ಮಂಗಳವಾರ, ಏಪ್ರಿಲ್ 20, 2021
27 °C

ಭೂಮಿ ಸಕ್ರಮಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳಿಯಾಳ: ಕಂದಾಯ ಇಲಾಖೆಗೆ ಸಂಬಂಧಪಟ್ಟ ಅತಿಕ್ರಮಣ ಜಮೀನುಗಳನ್ನು 15 ದಿನಗಳ ಒಳಗೆ ಖುಲ್ಲಾ ಮಾಡುವಂತೆ ರೈತರಿಗೆ ಹಳಿಯಾಳ ತಹಸೀಲ್ದಾರರು ನೋಟಿಸ್ ನೀಡಿರುವ ಆದೇಶವನ್ನು ರದ್ದು ಪಡಿಸಿ, ಅತಿಕ್ರಮಣ ಜಮೀನನ್ನು ಸಕ್ರಮಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.ಮಂಗಳವಾರ ಬೆಳ್ಳಿಗ್ಗೆ 12 ಗಂಟೆಗೆ ಸ್ಥಳೀಯ ವಲ್ಲಭಭಾಯಿ ಉದ್ಯಾನದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆಯು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಸ್‌ಸ್ಟ್ಯಾಂಡ್ ಮಾರ್ಗವಾಗಿ ಅರ್ಬನ್ ಬ್ಯಾಂಕ್ ವೃತ್ತ, ಮುಖ್ಯ ಬೀದಿಯಿಂದ ಸಾಗಿ ನಂತರ ಶಿವಾಜಿ ಸರ್ಕಲ್ ಬಳಿ ತೆರಳಿ ರಸ್ತೆ ತಡೆ ನಡೆಸಿದರು. ನಂತರ ತಹಸೀಲ್ದಾರ ಕಚೇರಿಗೆ ತೆರಳಿ ತಾಲ್ಲೂಕು ಶಿರಸ್ತೇದಾರ ಎಚ್.ಎಮ್. ಓಲೇಕರ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಎಚ್.ಎ. ಪೀಶಣ್ಣಾ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಹಳಿಯಾಳ ತಾಲ್ಲೂಕಿನ ಬಹಳಷ್ಟು ಕುಟುಂಬದವರು ಅದರಲ್ಲಿಯೂ ತೀರಾ ಬಡವರಾದ ದಲಿತ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಬಡ ರೈತರು ಸುಮಾರು 30-40 ವರ್ಷಗಳಿಂದ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಸರಕಾರಿ ಜಾಗೆಯನ್ನು ಅತಿಕ್ರಮಣ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಇದರ ಹೊರತಾಗಿ ಬೇರೆ ಯಾವುದೇ ಜಮೀನು ರೈತರು ಹೊಂದಿರುವುದಿಲ್ಲ. ಈ ಭೂಮಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡಲ್ಲಿ ರೈತರು ಜೀವನ ನಡೆಸುವುದು ಕಷ್ಟ. ಈಗ ತಹಸೀಲ್ದಾರರು ನೋಟಿಸ್ ನೀಡಿರುವುದು ಆತಂಕ ಮೂಡಿಸಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ರೈತರು ಅತಿಕ್ರಮಣ ಮಾಡಿದ ಜಮೀನಿನಲ್ಲಿ ಹಂಚಿನ ಮನೆಗಳನ್ನು ಕಟ್ಟಿಕೊಂಡು ಅದೇ ಭೂಮಿಯಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಾರೆ. ಹೀಗಾಗಿ ರೈತರು ಅತಿಕ್ರಮಣ ಮಾಡಿದ ಭೂಮಿಯನ್ನು ಖುಲ್ಲಾ ಮಾಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಬೇಕು ಎಂದು ಮನವಿ ಮಾಡಲಾಗಿದೆ.ಪ್ರತಿಭಟನಾ ಮೆರವಣಿಗೆ ನೇತೃತ್ವವನ್ನು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯ ಮಹಾಪ್ರಧಾನ ಕಾರ್ಯದರ್ಶೀ ಪಿ.ಎಸ್. ದಾನಪ್ಪನವರ, ತಾಲ್ಲೂಕು ಅಧ್ಯಕ್ಷ ಪೀಶಣ್ಣಾ, ಪೀಶಪ್ಪಾ ಮೇತ್ರಿ, ಹನುಮಂತ ಮೇತ್ರಿ, ಅಂತೋನ ಡಿಗ್ಗೇಕರ, ಸವೇರ ಸಿದ್ದಿ, ಸಹವೇವ ಮೇತ್ರಿ, ಮೇರಿ ಗರಿಬಾಚೆ, ರಮೇಶ ಕೆಳಗಿನಮನಿ ಮತ್ತಿತರರು ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.