ಭೂಮಿಯ ಕಾಡುವ ಸೌರ ಕಲೆಗಳು

7

ಭೂಮಿಯ ಕಾಡುವ ಸೌರ ಕಲೆಗಳು

Published:
Updated:

ಅ ಕ್ಟೋಬರ್ ಕೊನೆಯ ವಾರದಲ್ಲಿ ಪ್ರಪಂಚದ ಕೆಲವು ಭಾಗಗಳಲ್ಲಿ ಎತ್ತರ ಆವರ್ತನದ ರೇಡಿಯೊ ಸಂವಹನ ಜಾಲಗಳು ತೊಂದರೆಗೆ ಒಳಗಾದವು. ವಿಜ್ಞಾನಿಗಳ ಪ್ರಕಾರ, ೨೦೧೪ರ ಅಕ್ಟೋಬರ್ ೨೬ ರಂದು ಸೂರ್ಯನ ಮೇಲೆ ನಡೆದ ಕೆಲವು ಸ್ಫೋಟಗಳು ಈ ಘಟನೆಗೆ ಕಾರಣ.ಸೂರ್ಯನ ಹೊರಮೈ ಮೇಲೆ ಕಾಣಿಸಿಕೊಳ್ಳುವ ಕೆಲವು ಮಚ್ಚೆಗಳಿಂದ (ಸೌರ ಕಲೆಗಳು) ಇಂತಹ ಸ್ಫೋಟಗಳು ಘಟಿಸುತ್ತವೆ. ಸೂರ್ಯ ಮಚ್ಚೆಗಳೆಂದರೆ ಅವು ವಿಶಾಲ ಕೇಂದ್ರಿಕೃತ ಆಯಸ್ಕಾಂತೀಯ ಕ್ಷೇತ್ರಗಳು. ಇವುಗಳ ಉಷ್ಣಾಂಶ ಸೂರ್ಯನ ಮೇಲ್ಮೈ ಉಷ್ಣಾಂಶಕ್ಕಿಂತ ಕಡಿಮೆ­ಯಿರುತ್ತದೆ. ಕೆಲವೊಮ್ಮೆ ಸೂರ್ಯ ಮಚ್ಚೆಗಳು ರೂಪಗೊಂಡ ಹಿಂದೆಯೇ ತೀವ್ರವಾದ ಸ್ಫೋಟಗಳು ಕಾಣಿಸಿಕೊ­ಳ್ಳುತ್ತವೆ. ಇವಕ್ಕೆ ‘ಸೌರ ಸ್ಫೋಟ’ ಎಂದು ಹೆಸರು. ಈ ಸ್ಫೋಟಗಳು ಭೂಮಿಯ ಸಂಪರ್ಕ ವ್ಯವಸ್ಥೆಗಳಿಗೆ ಹಾನಿ ಮಾಡುವಷ್ಟು ಸಮರ್ಥ ಇರುತ್ತವೆ.‘ಒಂದು ಶಕ್ತಿಯುತವಾದ ‘ಸೌರ ಸ್ಫೋಟ’ವು ತಂತ್ರಜ್ಞಾನದ ಪ್ರಭಾವದ­ಲ್ಲಿರುವ ನಮ್ಮ ಜಗತ್ತಿನಲ್ಲಿ ವ್ಯಾಪಕ ಹಾನಿಗೆ ಕಾರಣವಾಗಬಹುದು. ಇದು ಸಂವಹನ ಜಾಲಗಳನ್ನು ಛಿದ್ರಗೊಳಿ­ಸಬಹುದು ಹಾಗೂ ದೊಡ್ಡ ವಿದ್ಯುತ್ ಪ್ರಸರಣ ಕೇಂದ್ರಗಳನ್ನು ಸ್ಥಗಿತಗೊಳಿ­ಸಬಹುದು’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರಾಧ್ಯಾಪಕ ಪ್ರೊ.ಅರ್ನಬ್ ಚೌಧರಿ ಹೇಳುತ್ತಾರೆ.

ಷಿಕಾಗೊ ವಿಶ್ವವಿದ್ಯಾನಿಲಯಲ್ಲಿ ಪಿಎಚ್.ಡಿ ಮಾಡುತ್ತಿದ್ದ ದಿನಗಳಿಂದಲೂ ಪ್ರೊ. ಚೌಧರಿ ಸೂರ್ಯ ಮಚ್ಚೆಗಳ ವಿಷಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಪ್ರೆಸ್‌­ನಿಂದ ಪ್ರಕಟಿತವಾದ ಅವರ ಪುಸ್ತಕ ‘ನೇಚರ್ಸ್ ಥರ್ಡ್ ಸೈಕಲ್’ ಜನಸಾಮಾನ್ಯರಿಗೆ ಸೂರ್ಯ ಮಚ್ಚೆಗಳ ಕಥೆಗಳನ್ನು ತಿಳಿಸುವ ಗುರಿಹೊಂದಿದೆ. ಆ ಪುಸ್ತಕವು ಮಾರ್ಚ್‌ ಮೊದಲ ವಾರ­ದಲ್ಲಿ ಐಐಎಸ್‌ಸಿಯಲ್ಲಿ ಬಿಡುಗಡೆ­ಗೊಳ್ಳಲಿದೆ.ಭೂಮಿಯು ಸೂರ್ಯನ ಸುತ್ತ ಸುತ್ತುವ ಒಂದು ದೊಡ್ಡ ಚೆಂಡಷ್ಟೇ ಅಲ್ಲ, ಅದು ಒಂದು ಬೃಹದಾಕಾರವಾದ ಆಯಸ್ಕಾಂತ. ನಮ್ಮ ಗ್ರಹದ ಸುತ್ತ ಭೂಮಿಯಿಂದ ಪ್ರಭಾವಕ್ಕೊಳಪಟ್ಟಿರುವ ಅಯಸ್ಕಾಂತ ಕ್ಷೇತ್ರದ ಪ್ರದೇಶವೇ ‘ಕಾಂತ ವಲಯ’ ಅಥವಾ ‘ಕಾಂತ ಗೋಳ’. ಇದು ನಮ್ಮನ್ನು ಸೌರ ಸ್ಫೋಟದ ಪ್ರಭಾವದಿಂದ ಕಾಪಾಡುತ್ತದೆ. ಆದಾಗ್ಯೂ, ಶಕ್ತಿಯುತ ಸೌರ ಸ್ಫೋಟಗಳು ಈ ರಕ್ಷಾಕವಚವನ್ನು ಭೇದಿಸಬಲ್ಲವು.ಇತ್ತೀಚೆಗೆ ‘ಎ.ಆರ್. ೧೨೧೯೨’ ಹೆಸರಿನ ಸೂರ್ಯ ಮಚ್ಚೆಯಿಂದ ಸೌರ ಸ್ಫೋಟವು ಹೊರ­ಸೂಸಿದೆ. ಈ ಬೃಹದಾಕಾರವಾದ ಸೂರ್ಯ ಮಚ್ಚೆಯು, ೧,೨೯,೦೦೦ ಕಿ.ಮೀ ಅಗಲವಾಗಿದೆ. ಇದು ಭೂಮಿಯ ವ್ಯಾಸಕ್ಕಿಂತ ೧೦ ಪಟ್ಟು ದೊಡ್ಡ­ದಾಗಿದೆ. ೨೫ ವರ್ಷದಿಂದೀಚೆಗೆ ವೀಕ್ಷಿಸಿರುವ ಸೂರ್ಯ ಮಚ್ಚೆಗಳಲ್ಲಿ ಇದು ಅತ್ಯಂತ ವಿಶಾಲ­ವಾದದ್ದು.ಹಲವು ಸೂರ್ಯ ಸ್ಫೋಟಗಳು ಅಧಿಕ ತಾಪ­ಮಾನವಿರುವ ಅನಿಲದ ದೊಡ್ಡ ಗುಳ್ಳೆಗಳನ್ನು ಉಗುಳುತ್ತವೆ. ಈ ಪ್ರಕ್ರಿಯೆಗೆ ಪರಿವೇಷಕ ಸಮೂಹ ನಿಷ್ಕಾಸ ಎಂದು ಹೆಸರು. ಇವು ಭೂಮಿಯನ್ನು ತಲುಪಲು ಎರಡರಿಂದ ಮೂರು ದಿನಗಳನ್ನು ತೆಗೆದುಕೊಳ್ಳುತ್ತವೆ. ಅಲ್ಲದೆ ಭೂಮಿಯ ಸಂವಹನ ಜಾಲಗಳಿಗೆ ಅಡ್ಡಿ ಉಂಟುಮಾಡುತ್ತವೆ.‘ಪರಿವೇಷಕ ಸಮೂಹ ನಿಷ್ಕಾಸ ಪ್ರಕ್ರಿಯೆ­ಯಿಂದ ಬಿಡುಗಡೆಯಾದ ಅನಿಲದ ದೊಡ್ಡ ಗುಳ್ಳೆಗಳು ಭೂಮಿಗೆ ಡಿಕ್ಕಿ ಹೊಡೆದಾಗ, ಭೂಮಿಯ ಕಾಂತ ಕ್ಷೇತ್ರದ ರೇಖೆಗಳು ವಿರೂಪಗೊಳ್ಳುತ್ತವೆ. ಇದರಿಂದ ಅತಿ ಹೆಚ್ಚಿನ ಪ್ರಮಾಣದ ವಿದ್ಯುತ್‌ ಬಲ ಉತ್ಪಾದನೆಯಾಗುತ್ತದೆ’ ಎಂದು ಮೂರು ದಶಕಗಳಿಂದ ಸೂರ್ಯ ಕಲೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಪ್ರೊ.ಚೌಧರಿ ಹೇಳುತ್ತಾರೆ. ‘೧೯೮೯ರ ಮಾರ್ಚ್ 9ರಂದು ಸೂರ್ಯ­ನಲ್ಲಿಒಂದು ಮಹಾ ವಿಸ್ಫೋಟ ಸಂಭವಿ­ಸಿತ್ತು. ಸ್ವಲ್ಪ ದಿನಗಳ ನಂತರ ಕೆನಡಾದ ಕೆಲವು ಪ್ರದೇಶಗಳಲ್ಲಿ ಕತ್ತಲೆ ಆವರಿಸಿತ್ತು. ಇದೇ ರೀತಿಯ ಘಟನೆ ಇಂದಿನ ಹೆಚ್ಚಿನ ಸಂಪರ್ಕವುಳ್ಳ ಜಗತ್ತಿನಲ್ಲಿ ನಡೆದರೆ, ಸಂಪೂರ್ಣವಾಗಿ ಭಿನ್ನವಾದ ಪರಿಣಾಮ ಬೀರಬಹುದು’ ಅವರು ವಿವರಿಸುತ್ತಾರೆ.‘ಈಗ ಜಗತ್ತಿನಲ್ಲಿರುವ ಬಹುತೇಕ ವಿದ್ಯುತ್ ಪ್ರಸರಣ ಕೇಂದ್ರಗಳು ಪರಸ್ಪರ ಸಂಪರ್ಕದಲ್ಲಿವೆ ಮತ್ತು ಸೂರ್ಯನ ಚಟುವಟಿಕೆಯಿಂದ ಉತ್ಪತ್ತಿ­ಯಾಗುವ ಈ ಹಠಾತ್ ವಿದ್ಯುತ್‌ ಬಲವು ವಿಕೋಪ­ಗಳಿಗೆ ಕಾರಣವಾಗುತ್ತದೆ’ ಎಂದೂ ಅವರು ಹೇಳುತ್ತಾರೆ. ನಾವು ಸೌರ ಸ್ಫೋಟವನ್ನು ಊಹಿ­ಸಲು ಸಾಧ್ಯವಿಲ್ಲ. ಆದಾಗ್ಯೂ, ಸೌರ ಸ್ಫೋಟವು ಸಂಭವಿಸಿದ ಕೆಲವು ನಿಮಿಷ­ಗಳ ನಂತರ ಅದನ್ನು ಗುರುತಿಸ-­ಬಹುದು. ಇಂದಿನ ದೂರದರ್ಶಕಗಳು ಎಷ್ಟು ಅತ್ಯಾಧುನಿಕ ಆಗಿವೆಯೆಂದರೆ, ಅವು ತಾವಾ ಗಿಯೇ ಇಂತಹ ಘಟನೆಗಳನ್ನು ದಾಖಲಿಸಿಕೊಳ್ಳುತ್ತವೆ. ನಮಗೆ ತಿಳಿದಿ­ರುವ ಹಾಗೆ ಸೂರ್ಯನ ಕೆಲವೇ ಪ್ರದೇಶಗಳಲ್ಲಿ ಹೊರಸೂಸುವ ಸೌರ ಸ್ಫೋಟಗಳು ಮಾತ್ರ ಭೂಮಿಯ ಮೇಲೆ ಗರಿಷ್ಠ ಪರಿಣಾಮ ಬೀರುತ್ತವೆ.‘ನಿರ್ದಿಷ್ಟ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಚಟುವಟಕೆ ನಡೆ­ಯುತ್ತಿದ್ದರೆ ನಾವು ಮೂರು ದಿನಗಳ ನಂತರ ಯಾವುದಾದರೂ ಸಮಸ್ಯೆ­ಯನ್ನು ಎದುರಿಸ­ಬೇಕಾಗಬಹುದು, ನಾವು ಸೌರ ಸ್ಫೋಟದ ವಿಷಯ­ದಲ್ಲಿ ಇಷ್ಟನ್ನು ಮಾತ್ರ ಊಹಿಸ­ಬಹುದಾಗಿದೆ’ ಎಂದೂ ಪ್ರೊ.ಚೌಧರಿ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry