ಸೋಮವಾರ, ಅಕ್ಟೋಬರ್ 14, 2019
28 °C

ಭೂಮಿ ಕಳೆದುಕೊಂಡ ಕೃಷಿಕನಿಗೆ ಪರಿಹಾರ

Published:
Updated:

ಬೆಂಗಳೂರು: ಕಾಳಿ-ಕೊಡಸಳ್ಳಿ ಜಲ ವಿದ್ಯುತ್ ಯೋಜನೆಯಿಂದ ಐದು ಎಕರೆ ಭೂಮಿ ಕಳೆದುಕೊಂಡ ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲ್ಲೂಕಿನ ಶಿವರಾಂ ಗಾಂವ್ಕರ್ ಅವರಿಗೆ ನ್ಯಾಯಾಲಯದ ಆದೇಶದಂತೆ ಬುಧವಾರ ಕರ್ನಾಟಕ ವಿದ್ಯುತ್ ನಿಗಮವು ರೂ 92.88 ಲಕ್ಷ ರೂಪಾಯಿ ಪಾವತಿಸುವ ಮೂಲಕ  ಮಾನ ಉಳಿಸಿಕೊಂಡಿದೆ.ನ್ಯಾಯಾಲಯದ ಆದೇಶದಂತೆ ಬುಧವಾರ ನಿಗಮದ ಕಚೇರಿ ಜಪ್ತಿಗೆ  ಶಿವರಾಂ ಅವರು ವಕೀಲರೊಂದಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ನಿಗಮದ ಕಾನೂನು ಸಲಹೆ ಅಧಿಕಾರಿಗಳು ಬಾಕಿ ಹಣದ ಚೆಕ್ ಅನ್ನು ಪಾವತಿಸಿದರು. ಆದರೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳು ಇತ್ತ ಸುಳಿಯಲೇ ಇಲ್ಲ. ಕಚೇರಿಯಲ್ಲಿ ಬಿಕೊ ಎನ್ನುವ ವಾತಾವರಣ ಇತ್ತು.1997ರಲ್ಲಿ ಕೊಡಸಳ್ಳಿ ಜಲ ವಿದ್ಯುತ್ ಯೋಜನೆಗಾಗಿ ಜೋಯಿಡಾ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸೇರಿದ ಐದು ಸಾವಿರ ಎಕರೆ ಭೂಮಿಯನ್ನು ನಿಗಮವು ಸ್ವಾಧೀನಪಡಿಸಿಕೊಂಡಿತು. 300 ಕುಟುಂಬಗಳ ಪುನರ್ವಸತಿಗಾಗಿ ಕೇವಲ 84 ಕೋಟಿ ರೂಪಾಯಿ ವೆಚ್ಚ ಮಾಡಿದ್ದ ನಿಗಮವು ಭೂಮಿ ಕಳೆದುಕೊಂಡವರಿಗೆ ಅಲ್ಪ ಪರಿಹಾರ ನೀಡಿತ್ತು.ಇದರಿಂದ ಬೇಸತ್ತ ಶಿವರಾಂ ನ್ಯಾಯಾಲಯದ ಮೊರೆ ಹೋದರು. ಐದು ಎಕರೆ ಅಡಿಕೆ ತೋಟ ಕಳೆದುಕೊಂಡಿರುವ ಅವರಿಗೆ 28 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಶಿರಸಿ ಸಿವಿಲ್ ನ್ಯಾಯಾಲಯ ಆದೇಶಿಸಿತ್ತು. ಆದರೆ ನಿಗಮವು ಇದರ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಹೈಕೋರ್ಟ್ ಕಳೆದ ಜೂನ್‌ನಲ್ಲಿ 93 ಲಕ್ಷ ರೂಪಾಯಿ ನೀಡುವಂತೆ ಆದೇಶಿಸಿತು.ಇದಾದ ನಂತರ ಕೆಪಿಸಿಎಲ್ ಸುಪ್ರೀಂಕೋರ್ಟ್ ಮೊರೆ ಹೋಯಿತು. ಆದರೆ ನಿಗಮದ ಅರ್ಜಿಯನ್ನು ವಜಾಗೊಳಿಸಿದ ನಂತರ ಸುಪ್ರೀಂಕೋರ್ಟ್ ರೈತರ ಸಮಸ್ಯೆಗೆ ಸ್ಪಂದಿಸಿ ಎಂದು ಆದೇಶಿಸಿತು. ಇದರ ಪ್ರತಿಯನ್ನು ಶಿರಸಿ ಸಿವಿಲ್ ನ್ಯಾಯಾಲಯದ ಮುಂದೆ ಶಿವರಾಂ ಹಾಜರುಪಡಿಸುತ್ತಿದ್ದಂತೆಯೇ ಶಕ್ತಿ ಭವನದ ಕುರ್ಚಿಗಳು, ಟೇಬಲ್, ಕಂಪ್ಯೂಟರ್, ಕಾರು, ಜೀಪು ಇತ್ಯಾದಿಗಳನ್ನು ಜಪ್ತಿ ಮಾಡಿ ಪರಿಹಾರ ಹಣ ಪಡೆದುಕೊಳ್ಳಿ ಎಂದು ಜನವರಿ 7ರಂದು ತೀರ್ಪು ನೀಡಿತು.ನ್ಯಾಯಾಲಯ ಹೊರಡಿಸಿದ ಜಪ್ತಿ ಆದೇಶದಿಂದ ಮುಜುಗರಕ್ಕೆ ಒಳಗಾದ ನಿಗಮವು ಬುಧವಾರ ಶಿವರಾಂ ಅವರಿಗೆ ಹಣ ಪಾವತಿ ಮಾಡುವ ಮೂಲಕ ಕೈತೊಳೆದುಕೊಂಡಿದೆ.15 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ ಶಿವರಾಂ, ಇದೇ ರೀತಿ ಭೂಮಿ ಕಳೆದುಕೊಂಡು ಅನ್ಯಾಯಕ್ಕೆ ಒಳಗಾಗಿರುವ 300 ಕುಟುಂಬಗಳಿಗೆ ಪರಿಹಾರ ನೀಡಬೇಕು. ಯಾರಿಗೂ ಈ ರೀತಿಯ ದುರ್ಗತಿ ಬರಬಾರದು ಎಂದು ಅಭಿಪ್ರಾಯಪಟ್ಟರು.

Post Comments (+)