ಭೂಮಿ ಕೊಡಲು ರೈತರ ವಿರೋಧ

ಬುಧವಾರ, ಜೂಲೈ 17, 2019
26 °C
ಎನ್‌ಟಿಪಿಸಿ: ನೀರು ಪೂರೈಸುವ ಪೈಪ್‌ಲೈನ್ ಅಳವಡಿಕೆಗೆ 240 ಎಕರೆ ಜಮೀನಿನ ಬೇಡಿಕೆ

ಭೂಮಿ ಕೊಡಲು ರೈತರ ವಿರೋಧ

Published:
Updated:

ಆಲಮಟ್ಟಿ: ಕೂಡಗಿ ಗ್ರಾಮದ ಬಳಿ ಕೇಂದ್ರ ಸರಕಾರದ ಎನ್‌ಟಿಪಿಸಿ ಸ್ಥಾಪಿಸುತ್ತಿರುವ ಶಾಖೋತ್ಪನ್ನ ಘಟಕಕ್ಕೆ  ಕೃಷ್ಣಾ ಜಲಾಶಯದ ಹಿನ್ನೀರಿನ ಪಾರ್ವತಿ ಕಟ್ಟಾ ಸೇತುವೆಯಿಂದ ವಾರ್ಷಿಕ 5 ಟಿ.ಎಂ.ಸಿ. ಅಡಿ ನೀರು ಪೂರೈಕೆಗಾಗಿ ಪೈಪಲೈನ್ ಅಳವಡಿಕೆಗೆ ಅಗತ್ಯ ಭೂಮಿಯನ್ನು ನೀಡಲು ರೈತರು ವಿರೋಧ ವ್ಯಕ್ತಪಡಿಸಿದರು.ತಾಲ್ಲೂಕು ಆಡಳಿತ, ಎನ್‌ಟಿಪಿಸಿ, ಕೆಬಿಜೆಎನ್‌ಎಲ್ ಅಧಿಕಾರಿಗಳ ಸಮ್ಮುಖದಲ್ಲಿ ಶನಿವಾರ ಇಲ್ಲಿಯ ಸಮುದಾಯ ಭವನದಲ್ಲಿ ನಡೆದ ಬಾಧಿತ ರೈತರ ಸಭೆಯಲ್ಲಿ ರೈತರು ವಿರೋಧ ವ್ಯಕ್ತಪಡಿಸಿದರು.ಆಲಮಟ್ಟಿ ಜಲಾಶಯದಿಂದ ಐದು ಟಿಎಂಸಿ ಅಡಿಯಷ್ಟು ನೀರು ಪ್ರತಿವರ್ಷ ಕೂಡಗಿಯ ಎನ್‌ಟಿಪಿಸಿಗೆ ಪೂರೈಸುವುದಾಗಿ ರಾಜ್ಯ ಸರಕಾರ ಹೇಳಿದ್ದು, ಆ ಪ್ರಕಾರ ನೀರು ಪೂರೈಸಲು ಅಗತ್ಯ ಪೈಪಲೈನ್ ಮಾಡಬೇಕಿದೆ.ಆಲಮಟ್ಟಿಯಿಂದ ಕೂಡಗಿವರೆಗೆ 18 ಕಿ.ಮೀ ಉದ್ದದವರೆಗೆ 60 ಮೀ ಅಗಲದ ಭೂಮಿಯ ಅಗತ್ಯವಿದ್ದು ಅದಕ್ಕೆ ಬೇನಾಳ, ವಂದಾಲ, ಹುಣಶ್ಯಾಳ, ಗುಡದಿನ್ನಿ, ಅಂಗಡಗೇರಿ, ತೆಲಗಿ ಗ್ರಾಮದ 240 ಎಕರೆಯಷ್ಟು ಭೂಮಿ ಅಗತ್ಯವಾಗಿದೆ. 60 ಮೀ ಅಗಲ, 12 ಅಡಿ ಆಳದಲ್ಲಿ ಪೈಪಲೈನ್ ಅಳವಡಿಸಿ, ಎಡಬದಿ ಮತ್ತು ಬಲಬದಿಯಲ್ಲಿ ಪ್ರತಿ 300 ಮೀಟರ್‌ಗೆ ಒಂದರಂತೆ ವಿದ್ಯುತ್ ಗೋಪುರ ಅಳವಡಿಸಲಾಗುವುದು ಎಂದು ಎನ್.ಟಿ.ಪಿ.ಸಿ. ಅಧಿಕಾರಿಗಳು ತಿಳಿಸಿದರು.ಜಿ.ಸಿ. ಮುತ್ತಲದಿನ್ನಿ, ಡಾ ಪ್ರಕಾಶ ಬೀಳಗಿ, ಸಿ.ಎಂ. ಹಂಡಗಿ, ಮುರಗೇಶ ಹೆಬ್ಬಾಳ, ರಾಚು ಹುಬ್ಬಳ್ಳಿ, ಚಂದ್ರಗೌಡ ಪಾಟೀಲ ಮುಂತಾದ ರೈತರು ಮಾತನಾಡಿ, ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಈ ಭಾಗದ ಶೇ 80 ಉಳುಮೆ ಭೂಮಿ ಕೃಷ್ಣಾರ್ಪಣಗೊಂಡಿದೆ.ಈಗ ಮತ್ತೆ ಭೂಮಿಯನ್ನು ನೀಡಲು ಸಿದ್ಧರಿಲ್ಲ. ಈ ನಿಯೋಜಿತ ನೀರೆತ್ತುವ ಪಂಪಸೆಟ್ ಬಳಿಯೇ ಕೃಷ್ಣೆಯ ಹಿನ್ನೀರಿನಲ್ಲಿ ಬಹು ಅಪರೂಪದ ದೇಶ, ವಿದೇಶಗಳ ಪಕ್ಷಿಗಳು ಪ್ರತಿ ವರ್ಷವೂ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿವೆ, ಇದರಿಂದ ಅವುಗಳಿಗೂ ತೊಂದರೆಯಾಗಿ ಪರಿಸರಕ್ಕೆ ಧಕ್ಕೆ ಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಮುಳವಾಡ ಏತ ನೀರಾವರಿ ಯೋಜನೆ ಹಂತ-3ರ ಉಪಕಾಲುವೆ ಸಂಖ್ಯೆ-2ರ ನಿರ್ಮಾಣದಿಂದ ಈ ಬಾಧಿತ ಗ್ರಾಮಗಳು ನೀರಾವರಿಗೊಳಪಡುತ್ತವೆ. ಈ ಪೈಪಲೈನ್ ಅಳವಡಿಕೆಯಿಂದ ಕಾಲುವೆ ನಿರ್ಮಾಣ ಕಾಮಗಾರಿ ಸಾಧ್ಯವಾಗುವುದಿಲ್ಲ. ಆಗ ನೀರಾವರಿ ಕ್ಷೇತ್ರ ಬೇರೆಡೆಗೆ ಸ್ಥಳಾಂತರಗೊಳ್ಳುತ್ತದೆ. ಅದಕ್ಕಾಗಿ ನೀರು ಒಯ್ಯುವ ಈ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಗೊಳಿಸಿ ಎಂದು ರೈತರು ಆಗ್ರಹಿಸಿದರು.ಇದನ್ನು ಸ್ಪಷ್ಟವಾಗಿ ನಿರಾಕರಿಸಿದ ಎನ್.ಟಿ.ಪಿ.ಸಿ. ಜನರಲ್ ಮ್ಯಾನೇಜರ್ ಎ.ಕೆ. ಸಾಮಂತ, ಈ ಮಾರ್ಗ ರಚನೆಗೆ ಕೇಂದ್ರ ಜಲ ಆಯೋಗ, ಕೃಷ್ಣಾ ಭಾಗ್ಯ ಜಲ ನಿಗಮ ಅನುಮತಿ ನೀಡಿದೆ, ಅಲ್ಲದೇ ತಾಂತ್ರಿಕ ಕಾರಣಗಳಿಂದ ಇದು ಉತ್ತಮ ಮಾರ್ಗವಾಗಿದೆ ಎಂದರು.ಭೂಮಿಯನ್ನು ವಶಪಡಿಸಿಕೊಳ್ಳುತ್ತಿಲ್ಲ, ಭೂಮಿಯ ಆಳದಲ್ಲಿ ತಗ್ಗು ತೋಡಿ ಪೈಪಲೈನ್ ಅಳವಡಿಸಿ ಮತ್ತೇ ಮೊದಲಿನ ಹಾಗೆ ಮಣ್ಣು ಹಾಕಿಕೊಡಲಾಗುವುದು, ನೀವು ಮತ್ತೇ ಕೃಷಿ ಚಟುವಟಿಕೆ ಮಾಡಬಹುದು ಎಂದರು. ಮೂರು ವರ್ಷಗಳ ಕಾಲ ನಾವು ಕೆಲಸ ಮಾಡಿದ ಭೂಮಿಯ ಬೆಳೆ ಪರಿಹಾರ ಮಾತ್ರ ನೀಡುವುದಾಗಿ ಸಾಮಂತ ಹೇಳಿದರು.ಕೆಬಿಜೆಎನ್‌ಎಲ್ ಅಧಿಕಾರಿ ರಮೇಶ ಮಲ್ಲಾಪುರ ಮಾತನಾಡಿ, ಇನ್ನೂ 15 ದಿನಗಳಲ್ಲಿ ಕಾಲುವೆ ಸರ್ವೆ ಕಾರ್ಯ ಮುಕ್ತಾಯಗೊಳ್ಳಲಿದ್ದು, ಸರ್ವೆ ಕಾರ್ಯ ನಂತರವೇ ಕಾಲುವೆಯ ಅಲೈನ್‌ಮೆಂಟ್ ಮಾರ್ಗ ಗೊತ್ತಾಗಲಿದೆ ಎಂದರು.ಮಾತಿನ ಚಕಮಕಿ: ಈ ನಡುವೆ ರೈತರ ಹಾಗೂ ಎನ್.ಟಿ.ಪಿ.ಸಿ. ಅಧಿಕಾರಿಗಳ ಮಧ್ಯೆ ಕೆಲ ಕಾಲ ಮಾತಿನ ಚಕಮಕಿಯೂ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry