ಗುರುವಾರ , ಅಕ್ಟೋಬರ್ 17, 2019
26 °C

ಭೂಮಿ ತಾಯಿ ಮಕ್ಕಳ ಬಂಡವಾಳ

Published:
Updated:

ಬೆಂಗಳೂರಿನಲ್ಲಿ ಇತ್ತೀಚೆಗೆ ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಿತು. ಸಾವಿರಾರು ಕೋಟಿ ರೂಪಾಯಿಗಳ ಬಂಡವಾಳ ಹರಿದುಬರುವ ಭರವಸೆಯೂ ದೊರಕಿತು. ಅದರಲ್ಲಿ ಎಷ್ಟು ಬಂಡವಾಳ ನಿಜವಾಗಿಯೂ ರಾಜ್ಯಕ್ಕೆ ಹರಿದು ಬರುತ್ತದೋ ಗೊತ್ತಿಲ್ಲ. ಹೀಗೆ ಹರಿದು ಬಂದ ಬಂಡವಾಳ ಎಷ್ಟರ ಮಟ್ಟಿಗೆ ಅನ್ನದಾತನ ಒಡಲು ಸೇರುತ್ತದೋ ಗೊತ್ತಿಲ್ಲ.ಆದರೆ, ಸಾಂಸ್ಕೃತಿಕ ರಾಜಧಾನಿ ಎಂದು ಹೆಸರು ಪಡೆದಿರುವ ಮೈಸೂರಿನಲ್ಲಿ ಮಾತ್ರ ಕಳೆದ ಹಲವಾರು ವರ್ಷಗಳಿಂದ ಭೂಮಿ ತಾಯಿ ಮಕ್ಕಳ ಬಂಡವಾಳ ಕೆಲಸ ಮಾಡುತ್ತಲೇ ಇದೆ. ದುಡಿದ ಹಣವೆಲ್ಲಾ ರೈತರ ಒಡಲನ್ನೇ ಸೇರುತ್ತಿದೆ. ಒಂದಿಷ್ಟು ಮಂದಿ ರೈತರಂತೂ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.ಈ ರೈತರು ಲಕ್ಷ, ಕೋಟಿ ಗಟ್ಟಲೆ ಹಣವನ್ನು ಬಂಡವಾಳವನ್ನಾಗಿ ವಿನಿಯೋಗಿಸಿಲ್ಲ. ಭಾರಿ  ಪ್ರಮಾಣದ ಕೃಷಿ ಸಂಬಂಧಿ ಕೈಗಾರಿಕೆಯನ್ನೂ ಆರಂಭಿಸಿಲ್ಲ. ಇವರ ಬಂಡವಾಳ ಇವರ ಬೆವರು, ಕೊಂಚ ಬುದ್ಧಿ, ವ್ಯಾವಹಾರಿಕ ಚಾಲಾಕಿತನ ಅಷ್ಟೆ. ಆ ಮೂಲಕ ತಮ್ಮ ನೆಮ್ಮದಿಗೆ ಬೇಕಾದ ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ಗ್ರಾಹಕರಿಗೂ ಆರೋಗ್ಯಪೂರ್ಣ, ಸತ್ವಯುತ ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ. ತಾವೂ ನೆಮ್ಮದಿಯಿಂದ ಇರುವುದಲ್ಲದೆ ಗ್ರಾಹಕರೂ ನೆಮ್ಮದಿಯಿಂದ ಇರುವಂತಹ ವಾತಾವರಣವನ್ನು ಸೃಷ್ಟಿಸಿದ್ದಾರೆ.ಈ ರೈತರು ಯಾವುದೇ ಬಂಡವಾಳಶಾಹಿಗಳ ಬೆಂಬಲವನ್ನು ನಿರೀಕ್ಷಿಸಲಿಲ್ಲ. ಕೈಗಾರಿಕೆಗಳನ್ನೂ ನಂಬಿಕೊಂಡು ಕುಳಿತಿಲ್ಲ. ಸರ್ಕಾರದ ಸಹಾಯವನ್ನೂ ಬೇಡಿಲ್ಲ. ಸ್ವಯಂ ಸ್ಫೂರ್ತಿಯಿಂದ ತಮ್ಮ ಗ್ರಾಹಕರನ್ನು ತಾವೇ ಹುಡುಕಿಕೊಂಡಿದ್ದಾರೆ. ಗ್ರಾಹಕರಿಗೆ ಬೇಕಾದ್ದನ್ನು ಬೆಳೆಯುತ್ತಾರೆ. ಗ್ರಾಹಕರಿಗೆ ಬೇಕಾಗಿದ್ದನ್ನು ತಂದು ಕೊಡುತ್ತಾರೆ.ಮಧ್ಯವರ್ತಿಗಳ ಹಾವಳಿ ತಪ್ಪಿಸಿ ತಾವು ಬೆಳೆದಿದ್ದನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಾ ಬಹುತೇಕ ಲಾಭವನ್ನು ತಾವೇ ಗಳಿಸಿಕೊಳ್ಳುತ್ತಿದ್ದಾರೆ. ಯಾವುದೇ ಸರ್ಕಾರಿ ನೌಕರನಿಗೆ ಕಡಿಮೆ ಇಲ್ಲದಂತೆ ಪ್ರತಿ ತಿಂಗಳೂ ನಿರ್ದಿಷ್ಟ ಆದಾಯವನ್ನೂ ಹೊಂದಿದ್ದಾರೆ.ಮೈಸೂರಿನ ಬೇರೆ ಬೇರೆ ಬಡಾವಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೇಸರ, ನಿಸರ್ಗ, ಜೀವಾಮೃತ, ಆರಂಭ, ಭೂಮಿತಾಯಿ ಬಳಗ, ಬಾನುಲಿ ಕೃಷಿಕರ ಬಳಗ ಮುಂತಾದ ರೈತರೇ ಕಟ್ಟಿದ ಮಾರುಕಟ್ಟೆಗಳು ರೈತರಿಗೆ ಸುಸ್ಥಿರವಾದ ಮಾರುಕಟ್ಟೆ ಒದಗಿಸಿವೆ.

 

ಇವುಗಳಲ್ಲಿ ಬಹುತೇಕ ಮಾರುಕಟ್ಟೆಗಳು ನೈಸರ್ಗಿಕ ಹಾಗೂ ಸಾವಯವ ಕೃಷಿಕರದ್ದೇ ಆದರೂ ಎಲ್ಲ ಕೃಷಿ ಪದ್ಧತಿಯ ಉತ್ಪನ್ನಗಳನ್ನು ಒದಗಿಸುವ ಅಂಗಡಿಗಳೂ ಇವೆ. ಸ್ವಾವಲಂಬನೆಯೇ ಇಲ್ಲಿನ ನಿತ್ಯ ಮಂತ್ರ.2005ರ ಗಾಂಧಿ ಜಯಂತಿ ದಿನ ಆರಂಭವಾದ ಭೂಮಿತಾಯಿ ಬಳಗ ಎಂಬ ಮಾರುಕಟ್ಟೆ ಕೇವಲ 5 ಮಂದಿ ರೈತರಗುಂಪು. ಕುವೆಂಪುನಗರದ ರಸ್ತೆ ಬದಿಯಲ್ಲಿಯೇ ಈ ಮಾರುಕಟ್ಟೆ ನಡೆಯುತ್ತದೆ. ಪ್ರತಿ ಬುಧವಾರ ಮತ್ತು ಭಾನುವಾರ ಮಾತ್ರ ಇರುವ ಮಾರುಕಟ್ಟೆ ಇದು.ಸೊಪ್ಪು, ಗೆಡ್ಡೆ ಗೆಣಸು, ತರಕಾರಿ ಮಾತ್ರ ಇಲ್ಲಿ ಸಿಗುತ್ತದೆ. ಈ ಮಾರುಕಟ್ಟೆಗೆ ಬರುವ ಜನರು ಆಹಾರ ಪದ್ಧತಿಯ ಬಗ್ಗೆಯೂ ಸಮಾಲೋಚನೆ ನಡೆಸುತ್ತಾರೆ. ತಮಗೆ ಏನು ಬೇಕು ಎನ್ನುವುದನ್ನು ರೈತರಿಗೆ ಹೇಳುತ್ತಾರೆ. ಅದರಂತೆ ರೈತರು ಅವರಿಗೆ ಬೇಕಾದ್ದನ್ನು ಬೆಳೆದು ತಂದು ಕೊಡುತ್ತಾರೆ. ಇಲ್ಲಿನ ರೈತರು ತಿಂಗಳಿಗೆ ಕನಿಷ್ಠ ರೂ 10 ಸಾವಿರಗಳಿಂದ ರೂ15 ಸಾವಿರವರೆಗೆ ಗಳಿಸುತ್ತಾರೆ. ಇದು ಹೇಗಾಯ್ತು ಅಂತ ರಾಮಕೃಷ್ಣ ಭಟ್ ಅವರನ್ನು 99004 50770 ಮೂಲಕ ಕೇಳಬಹುದು.ಇದೇ ರೀತಿ 2004ರ ಗಾಂಧಿ ಜಯಂತಿ ದಿನ ಶುರುವಾರ `ಆರಂಭ~ ಕೂಡ ಸುಮಾರು 18 ಮಂದಿ ರೈತರಿಗೆ ನೆಮ್ಮದಿಯ ಜೀವನವನ್ನು ಉಡುಗೊರೆಯಾಗಿ ನೀಡಿದೆ. ಈ ಮಾರುಕಟ್ಟೆ ಕೂಡ ಮೊದ ಮೊದಲು ವಾರಕ್ಕೆ ಒಮ್ಮೆ ಮಾತ್ರ ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ನಡೆಯುತ್ತಿತ್ತು. ಇಲ್ಲಿ ಕೂಡ ಸೊಪ್ಪು, ಹಣ್ಣು, ತರಕಾರಿ ಮಾತ್ರ ಸಿಗುತ್ತಿದ್ದವು. ಈಗ ಇದೂ ಕೂಡ ಪ್ರತಿ ದಿನದ ಮಾರುಕಟ್ಟೆಯಾಗಿದೆ.ಸರಸ್ವತಿಪುರ ಮತ್ತು ರಾಮಕೃಷ್ಣ ನಗರದಲ್ಲಿ ಎರಡು ಅಂಗಡಿಗಳಿವೆ. ಇಲ್ಲಿಯ ರೈತರು ಬೆಳೆದ ಸೊಪ್ಪು ತರಕಾರಿ, ಹಣ್ಣುಗಳಲ್ಲದೆ ರಾಜ್ಯದ ಬೇರೆ ಭಾಗಗಳಿಂದ ಬೆಲ್ಲ, ಎಣ್ಣೆ, ಗೋಧಿ, ತೊಗರಿ ಮುಂತಾದವುಗಳನ್ನು ತರಿಸಿ ಕೊಡಲಾಗುತ್ತದೆ. ದಿನಕ್ಕೆ ರೂ 7ರಿಂದ ರೂ8 ಸಾವಿರ  ವ್ಯಾಪಾರವಾಗುತ್ತದೆ. ತಿಂಗಳಿಗೆ ರೂ10ರಿಂದ ರೂ  15 ಸಾವಿರ  ಆದಾಯ ಇದೆ ಎನ್ನುತ್ತಾರೆ `ಆರಂಭ~ದ ರಾಘವೇಂದ್ರ. ಅವರನ್ನು 98801 11593 ಮೂಲಕ ಸಂಪರ್ಕಿಸಬಹುದು.ಬಾನುಲಿ ಕೃಷಿಕರ ಬಳಗದ್ದು ಮಾತ್ರ ಇನ್ನೂ ವಿಚಿತ್ರ ಕತೆ. ಮೈಸೂರು ಆಕಾಶವಾಣಿಯಲ್ಲಿ ಬರುವ ಕೃಷಿರಂಗ ಕಾರ್ಯಕ್ರಮವನ್ನು ಕೇಳುತ್ತಲೇ ಒಂದಾದ ರೈತರ ಬಳಗ ಇದು.ಆಕಾಶವಾಣಿಯಲ್ಲಿ ಬರುವ ರೈತರ ಸಲಹೆಯನ್ನು ಪಡೆದುಕೊಂಡು ತಮ್ಮ ಕೃಷಿ ಕೌಶಲ್ಯವನ್ನು ಹೆಚ್ಚಿಸಿಕೊಂಡಿದ್ದೇ ಅಲ್ಲದೆ ತಮ್ಮದೇ ಒಂದು ಬಳಗವನ್ನು ಕಟ್ಟಿಕೊಂಡು ಮೈಸೂರಿನಲ್ಲಿ 2 ಹಾಗೂ ಮಂಡ್ಯದಲ್ಲಿ ಒಂದು ಅಂಗಡಿಯನ್ನು ತೆರೆದಿದ್ದಾರೆ.ಸದ್ಯಕ್ಕೆ ಈ ಬಳಗದಲ್ಲಿ 14 ಮಂದಿ ರೈತರಿದ್ದಾರೆ. ಎಲ್ಲ ರೈತರೂ ತಾವು ಬೆಳೆದ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಒದಗಿಸುತ್ತಾರೆ. ಆ ಮೂಲಕ ಎಲ್ಲ ಲಾಭವನ್ನೂ ತಮ್ಮದಾಗಿಸಿಕೊಳ್ಳುತ್ತಾರೆ. ಇಲ್ಲಿ ಮಧ್ಯವರ್ತಿಗಳ ಮಾತಿಲ್ಲ. ಅಂಗಡಿ ನಡೆಸುವುದಕ್ಕೆ ಹಾಗೂ ಅಂಗಡಿ ಕೆಲಸಗಾರರಿಗೆ ಶೇ 1ರ ಪಾಲು ಕೊಡುತ್ತಾರೆ. ಆದರೆ, ಈ ರೈತರ ಮೊಗದಲ್ಲಿ ನಿರಂತರವಾಗಿ ನಗು ನೆಲೆಸಿದೆ. ಪರೀಕ್ಷೆ ಮಾಡಲು ಹರ್ಷ ಅವರನ್ನು 77950 24011 ಮೂಲಕ ಕೇಳಬಹುದು.ರೈತರ ಸ್ವಾವಲಂಬನೆಗೆ ಹೊಸ ಹಾದಿಕಲ್ಪಿಸಲು ಮೊಟ್ಟ ಮೊದಲು ಮೈಸೂರಿನಲ್ಲಿ ಹುಟ್ಟಿಕೊಂಡಿದ್ದು `ನೇಸರ~. ಕಳೆದ 14 ವರ್ಷಗಳಿಂದ ಮಾರುಕಟ್ಟೆಯನ್ನು ನಡೆಸಿಕೊಂಡು ಬರುತ್ತಿದೆ. ನೇಸರದ ಬಳಗ ಕೊಂಚ ದೊಡ್ಡದು. ಸುಮಾರು 215 ಮಂದಿ ಸದಸ್ಯರಿದ್ದಾರೆ.

 

ಇದರಲ್ಲಿ ರೈತ ಸದಸ್ಯರ ಸಂಖ್ಯೆ ಸುಮಾರು 50. ಮೈಸೂರು ನಗರದ ಮಧ್ಯಭಾಗದಲ್ಲಿ `ನೇಸರ~ ಅಂಗಡಿ ಇದೆ. ಸುಮಾರು 25 ರೈತರು ನಿರಂತರವಾಗಿ ನೇಸರಕ್ಕೆ ತಮ್ಮ ಉತ್ಪನ್ನಗಳನ್ನು ತಂದು ಮಾರಾಟ ಮಾಡುತ್ತಾರೆ. ವಾರದ ಎಲ್ಲ ದಿನ ಇಲ್ಲಿ ಕೃಷಿ ಉತ್ಪನ್ನಗಳು ಲಭ್ಯವಾಗುತ್ತವೆ. ಆದರೆ, ಶುಕ್ರವಾರ ತಾಜಾ ತರಕಾರಿ, ಹಣ್ಣುಗಳು ಸಿಗುತ್ತವೆ.ತಿಂಗಳಿಗೆ ಒಂದರಿಂದ ಒಂದೂವರೆ ಲಕ್ಷ ರೂಪಾಯಿಯಷ್ಟು ವಹಿವಾಟು ನಡೆಯತ್ತದೆ. ಇದರಲ್ಲಿ ಶೇ 80ರಷ್ಟು ಹಣ ರೈತರಿಗೇ ಹೋಗುತ್ತದೆ. ನೇಸರದಲ್ಲಿ ಪ್ರತಿ ತಿಂಗಳು ರೂ5 ಸಾವಿರ  ಗಳಿಂದ ರೂ 25 ಸಾವಿರ ಪಡೆಯುವ ರೈತರೂ ಇದ್ದಾರೆ. ಇಲ್ಲಿ ಕೇವಲ ಸಾವಯವ ಉತ್ಪನ್ನಗಳು ಮಾತ್ರ ಲಭ್ಯ.  ಮಾಹಿತಿಗೆ 0821-2330404 ಸಂಪರ್ಕಿಸಬಹುದು.ಅದೇ ರೀತಿ ನೈಸರ್ಗಿಕ ಕೃಷಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಕೇಂದ್ರ `ನಿಸರ್ಗ~ ಕೂಡ ಹಳೆಯ ಸಂಘಟನೆ. ಇದರಲ್ಲಿ ಕೂಡ ಸುಮಾರು 60 ರೈತರಿದ್ದಾರೆ. ಇದೂ ಕೂಡ ವಾರ ಪೂರ್ತಿ ತೆರೆದಿರುವ ಅಂಗಡಿ. ತಿಂಗಳಿಗೆ ರೂ 1.50 ಲಕ್ಷದಿಂದ  3 ಲಕ್ಷದವರೆಗೂ ವ್ಯಾಪಾರ ನಡೆಸಲಾಗುತ್ತದೆ. ಇಲ್ಲಿಯೂ ಕೂಡ  ರೂ1000 ಗಳಿಂದ ರೂ 30 ಸಾವಿರ  ವರೆಗೆ ಆದಾಯ ಪಡೆಯುವ ರೈತರಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಸಿದ್ದರಾಜು 94491 72924 ಅವರಿಂದ ಪಡೆಯಬಹುದು.ಈಗ ಒಂದು ವರ್ಷದ ಹಿಂದೆ ಆರಂಭವಾಗಿದ್ದು ಜೀವಾಮೃತ. ಇದೂ ಕೂಡ ನೈಸರ್ಗಿಕ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಕೇಂದ್ರ. ಇದರಲ್ಲಿಯೂ ಸುಮಾರು 25 ರೈತರಿದ್ದಾರೆ. ಸ್ಥಳೀಯವಾಗಿ ಬೆಳೆಯುವ ತರಕಾರಿ, ಧಾನ್ಯ, ಹಣ್ಣು ಮುಂತಾದವುಗಳನ್ನು ಮಾರಾಟ ಮಾಡಲಾಗುತ್ತದೆ.ಜೊತೆಗೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಬೆಳೆಯುವ ಇತರ ಉತ್ಪನ್ನಗಳನ್ನೂ ಇಲ್ಲಿ ಮಾರಾಟ ಮಾಡಲಾಗುತ್ತದೆ. ರಾಗಿ, ಜೋಳ, ಅಕ್ಕಿ, ಬೆಲ್ಲ, ಔಷಧೀಯ ಸಸ್ಯಗಳು, ಗಿಡಮೂಲಿಕೆ ಔಷಧಿಗಳೂ ಇಲ್ಲಿ ಲಭ್ಯವಾಗುತ್ತವೆ. ಒಂದು ವರ್ಷದ ಅವಧಿಯಲ್ಲಿಯೇ ಇದು ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿದೆ.ಇಲ್ಲಿ ಕೂಡ ತಿಂಗಳಿಗೆ ಒಂದು ಲಕ್ಷ ರೂಪಾಯಿಗೂ ಹೆಚ್ಚು ಆದಾಯವಿದೆ. ಶೇ 80ರಷ್ಟು ಹಣವನ್ನು ನೇರವಾಗಿ ರೈತರಿಗೇ ನೀಡಲಾಗುತ್ತದೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ವಸ್ತುಗಳನ್ನು ತರಿಸಿ ಕೊಡಬೇಕಾಗಿದ್ದರಿಂದ ನೈಸರ್ಗಿಕ ಉತ್ಪನ್ನಗಳು ಕೊಂಚ ದುಬಾರಿ ಎನಿಸಿದರೂ ಔಷಧಿಗೆ ನೀಡುವ ಹಣಕ್ಕೆ ಹೋಲಿಸಿದರೆ ಅದು ಕಡಿಮೆ. ಮಾಹಿತಿಗೆ ಉಗ್ರ ನರಸಿಂಹ ಗೌಡ ಅವರನ್ನು 9448090061 ಸಂಪರ್ಕಿಸಿ.ರಾಜ್ಯದ ರೈತರ ಸಮಸ್ಯೆಗಳಿಗೆ ಹೋಲಿಸಿದರೆ ಇಲ್ಲಿ ನಡೆದಿರುವುದು ಸಣ್ಣ ಸಣ್ಣ ಪ್ರಯತ್ನಗಳು ಅಷ್ಟೆ. ಆದರೆ, ಇದರ ಪರಿಣಾಮ ಮಾತ್ರ ಬಹಳ ದೊಡ್ಡದು. ಸಾವಿರಾರು ಕೋಟಿ ರೂಪಾಯಿ ಬಂಡವಾಳ ತೊಡಗಿಸಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ಗ್ರಾಹಕರನ್ನು ಶೋಷಿಸುವ ಬದಲು ಇದು ಗ್ರಾಹಕರಿಗೂ ರೈತರಿಗೂ ನೆಮ್ಮದಿ ತರುವ ಮಾರ್ಗ. ಇಲ್ಲಿ ಸಣ್ಣ ಸಣ್ಣ ಕನಸುಗಳು ಈಗ ನನಸಾಗಿವೆ. ದೊಡ್ಡ ಕನಸುಗಳನ್ನು ಕಾಣುವ ರೈತರೂ ಇಲ್ಲಿದ್ದಾರೆ. ತಮ್ಮದೇ ಆದ ಖಾಸಗಿ ಕಂಪೆನಿಗಳನ್ನೂ ಹುಟ್ಟು ಹಾಕುವ ಸನ್ನಾಹದಲ್ಲಿದ್ದಾರೆ.   

Post Comments (+)