂರ್ತಿಗೆ ಸುಮಾರು 20 ವರ್ಷಗಳ ಹಿಂದೆ ವ್ಯವಸ್ಥಿತ ದೇಗುಲ ನಿರ್ಮಿಸಿ ಪ್ರತಿಷ್ಠಾಪಿಸಲಾಯಿತು.

 

ಇಲ್ಲಿಗೆ ಬರುವ ಭಕ್ತರು ಹೊಲಗದ್ದೆ ಮತ್ತು ತೋಟ ಮನೆಗಳಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ  ಭಂಗಿ (ಗಾಂಜಾ) ಹರಕೆ ಸಲ್ಲಿಸುತ್ತಾರೆ. ಭಂಗಿ ಸಮರ್ಪಿಸುವುದು, ಸಿಗರೇಟು ಅಥವಾ ಭಂಗಿ ಆರತಿ ಮಾಡುತ್ತಾರೆ. ಅಂದರೆ ಭಂಗಿ ಪುಡಿಯನ್ನು ದೇವಾಲಯದ ಹಿಂಭಾಗದ ಆಲದ ಮರದ ಎಲೆಯಲ್ಲಿ ಸುರುಳಿ ಸುತ್ತಿ ಬೆಂಕಿ  ಹಚ್ಚಿ ಆರತಿ ಬೆಳಗುತ್ತಾರೆ. ಸಿಗರೇಟ್ ಪ್ಯಾಕ್‌ಗಳನ್ನು ಹರಕೆಯಾಗಿ ಇಟ್ಟು ಹೋಗುತ್ತಾರೆ.ದೂರದ ಕರಾವಳಿ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಸಹ ಭಕ್ತರು ಆಗಮಿಸಿ ಈ ಹರಕೆ ಸಲ್ಲಿಸುತ್ತಾರೆ. ಅಲ್ಲದೆ ಈ ಮಾರ್ಗದಲ್ಲಿ ಸಂಚರಿಸುವ ಚಾಲಕರು ದೇವಾಲಯದ ಬಳಿ ವಾಹನ ನಿಲ್ಲಿಸಿ ಕೈಮುಗಿದು ಮುಂದೆ ಸಾಗುತ್ತಾರೆ. ಇವರಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಎಂಬ ಭೇದಭಾವವಿಲ್ಲ.

 

ಏಕೆಂದರೆ ಈ ದೇವರಿಗೆ ನಮಿಸದೆ ಪ್ರಯಾಣ ಮುಂದುವರಿಸಿದರೆ ತೊಂದರೆ ಕಟ್ಟಿಟ್ಟದ್ದು ಎಂಬ ನಂಬಿಕೆ ಇದಕ್ಕೆ ಕಾರಣ. ಇದೇ ಮಾರ್ಗದಲ್ಲಿ ಸಂಚರಿಸುವ ಕಲ್ಲು ಸಾಗಾಟದ ವಾಹನ ಚಾಲಕರು ದೇವರಿಗೆ ಪ್ರತಿ ಸಲ ಒಂದೊಂದು ಕಲ್ಲು ಇಟ್ಟು ಹೋಗುತ್ತಾರೆ.ಹೊಸಗುಂದ ಅರಸರ ಕಾಲದಲ್ಲಿ ಹುಂಚಕ್ಕೆ ಹೋಗಲು ಮತ್ತು 16 ನೇ ಶತಮಾನದಲ್ಲಿ ಕೆಳದಿ ಅರಸರು ಆನಂದಪುರಂ ಕೋಟೆ ಮತ್ತು ಹೊಸನಗರ ತಾಲ್ಲೂಕಿನ ನಗರದ ಬಳಿಯ ಬಿದನೂರು ಕೋಟೆಗಳಿಗೆ ಸಾಗಲು ಈ ಮಾರ್ಗವನ್ನು ಬಳಸುತ್ತಿದ್ದರೆಂದು ದೇವಾಲಯದ ಪ್ರಧಾನ ಅರ್ಚಕರಾದ ಶ್ರೀಧರ ಭಟ್ ತಿಳಿಸುತ್ತಾರೆ.ಈ ಸ್ಥಳದಲ್ಲಿ ಬಸವನಹೊಂಡ ಎಂಬ ಜಂಬಿಟ್ಟಿಗೆ ಕಲ್ಲಿಗಳಿಂದ ನಿರ್ಮಾಣವಾದ ಸುಂದರ ಪುಷ್ಕರಣಿಯಿದ್ದು ಈಗ ಶಿಥಿಲಾವಸ್ಥೆ ತಲುಪಿದೆ. ಇದೇ ಸ್ಥಳದಲ್ಲಿ ಭೂತಪ್ಪ ದೇವರು ಮುದುಕನ ವೇಷದಲ್ಲಿ ಕೋಲು ಹಿಡಿದು ಭಂಗಿ ಸೇದುತ್ತಾ ಓಡಾಡುತ್ತಾನೆ ಎಂಬ ಪ್ರತೀತಿಯಿದೆ. ಈ ದೇವಾಲಯವನ್ನು ಅಭಿವೃದ್ಧಿಪಡಿಸಲು ಭಕ್ತರ ಸಹಕಾರ ಅಗತ್ಯ ಎನ್ನುತ್ತಾರೆ  ದೇವಾಲಯ ಸಮಿತಿ ಅಧ್ಯಕ್ಷ ನವುಲೆಮನೆ ಹುಚ್ಚಪ್ಪ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry