ಭೂಮಿಗಂಟಿದ ಬದುಕು

ಬುಧವಾರ, ಜೂಲೈ 17, 2019
27 °C

ಭೂಮಿಗಂಟಿದ ಬದುಕು

Published:
Updated:

ಇಪ್ಪತ್ತೈದು ವರ್ಷಗಳ ಅವರೊಡನೆಯ ಒಡನಾಟದಲ್ಲಿ ಅದೇ ಮೊದಲ ಬಾರಿಗೆ ನಾನು ನೋಡಿದ್ದು-ಆ ಜೀವ ಮಲಗಿದ್ದು!ಜೀವನದುದ್ದಕ್ಕೂ ನಿಜದರ್ಥದಲ್ಲಿ ಭೂಮಿಗಂಟಿ ಬದುಕಿದ್ದ ಜೀವ ಕೇವಲ ನಾಲ್ಕು ವರ್ಷಗಳ ಹಿಂದಷ್ಟೇ ಕಟ್ಟಿದ ಹೊಸ ಮನೆಯ ಹಜಾರದಲ್ಲಿ ತಂಪು ಪೆಟ್ಟಿಗೆಯ ಒಳಗೆ ತಣ್ಣಗೆ ಮಲಗಿತ್ತು.ಲಿಂಗದೇವರು ಹಳೆಮನೆ ಅವರ ನಿಶ್ಚಲ ದೇಹದ ಮುಂದೆ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಹೊರ ಬಂದೆ. ಲಿಂಗದೇವರು ಹಳೆಮನೆ ನಿಧನರಾಗಿದ್ದರು!ದೇಹದ ದಣಿವ ಕಡೆಗಣಿಸಿ ಮೂರೂ ಹೊತ್ತು ಅಧ್ಯಯನಶೀಲರಾಗಿ ಓದುತ್ತಾ, ಬರೆಯುತ್ತಾ, ಭಾಷಣ ಮಾಡುತ್ತಾ, ಪ್ರಗತಿಪರ ಆಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ, ಭಾಷೆ, ಶಿಕ್ಷಣ, ಸಾಹಿತ್ಯ, ರಂಗಭೂಮಿ ಕುರಿತ ಹಲವು ಕನಸುಗಳನ್ನು ಹೆಣೆಯುತ್ತಾ, ಹತ್ತಿರಬಂದವರನ್ನೆಲ್ಲ ಪ್ರೀತಿಯಿಂದ ಮಾತನಾಡಿಸುತ್ತಾ, ತಮ್ಮ ಆಲೋಚನೆ, ಕೆಲಸ ಕಾರ್ಯಗಳಲ್ಲಿ ಭೂಮಿಗೆ ಅಂಟಿಕೊಂಡಿದ್ದರೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕರ್ನಾಟಕದ ಉದ್ದಗಲಕ್ಕೂ ಊರೂರು ತಿರುಗುತ್ತಾ, ಪ್ರಗತಿಪರ ಚಿಂತಕರ, ಯುವ ಸೃಜನಶೀಲ ಪ್ರತಿಭೆಗಳ ಬೆನ್ನುತಟ್ಟುತ್ತ ಸದಾ ಲವಲವಿಕೆಯಿಂದಿದ್ದ ಚೇತನ ಇದ್ದಕ್ಕಿದಂತೆ ಹೃದಯ ಸ್ತಂಭನಕ್ಕೊಳಗಾಗಿ ಸ್ತಬ್ಧವಾಗುತ್ತದೆ ಎಂದು ಯಾರು ತಾನೆ ನಿರೀಕ್ಷಿಸಿರಲು ಸಾಧ್ಯ?ಕಪ್ಪು ಹೆಪ್ಪುಗಟ್ಟಿದ ಕತ್ತಲ ರಾತ್ರಿ, ಸುಡು ಮಧ್ಯಾಹ್ನದ ಬಿಸಿಲನ್ನು ಮನದಮೇಲೆ ಸುರಿಸಿತ್ತು.ಮಾತು ಮೌನದ ಮೊರೆ ಹೋಗಿತ್ತು. ಹೊರಗೆ ನನ್ನಂತೆ ಮಾತು ಮರೆತು ನಿಂತ ರಂಗಾಯಣದ ಗೆಳೆಯರು. ಮೈಸೂರಿನ ಹಿರಿಯ ಮಿತ್ರರು. ಹಳೆಮನೆಯ ಹತ್ತಿರದವರು.ಎಲ್ಲರೊಳಗೂ ನನಗಾದ ಅನುಭವವೇ ಆತಂಕವೇ ಆಘಾತವೇ !ಕಾಲಕಾಲಕ್ಕೆ ಒಂದು ಊರಿನ ವ್ಯಕ್ತಿತ್ವ ರೂಪುಗೊಳ್ಳುವುದು ಅಲ್ಲಿ ನೆಲೆಗೊಂಡಿರುವ ಹಲಕೆಲವು ಅಪರೂಪದ ಮಂದಿಯ ಸೃಜನಶೀಲ ಅಸ್ತಿತ್ವದಿಂದಾಗಿ. ಪ್ರಸ್ತುತ ಮೈಸೂರಿನ ವ್ಯಕ್ತಿತ್ವದ ಒಂದಂಗವಾಗಿ ಬೆಳೆದಿದ್ದ ಹಳೆಮನೆ ಇನ್ನಿಲ್ಲ ಎಂದಾಗ, ಆ ಊರಿನ ವ್ಯಕ್ತಿತ್ವ ಊನವೇ !ಊರು ಮಾತ್ರವಲ್ಲ, ಹಳೆಮನೆಯವರ ನಿಧನದಿಂದಾಗಿ, ಕನ್ನಡ ಶಾಸ್ತ್ರೀಯ ಸ್ಥಾನಮಾನ ಕುರಿತ ಕಡತ ನೆನೆಗುದಿಗೆ ಬಿದ್ದಿದೆ. ಕೇಂದ್ರ ಸರ್ಕಾರ ಮೌನವಾಗಿದೆ. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಕೂಗಿ ಹೇಳದಿದ್ದರೆ ಕೇಳುವುದಿಲ್ಲ.ಹಳೆಮನೆ ಕನ್ನಡದ ಕ್ಲಾಸಿಕಲ್ ಸ್ಥಾನಮಾನ ಕುರಿತಂತೆ ಸಮಗ್ರವಾಗಿ ಅಧ್ಯಯನ ಮಾಡಿದವರು. ರೂಪುರೇಷೆಗಳನ್ನು ಚಿಂತಿಸಿದ್ದವರು. ಆ ಬಗ್ಗೆ ದಾಖಲಿಸಿದವರು.ಸ್ಥಾನಮಾನ ಸಾಧ್ಯವಾದ ಕೂಡಲೇ ಕನ್ನಡ ಕುರಿತ ಕೆಲಸವನ್ನು ಕನಸುಕಂಡಿದ್ದವರು. ಕೇಂದ್ರ, ರಾಜ್ಯ ಸರ್ಕಾರಗಳ ಧೋರಣೆಗೆ ರೋಸಿ, ಗಣ್ಯರಿಂದ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಸಿದ್ದವರು.

 

ನಿರ್ಲಕ್ಷ್ಯ ಮುಂದುವರೆದರೆ ಚಳವಳಿ ಅನಿವಾರ್ಯವಾಗಬಹುದು ಎಂದು ಧಮಕಿ ಹಾಕಿಸಿದ್ದವರು. ಈಗ, ಅವರ ನಿಧನದಿಂದಾಗಿ ಕನ್ನಡದ ಕನ್ನಡಕ್ಕೆ ಕ್ಲಾಸಿಕಲ್ ಸ್ಥಾನಮಾನ ಕುರಿತ ಕೆಲಸಗಳು ಕುಂಟತೊಡಗುವುದು ಸಹಜವೇ.ಬರಿದೇ ಭಾಷಣ ಮಾಡಿ ಕುಳಿತುಕೊಳ್ಳುವ ಜಾಯಮಾನ ಹಳೆಮನೆಯವರದಲ್ಲ. ಅವರ ಹಳೆಮನೆಯವರ ಆಸಕ್ತಿಯ ಕ್ಷೇತ್ರಗಳು ಹಲವು. ನಾಟಕಕಾರ, ಭಾಷಾತಜ್ಞ, ಭಾಷಣಕಾರ, ಅಂಕಣಕಾರ, ಸಂಘಟಕ, ಸಾಂಸ್ಕೃತಿಕ ಚಿಂತಕ, ಸಮಾಜಮುಖಿ ಹೋರಾಟಗಾರ, ದಕ್ಷ ಆಡಳಿತಗಾರ, ಬೆಳೆಯುವ ಹಂಬಲದ ಹುಡುಗರ ಬೆನ್ನು ತಟ್ಟುವ ಹಿರೀಕ- ಹೀಗೆ, ಎಲ್ಲರ ಪ್ರೀತಿಯ ವ್ಯಕ್ತಿಯವರು.ಮೈಸೂರಿನಲ್ಲಿ ಎಲ್ಲೇ ಸಾಹಿತ್ಯ ಸಂವಾದವಾಗಲಿ, ವಿಚಾರ ಸಂಕಿರಣವಾಗಲಿ, ಸಾಮಾಜಿಕ ಆಂದೋಲನವಾಗಲಿ, ರಂಗಚಟುವಟಿಕೆಯಾಗಲಿ ಅಲ್ಲಿ ಹಳೆಮನೆ ಇರಲೇಬೇಕು. ಮೈಸೂರಿನ ಪ್ರಜ್ಞಾವಂತ ಸಮುದಾಯದ ಯಾವುದೇ ಚಟುವಟಿಕೆಗೂ ಅವರ ಇರವು ಅನಿವಾರ್ಯ.

 

ಅವರ ಮಾತು ಸರಳ, ಸುಂದರ ಹಾಗೂ ಸ್ಫುಟ. ಕೇಳುತ್ತಾ ಕುಳಿತವರು ತಮ್ಮ ಮೊಬೈಲ್ ಆಫ್ ಮಾಡಿ ಮಂತ್ರಮುಗ್ಧರಾಗುತ್ತಿದ್ದರು. ಹಾಗಿತ್ತು ಅವರ ಚಿಂತನೆ, ಭಾಷಣದ ವೈಖರಿ!ಅವರ ಚಟುವಟಿಕೆಗಳು ಮೈಸೂರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಕರ್ನಾಟಕದಾದ್ಯಂತ ಹರಡಿತ್ತು. ರಾಜ್ಯದೆಲ್ಲೆಡೆ ಅವರಿಗೆ ಗೆಳೆಯರು. ಹೋದಹೋದಲ್ಲೆಲ್ಲ ಸ್ನೇಹಿತರು, ಶಿಷ್ಯಂದಿರು.ಲಿಂಗದೇವರು ಎಡಪಂಥೀಯ ವಿಚಾರಧಾರೆಯತ್ತ ಒಲಿದವರಾದರೂ, ಕಾಲಕ್ಕೆ ತಕ್ಕಂತೆ ತಮ್ಮ ವಿಚಾರ - ಧೋರಣೆಗಳನ್ನು ಪ್ರಶ್ನಿಸಿಕೊಳ್ಳುತ್ತ ಮಾನವೀಯ ನೆಲೆಯಲ್ಲಿ ಸಮಾಜಕ್ಕೆ ಸ್ಪಂದಿಸುವ ಮುಕ್ತಮನಸ್ಸುಳ್ಳವರಾಗಿದ್ದರು.ಸುತ್ತಲಿನ ಸಮಾಜದ ಆಗುಹೋಗುಗಳಿಗೆ ಅವರು ಸ್ಪಂದಿಸಿದ ಬಗೆಯನ್ನು ಪ್ರತಿಬಿಂಬಿಸುವ, `ಪ್ರಜಾವಾಣಿ~ಯಲ್ಲಿ ಪ್ರಕಟಗೊಂಡ ಅವರ ಅಂಕಣ ಬರಹಗಳ ಸಂಕಲನ `ಬೆಳಕು ಬೆರಗು~  ಅವರ ವಿಚಾರಧಾರೆ ಹಾಗೂ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಅಪರೂಪದ ಪುಸ್ತಕ.`ಬದುಕಿಗಾಗಿ ಕಲೆ~ ಎಂಬ ಧ್ಯೇಯದೊಡನೆ ಹುಟ್ಟಿಕೊಂಡ `ಸಮುದಾಯ ಸಾಂಸ್ಕೃತಿಕ ಸಂಘಟನೆ~ಯ ಸಂಸ್ಥಾಪಕ ಸದಸ್ಯರಲೊಬ್ಬರಾದ ಹಳೆಮನೆ ಅವರ ರಂಗಭೂಮಿ ಸಂಬಂಧ ದಶಕಗಳಷ್ಟು ಹಳೆಯದು. ರಂಗಭೂಮಿ ಸಂಘಟಕರಾಗಿ, ನಾಟಕಕಾರರಾಗಿ ಬೆಳೆಯುತ್ತಾ ಬಂದ ಅವರು ನಾಡಿನ ಹೆಮ್ಮೆಯ ರೆಪರ್ಟರಿ ಸಂಸ್ಥೆಯಾದ `ರಂಗಾಯಣ~ದ ನಿರ್ದೇಶಕರಾದುದ್ದು ಅವರ ಬದುಕು ರಂಗಭೂಮಿಯೊಡನೆ ಬೆಸೆದುಕೊಂಡಿದ್ದರ ದ್ಯೋತಕವಾಗಿದೆ.ಚಳವಳಿ ಅಥವಾ ಸಂವೇದನೆಯ ನುಡಿಗಟ್ಟಿನಲ್ಲಿ ಹೇಳುವುದಾದರೆ ರಂಗಭೂಮಿ ಮೂಲತಃ ಒಂದು ರೀತಿಯ ಮಾನಸಿಕ ತಳಮಳ. ಭೂಮಿ ಮತ್ತು ಸಂಸ್ಕೃತಿಯ ನಡುವೆ ಕಾಣಿಸುವ ಹೊಕ್ಕಳು ಬಳ್ಳಿಯ ನಂಟು, ಭೂಮಿ ಮತ್ತು ರಂಗಭೂಮಿಯ ನಡುವೆ ಇದೆ.ಭೂಮಿಯ ಸುಖದುಃಖಗಳಿಗೆ ಸರಿಯಾದ ನೆಲೆಯಲ್ಲಿ ಸ್ಪಂದಿಸುವುದು ರಂಗಭೂಮಿಯ ಕರ್ತವ್ಯ. ಆದ್ದರಿಂದಲೇ ಅದು ಸಮಕಾಲೀನ ಹೊಸ ಸಾಧ್ಯತೆಗಳ ಕಡೆಗೆ ನೋಟವನ್ನು ಹಾಯಿಸುತ್ತಾ ಇರುತ್ತದೆ ಎಂದು ಬಲವಾಗಿ ನಂಬಿದ್ದವರು ಹಳೆಮನೆಯವರು.ಹೀಗಾಗಿಯೇ ತಮ್ಮ ತಳಮಳಗಳನ್ನು ನಾಟಕಕಾರರಾಗಿ ರಂಗಭೂಮಿಯ ಮೂಲಕ ಅಭಿವ್ಯಕ್ತಿಸುತ್ತಿದ್ದರು. `ತಸ್ಕರ~ ನಾಟಕವೊಂದನ್ನು ಹೊರತು ಪಡಿಸಿ, ಅವರ ಮಿಕ್ಕ ನಾಟಕಗಳಾದ `ಚಿಕ್ಕದೇವ ಭೂಪ~, `ಅಂತೆಂಬರ ಗಂಡ~, `ಶಾಪ~, `ಗಡಿಯಂಕ ಕುಡಿಮುದ್ದ~- ಮೈಸೂರು ಅರಸರ ಇತಿಹಾಸವನ್ನು ಆಧರಿಸಿದರೂ ವರ್ತಮಾನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿವೆ, ಪರಿಶೀಲಿಸಿವೆ. ಅವರ ಎಡಪಂಥೀಯ ವಿಚಾರ ಧೋರಣೆಯ ಸಲುವಾಗಿ ಬ್ರೆಕ್ಟ್ ಕನ್ನಡಕ್ಕೆ ಅವರಿಂದ ಅನುವಾದಗೊಂಡಿದ್ದಾನೆ.`ಮದರ್ ಕರೇಜ್~, `ಧರ್ಮಪುರಿಯ ದೇವದಾಸಿ~, `ಮನುಷ್ಯ ಅಂದ್ರೆ ಮನುಷ್ಯನೆ~, `ಮಟಾಶ್ ರಾಜಾ~, `ಗುಂಡುತಲೆ ಚೂಪುತಲೆ~ ಬ್ರೆಕ್ಟ್‌ನ ಅನುವಾದಗಳು ರಾಜ್ಯಾದ್ಯಂತ ಅವರ ಇತರೆ ನಾಟಕಗಳಂತೆ ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಅಲ್ಲದೆ ಹಳೆಮನೆಯವರು ರಾಡ್ ಲ್ಯಾಂಗ್ಲೆಯ `ಡಾ ಬೆಥೂನ್~, ಜೀನ್ ಪಾಲ್ ಸಾರ್ತ್ರೆಯ `ನೆರಳಿಲ್ಲದ ಮನುಷ್ಯರು~, ಪರಶುರಾಮ ರಾಮಮೂರ್ತಿಯವರ `ವಾನಪ್ರಸ್ಥ~ವನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.ಭಾರತೀಯ ಭಾಷಾ ಸಂಸ್ಥಾನದಲ್ಲಿ ಭಾಷಾ ತಜ್ಞರಾಗಿ ಹಳೆಮನೆಯವರು ಹಲವಾರು ಮಹತ್ವದ ಯೋಜನೆಗಳ ನೇತತ್ವವಹಿಸಿದ್ದರು. ಅವುಗಳಲ್ಲಿ ಮುಖ್ಯವಾದುದು `ಭಾಷಾ ಮಂದಾಕಿನಿ~ ಎಂಬ ಕನ್ನಡ ದೃಶ್ಯ ವಿಶ್ವಕೋಶ. ಈ ಯೋಜನೆಯಲ್ಲಿ, ನಾಡುನುಡಿಗೆ ಕೊಡುಗೆ ನೀಡಿದ ನೂರಾರು ಮಹನೀಯರ ಬದುಕು-ಸಾಧನೆ ಸಾಕ್ಷ್ಯಚಿತ್ರಗಳಾಗಿ ರೂಪುಗೊಳ್ಳಲು ಹಳೆಮನೆ ದುಡಿದಿದ್ದರು.ಮೈಸೂರಿನಲ್ಲೇ `ರಂಗಾಯಣ~ ಸ್ಥಾಪನೆಯಾಗಬೇಕು ಎಂದು ಪ್ರತಿಪಾದಿಸುವುದರಿಂದ ಹಿಡಿದು ತಮ್ಮ ಕೊನೆಯುಸಿರಿನವರೆಗೂ ರಂಗಾಯಣದ ಬೆನ್ನೆಲುಬಾಗಿದ್ದರು ಹಳೆಮನೆ.ಸಂಸ್ಥಾಪಕ ನಿರ್ದೇಶಕರರಾಗಿದ್ದ ಬಿ.ವಿ. ಕಾರಂತರಿಂದ ಹಿಡಿದು ಬಿ.ಜಯಶ್ರೀ ಅವರವರೆಗಿನ ರಂಗಾಯಣದ 23 ವರ್ಷಗಳ ದೀರ್ಘಪಯಣದಲ್ಲಿ ಅದರೊಂದಿಗೆ ದುಡಿದ ಮೈಸೂರಿನ ಕೆಲವೇ ಪ್ರಜ್ಞಾವಂತರ ಪೈಕಿ ಹಳೆಮನೆಯವರೂ ಒಬ್ಬರು. ರಂಗ ನಿರ್ದೇಶಕ ಪ್ರಸನ್ನರು ರಂಗಾಯಣದ ನಿರ್ದೇಶಕರಾಗಿದ್ದ ಸಮಯದಲ್ಲಿ ಪ್ರಾರಂಭಗೊಂಡ ಭಾರತೀಯ ರಂಗ ಶಿಕ್ಷಣಕೇಂದ್ರಕ್ಕೆ ಗೌರವ ಪ್ರಾಂಶುಪಾಲರಾಗಿ ಅವರು ವರ್ಷಗಳ ಕಾಲ ದುಡಿದಿದ್ದರು.ರಂಗಾಯಣದ ನಿರ್ದೇಶಕರಾಗಿ ಆಯ್ಕೆಗೊಂಡಾಗ, ಕೆಲವರಿಂದಾಗಿ ಅವರ ನೇಮಕ ತಡವಾದಾಗ ಹಳೆಮನೆಯವರು ಅತ್ಯಂತ ತಾಳ್ಮೆ ವಹಿಸಿದರು. ಯಾರನ್ನೂ ಹಳಿಯದೇ ಸುಮ್ಮನಿದ್ದರು.ಅಧಿಕಾರ ವಹಿಸಿಕೊಂಡ ಕೂಡಲೇ ಕಹಿ ಅನುಭವಗಳನ್ನೆಲ್ಲ ಬದಿಗೊತ್ತಿ ರಂಗಾಯಣದ ಕಲಾವಿದರು, ಸಿಬ್ಬಂದಿ ವರ್ಗದವರ ಪ್ರೀತಿ ವಿಶ್ವಾಸಗಳನ್ನು ಸಂಪಾದಿಸಿ, ರಂಗಾಯಣದ ವಾರ್ಷಿಕ ಯೋಜನೆಗಳ ಮಿತಿಗಳನ್ನು ವಿಸ್ತರಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.ಮೈಸೂರಿಗೆ ಮಾತ್ರ ಸೀಮಿತರಾಗಿದ್ದ ಬಿ.ವಿ ಕಾರಂತ ಯುವರಂಗೋತ್ಸವವನ್ನು ಕರ್ನಾಟಕದ ವಿಶ್ವವಿದ್ಯಾನಿಲಯಗಳ ಮಟ್ಟಕ್ಕೆ ಏರಿಸಿ, ನವರಾತ್ರಿಯ ಸಂದರ್ಭದಲ್ಲಿ ರಾಜಾದಾದ್ಯಂತ ಏಕಕಾಲಕ್ಕೆ 38 ನಾಟಕ ಪ್ರಯೋಗಗಳಿಗೆ ಕಾರಣಕರ್ತರಾದರು.ಬೆಟ್ಟದಷ್ಟು ದುಡಿದಿದ್ದರೂ ಬೊಗಸೆಯಷ್ಟೂ ದುಡಿದಿಲ್ಲ ಎಂಬ ಮನೋಭಾವ ಹಳೆಮನೆಯವರದು. ಅವರು ತಮ್ಮ ದೇಹ - ಮನಸ್ಸಿಗೆ ತುಸು ವಿಶ್ರಾಂತಿ ನೀಡಿದ್ದರೆ, ಅರವತ್ತು ಸಂವತ್ಸರಗಳನ್ನು ಕಳೆದ ದೇಹವನ್ನು ಒಂದಿಷ್ಟು ಶಿಸ್ತಿಗೆ ಒಳಪಡಿಸಿದಿದ್ದರೆ ಕನ್ನಡ ಸಾರಸ್ವತ ಲೋಕ ಇನ್ನಷ್ಟು ಶ್ರೀಮಂತವಾಗುತ್ತಿತ್ತು.                         

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry