ಭೂಮಿತಿ ಕಾಯ್ದೆ ಜಾರಿಗೆ ಆಗ್ರಹ

7

ಭೂಮಿತಿ ಕಾಯ್ದೆ ಜಾರಿಗೆ ಆಗ್ರಹ

Published:
Updated:

ಚಿಕ್ಕಮಗಳೂರು: ಮಲೆನಾಡ ಭೂಮಿಗೆ ಭೂಮಿತಿ ಕಾಯ್ದೆ ಜಾರಿಗೆ ಒತ್ತಾಯಿಸಿ ಹೋರಾಟ ನಡೆಸುವುದು ಹಾಗೂ ಭಾರೀ ಭೂಮಾಲೀಕರ ಒತ್ತುವರಿ ಭೂಮಿ ತೆರವುಗೊಳಿಸಲು ಒತ್ತಾಯಿಸಿ ಹೋರಾಟ ರೂಪಿಸಲು ನಗರದಲ್ಲಿ ಎರಡು ದಿನಗಳ ಕಾಲ ನಡೆದ ಸಿಪಿಐ (ಎಂ.ಎಲ್.) ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ಸಮ್ಮೇಳನದಲ್ಲಿ ಒಟ್ಟು 32 ರಾಜಕೀಯ  ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ತಿಳಿಸಿದ್ದಾರೆ.ಉಳುವವನೇ ಭೂ ಒಡೆಯ ಕಾಯ್ದೆ ಸಂಪೂರ್ಣ ಜಾರಿಗೆ ಒತ್ತಾಯಿಸಿ ಹೋರಾಟ ನಡೆಸುವುದು; ಬಣ್ಣದ ಸಾರಾಯಿ ವಿರುದ್ಧ ಪ್ರತಿಭಟನೆ, ನಿರಂತರ ಗುಣಮಟ್ಟದ ವಿದ್ಯುತ್ ಸರಬರಾಜು ಹಾಗೂ ಹಳ್ಳಿ, ಪಟ್ಟಣಗಳ ತಾರತಮ್ಯದ ವಿರುದ್ಧ ಹೋರಾಟ ನಡಸಲು ನಿರ್ಧರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಯಾದಗಿರಿ ಜಿಲ್ಲೆಯಲ್ಲಿ ಯುರೇನಿಯಂ ಗಣಿಗಾರಿಗೆ ವಿರೋಧಿಸಿ ಹೋರಾಟ ರೂಪಿಸುವುದು, ದಲಿತ, ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದರ ವಿರುದ್ಧ ಹಾಗೂ ಅವರ ಮೂಲಭೂತ ಹಕ್ಕುಗಳಿಗೆ ಹೋರಾಟ ನಡೆಸುವುದು, ಬಳ್ಳಾರಿಯ ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿರುವ ಅಕ್ರಮ ಆಸ್ತಿ ಮುಟ್ಟುಗೋಲಿಗೆ ಒತ್ತಾಯಿಸಿ ಹೋರಾಟ ನಡೆಸಲು ನಿರ್ಣ ಯಿಸಲಾಗಿದೆ ಎಂದಿದ್ದಾರೆ.ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ವಿರೋಧಿಸುವುದು; ಅರಣ್ಯ, ನೆಲ, ಜಲ, ಖನಿಜ ಸಂಪನ್ಮೂಲ ಉಳಿವಿಗಾಗಿ ಹೋರಾಟ, ಎಲ್ಲ ಪ್ರಕಾರದ ಭ್ರಷ್ಟಾಚಾರದ ವಿರುದ್ಧ, ಬರಪೀಡಿತ ಪ್ರದೇಶದ ಜನರ ಪರಿಹಾರಕ್ಕಾಗಿ ಹೋರಾಟ, ಬಡತನ ರೇಖೆ ಗುರುತಿಸುವ ಸರ್ಕಾರಗಳ ವಂಚನೆ ಬಯಲು ಗೊಳಿಸಲು, ಭದ್ರಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನ ವಿರುದ್ಧ ಹೋರಾಟ ರೂಪಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.ದಲಿತ, ಆದಿವಾಸಿ, ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ, ಜಾತಿವಾದ, ಕೋಮುವಾದ ಹಾಗೂ ಗಡಿಭಾಷಾ ದುರಭಿಮಾನದ ವಿರುದ್ಧ ಹೋರಾಟ. ಅಭಿವೃದ್ಧಿ ಹೆಸರಿನಲ್ಲಿ ನಿಸರ್ಗ ಸಂಪನ್ಮೂಲಗಳ ಲೂಟಿ ಹಾಗೂ ಪರಿಸರ ನಾಶದ ವಿರುದ್ಧ, ಮಹಿಳಾ ಮತ್ತು ಮಕ್ಕಳ ಮೇಲಿನ ಅನ್ಯಾಯ, ಅತ್ಯಾಚಾರ, ಲಿಂಗತಾರತಮ್ಯದ ವಿರುದ್ಧ, ನಗರ ಕೊಳಚೆ ಪ್ರದೇಶಗಳ ಜನರ ವಸತಿ ಹಕ್ಕಿಗಾಗಿ ಸಂಘರ್ಷಕ್ಕಿಳಿಯಲು ಈ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ಉದ್ಯೋಗ ಇಲ್ಲವೆ, ನಿರುದ್ಯೋಗ ಭತ್ಯೆಗೆ ಒತ್ತಾಯಿಸಿ ಹೋರಾಟ ರೂಪಿಸುವುದು, ಅಗತ್ಯ ಪದಾರ್ಥಗಳ ಬೆಲೆ ಹೆಚ್ಚಳ ವಿರೋಧಿ ಬಲಿಷ್ಠ ಜನತಾ ಚಳವಳಿ ಮುನ್ನಡೆಸುವುದು, ವೈಜ್ಞಾನಿಕ ಶಿಕ್ಷಣಕ್ಕಾಗಿ ಮತ್ತು ಶಿಕ್ಷಣದ ವ್ಯಾಪಾರೀಕರಣ ವಿರುದ್ಧ ಹೋರಾಟ, ಗಣಿಗಾರಿಕೆ ನಿಷೇಧ ನೆಪದಲ್ಲಿ ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿರುವ ಬಹುರಾಷ್ಟ್ರೀಯ ಕಂಪನಿ, ಕಾರ್ಪೋರೇಟ್‌ಗಳ ವಿರುದ್ಧ ಹೋರಾಟ ನಡೆಸಲು ಸಮ್ಮೇಳನದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದಿದ್ದಾರೆ.ಪಕ್ಷದ ದಸ್ತಾವೇಜುಗಳನ್ನು ಕೇಂದ್ರ ಸಮಿತಿ ಪ್ರಧಾನಕಾರ್ಯದರ್ಶಿ ಕೆ.ಎನ್.ರಾಮಚಂದ್ರನ್, ಕೇಂದ್ರ ಸಮಿತಿ ಕಾರ್ಯನಿರ್ವಾಹಕ ಆರ್.ಮಾನ ಸಯ್ಯ, ಬಸವಲಿಂಗಪ್ಪ ಮಂಡಿಸಿದರು. ರಾಜ್ಯ ವರದಿಯನ್ನು ಬಿ.ರುದ್ರಯ್ಯ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry