ಶನಿವಾರ, ಮೇ 8, 2021
26 °C

ಭೂಮಿ ಮಾರ್ಗಸೂಚಿ ದರ ಹೆಚ್ಚಳ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಪನ್ಮೂಲ ಕ್ರೋಡೀಕರಣ ಮಾಡುವ ಉದ್ದೇಶದಿಂದ ರಾಜ್ಯದ ಎಲ್ಲ ಕಡೆ ಭೂಮಿಯ ಮಾರ್ಗಸೂಚಿ ದರ ಹಾಗೂ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಜಾಸ್ತಿ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.ಕಂದಾಯ ಇಲಾಖೆಗೆ ಸಂಬಂಧಿಸಿದ ಬಜೆಟ್ ಕುರಿತ ಪೂರ್ವಭಾವಿ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಕರೆದಿದ್ದಾರೆ. ಆ ಸಂದರ್ಭದಲ್ಲಿ ಭೂಮಿಯ ಮಾರ್ಗಸೂಚಿ ದರ, ಶುಲ್ಕ ಹೆಚ್ಚಳ ಕುರಿತು ಚರ್ಚಿಸಲಾಗುವುದು ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಒಂದು ರೂಪಾಯಿ ದರದಲ್ಲಿ ಕೆ.ಜಿ. ಅಕ್ಕಿ ನೀಡುವುದು, ಪರಿಶಿಷ್ಟ ಜಾತಿ/ಪಂಗಡ ನಿಗಮದಿಂದ ಪಡೆದಿದ್ದ ಸಾಲಮನ್ನಾ, ಹಾಲಿನ ಪ್ರೋತ್ಸಾಹಧನ ಹೆಚ್ಚಳ ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರ ಈಗಾಗಲೇ ಘೋಷಿಸಿದೆ.ಕಡಿಮೆ ದರದಲ್ಲಿ ಅಕ್ಕಿ ನೀಡಲು ಹೆಚ್ಚುವರಿಯಾಗಿ 1.07 ಲಕ್ಷ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಬೇಕಾಗಿದೆ. ಇದಕ್ಕೆರೂ4,500 ಕೋಟಿ ವೆಚ್ಚವಾಗಲಿದೆ. ಹೀಗಾಗಿ ಬೊಕ್ಕಸಕ್ಕೆ ಬರುವ ಆದಾಯ ಹೆಚ್ಚಳ ಮಾಡಿಕೊಳ್ಳಲು ಇಡೀ ರಾಜ್ಯಕ್ಕೆ ಅನ್ವಯವಾಗುವ ಹಾಗೆ ಮಾರ್ಗಸೂಚಿ, ನೋಂದಣಿ ಶುಲ್ಕಗಳನ್ನು ಪರಿಷ್ಕರಿಸಲು ಚರ್ಚೆ ನಡೆದಿದೆ ಎಂದು ತಿಳಿಸಿದರು.ಇಲಾಖೆಯಲ್ಲಿ ಸೋರಿಕೆ ತಡೆಯಲು ಕ್ರಮಕೈಗೊಳ್ಳಲಾಗುವುದು. ಕೆಲವು ಕಡೆ ತಹಸೀಲ್ದಾರ್‌ಗಳ ಕೊರತೆ ಇದ್ದು, ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕ ಮಾಡಿಕೊಳ್ಳಲಾಗುವುದು. ತಾಲ್ಲೂಕು ಮಟ್ಟದಿಂದಲೇ ಆಡಳಿತದಲ್ಲಿ ಸುಧಾರಣೆ ತರಲು ಪ್ರಯತ್ನಿಸಲಾಗುವುದು. ಸದ್ಯಕ್ಕೆ 800 ಅಟಲ್‌ಜಿ ಜನಸ್ನೇಹಿ ಕೇಂದ್ರಗಳಿದ್ದು, ಅವುಗಳನ್ನು ಜಾಸ್ತಿ ಮಾಡುವ ಕುರಿತು ಚರ್ಚೆ ನಡೆದಿದೆ ಎಂದರು.ಸರ್ವೇಯರ್‌ಗಳ ನೇಮಕ ವಿವಾದ: 1,800 ಮಂದಿ ಸರ್ವೇಯರ್‌ಗಳ ನೇಮಕಾತಿ ಪ್ರಕ್ರಿಯೆ ಅಂತಿಮಗೊಂಡಿದೆ. ಅವರಿಗೆ ನೇಮಕಾತಿ ಆದೇಶ ನೀಡಿದರೆ, ನಮಗೆ ತೊಂದರೆ ಆಗಲಿದೆ ಎಂದು ಪರವಾನಗಿ ಪಡೆದ ಸರ್ವೇಯರ್‌ಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜೆಒಸಿ ವ್ಯಾಸಂಗ ಮಾಡಿದವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಇದರಿಂದಾಗಿ ಸಾಕಷ್ಟು ಗೊಂದಲಗಳಿವೆ. ಈ ಬಗ್ಗೆ ಸಿದ್ದರಾಮಯ್ಯ ಅವರೊಂದಿಗೆ ಮಂಗಳವಾರ ಚರ್ಚೆ ನಡೆಸಿ ವಿವಾದಕ್ಕೆ ಇತಿಶ್ರೀ ಹಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮಾಸಾಶನ: 40 ವರ್ಷ ತುಂಬಿದ ಅವಿವಾಹಿತ ಮತ್ತು ವಿಚ್ಛೇದನ ಪಡೆದ ಮಹಿಳೆಯರಿಗೂ ಮಾಸಾಶನ ನೀಡುವ ಬಗ್ಗೆ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು. ತಿಂಗಳಿಗೆ ರೂ 500  ನೀಡಬೇಕು ಎಂಬ ಉದ್ದೇಶ ಇದೆ ಎಂದರು.ಸರ್ಕಾರಿ ಭೂಮಿಗೆ ಬೇಲಿ: ಸರ್ಕಾರಿ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಎ.ಟಿ.ರಾಮಸ್ವಾಮಿ, ವಿ.ಬಾಲಸುಬ್ರಮಣಿಯನ್ ನೇತೃತ್ವದ ಸಮಿತಿಗಳು ನೀಡಿರುವ ವರದಿ ಆಧಾರದ ಮೇಲೆ ಒತ್ತುವರಿಯನ್ನು ತೆರವುಗೊಳಿಸಲಾಗುವುದು. 30 ಸಾವಿರ ಎಕರೆ ಒತ್ತುವರಿ ಆಗಿದ್ದು, ಹಿಂದೆ ಹತ್ತು ಸಾವಿರ ಎಕರೆ ತೆರವುಗೊಳಿಸಲಾಗಿದೆ. ಸುಮಾರು 500 ಎಕರೆ ಮಾರಾಟವಾಗಿದೆ ಎಂದರು.ಇನ್ನು ಮುಂದೆ ತೆರವುಗೊಳಿಸಿದ ಭೂಮಿಯನ್ನು ಮಾರಾಟ ಮಾಡುವುದಿಲ್ಲ. ಸಾರ್ವಜನಿಕ ಉಪಯೋಗಕ್ಕೆ ಬಳಸಲಾಗುವುದು. ಒತ್ತುವರಿಯಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಿ.ಎಂ ಜತೆ ಸಮಾಲೋಚನೆ ನಡೆಸಿ ಹೈಕೋರ್ಟ್‌ಗೆ ಸೂಕ್ತ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.ಒತ್ತುವರಿ ತೆರವುಗೊಳಿಸಿ ಸರ್ಕಾರಿ ಜಮೀನಿಗೆ ಬೇಲಿ ಹಾಕಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಕಾನೂನು ಪ್ರಕಾರ ಸರ್ಕಾರ ಕೆಲಸ ಮಾಡಲಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.