ಸೋಮವಾರ, ಜನವರಿ 20, 2020
18 °C

ಭೂಮಿಗೆ ಚಿತ್ರ ರವಾನಿಸಿದ ಚೀನಾ ರೋವರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌ (ಪಿಟಿಐ): ಚಂದ್ರನ ನೆಲದಲ್ಲಿ ಇಳಿದಿರುವ ಚೀನಾದ ರೋವರ್‌ ‘ಯುಟು’ ಅಥವಾ ‘ಜೇಡ್‌ ರ್‍ಯಾಬಿಟ್‌’, ಭೂಮಿಗೆ ಛಾಯಾಚಿತ್ರಗಳನ್ನು ರವಾನಿಸಲು ಆರಂಭಿಸಿದೆ.ಚಂದ್ರನಲ್ಲಿ ಇಳಿದಿದ್ದ ಚಾಂಗ್‌’ಇ–3 ನೌಕೆಯಿಂದ ಬೇರ್ಪಟ್ಟ ಆರು ಚಕ್ರಗಳನ್ನು ಹೊಂದಿರುವ ‘ಯುಟು’, ಸ್ಥಳೀಯ ಕಾಲಮಾನ ಶನಿವಾರ ಮುಂಜಾನೆ 4.35 ಚಂದ್ರನ ನೆಲ ಸ್ಪರ್ಶಿಸಿತ್ತು.140 ಕೆಜಿ ತೂಕದ ರೋವರ್‌, ಭಾನುವಾರ ಬೆಳಿಗ್ಗೆ 11.42ಕ್ಕೆ ನೌಕೆ ಇಳಿದಿದ್ದ ಸ್ಥಳದಿಂದ ಉತ್ತರಕ್ಕೆ 9 ಮೀಟರ್‌ ಚಲಿಸಿದೆ.ಈ ಪ್ರಕ್ರಿಯೆಯನ್ನು ಚಾಂಗ್‌’ಇ–3 ನೌಕೆಯಲ್ಲಿ ರುವ ಕ್ಯಾಮೆರಾ ಸೆರೆ ಹಿಡಿದು ಭೂಮಿಗೆ ರವಾನಿಸಿದೆ. ಬೇರ್ಪಟ್ಟ ಬಳಿಕ ನೌಕೆ ಹಾಗೂ ರೋವರ್‌ ಪರಸ್ಪರ ಚಿತ್ರಗಳನ್ನು ಸೆರೆ ಹಿಡಿದಿವೆ. ಜತೆಗೆ ಚಂದಿರನ ಅಧ್ಯಯನವನ್ನೂ ಆರಂಭಿಸಿವೆ ಎಂದು ಕ್ಸಿನ್‌ಹುವಾ ವರದಿ ಮಾಡಿದೆ.ಚೀನಾದ ಅಂತರಿಕ್ಷ ಜಾಲದ ಮೂಲಕ ರವಾನಿ­ಸಲಾಗಿರುವ ವರ್ಣಮಯ ಚಿತ್ರವು ‘ಯುಟು’ ವಿನಲ್ಲಿ ಚೀನಾದ ಧ್ವಜ ಇರುವುದನ್ನು ಪ್ರದರ್ಶಿಸಿದೆ.  ‘ಯುಟು’ ರೋವರ್‌ ಮೂರು ತಿಂಗಳ ಕಾಲ ಚಂದ್ರನ ಭೂವೈಜ್ಞಾನಿಕ ರಚನೆ ಹಾಗೂ ಮೇಲ್ಮೈನಲ್ಲಿರುವ ವಸ್ತುಗಳನ್ನು ವಿಶ್ಲೇಷಿಸಲಿದೆ. ಜೊತೆಗೆ ನೈಸರ್ಗಿಕ ಸಂಪನ್ಮೂಲಗಳ ಶೋಧವನ್ನೂ ನಡೆಸಲಿದೆ.ಇತ್ತ, ಚಾಂಗ್‌’ಇ–3 ನೌಕೆಯು ತಾನು ಇಳಿದ ಸ್ಥಳದಲ್ಲೇ ಒಂದು ವರ್ಷ ಕಾಲ ಚಂದ್ರನ ನೆಲದ ಅಧ್ಯಯನ ನಡೆಸಲಿದೆ.ಚೀನಾ ಹೆಗ್ಗಳಿಕೆ: 40 ವರ್ಷಗಳ ಬಳಿಕ ರಾಷ್ಟ್ರ­­ವೊಂದು ಚಂದ್ರನಲ್ಲಿ ಯಶಸ್ವಿ­ಯಾಗಿ ನೌಕೆಯನ್ನು  ಇಳಿಸಿದ್ದು ಇದೇ ಮೊದಲು. 1976ರಲ್ಲಿ ಸೋವಿ ಯತ್‌ ಒಕ್ಕೂಟ ಚಂದ್ರನಲ್ಲಿ ನೌಕೆಯನ್ನು ಇಳಿಸಿತ್ತು.ಚೀನಾದ ಬಾಹ್ಯಾ­ಕಾಶ ಅಧ್ಯಯನ ಕ್ಷೇತ್ರದಲ್ಲಿ ಇದೊಂದು ಮಹತ್ಸಾಧನೆ. ಅಮೆರಿಕ, ಸೋವಿಯತ್‌ ಒಕ್ಕೂಟದ ನಂತರ ಚಂದ್ರನಲ್ಲಿ ನೌಕೆ ಇಳಿಸಿದ ಮೂರನೇ ರಾಷ್ಟ್ರ ಎಂಬ ಕೀರ್ತಿಗೂ ಚೀನಾ ಭಾಜನವಾಗಿದೆ.

ಪ್ರತಿಕ್ರಿಯಿಸಿ (+)