ಭೂಮಿ ಉಳಿಸಲು ಹೋರಾಟವೇ ಮಾರ್ಗ

7

ಭೂಮಿ ಉಳಿಸಲು ಹೋರಾಟವೇ ಮಾರ್ಗ

Published:
Updated:

ರಾಯಚೂರು: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿದೇಶಿ ಕಂಪೆನಿಗಳನ್ನು ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿದ್ದು,  ಬೆಲೆಬಾಳುವ ಭೂಮಿಯನ್ನು ಅವುಗಳಿಗೆ ನೀಡಲು ಮುಂದಾಗಿವೆ. ಬಡವರು, ದಲಿತರು, ಸಣ್ಣ ರೈತರ ಜಮೀನುಗಳನ್ನು ಹೆಕ್ಕಿ ತೆಗೆದು ಸ್ವಾಧೀನಪಡಿಸಿಕೊಳ್ಳುವ ಯತ್ನ ನಡೆದಿದೆ. ಎಂಥದ್ದೇ ಕಷ್ಟ ಎದುರಾದರೂ ತಮ್ಮ ಜಮೀನು ಉಳಿಸಿಕೊಳ್ಳಲು ಹೋರಾಟಕ್ಕೆ ಜನತೆ ಸಜ್ಜಾಗಬೇಕಿದೆ ಎಂದು ಕೋಲಾರದ ದಲಿತ ಹೋರಾಟಗಾರ ಎನ್. ವೆಂಕಟೇಶ ಹೇಳಿದರು.ಇಲ್ಲಿನ ಮಹಿಳಾ ಸಮಾಜ ಆವರಣದಲ್ಲಿ ಶುಕ್ರವಾರ ಕರ್ನಾಟಕ ರೈತ ಸಂಘದ ಜಿಲ್ಲಾ ಸಮಿತಿಯು ಆಯೋಜಿಸಿದ್ದ ರಾಯಚೂರು ಜಿಲ್ಲಾ ಭೂಸಂಘರ್ಷ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಬಡವರು, ದಲಿತರು, ಸಂಕಷ್ಟದಲ್ಲಿರುವ ಜನತೆಯ ಸಮಸ್ಯೆ ಕೇಳುತ್ತಿಲ್ಲ. ವಿದೇಶ ಕಂಪೆನಿಗಳಿಗೆ ದುಂಬಾಲು ಬಿದ್ದು ಭೂಮಿ ಕೊಡಲು ಮುಂದಾಗುವ ಸರ್ಕಾರಗಳಿಗೆ ಇಲ್ಲಿನ ಜನತೆಗೆ ಮೂಲಸೌಕರ್ಯ ಕಲ್ಪಿಸಲು ಇನ್ನೂ ಸಾಧ್ಯವಾಗಿಲ್ಲ. ತಲಾ-ತಲಾಂತರದಿಂದ ಬೇಸಾಯ ಮಾಡಿಕೊಂಡು ಬಂದ ಜಮೀನನ್ನೇ ಕಿತ್ತುಕೊಂಡು ಭೂಹೀನರನ್ನಾಗಿಸುವ ವ್ಯವಸ್ಥಿತ ಷಡ್ಯಂತ್ರವನ್ನು ಬಿಜೆಪಿ ಸರ್ಕಾರ ಬಂದ ಬಳಿಕ ನಡೆದಿದೆ ಎಂದರು.ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಬದಲಾವಣೆ ಎಂಬುದು ಹೋರಾಟದ ಮೂಲಕವೇ ಆಗಿದೆ. ಈಗಿನ ಸಾಮ್ರಾಜ್ಯಶಾಹಿ, ಜನವಿರೋಧಿ ಸರ್ಕಾರದಲ್ಲಿ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದೇವೆ. ಬಡವರೆಲ್ಲ ಒಂದೇ ಎಂಬ ಭಾವನೆಯಿಂದ ಹೋರಾಟಕ್ಕೆ ಮುನ್ನುಗ್ಗಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.ಸಂಘಟನೆ ರಾಜ್ಯ ಅಧ್ಯಕ್ಷ ಆರ್. ಮಾನಸಯ್ಯ, ದಲಿತ ಹೋರಾಟಗಾರ ದೇವೇಂದ್ರ ಹೆಗಡೆ, ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಎನ್. ಬಡಿಗೇರ, ದಲಿತ ಮುಖಂಡ ಅಂಬಣ್ಣ ಅರೋಲಿ, ಮುದುಕಪ್ಪ ನಾಯಕ, ನಾಗಲಿಂಗಸ್ವಾಮಿ, ಶೇಖರಯ್ಯ ಮತ್ತಿತರರು ವೇದಿಕೆಯಲ್ಲಿದ್ದರು. ಸಂಘಟನೆಯ ತಾಲ್ಲೂಕು ಘಟಕ ಅಧ್ಯಕ್ಷ ರಾಜಶೇಖರ ಪ್ರಾಸ್ತಾವಿಕ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry