ಭೂಮಿಗೆ ನಮನ

7

ಭೂಮಿಗೆ ನಮನ

Published:
Updated:
ಭೂಮಿಗೆ ನಮನ

ಭೂಮಿಯನ್ನು ‘ಮಾತೃಭೂಮಿ, ಭೂಮ್ತಾಯಿ’ ಎನ್ನುತ್ತೇವೆ. ವನ್ಯ, ಖನಿಜ ಖಜಾನೆಯಾಗಿರುವುದರಿಂದ ‘ರತ್ನಗರ್ಭಾ ವಸುಂಧರೆ, ಹಸಿರು ನೀಲಾಂಬರ ಭೂಷಿತೆ’ ಎಂದೆಲ್ಲಾ ವ್ಯಾಖ್ಯಾನಿಸುತ್ತೇವೆ. ‘ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ಮರೆಯಲಿ...’ ಎಂದು ಹಾಡುತ್ತೇವೆ. ಹಾಗಾಗಿಯೇ ವೈಜ್ಞಾನಿಕವಾಗಿ ಭೂಮಿ ಒಂದು ಗ್ರಹವಾದರೂ, ಭಾವನಾತ್ಮಕವಾಗಿ ಅದು ನಮ್ಮೆಲ್ಲರ ‘ಮನೆ’. ಅದರ ಮೇಲಿರುವ ಸಕಲ ಜೀವರಾಶಿಯೂ ನಮ್ಮ ಕುಟುಂಬ. ಆದರೆ ಅದು ನಮ್ಮಆಸ್ತಿಯಲ್ಲ. ಪೀಳಿಗೆಯಿಂದ ಎರವಲಾಗಿ ಪಡೆದದ್ದು. ಅದನ್ನು ಅಷ್ಟೇ ಸುರಕ್ಷಿತವಾಗಿ, ಜೋಪಾನವಾಗಿ ಹಿಂದಿರುಗಿಸುವ ಜವಾಬ್ದಾರಿ ನಮ್ಮ ಮೇಲಿದೆ !ಆದರೆ ನಾವೇನು ಮಾಡುತ್ತಿದ್ದೇವೆ? ಇಂಥ ಭೂಮಿಯನ್ನು ನಮ್ಮ ಸೌಲಭ್ಯ, ಸೌಕರ್ಯಗಳ ದುರಾಸೆಯಿಂದ ಬಲಿಕೊಡುತ್ತಿದ್ದೇವೆ. ಭೂಮಿ ತನ್ನ ರಕ್ಷಣೆಗಾಗಿ ತಾನೇ ನಿರ್ಮಿಸಿಕೊಂಡಿದ್ದ ಕಾಡು- ಮೇಡು, ಕೆರೆ-ಹೊಂಡ, ಗುಡ್ಡ-ಬೆಟ್ಟಗಳನ್ನೆಲ್ಲ ನಾಶ ಮಾಡುತ್ತಿದ್ದೇವೆ. ದಾಹ ತೀರಿಕೆಗಾಗಿ ಅಂತರ್ಜಲ ಬರಿದು ಮಾಡುತ್ತಿದ್ದೇವೆ. ಖನಿಜ ಸಂಪತ್ತಿಗಾಗಿ ಭೂಮಿ ಬಗೆಯುತ್ತಿದ್ದೇವೆ. ಮಡಿಲಲ್ಲಿ ಸೋಬಲಕ್ಕಿ ಇಟ್ಟು ಮನೆಯ ಹೆಣ್ಮಗಳಂತೆ ಕಾಣಬೇಕಿದ್ದ ಭೂಮಿಗೆ ವಿಷಕಾರಕ ತ್ಯಾಜ್ಯಗಳನ್ನು ತುಂಬುತ್ತಿದ್ದೇವೆ. ಭೂಮಿಯಲ್ಲಿ ಬದುಕುತ್ತಿರುವ ಜೀವಜಂತು ನಾಶ ಮಾಡುತ್ತಿದ್ದೇವೆ. ಅಳಿದುಳಿದ ನಿಸರ್ಗವನ್ನು ಮಲಿನಗೊಳಿಸುತ್ತಿದ್ದೇವೆ. ವಿಷ ಪ್ರಾಶನ ಮಾಡಿಸುತ್ತಿದ್ದೇವೆ. ‘ನಿಸರ್ಗ ಕುಟುಂಬ’ದ ಕೆಮಿಸ್ಟ್ರಿಯನ್ನೇ ಬದಲಾಯಿಸುತ್ತಿದ್ದೇವೆ. ಋತುಮಾನಗಳನ್ನೇ ಏರು ಪೇರು ಮಾಡುತ್ತಿದ್ದೇವೆ!ನಿಸರ್ಗದ ಮೇಲೆ ನಡೆಯುತ್ತಿರುವ ಇಂಥ ದುಷ್ಕೃತ್ಯಗಳಿಂದಾಗಿ ಭೂಮಿಯ ಒಡಲು ಬಿಸಿಯಾಗುತ್ತಿದೆ. ಭೂಮಿ ಬಿಕ್ಕಿ ಬಿಕ್ಕಿ ಅಳುತ್ತಿದೆ. ಅದರ ಕಣ್ಣೀರು ಪ್ರವಾಹ, ಸುನಾಮಿಯಾಗಿ ಹಳ್ಳಿ, ನಗರ, ಪಟ್ಟಣಗಳನ್ನು ಯಾವುದೇ ಮುಲಾಜಿಲ್ಲದೆ ಆಹುತಿ ತೆಗೆದುಕೊಳ್ಳುತ್ತಿದೆ. ಇನ್ನೊಂದೆಡೆ ಮರುಭೂಮಿ ವಿಸ್ತರಣೆಯಾಗುತ್ತಿದೆ. ಈ ಏರುಪೇರುಗಳೊಂದಿಗೆ ಹೊಸ ಹೊಸ ರೋಗ-ರುಜಿನಗಳು ಅವತರಿಸುತ್ತ, ಪರೋಕ್ಷವಾಗಿ ಮಾನವನ ವಿರುದ್ಧ ಪ್ರಕೃತಿ ಯುದ್ಧ ಸಾರುತ್ತಿದೆ.ಕೇಳಿಸದ ಭೂದೇವಿ ಆರ್ತನಾದ:ಭೂಮಿ ತನಗಾಗುವ ನೋವನ್ನು ಹಲವು ಬಾರಿ ನಮ್ಮ ಮುಂದೆ ನಾನಾ ರೂಪದಲ್ಲಿ ತೋಡಿಕೊಳ್ಳುತ್ತದೆ. ವಾತಾವರಣ ಏರುಪೇರು ಮಾಡಿ, ಸೋನೆ ಮಳೆ ಸುರಿಸಿ, ಸಣ್ಣದಾಗಿ ಕಂಪಿಸಿ, ‘ನೋಡ್ರಪ್ಪಾ, ನನಗೆ ನೋವಾಗ್ತಿದೆ. ನಿಮ್ಮ ಅವಾಂತರಗಳನ್ನು ನಿಲ್ಲಿಸಿ’ ಎಂದೆಲ್ಲ ಬೇಡುತ್ತದೆ. ಪ್ರಕೃತಿಯನ್ನೇ ಅರ್ಥ ಮಾಡಿಕೊಳ್ಳದ ಪೃಥ್ವಿಯ ಪುತ್ರನಾದ ಮಾನವ, ತಾಯಿಯ ಆರ್ತನಾದವನ್ನು ಕೇಳಿಸಿಕೊಳ್ಳದೇ ನಿಸರ್ಗಕ್ಕೆ ತಲೆಬಾಗದೆ ಅಧಿಪತಿಯಾಗಲು ಮಹೀಪತಿಯಾಗಲು ಹೊರಟಿದ್ದಾನೆ. ಇಂಥ ಅಟ್ಟಹಾಸಗಳಿಗೆ ಭೂ ತಾಯಿ ಒಮ್ಮೊಮ್ಮೆ ಚಂಡಮಾರುತ, ಭೂಕಂಪ, ಬರಗಾಲದಂತಹ ವಿಕೋಪಗಳ ರುದ್ರ ನರ್ತನದೊಂದಿಗೆ ಉತ್ತರಿಸುತ್ತಾಳೆ!ಇದು ಹೀಗೆ ಮುಂದುವರಿದರೆ ನಿಂತ ಜಾಗವೇ ಕುಸಿಯುತ್ತದೆ. ದೇಶಗಳು ಆಕೆಯ ಗರ್ಭದಲ್ಲಿ ಸಮಾದಿಯಾಗುತ್ತವೆ. ಪ್ರಳಯ ಎಂಬುದು ದೇವಾನು ದೇವತೆಗಳ ಶಾಪವಲ್ಲ. ವರ್ಷಾನುಗಟ್ಟಲೆಯಿಂದ ಮಾನವ ನಿಸರ್ಗದ ಮೇಲೆ ನಡೆಸಿದ ಅತ್ಯಾಚಾರಗಳ ಪ್ರತಿಫಲ.

ಅಂಥ ಅಪಾಯದ ಕರೆಗಂಟೆ ಈಗಾಗಲೇ ದೂರದ ಜಪಾನ್‌ನಲ್ಲಿ ಮೊಳಗಿದೆ. ಐದು ವರ್ಷಗಳ ಹಿಂದೆ ನಮ್ಮ ರಾಷ್ಟ್ರಕ್ಕೂ ತಟ್ಟಿತ್ತು.ಇಷ್ಟಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಅಪಾಯ ಖಚಿತ.ಹಾಗಾದರೆ ನಾವೇನು ಮಾಡಬಹುದು ?ಇರುವುದೊಂದೇ ಭೂಮಿ, ಉಳಿಸುವುದೊಂದೇ ನಮ್ಮ ಜವಾಬ್ದಾರಿ! ಇಷ್ಟೆಲ್ಲ ಅನಾಹುತಗಳ ಸುನಾಮಿಯನ್ನು ಎದುರಿಸುವುದು ಹೇಗೆಂದು ಯೋಚಿಸುತ್ತಿದ್ದೀರಾ? ಚಿಂತಿಸಬೇಡಿ. ಅದಕ್ಕೆ ಬೇಕಾದಷ್ಟು ಮಾರ್ಗಗಳಿವೆ. ಮೊದಲಿಗೆ ಪರಿಸರ ಉಳಿಸಲು ಪ್ರತಿಯೊಬ್ಬರೂ ಕಂಕಣ ಬದ್ಧರಾಗಿ. ನಿತ್ಯ ಪರಿಸರಕ್ಕೆ ಹಾನಿಯಾಗದಂತಹ ಹೆಜ್ಜೆಗಳನ್ನಿಡುತ್ತೇನೆಂದು ಸಂಕಲ್ಪ ಮಾಡಿ. ಅದರಂತೆ ಕಾರ್ಯಕ್ರಮ ರೂಪಿಸಿ. ಪರಿಸರ ಉಳಿದರೆ ಭೂಮಿ ಉಳಿದೀತು. ಭೂಮಿ ಉಳಿದರೆ ನಾವು ಉಳಿಯುತ್ತೇವೆ. ಈ ಕಾರ್ಯ ಒಬ್ಬರಿಂದ ಸಾಧ್ಯವಿಲ್ಲ. ಅದಕ್ಕಾಗಿ ಮೊದಲು ನೀವು ಹೆಜ್ಜೆ ಇಡಿ, ನಂತರ ನಿಮ್ಮೊಡನಿರುವವರನ್ನೂ ಕೈಹಿಡಿದು ಕರೆತನ್ನಿ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry