ಗುರುವಾರ , ಮಾರ್ಚ್ 4, 2021
27 °C

ಭೂಮಿ ಕೊಟ್ಟ ರೈತನಿಗೇ ಆಹ್ವಾನವಿಲ್ಲ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂಮಿ ಕೊಟ್ಟ ರೈತನಿಗೇ ಆಹ್ವಾನವಿಲ್ಲ !

ಹರಿಹರ: ಉಳುವವನಿಂದ ಭೂಮಿ ಪಡೆದು ಆವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸದ ಕಾರ್ಗಿಲ್‌ ಬಹುರಾಷ್ಟ್ರೀಯ ಕಂಪೆನಿಯನ್ನು ಮಂಗಳವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿರುವುದು ರೈತ ವಲಯದಲ್ಲಿ ಜಿಜ್ಞಾಸೆ ಹುಟ್ಟುಹಾಕಿದೆ.

ವಿಶ್ವದ ಸುಮಾರು 70 ರಾಷ್ಟ್ರಗಳಲ್ಲಿ ಸಾವಿರಕ್ಕೂ ಹೆಚ್ಚು ಉತ್ಪಾದನಾ ಘಟಕಗಳನ್ನು ಹೊಂದಿರುವ ಕಾರ್ಗಿಲ್ ಎಂಬ ಬಹುರಾಷ್ಟ್ರೀಯ ಕಂಪೆನಿ ರೈತರ ಹಿತ, ಶಿಕ್ಷಣ ಕ್ಷೇತ್ರಕ್ಕೆ ಪೂರಕ ಸೌಲಭ್ಯ, ಮಹಿಳಾ ಸಬಲೀಕರಣ, ಗ್ರಾಮಗಳ ಅಭಿವೃದ್ಧಿ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಹಾಗೂ ಭೂಮಿ ನೀಡಿದ ರೈತರ ಕುಟುಂಬ ಸದಸ್ಯರಿಗೆ ಉದ್ಯೋಗ ಭರವಸೆ ನೀಡಿ ತಾಲ್ಲೂಕಿನ ಬೆಳ್ಳೂಡಿ ಗ್ರಾಮದಲ್ಲಿ 2–3 ವರ್ಷಗಳ ಹಿಂದೆ ರೈತರಿಂದ ಸುಮಾರು 45 ಎಕರೆ ಫಲವತ್ತಾದ ಭೂಮಿ ಖರೀದಿಸಿತ್ತು.

ಈ ಕಂಪೆನಿಗೆ ಭೂಮಿ ನೀಡಿದ ರೈತರು, ತಮ್ಮ ಕುಟುಂಬದಲ್ಲಿ ಒಬ್ಬರಿಗಾದರೂ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ ಸಿಗುತ್ತದೆ ಎಂಬ ವಿಶ್ವಾಸದಿಂದ ಬೀಗಿದ್ದರು.

ಆದರೆ, ಕಂಪೆನಿ ಉದ್ಘಾಟನೆ ಸಂದರ್ಭದಲ್ಲಿ ಭೂಮಿ ನೀಡಿದ ರೈತರಿಗೆ, ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಹಾಗೂ ಗ್ರಾಮಸ್ಥರಿಗೆ ಆಹ್ವಾನವನ್ನೂ ನೀಡದಿರುವುದು ಹಾಗೂ ಕನಿಷ್ಠ ಕಾರ್ಯಕ್ರಮದಲ್ಲೂ ಸ್ಮರಿಸದೇ ನೂತನ ಘಟಕದ ಕಾರ್ಯಾರಂಭ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸಮಾರಂಭದಲ್ಲಿ ಮುಖ್ಯಮಂತ್ರಿ, ಸಚಿವರು, ಶಾಸಕರು, ಗ್ರಾಮ ಪಂಚಾಯ್ತಿ ಅಧ್ಯಕ್ಷ, ಆಯ್ದ ಜನಪ್ರತಿನಿಧಿಗಳು, ಕಂಪೆನಿಯ ಮುಖ್ಯ ಅಧಿಕಾರಿಗಳು ಹಾಗೂ ಕೆಲವು ಖಾಯಂ ನೌಕರರು ಮಾತ್ರ ಇದ್ದರು. ಆದರೆ, ಯಾರ ಅಭಿವೃದ್ಧಿಗೆ ಕಂಪೆನಿ ಆರಂಭವಾಗಿದೆಯೋ, ಅದೇ ರೈತರನ್ನು ಕಾರ್ಯಕ್ರಮದಿಂದ ಹೊರಗಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕೆಲವು ರೈತರು ಕಂಪೆನಿಯ ಕಾಂಪೌಂಡ್‌ನ ಕಿಂಡಿಗಳಿಂದ ಒಳಗೆ ಏನು ನಡೆಯುತ್ತಿದೆ ಎಂಬುದನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದರು.

ಇನ್ನು ಹಲವರು ಮುಖ್ಯದ್ವಾರದ ಬಳಿ ನಾವು, ಕಂಪೆನಿಗೆ ಜಮೀನು ನೀಡಿದ್ದೇವೆ. ನಮ್ಮನ್ನು ಒಳಗೆ ಬಿಡಿ ಎಂದು ಭದ್ರತಾ ಸಿಬ್ಬಂದಿಗೆ ಅಂಗಲಾಚುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

ಕಾರ್ಯಕ್ರಮದ ನಂತರ, ರಸ್ತೆ ಬದಿಯಲ್ಲಿ ಅಹವಾಲು ನೀಡಲು ಕಾದು ನಿಂತಿದ್ದ ರೈತರಿಗೆ, ಸ್ಪಂದಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆ ರೈತರಲ್ಲಿ ನಿರಾಸೆ ಹಾಗೂ ಆಕ್ರೋಶ ಮೂಡಿಸಿತು.

ಅಭಿವೃದ್ಧಿಗಾಗಿ, ರೈತರ ಏಳಿಗೆಗಾಗಿ, ಆರಂಭವಾಗಿರುವ ಈ ಕಂಪೆನಿ ಅದೇ ರೈತರನ್ನು ಕಡೆಗಣಿಸಿ, ಅಧಿಕೃತ ನೌಕರರು, ಗಣ್ಯರು ಹಾಗೂ ಆಹ್ವಾನಿತರನ್ನು ಸೇರಿದಂತೆ ಕೇವಲ 500 ಜನರ ಸಮ್ಮುಖದಲ್ಲಿ ಕಾರ್ಗಿಲ್ ಸಂಸ್ಥೆ ಉದ್ಘಾಟಸಿರುವುದು ತಾಲೂಕಿನ ರೈತರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಉಳುವವನಿಂದ ಭೂಮಿ ಪಡೆದು ಆವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸದ ಕಾರ್ಗಿಲ್‌ ಬಹುರಾಷ್ಟ್ರೀಯ ಕಂಪೆನಿಯನ್ನು ಮಂಗಳವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿರುವುದು ರೈತ ವಲಯದಲ್ಲಿ ಜಿಜ್ಞಾಸೆ ಹುಟ್ಟುಹಾಕಿದೆ.

ರೈತರನ್ನು ಹೊರಗಿಟ್ಟಿದ್ದು ಯಾಕೆ?

ರೈತ ಮುಖಂಡ ಹೊಸಮನಿ ಅಶೋಕ, ಸ್ಥಳಿಯರನ್ನು ಗುತ್ತಿಗೆ ಕಾರ್ಮಿಕರನ್ನಾಗಿ ನೇಮಿಸುತ್ತಾರೆ. ಅಧಿಕಾರಿಗಳು ಹೊರಗೆ ಹೇಳುವುದು ಒಂದು. ಒಳಗೆ ಅನುಸರಿಸುವುದು ಒಂದು. ಸ್ಥಳೀಯರಿಗೆ ಕಾರ್ಯ ನಿರ್ವಹಿಸಲು ಕಷ್ಟವಾಗುತ್ತಿದೆ ಎಂದರು.   ರೈತರನ್ನು ಕಾರ್ಯ ಕ್ರಮದಿಂದ ಹೊರಗೆ ಇಟ್ಟಿರುವುದು ಯಾವ ಪುರುಷಾರ್ಥಕ್ಕೆ ಎಂದು ಬೆಳ್ಳೂಡಿ ರೈತರಾದ ಪೂಜಾರ್ ತಿಪ್ಪಣ್ಣ ಹಾಗೂ ಕರಿಯಪ್ಪ ಪ್ರಶ್ನಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.