ಭೂತವುಂಟು... ಪಿಶಾಚಿಯುಂಟು...

7

ಭೂತವುಂಟು... ಪಿಶಾಚಿಯುಂಟು...

Published:
Updated:
ಭೂತವುಂಟು... ಪಿಶಾಚಿಯುಂಟು...

ಬಾಗಲಕೋಟೆಯಿಂದ ಆಲಮಟ್ಟಿಗೆ ಹೋಗುವ ಮಾರ್ಗದಲ್ಲಿ ಬರುವ ತಾರಾಪುರ ಕ್ರಾಸ್‌ನಲ್ಲಿ ನಡೆದ ಸತ್ಯ ಘಟನೆಗಳನ್ನು ಆಧರಿಸಿ ಉಮೇಶ್ ಬಾದರದಿನ್ನಿ `ನಾ ಬಿಡಲಾರೆ ಎಂದು ನಿನ್ನ~ ಸಿನಿಮಾ ರೂಪಿಸಿದ್ದಾರೆ. ರಂಗಭೂಮಿ ಹಿನ್ನೆಲೆ ಇರುವ ಉಮೇಶ್, ಹಿರಿಯ ನಟ ಅಶೋಕ್ ಬಾದರದಿನ್ನಿ ಅವರ ಸೋದರ.

`ತಾರಾಪುರ ಕ್ರಾಸ್ ಬಳಿ ಇಂದಿಗೂ ಹದಿನೈದು ದಿನಗಳಿಗೊಮ್ಮೆ ಒಂದು ಸಾವು ಸಂಭವಿಸುತ್ತದೆ. ಸಂಜೆ 6ರಿಂದ 7 ಗಂಟೆವರೆಗಿನ ನಿರ್ದಿಷ್ಟ ಸಮಯದಲ್ಲಿಯೇ ಸಾವು ಸಂಭವಿಸಿದ ಉದಾಹರಣೆಗಳು ಬಹಳಷ್ಟಿವೆ. ದ್ವಿಚಕ್ರ ವಾಹನದಲ್ಲಿ ಹೋಗುವ ಪ್ರಯಾಣಿಕರನ್ನು ಒಬ್ಬ ಮಹಿಳೆ ಇಂದಿಗೂ ಡ್ರಾಪ್ ಕೇಳುವುದು ಇದೆ. ಆ ಘಟನೆಗಳನ್ನು ಆಧರಿಸಿ ಕತೆ ರೂಪಿಸಿದ್ದೇನೆ. ದೆವ್ವ ಇರುವುದನ್ನು ನಂಬುವವರೂ ಇದ್ದಾರೆ. ನಂಬದೇ ಇರುವವರೂ ಇದ್ದಾರೆ. ಆದರೆ ನನಗಾಗಿರುವ ಅನುಭವಗಳನ್ನುಆಧರಿಸಿ ಸಿನಿಮಾ ಮಾಡಿರುವೆ~ ಎಂದರು ಉಮೇಶ್. ಚಿತ್ರಕ್ಕಾಗಿ 40 ದಿನಗಳ ಚಿತ್ರೀಕರಣ ಮುಗಿದ ನಂತರ ಅವರು ಒಂದು ವಾರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುವುದೂ ಮತ್ತು ತಾರಾಪುರ ಕ್ರಾಸ್ ಬಳಿ ತಮ್ಮ ಯೂನಿಟ್ ವಾಹನಕ್ಕೆ ಆಕ್ಸಿಡೆಂಟ್ ಆಗಿದ್ದು ದೆವ್ವದ ಪ್ರಭಾವದಿಂದ ಎಂಬುದು ಅವರ ನಂಬಿಕೆ.

ಹಾರರ್, ಸೆಂಟಿಮೆಂಟ್, ಕಾಮಿಡಿ, ಸಂಗೀತ ಸಮನಾಗಿರುವ ತಮ್ಮ ಚಿತ್ರಕ್ಕಾಗಿ ಸಾಗರ ಮತ್ತು ಜೋಗ್‌ಫಾಲ್ಸ್ ನಡುವೆ ಬರುವ ನಿಸರ್ಗ ನಿರ್ಮಿತ ಸೇತುವೆಯನ್ನು ಚಿತ್ರೀಕರಿಸಿರುವುದು ವಿಶೇಷ ಎನ್ನುತ್ತಾರೆ ಅವರು.

ಚಿತ್ರದಲ್ಲಿ ದ್ವಿಮುಖ ವ್ಯಕ್ತಿತ್ವದ ಪಾತ್ರ ನಿರ್ವಹಿಸಿರುವ ನಾಯಕಿ ಸ್ವಾತಿ ಇಂದಿಗೂ ಯಾರೋ ತಮ್ಮನ್ನು ಮುಟ್ಟಿದಂತೆ ಅನುಭವವಾಗುವುದನ್ನು ಹೇಳಿಕೊಂಡರು. ಜೊತೆಗೆ ದೆವ್ವದ ಮೇಕಪ್ ಮಾಡಿಕೊಂಡಾಗ ತಾವು ತಾವಾಗಿ ಇರುತ್ತಿರಲಿಲ್ಲ. ತಮ್ಮನ್ನು ಯಾರೋ ಆವರಿಸಿಕೊಂಡಂತೆ ಆಗುತ್ತಿತ್ತು ಎಂದು ಭಯಭೀತರಾಗಿ ಹೇಳಿಕೊಂಡರು.

ಚಿತ್ರದಲ್ಲಿ ಆರ್ಕೆಸ್ಟ್ರಾ ಗಾಯಕನಾಗಿ ನಟಿಸಿರುವ ನಾಯಕ ನವೀನ್ ಕೃಷ್ಣ ತಾವು ಕೂಡ ದೆವ್ವವನ್ನು ನಂಬುವುದಾಗಿ ಹೇಳಿ, `ಚಿತ್ರ ಎಲ್ಲಾ ರೀತಿಯಲ್ಲೂ ಚೆನ್ನಾಗಿ ಮೂಡಿಬಂದಿದೆ. ಕನಿಷ್ಠ ಹತ್ತು ಸನ್ನಿವೇಶದಲ್ಲಾದರೂ ಪ್ರೇಕ್ಷಕರು ಬೆಚ್ಚಿಬೀಳುವಂತೆ ಮಾಡಲಿದೆ. ತಮ್ಮದೇ ಶೈಲಿಯ ಪಂಚಿಂಗ್ ಸಂಭಾಷಣೆಗಳು ಚಿತ್ರದಲ್ಲಿವೆ. ನಿರ್ದೇಶಕರ ಪ್ರತಿಭೆ ಚಿತ್ರದಲ್ಲಿ ಎದ್ದು ಕಾಣಲಿದೆ~ ಎಂದು ಮೆಚ್ಚಿಕೊಂಡರು.

ಮತ್ತೊಬ್ಬ ನಾಯಕಿ ಭೂಮಿಕಾಗೆ ದೆವ್ವದ ಅನುಭವ ಆಗಿಲ್ಲವಂತೆ. ನಿರ್ಮಾಪಕ ಚಂದ್ರಶೇಖರ್ ಮತ್ತು ಸಹ ನಿರ್ಮಾಪಕ ಹೊಸಕೋಟೆ ಮುರಳಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry